ಇನ್ನಷ್ಟು ಹಾಸ್ಟೆಲ್‌ಗಳ ಪರಿಶೀಲನೆ: ಲೋಕಾಯುಕ್ತ ವಿಶ್ವನಾಥ ಶೆಟ್ಟಿ
Team Udayavani, Jul 24, 2017, 8:30 AM IST
ಉಡುಪಿ: ಈಗ ಅನಿರೀಕ್ಷಿತವಾಗಿ ಕೆಲವು ಹಾಸ್ಟೆಲ್‌ಗಳಿಗೆ ಮಾತ್ರ ಭೇಟಿ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ವಿದ್ಯಾರ್ಥಿ ನಿಲಯಗಳಿಗೂ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುತ್ತೇನೆ.
ಇದು ಲೋಕಾಯುಕ್ತ ಜಸ್ಟಿಸ್ ಕೆ. ವಿಶ್ವನಾಥ್ ಶೆಟ್ಟಿ ರವಿವಾರ ನೀಡಿದ ಸಂದೇಶ. ಬನ್ನಂಜೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ/ಅನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಐಟಿಡಿಪಿ ಇಲಾಖೆಯ ಆಶ್ರಮ ಶಾಲೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಅನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬ್ರಹ್ಮಾವರದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಲೋಕಾಯುಕ್ತರು ಪರಿಶೀಲನೆ ನಡೆಸಿ ಮೇಲಿನ ಸಂದೇಶ ರವಾನಿಸಿದರು.
ಕಂಪ್ಯೂಟರ್ ಅಳವಡಿಸಲು ಸಲಹೆ
ವಿದ್ಯಾರ್ಥಿ ನಿಲಯದಲ್ಲಿನ ಸ್ವತ್ಛತೆ, ಊಟದ ವ್ಯವಸ್ಥೆ, ಮೂಲಸೌಕರ್ಯಗಳನ್ನು ಪರಿಶೀಲಿಸಿದ ಲೋಕಾಯುಕ್ತರು, ನಿಲಯದ ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯದ ಬಗ್ಗೆ ವಿಚಾರಿಸಿ ದರು. ವಿದ್ಯಾರ್ಥಿ ನಿಲಯದ ನಿಲಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡುವುದರ ಜತೆಗೆ ನಿಲಯಗಳಲ್ಲಿ ಕಂಪ್ಯೂಟರ್ ಖರೀದಿಸಿ ಅಳವಡಿಸಲು ಸೂಚಿಸಿದರು.
ಕೈತೋಟ ಸಲಹೆ
ಬ್ರಹ್ಮಾವರ ವಿದ್ಯಾರ್ಥಿ ನಿಲಯದ ಆವರಣದ ಖಾಲಿ ಜಾಗ ದಲ್ಲಿ ಹೂವಿನ ಗಿಡ, ತರಕಾರಿ ಗಿಡಗಳನ್ನು ಬೆಳೆಸಿದ್ದು, ಇದೇ ರೀತಿ ಉಳಿದ ವಿದ್ಯಾರ್ಥಿ ನಿಲಯ/ವಸತಿ ಶಾಲೆಗಳಲ್ಲೂ ಕೈತೋಟ ನಿರ್ಮಾಣ ಮಾಡುವಂತೆ ಸೂಚಿಸಿದರು.
ಆರೂರು ವಸತಿ ಶಾಲೆಯಲ್ಲಿ ಸಾಕಷ್ಟು ಜಾಗ ಇರುವುದರಿಂದ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳಾದ ಟೆನ್ನಿಸ್, ಬಾಸ್ಕೆಟ್‌ಬಾಲ್ ಮುಂತಾದ ಆಟಗಳನ್ನು ಆಡಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಒದಗಿಸಿರುವ ಸೌಕರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ತಹಶೀಲ್ದಾರ್ ಮಹೇಶ್ಚಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹರೀಶ್ ಗಾವಂಕರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.