ಶಾಸಕ ಭಟ್ ಅವರ ದ್ವಿಮುಖ ನೀತಿ: ಕಾಂಗ್ರೆಸ್
Team Udayavani, Jun 30, 2018, 8:15 AM IST
ಉಡುಪಿ: ಉಡುಪಿಯ “ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ’ ವಿಚಾರವಾಗಿ ಪ್ರಮೋದ್ ಮಧ್ವರಾಜ್ ಅವರ ಪ್ರಯತ್ನವನ್ನು ವಿರೋಧಿಸಿದ್ದ ಶಾಸಕ ರಘುಪತಿ ಭಟ್ ಅವರೇ ಈಗ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಶಾಸಕರು ದ್ವಿಮುಖ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಹೇಳಿದೆ.
ನಗರದಲ್ಲಿ ಬಿ.ಆರ್. ಶೆಟ್ಟಿಯವರು ನಿರ್ಮಿಸಿದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಮಂತ್ರಿ ರಮೇಶ್ ಕುಮಾರ್, ಪ್ರಮೋದ್ ಮಧ್ವರಾಜ್ ಅವರ ಪ್ರಯತ್ನದಿಂದ ಜನತೆಗೆ ಲಭಿಸಿದೆ. ಸಾರ್ವಜನಿಕರಿಗೆ ಉಚಿತವಾಗಿ ಹೆಚ್ಚಿನ ಸೌಲಭ್ಯ ದೊರಕಬೇಕು ಎನ್ನುವ ನಿಟ್ಟಿನಲ್ಲಿ ಅಂದು ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಅವರು ಸರಕಾರದ ಒಡಂಬಡಿಕೆಯೊಂದಿಗೆ ಸರಕಾರಿ ಆಸ್ಪತ್ರೆಯನ್ನು ಬಿ.ಆರ್. ಶೆಟ್ಟಿಯವರಿಗೆ ನಿರ್ಮಿಸಲು ಕೊಟ್ಟಾಗ ಶಾಸಕ ರಘುಪತಿ ಭಟ್ ವಿರೋಧಿಸಿದ್ದರು. ಆದರೆ ಇಂದು ಅದೇ ಆಸ್ಪತ್ರೆಯನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಶ್ಲಾಘನೀಯ. ಅಂದು ಸರಕಾರದ ನಡೆಯನ್ನು ವಿರೋಧಿಸಿದರೂ ಶಾಸಕರಾದ ಮೇಲೆ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಇಲಾಖಾಧಿಕಾರಿಗಳು ಹಾಗೂ ಆಸ್ಪತ್ರೆಯ ಆಡಳಿತ ವರ್ಗ ಮತ್ತು ವೈದ್ಯರೊಂದಿಗೆ ಸಮಾಲೋಚಿಸಿ ಸೇವಾ ಸೌಲಭ್ಯಗಳನ್ನು ವೀಕ್ಷಿಸಿರುವುದು ಅವರಲ್ಲಿ ಆಗಿರುವ ಒಳ್ಳೆಯ ಬೆಳವಣಿಗೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹಮೂರ್ತಿ, ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ, ವಕ್ತಾರ ಭಾಸ್ಕರ್ ರಾವ್ ಕಿದಿಯೂರು, ಕಾಂಗ್ರೆಸ್ ಮುಖಂಡರಾದ ನಾಗೇಶ್ ಕುಮಾರ್ ಉದ್ಯಾವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಕೆ. ಜನಾರ್ದನ ಭಂಡಾರ್ಕಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಅವಧಿ ಅಭಿವೃದ್ಧಿ ಶೂನ್ಯ ಹಾಗೂ ಸಾಧನೆ ಶೂನ್ಯ ಎಂದು ದೂಷಿಸುತ್ತಿದ್ದ ಶಾಸಕ ಭಟ್ ಅವರು ಇಂದು ಪ್ರಮೋದ್‌ರ ಹಲವು ಯೋಜನೆಗಳನ್ನು ಪರಿಶೀಲನಾ ನೆಪದಲ್ಲಿ ಸಂದರ್ಶಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನೇ ತನ್ನ ಸಾಧನೆ ಎಂದು ಬಿಂಬಿಸುವ ಪ್ರಯತ್ನ ಮಾಡಲೂಬಹುದು. ಆಸ್ಪತ್ರೆಯಲ್ಲಿ ಬಡ ಜನತೆಗೆ ಉತ್ತಮ ಚಿಕಿತ್ಸೆ ದೊರೆಯಬೇಕು.
ಸರಕಾರದ ನಿಯಂತ್ರಣ ಇರಬೇಕು ಎಂದು ಪ್ರತಿಪಾದಿಸುತ್ತಾ ಬಂದಿದ್ದೇನೆ ಎನ್ನುವ ಭಟ್ ಹೇಳಿಕೆ ಅವರ ನಡವಳಿಕೆ ಯನ್ನೇ ಪ್ರಶ್ನಿಸುವಂತಾಗಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.