ಜಿಲ್ಲೆಗೆ ಎಂಆರ್‌ಎಫ್ ಘಟಕ ಮಂಜೂರು
ಹಾರಾಡಿ ನಿಟ್ಟೆಯಲ್ಲಿ ಸ್ಥಾಪನೆಯಾಗಲಿದೆ ಸುಸಜ್ಜಿತ ಘಟಕ
Team Udayavani, Jan 31, 2020, 5:04 AM IST
ಸ್ವಚ್ಛ ಭಾರತ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದು ನೈರ್ಮಲ್ಯಕ್ಕೆ ಹೆಸರುವಾಸಿಯಾಗಿರುವ ಉಡುಪಿ ಜಿಲ್ಲೆಗೆ ಈಗ ಮತ್ತೂಂದು ಕೊಡುಗೆ ಲಭಿಸಿದೆ. ಇದರಿಂದ ಜಿಲ್ಲೆಯನ್ನು ಇನ್ನಷ್ಟು ಸುಂದರಗೊಳಿಸಬಹುದು. ತ್ಯಾಜ್ಯಗಳನ್ನು ಸಂಗ್ರಹಿಸಿ, ಅವುಗಳನ್ನು ವಿಂಗಡಣೆ ಮಾಡಿ ಮಾರಾಟ ಮಾಡುವ ಎಂ ಆರ್ ಎಫ್ ಘಟಕ ಮಂಜೂರಾಗಿದ್ದು , ಬೈಕಾಡಿ ಗ್ರಾಮದಲ್ಲಿ ಸ್ಥಳ ಗುರುತಿಸಲಾಗಿದೆ. ಘಟಕ ಸ್ಥಾಪನೆಯಿಂದ ಹಲವು ಮಂದಿಗೆ ಉದ್ಯೋಗ ಲಭಿಸುತ್ತದೆ.
ಉಡುಪಿ: ತ್ಯಾಜ್ಯ ನಿರ್ವಹಣೆಯಲ್ಲಿ ಆಮೂ ಲಾಗ್ರ ಸಾಧನೆ ಮಾಡಿರುವ ಜಿಲ್ಲೆಯಲ್ಲಿ ಶೀಘ್ರದಲ್ಲಿಯೇ ಮೆಟೀರಿಯಲ್ಸ್ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ಘಟಕದ ಸೇವೆ ಲಭ್ಯವಾಗಲಿದೆ.
ಎರಡು ಕೋ.ರೂ. ಯೋಜನಾ ವೆಚ್ಚದ ಎಂಆರ್‌ಎಫ್ ಘಟಕ ಅತ್ಯುತ್ತಮ ಯೋಜನೆಯಾಗಿದೆ. ಅದರ ಸಾಧಕ-ಬಾಧಕಗಳ ಅಧ್ಯಯನಕ್ಕಾಗಿ ಶಾಸಕ ಕೆ. ರಘುಪತಿ ಭಟ್ ಅವರು ಇತ್ತೀಚೆಗೆ ಬೆಂಗಳೂರಿನ ಜಿಗಣಿಯ ಎಂಆರ್‌ಎಫ್ ಘಟಕಕ್ಕೆ ಭೇಟಿ ನೀಡಿದ್ದರು. ಅಲ್ಲಿ ನಡೆಯುವ ಕಾರ್ಯಚಟುವಟಿಕೆಗಳ ಕುರಿತು ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದು ಘಟಕದಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂಬುವುದನ್ನು ಖಚಿತಪಡಿಸಿ ಶೀಘ್ರದಲ್ಲೇ ಹಾರಾಡಿಯಲ್ಲಿ ಕಾಮಗಾರಿ ಆರಂಭಿಸಿ ಯೋಜನೆಗೆ ಚಾಲನೆ ನೀಡಲು ತೀರ್ಮಾನಿಸಿದ್ದಾರೆ. ಅನಂತರ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಪ್ರಾರಂಭಿಸುವ ಯೋಜನೆಯಿದೆ.
ಸ್ವಚ್ಛ ತೆಯಲ್ಲಿ ಮುಂಚೂಣಿ
ಜಿಲ್ಲೆಯಲ್ಲಿರುವ 50ಕ್ಕೂ ಅಧಿಕ ಗ್ರಾ.ಪಂ.ಗಳಲ್ಲಿ ಘನ, ದ್ರವ ಸಂಪನ್ಮೂಲ ನಿರ್ವಹಣಾ ಘಟಕಗಳನ್ನು ಈಗಾಗಲೇ ಅಳವಡಿಸಲಾಗಿದೆ. ಇಡೀ ರಾಜ್ಯದಲ್ಲಿಯೇ ಉಡುಪಿ ಸ್ವಚ್ಛ ಭಾರತ್ ಅಭಿಯಾನದಲ್ಲಿ ಮುಂಚೂಣಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಎಂಆರ್‌ಎಫ್ ಘಟಕ ಮಂಜೂರಾಗಿದೆ. ಕರ್ನಾಟಕ ಗ್ರಾಮೀಣ ನೀರು ಮತ್ತು ಒಳಚರಂಡಿ ಸಂಸ್ಥೆಯ ಆಯುಕ್ತರು ಜಿಲ್ಲೆಗೆ ಎಂಆರ್‌ಎಫ್ ಘಟಕಕ್ಕಾಗಿ 2 ಕೋ.ರೂ. ಮಂಜೂರು ಮಾಡಿದ್ದಾರೆ.
