ಅಪಾಯ ಎದುರಿಸುತ್ತಿರುವ ಮೂಡನಿಡಂಬೂರು ರಸ್ತೆ !
Team Udayavani, Aug 3, 2019, 5:55 AM IST
ಉಡುಪಿ: ಬನ್ನಂಜೆ ಮೂಲಕ ನಿಟ್ಟೂರು ಸಂಪರ್ಕದ ಮೂಡನಿಡಂಬೂರು ರಸ್ತೆಯ ಬಲಪಾರ್ಶ್ವದಲ್ಲಿ ಹರಿಯುವ ತೋಡಿಗೆ ತಡೆಗೋಡೆಯಿಲ್ಲದೆ ಅಪಾಯ ಎದುರಿಸುತ್ತಿದೆ.
ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಲಘು ವಾಹನಗಳು ಸಂಚರಿಸುತ್ತಿದ್ದು, ಎರಡೆರೆಡು ವಾಹನಗಳು ಎದುರಿನಿಂದ ಮುಖಾಮುಖೀಯಾದರೆ ವಾಹನ ಮುಂದೆ ಚಲಿಸಲು ಹರಸಾಹಸ ಪಡಬೇಕಾಗುತ್ತದೆ. ಒಂದೆಡೆ ಕಿರಿದಾದ ರಸ್ತೆ, ಇನ್ನೊಂದೆಡೆ ಪೊದೆಗಳಿಂದ ಆವೃತ್ತವಾದ ನೀರು ಹರಿಯುವ ತೋಡಿದ್ದು, ಚಾಲಕರು ಸ್ವಲ್ಪಮಟ್ಟಿನ ಅಜಾಗರೂಕತೆ ತೋರಿಸಿದರೂ ಅಪಘಾತ ನಿಶ್ಚಿತ.
ಚರಂಡಿ, ಆವರಣ ಗೋಡೆ ಇಲ್ಲ
ಬನ್ನಂಜೆಯಿಂದ ನಿಟ್ಟೂರಿನ ವರೆಗೆ ಕೆಲವೆಡೆ ತಿರುವಿನಿಂದ ಕೂಡಿದ ರಸ್ತೆಯ ಇಕ್ಕೆಡೆಗಳಲ್ಲಿ ಅಲ್ಲಲ್ಲಿ ಬೃಹದಾಕಾರದ ಪೊದೆಗಳು ಬೆಳೆದು ನಿಂತು ಎದುರಿನಿಂದ ಬರುವ ವಾಹನ ಕಾಣಿಸದೇ ಅದೆಷ್ಟೋ ಬಾರಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ ಎಂದು ಇಲ್ಲಿನ ಜನರಾಡಿಕೊಳ್ಳುತ್ತಿದ್ದಾರೆ. ರಸ್ತೆಯ ಬಲ ಭಾಗದಲ್ಲಿ ತೋಡಿಗೆ ಆವರಣವಿಲ್ಲದೆ, ಗಿಡಗಂಟಿಗಳು ಬೆಳೆದು ತೋಡಿನಲ್ಲಿ ನೀರು ಹರಿಯದೆ ರಸ್ತೆಯ ಮೇಲೆ ಹರಿದು ಹೋಗುವುದರಿಂದ ರಸ್ತೆ ಮತ್ತು ತೋಡು ಯಾವುದೆಂದು ತಿಳಿಯದಾಗುತ್ತದೆ. ಮಳೆಯ ನಡುವೆ ರಸ್ತೆ¤ಯೆಂದು ತಪ್ಪಿ ತೋಡಿಗೆ ಕಾಲಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ. ಮಳೆಗಾಲದಲ್ಲಿ ರಸ್ತೆಯ ಎಡಪಾರ್ಶ್ವದಲ್ಲಿ ಸರಾಗವಾಗಿ ನೀರು ಹರಿದು ಹೋಗಲು ತೋಡಿಲ್ಲದೆ ರಸ್ತೆಯ ಮೇಲೆ ನೀರು ಹರಿಯುವುದಲ್ಲದೆ, ಕೆಲವು ಮನೆಗಳ ಆವರಣದಲ್ಲಿಯೂ ತುಂಬಿಕೊಳ್ಳುತ್ತದೆ.
ತುಂಬಿ ಹರಿಯುವ ಕಲ್ಸಂಕ ತೋಡು
ತಗ್ಗು ಪ್ರದೇಶವಾದ ಮೂಡನಿಡಂಬೂರು ಭಾಗದ ಈ ರಸ್ತೆಗೆ ತಾಗಿಕೊಂಡು ಕಲ್ಸಂಕದಿಂದ ಹರಿದು ಬರುವ ತೋಡಿದ್ದು, ಇದು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಪ್ರತಿವರ್ಷ ಇಲ್ಲಿನ ಬಯಲು ಪ್ರದೇಶ, ಗದ್ದೆಗಳು ಸೇರಿದಂತೆ ಹಲವಾರು ಮನೆಗಳು ಜಲಾವೃತಗೊಳ್ಳುತ್ತಿವೆ. ತೋಡಿನಲ್ಲಿ ಹರಿದು ಬರುವ ಪ್ಲಾಸ್ಟಿಕ್, ಬಾಟಲಿ ಇನ್ನಿತರ ತ್ಯಾಜ್ಯಗಳು ಇಲ್ಲಿನ ಬಹುತೇಕ ಮನೆಗಳ ಆವರಣವನ್ನು ಸೇರಿಕೊಳ್ಳುತ್ತಿವೆ.
