ನಗರದ ವಿವಿಧ ಸಮಸ್ಯೆಗಳಿಗೆ ನಗರಸಭೆ ಸ್ಪಂದನೆ
Team Udayavani, Apr 30, 2022, 12:18 PM IST
ಉಡುಪಿ: ನಗರದ ಕುಡಿಯುವ ನೀರು, ಬೀದಿದೀಪ ಸಹಿತ ಮೂಲಸೌಕರ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ‘ಉದಯವಾಣಿ’ ಮಾ. 21ರಂದು ಫೋನ್ ಇನ್ ಕಾರ್ಯಕ್ರಮ ನಡೆಸಿತ್ತು. ನಗರಸಭೆ ಅಧ್ಯಕ್ಷೆ ಸುಮಿತ್ರಾ ಎಸ್. ನಾಯಕ್, ಪೌರಾಯುಕ್ತ ಡಾ| ಉದಯ ಕುಮಾರ್ ಶೆಟ್ಟಿ ಭಾಗವಹಿಸಿ ಜನ ಸಾಮಾನ್ಯರ ಪ್ರಶ್ನೆಗಳಿಗೆ ಉತ್ತರಿಸಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು.
ಫೋನ್‌ಇನ್‌ನಲ್ಲಿ ಕೇಳಿ ಬಂದ ದೂರುಗಳ ಪಟ್ಟಿ ಮಾಡಿ, ಒಂದೊಂದಾಗಿ ಪರಿಹರಿಸಲು ಕ್ರಮ ತೆಗೆದುಕೊಂಡಿದ್ದೇವೆ. ನೀರು ಪೂರೈಕೆಯ ಸಮಸ್ಯೆಯನ್ನು ಬಹುತೇಕ ಬಗೆಹರಿಸಿದ್ದೇವೆ. ಫ್ಲ್ಯಾಟ್, ಕಾಲನಿಗಳಲ್ಲಿ ನೀರಿನ ಸಂಪರ್ಕ ಪರಿಶೀಲನೆ ಮಾಡಿದ್ದೇವೆ. ದೂರಿಗೆ ಸಂಬಂಧಿಸಿದ ಪ್ರಕರಣಗಳಿಗೆ ತತ್‌ಕ್ಷಣ ಸ್ಪಂದನೆ ನೀಡಿದ್ದು, ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಸ್ವಲ್ಪ ವಿಳಂಬವಾಗಿದೆ. ಹಿರಿಯಡಕ ಬಜೆ ಡ್ಯಾಂನಲ್ಲಿ ಹೆಚ್ಚುವರಿ ಪಂಪ್ ಅಳವಡಿಸಿ ನೀರು ಪೂರೈಕೆ ಕ್ರಮ ಕೈಗೊಂಡ ಬಳಿಕ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಹೆದ್ದಾರಿ ಬೀದಿದೀಪ ಅಳವಡಿಕೆ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಮಳೆಗಾಲದ ತಯಾರಿ ಕೆಲಸ ಈಗಾಗಲೇ ಆರಂಭಗೊಂಡಿದೆ. ಇಂದ್ರಾಣಿ ಸಹಿತ ವಿವಿಧ ವಾರ್ಡ್ ಗಳಲ್ಲಿರುವ ಮಳೆ ನೀರು ಹರಿಯುವ ತೋಡುಗಳ ಸ್ವಚ್ಛತೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಖಾಸಗಿ ಖಾಲಿ ನಿವೇಶನಗಳ ಸ್ವಚ್ಛತೆ ಮತ್ತು ನಿರ್ವಹಣೆ ನಗರಸಭೆಗೆ ಅಧಿಕಾರ ಇಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಲಾಗುವುದು ಎಂಬ ಭರವಸೆಯನ್ನು ನಗರಸಭಾಧ್ಯಕ್ಷರು ಮತ್ತು ಪೌರಾಯುಕ್ತರು ನೀಡಿದ್ದಾರೆ.
ಫೋನ್‌ಇನ್‌ಗೆ ಬಂದಿದ್ದ ದೂರುಗಳು
ನಗರದ ಎತ್ತರ ಪ್ರದೇಶ ಹಾಗೂ ಇತರ ಕೆಲವೆಡೆ ಸಮರ್ಪಕವಾಗಿ ನೀರು ಪೂರೈಕೆಯಾಗದಿರುವ ಹೆಚ್ಚು ದೂರುಗಳಿದ್ದವು. ಸಂತೆಕಟ್ಟೆ, ಕೊರಂಗ್ರಪಾಡಿ, ಶಿರಿಬೀಡು, ಕಿನ್ನಿಮೂಲ್ಕಿ, ಕಲ್ಸಂಕ, ಅಂಬಾಗಿಲು ಫ್ಲ್ಯಾಟ್‌ಗಳಲ್ಲಿ ನೀರು ಪೂರೈಕೆಯಾಗದಿರುವ ಬಗ್ಗೆ ಸಾರ್ವಜನಿಕರು ಅಳಲು ತೋಡಿಕೊಂಡಿದ್ದರು. ಹುಡ್ಕೋ ಎನ್‌ಐಜಿ ಕಾಲನಿಗಳಲ್ಲಿ ನೀರಿನ ಸಮಸ್ಯೆಯ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ನಗರ ವ್ಯಾಪ್ತಿಯಲ್ಲಿರುವ ಹೆದ್ದಾರಿಯಲ್ಲಿ ಬೀದಿದೀಪದ ಸಮಸ್ಯೆ, ಮಳೆ ಬರುವ ಮುನ್ನ ಚರಂಡಿ ಸ್ವಚ್ಛಗೊಳಿಸಿ, ಹೂಳು ತೆಗೆಯಲು ಸಾರ್ವಜನಿಕರು ಮನವಿ ಮಾಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.