ಸ್ಥಳೀಯರಿಂದ ವಿರೋಧ
ಆದರೆ ಘಟಕ ಮಂಜೂರಾಗಿ ನಾಲ್ಕೈದು ತಿಂಗಳು ಕಳೆದರೂ ಇನ್ನೂ ಕೂಡ ಅನುಷ್ಠಾನ ಸಾಧ್ಯವಾಗಿಲ್ಲ. ಕಾರಣ ಈ ಘಟಕದ ಕುರಿತ ತಪ್ಪು ತಿಳಿವಳಿಕೆ. ಇದರಿಂದ ಸ್ಥಳೀಯರು ತಮ್ಮೂರಿನಲ್ಲಿ ಈ ಘಟಕ ಸ್ಥಾಪಿಸುವುದೇ ಬೇಡವೆಂದು ಪ್ರತಿಭಟನೆಯನ್ನೂ ಮಾಡಿದ್ದಾರೆ.
ಮೊದಲು ಹಾರಾಡಿಯಲ್ಲಿ ಆರಂಭ
ಎಂಆರ್‌ಎಫ್ ಘಟಕವನ್ನು ಕಾರ್ಕಳ ತಾಲೂಕಿನಲ್ಲಿ ಸ್ಥಾಪಿಸಬೇಕೆಂಬ ಕಾರ್ಕಳ ಶಾಸಕರ ಮನವಿಗೆ ಸ್ಪಂದಿಸಿ ಮೊದಲು ನಿಟ್ಟೆ ಪಂ. ನಲ್ಲಿ ಪ್ರಾರಂಭಿಸಲು ಸಿದ್ಧತೆಗಳನ್ನು ನಡೆಸಲಾಗಿತ್ತು. ಆದರೆ ಅಲ್ಲಿ ಅರಣ್ಯಭೂಮಿ ಸಮಸ್ಯೆಯಿಂದಾಗಿ ನಿಟ್ಟೆಯಿಂದ ಬ್ರಹ್ಮಾವರ ತಾಲೂಕಿನ ಹಾರಾಡಿ ಪಂಚಾಯತ್‌ಗೆ ಸ್ಥಳಾಂತರಗೊಂಡಿದೆ. ಬೈಕಾಡಿ ಗ್ರಾಮದ ಸರ್ವೆ ನಂಬರ್ 83/1ರಲ್ಲಿ ಒಂದು ಎಕ್ರೆ ಪ್ರದೇಶವನ್ನು ಇದಕ್ಕಾಗಿ ಗುರುತಿಸಲಾಗಿದೆ.
ಘಟಕ ನಿರ್ಮಾಣಕ್ಕೆ ಗ್ರಾ.ಪಂ.ನಿಂದ ನಿರಾಕ್ಷೇಪಣ ಪತ್ರ ಕೂಡ ಸಿಕ್ಕಿದೆ. ಇನ್ನು ಘಟಕದ ಕಾಮಗಾರಿ ಆರಂಭವಾಗುವುದು ಬಾಕಿ.
ಯಾವುದೇ ಹಾನಿಯಿಲ್ಲ
ಈಗಾಗಲೇ ಹಲವಾರು ಬಾರಿ ಜಿ.ಪಂ., ಗ್ರಾ.ಪಂ. ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವ ಜನಿಕರನ್ನು ಸೇರಿಸಿ ಸಭೆ ನಡೆಸಿದ್ದಾರೆ. ಈ ಘಟಕ ಸ್ಥಾಪನೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಪರಿಸರಕ್ಕೆ ಹಾನಿಯಿಲ್ಲ ಎನ್ನುವ ಮನವರಿಕೆ ಮಾಡಿದರೂ ಈ ಘಟಕದ ಕುರಿತ ತಪ್ಪು ಮಾಹಿತಿಯಿಂದಾಗಿ ಸಾರ್ವಜನಿಕರು ಅದನ್ನು ವಿರೋಧಿಸುತ್ತಲೇ ಇದ್ದಾರೆ. ಸ್ವತ್ಛತೆಗೆ ಆದ್ಯತೆ ನೀಡುವಲ್ಲಿ ಘಟಕ ಜಿಲ್ಲೆಯ ಮತ್ತೂಂದು ಮೈಲುಗಲ್ಲಾಗಬಹುದೆಂಬ ನಿರೀಕ್ಷೆ ಅಧಿಕಾರಿಗಳದ್ದು.