ವಾಹನ, ಜನದಟ್ಟಣೆಯ ರಸ್ತೆ
ಈ ಭಾಗದಲ್ಲಿ ನೂರಾರು ಮನೆಗಳಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ತಮ್ಮ ಅಗತ್ಯತೆಗಳಿಗಾಗಿ ಈ ರಸ್ತೆಯಲ್ಲಿಯೇ ಸಾಗಬೇಕಾಗಿದೆ.
ಬೈಕ್, ರಿಕ್ಷಾ, ಕಾರು ಸಂಚರಿಸುವ
ಈ ರಸ್ತೆ ಸದಾ ವಾಹನಗಳೊಂದಿಗೆ ಜನಸಂಚಾರ ಹೊಂದಿದೆ. ಇದೇ ರಸ್ತೆಯಲ್ಲಿ ಸಾರ್ವಜನಿಕ ನಾಗಬ್ರಹ್ಮಸ್ಥಾನ, ಶನೀಶ್ವರ ದೇಗುಲ, ಮೂಡನಿಡಂಬೂರು ಗರಡಿಯಿದ್ದು, ಜನಸಂಚಾರವೂ ಅಧಿಕವಿದೆ. ಕಳೆದ ಮೂರು ವರ್ಷಗಳ ಹಿಂದೆ ಇದೇ ರಸ್ತೆಯಲ್ಲಿ ಮಳೆ ನೀರು ತುಂಬಿಕೊಂಡು ಹೊಳೆಯಂತಾಗಿದ್ದ ಸಂದರ್ಭ ಯುವತಿಯೋರ್ವರು ನೀರಿನ ಸೆಳೆತಕ್ಕೆ ಸಿಲುಕಿ ಆಯತಪ್ಪಿ ಗುಂಡಿಗೆ ಬಿದ್ದು ಪ್ರಾಣ ತೆತ್ತ ಕಹಿ ಘಟನೆಯೂ ಸಂಭವಿಸಿದೆ.
ಪರಿಹಾರೋಪಾಯ
ಮಳೆಗಾಲ ಬಂತೆಂದರೆ ಸದಾ ಅಪಾಯವನ್ನೇ ಎದುರಿಸುತ್ತಿರುವ ಈ ಭಾಗದ ರಸ್ತೆಯ ಸುಗಮ ಸಂಚಾರಕ್ಕೆ ಇಕ್ಕೆಡೆಗಳಲ್ಲಿರುವ ಪೊದೆಗಳನ್ನು ಕಡಿದು ಸ್ವತ್ಛಗೊಳಿಸಬೇಕು. ತಿರುವುಗಳಲ್ಲಿ ವಾಹನ ಚಾಲಕರು ಧ್ವನಿ ಮಾಡುತ್ತ, ನಿಧಾನಗತಿಯಿಂದ ಅತ್ಯಂತ ಜಾಗರೂಕತೆಯಿಂದ ಸಂಚರಿಸಬೇಕು. ಇಲ್ಲಿ ಹರಿಯುವ ತೋಡನ್ನು ಕಾಲ ಕಾಲಕ್ಕೆ ಹೂಳೆತ್ತಬೇಕು. ತ್ಯಾಜ್ಯಗಳನ್ನು ತೋಡಿಗೆ ಹಾಕದಂತೆ ಎಚ್ಚರ ವಹಿಸಬೇಕು. ರಸ್ತೆಯ ಉಭಯ ಪಾರ್ಶ್ವಗಳಲ್ಲಿ ತೋಡು ನಿರ್ಮಿಸುವುದರೊಂದಿಗೆ ಹೊಂಡವಿರುವಲ್ಲಿ ಆವರಣ ಗೋಡೆ ರಚಿಸುವುದರಿಂದ ಮುಂದಾಗಬಹುದಾದ ಅನಾಹುತ ತಪ್ಪಿಸಬಹುದು.
ಸಮಸ್ಯೆಗೆ ಸೂಕ್ತ ಕ್ರಮ
ನಗರಸಭೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ಬಳಿಕ ಬನ್ನಂಜೆ-ನಿಟ್ಟೂರು ಸಂಪರ್ಕ ರಸ್ತೆಯಲ್ಲಿ ಅಪಾಯವಿರುವ ಭಾಗದಲ್ಲಿ ಕಬ್ಬಿಣದ ರೈಲಿಂಗ್ಸ್ ಮತ್ತು ಜಾಲರಿಗಳನ್ನು ಅಳವಡಿಸುವ ಯೋಜನೆ ಹೊಂದಲಾಗಿದೆ. ಅಲ್ಲದೆ ಈ ರಸ್ತೆಗೆ ಸಂಬಂಧಿಸಿದ ಇನ್ನಿತರ ಸಮಸ್ಯೆಗಳ ಬಗ್ಗೆಯೂ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
-ಸವಿತಾ ಹರೀಶರಾಮ್‌ಭಂಡಾರಿ,
ನಗರಸಭೆ ಸದಸ್ಯೆ, ಬನ್ನಂಜೆ ವಾರ್ಡ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.