ಆಧುನಿಕ ಕೃಷಿ ಪದ್ಧತಿ,ವಾಣಿಜ್ಯ ಬೆಳೆಗೆ ಬೇಕು ಉತ್ತೇಜನ
Team Udayavani, Mar 17, 2018, 6:25 AM IST
ತಾಲೂಕು ಅಭಿವೃದ್ಧಿಗೆ ಕೃಷಿಯ ಕೊಡುಗೆಯೂ ಗಣನೀಯ. ಇದಕ್ಕೆ ಪೂರಕವಾಗಿ ಸಾಂಪ್ರದಾಯಿಕ, ವಾಣಿಜ್ಯಿಕ ಬೆಳೆಗಳಿಗೂ ಹೆಚ್ಚಿನ ಉತ್ತೇಜನ ಕಲ್ಪಿಸಬೇಕು. ಕೃಷಿಗೆ ಆಧುನಿಕ ರೀತಿಯ ಚಿಂತನೆ, ಮೌಲ್ಯವರ್ಧಿತ ಉತ್ಪನ್ನಗಳು, ಮಾರುಕಟ್ಟೆ ವ್ಯವಸ್ಥೆಗಳು ಊರಿನ ವಿಕಾಸದ ಪಥಕ್ಕೂ ಹೆಗ್ಗುರುತಾಗಬಲ್ಲದು.
ಕಾಪು: ತಾಲೂಕು ಅಭಿವೃದ್ಧಿ ದೃಷ್ಟಿಕೋನದಲ್ಲಿ ಈ ಭಾಗದ ಪ್ರಮುಖ ಆದಾಯ ಮೂಲವಾಗಿರುವ ಕೃಷಿಯಿಂದ ಹಲವು ಅವಕಾಶಗಳು ಪ್ರಾಪ್ತವಾಗುವ ಸಾಧ್ಯತೆಗಳಿವೆ. ಜನರ ಆರ್ಥಿಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಆಧುನಿಕ ಕೃಷಿ ಪದ್ಧತಿ ಮತ್ತು ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಬೇಕಿದ್ದು ವಿಕಾಸಕ್ಕೆ ಉತ್ತಮ ನೆಲೆ ಕಲ್ಪಿಸಿಕೊಡಲಿದೆ.
ಭೌಗೋಳಿಕ ಹಿನ್ನೆಲೆ
ತಾಲೂಕಿನ ಭೌಗೋಳಿಕ ಹಿನ್ನೆಲೆ ಗಮನಿಸಿ ದರೆ ಇದು ಪೂರ್ಣ ಗ್ರಾಮೀಣವೂ, ಪೇಟೆಯೂ ಅಲ್ಲದ ಪ್ರದೇಶ. ಇಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ಪೂರಕವಾಗಿ ಹಲವು ವಾಣಿಜ್ಯ ಬೆಳೆ ಬೆಳೆಯಲಾಗುತ್ತದೆ. ಮೀನುಗಾರಿಕೆ ಇನ್ನೊಂದು ಪ್ರಮುಖ ಕೆಲಸವಾಗಿದ್ದು, ಹೈನುಗಾರಿಕೆಯನ್ನೂ ನೆಚ್ಚಿಕೊಂಡಿರುವ ಕುಟುಂಬಗಳು ಇಲ್ಲಿ ಬಹಳಷ್ಟಿವೆ. ತಾಲೂಕಿನಲ್ಲಿ 21,939 ಎಕ್ರೆ ಸಾಗುವಳಿ ಭೂಮಿಯಿದ್ದು, 34,327 ಎಕ್ರೆ ಸಾಗುವಳಿಯೇತರ ಭೂಮಿಯಿದೆ. 5,593 ಸಣ್ಣ ರೈತರು, 12,611 ಅತೀ ಸಣ್ಣ ರೈತರು ಮತ್ತು 1,541 ದೊಡ್ಡ ರೈತರಿದ್ದಾರೆ. 3,000ಕ್ಕೂ ಅಧಿಕ ಮೀನುಗಾರಿಕೆ ಕುಟುಂಬಗಳು, 12,000ಕ್ಕೂ ಅಧಿಕ ಹೈನುಗಾರ ಕುಟುಂಬಗಳಿವೆ. 4,200 ಹೆಕ್ಟೇರ್ ಭತ್ತದ ಕೃಷಿ ಇದ್ದು, ಪ್ರತಿ ವರ್ಷ ಸರಾಸರಿ 2,62,500 ಕ್ವಿಂಟಾಲ್ ಭತ್ತ ಬೆಳೆಯಲಾಗುತ್ತದೆ. ಶಿರ್ವದಲ್ಲಿ ಅತಿ ಹೆಚ್ಚು (ಸುಮಾರು 530 ಹೆಕ್ಟೇರ್) ಭತ್ತ ಕೃಷಿ ಇದೆ.