ಏನಿದು ಎಂಆರ್‌ಎಫ್ ಘಟಕ?
ಎಂಆರ್‌ಎಫ್ ಘಟಕದಲ್ಲಿ ಘನತ್ಯಾಜ್ಯವನ್ನು ಮಾತ್ರ ಸಂಗ್ರಹಿಸಿಡಲಾಗುತ್ತದೆ. ಯಾವುದೇ ದ್ರವ ಅಥವಾ ಕೊಳೆಯುವ ತ್ಯಾಜ್ಯವನ್ನು ಘಟಕದಲ್ಲಿ ಸಂಗ್ರಹಿಸುವುದಿಲ್ಲ. ಸಂಗ್ರಹಿಸಿದ ಘನ ತ್ಯಾಜ್ಯವನ್ನು ಪ್ಲಾಸ್ಟಿಕ್, ಪೇಪರ್ ಹೀಗೆ ವಿಂಗಡನೆ ಮಾಡಲಾಗುತ್ತದೆ. ವಿಂಗಡಿಸಿದ ತ್ಯಾಜ್ಯವನ್ನು ಒಟ್ಟು ಮಾಡಿ ದೊಡ್ಡದೊಡ್ಡ ಕಂಪೆನಿಗಳಿಗೆ ಮಾರಾಟ ಮಾಡಲಾಗುತ್ತದೆ. ಈ ಎಲ್ಲ ಕೆಲಸವನ್ನು ನಿರ್ವಹಿಸುವುದಕ್ಕೆ ನೌಕರರ ಆವಶ್ಯಕತೆಯಿದ್ದು, ಸ್ಥಳೀಯ ಸುಮಾರು 50 ಮಂದಿಗೆ ಉದ್ಯೋಗಾವಕಾಶ ಲಭಿಸಲಿದೆ ಎನ್ನುತ್ತಾರೆ ಅಧಿಕಾರಿಗಳು.
ಎಂ ಆರ್ ಎಫ್ ಘಟಕ ಸ್ಥಾಪನೆಗೆ ಸಿದ್ಧತೆ
1. ಎಕ್ರೆ ಪ್ರದೇಶದಲ್ಲಿ ಎಂ ಆರ್‌ಎಫ್ ಘಟಕವನ್ನು ಸ್ಥಾಪಿಸಲಾಗುತ್ತದೆ.
3.ಕೋಟಿ ರೂ.ಯನ್ನು ಕರ್ನಾಟಕ ಗ್ರಾಮೀಣ ನೀರು ಮತ್ತು ಒಳಚರಂಡಿ ಸಂಸ್ಥೆಯ ಆಯುಕ್ತರು ಘಟಕಕ್ಕೆ ಈಗಾಗಲೇ ಮಂಜೂರುಗೊಳಿಸಿದ್ದಾರೆ.
ಎಂಆರ್‌ಎಫ್ ಘಟಕದಲ್ಲಿ ಘನತ್ಯಾಜ್ಯವನ್ನು ಮಾತ್ರ ಸಂಗ್ರಹಿಸಿಡಲಾಗುತ್ತದೆ. ಯಾವುದೇ ದ್ರವ ಅಥವಾ ಕೊಳೆಯುವ ತ್ಯಾಜ್ಯವನ್ನು ಘಟಕದಲ್ಲಿ ಸಂಗ್ರಹಿಸುವುದಿಲ್ಲ . ಎಂಆರ್‌ಎಫ್ ಘಟಕದಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ.
ಶೀಘ್ರ ಕಾಮಗಾರಿ
ಎಂಆರ್‌ಎಫ್ ಘಟಕದಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಈ ಯೋಜನೆಯನ್ನು ಹಾರಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾರಂಭಿಸಲು ಪಂಚಾಯತ್ ಜನಪ್ರತಿನಿಧಿಗಳು, ಸಾರ್ವಜನಿಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು.
– ಕೆ.ರಘುಪತಿ ಭಟ್, ಶಾಸಕರು
ಹೆಚ್ಚು ಲಾಭಾಂಶ ನಿರೀಕ್ಷೆ
ದೊಡ್ಡ ಮಟ್ಟದಲ್ಲಿ ಘನ ತ್ಯಾಜ್ಯಗಳನ್ನು ಸಂಗ್ರಹಿಸಿ ಅವುಗಳನ್ನು ವಿಂಗಡಿಸಿ ಒಟ್ಟು ಮಾಡಿ ದೊಡ್ಡ ಕಂಪೆನಿಗಳಿಗೆ ಮಾರಾಟ ಮಾಡಿದರೆ ಅದರಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಹಾರಾಡಿಯ ಜತೆಗೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿಯೂ ಎಂಆರ್‌ಎಫ್ ಘಟಕಗಳನ್ನು ತೆರೆಯಲಾಗುತ್ತದೆ..
– ಪ್ರೀತಿ ಗೆಹ್ಲೋಟ್,
ಜಿ.ಪಂ. ಸಿಇಒ
-ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.