ಸಮಸ್ಯೆಗಳು
ತಾಲೂಕಿನಲ್ಲಿ ಭತ್ತದ ಕೃಷಿಗಿರುವಷ್ಟೇ ಪ್ರಾಧಾನ್ಯ ಇತರ ಬೆಳೆಗಳಿಗೂ ಇವೆ. ಶಂಕರಪುರ ಮಲ್ಲಿಗೆ ವರ್ಷ ಪೂರ್ತಿ ಬೆಳೆದರೆ, ಮಟ್ಟುಗುಳ್ಳವನ್ನು ನವೆಂಬರ್‌ನಿಂದ ಮೇ ತಿಂಗಳವರೆಗೆ ಬೆಳೆಸಲಾಗುತ್ತದೆ. ಮಲ್ಲಿಗೆಗೆ ನುಸಿ ಭಾದೆ ಇದ್ದು, ಮಟ್ಟುಗುಳ್ಳಕ್ಕೆ ಉಪ್ಪು ನೀರಿನ ಭಾದೆ, ನುಸಿ ಭಾದೆಗಳು ಸಾಮಾನ್ಯವಾಗಿವೆ. ಇದರೊಂದಿಗೆ ಕಾಡು ಪ್ರಾಣಿಗಳ ಹಾವಳಿ, ಕೃಷಿ ಕೂಲಿಗಳ ಕೊರತೆ ಬೆಳೆಗಳಿಗೆ ಬೆಲೆ ಕಡಿಮೆ ಇರುವುದನ್ನು ಇಲ್ಲಿನ ಕೃಷಿಕರೂ ಎದುರಿಸುತ್ತಿದ್ದಾರೆ. ಇನ್ನು, ಇಲ್ಲಿ ಎಪಿಎಂಸಿ ಕೇಂದ್ರವಿಲ್ಲ. ಇಲ್ಲಿನ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಇದರ ಅಗತ್ಯವಿದೆ. ಇದಕ್ಕೆ ಸರಕಾರದ ಮಂಜೂರಾತಿ ದೊರೆಯಬೇಕಿದೆ. ಇದರೊಂದಿಗೆ ತಾಲೂಕಿನಲ್ಲೂ ಕೃಷಿ ಮಾರುಕಟ್ಟೆ ಸಮಿತಿ ಅಗತ್ಯವಿದೆ. ಸದ್ಯ ಇದು ಉಡುಪಿ ತಾಲೂಕು ಕೃಷಿ ಮಾರುಕಟ್ಟೆ ಸಮಿತಿಯೊಂದಿಗೆ ಸೇರಿಕೊಂಡಿದೆ.
ಆಗಬೇಕಾದ್ದೇನು?
ಕಾಪು ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರ ಇದ್ದರೂ, ತೋಟಗಾರಿಕೆ ಇಲಾಖೆ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳು ನಿರ್ಮಾಣವಾಗಬೇಕಿವೆ. 8 ಮಂದಿ ಅಧಿಕಾರಿಗಳಿರಬೇಕಾದ ಕೃಷಿ ಇಲಾಖೆಯಲ್ಲಿ ಕೇವಲ ಇಬ್ಬರು ಸಹಾಯಕ ಕೃಷಿ ಅಧಿಕಾರಿಗಳಿದ್ದಾರೆ. ಉಳಿದಂತೆ ಹೊರಗುತ್ತಿಗೆ ಸಿಬಂದಿ ಇದ್ದಾರೆ. 5 ಹುದ್ದೆ ಗಳು ಇನ್ನೂ ಖಾಲಿ ಇವೆ. ಇದರೊಂದಿಗೆ ಆಧುನಿಕ ಕೃಷಿ ಪದ್ಧತಿ ಬಗ್ಗೆ ತಾಲೂಕಿನಾದ್ಯಂತ ಹೆಚ್ಚಿನ ಜಾಗೃತಿ, ಈಗಿರುವ ವಾಣಿಜ್ಯ ಬೆಳೆಗಳ ಕೃಷಿಗೆ ಹೆಚ್ಚಿನ ಉತ್ತೇಜನ, ಮೌಲ್ಯ ವರ್ಧನೆ ಕುರಿತು ಕೃಷಿಕರಲ್ಲಿ ಅರಿವು ಮೂಡಿಸಬೇಕಿದೆ.
ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ ಪ್ರಗತಿಯ ಗತಿ ಗುರುತಿಸುವ ಪ್ರಯತ್ನ. ಕಾಪು ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ ನಮ್ಮ ವಾಟ್ಸಾಪ್ ನಂಬರ್ 91485 94259ಗೆ ಕಳಿಸಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು ಹಾಗೂ ಭಾವಚಿತ್ರವಿರಲಿ.
ಪ್ರಮುಖ ಕೃಷಿಗಳು
ಮುಂಗಾರು 4,200 ಹೆಕ್ಟೇರ್ (ಭತ್ತ)
ಹಿಂಗಾರು 210 ಹೆಕ್ಟೇರ್ (ಭತ್ತ)
ಉದ್ದು 170 ಹೆಕ್ಟೇರ್
ಮಾವು 120.81 ಹೆಕ್ಟೇರ್
ತೆಂಗು 1984 ಹೆಕ್ಟೇರ್
ಗೇರು 617 ಹೆಕ್ಟೇರ್
ಮಲ್ಲಿಗೆ 104 ಹೆಕ್ಟೇರ್
ಮಟ್ಟುಗುಳ್ಳ (ಬದನೆ) 3 ಹೆಕ್ಟೇರ್
ಅನನಾಸು 10 ಹೆಕ್ಟೇರ್
ಹಲಸು 61 ಹೆಕ್ಟೇರ್
ಅಡಿಕೆ 131 ಹೆಕ್ಟೇರ್
ಸಿಹಿ ಗೆಣಸು 16 ಹೆಕ್ಟೇರ್
– ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.