ಶೌಚಾಲಯದಿಂದ ಪಂಚಗಂಗಾವಳಿಗೆ ಪೈಪ್ ಹಾಕಿದ ಪುರಸಭೆ
ಇಂದಿಗೂ ನೂರಾರು ಮನೆಗಳಿಗೆ ಹಕ್ಕುಪತ್ರ ಇಲ್ಲ
Team Udayavani, Feb 18, 2020, 5:01 AM IST
ಕುಂದಾಪುರ: ಭರಪೂರ ನೀರು ತುಂಬಿದ ಪಂಚಗಂಗಾವಳಿ ನದಿ. ಅದರ ದಡದಲ್ಲಿ ಅಳವಡಿಸಿದ ಸಿಮೆಂಟ್ ಬೆಂಚ್‌ಗಳು. ಅಷ್ಟರಲ್ಲಿ ಯಾರೋ ತುರ್ತು ಕರೆ ಬಂತು ಎಂದು ಅಲ್ಲೇ ಇದ್ದ ಸಾರ್ವಜನಿಕ ಶೌಚಾಲಯಕ್ಕೆ ಹೋದರು. ಕುಳಿತಿದ್ದ ಅಷ್ಟೂ ಮಂದಿ ಎಧ್ದೋಡಿದರು. ಏಕೆಂದರೆ ಶೌಚಾಲಯದ ತ್ಯಾಜ್ಯ ಪೈಪನ್ನು ನೇರ ಹೊಳೆಗೆ ಬಿಡಲಾಗಿತ್ತು!
“ಸುದಿನ’ ವಾರ್ಡ್ ಸುತ್ತಾಟ ಸಂದರ್ಭ ಖಾರ್ವಿಕೇರಿಯ ಮಧ್ಯಕೇರಿಯಲ್ಲಿ ಇಂತಹ ಸಮಸ್ಯೆ ಗಮನಕ್ಕೆ ಬಂತು. ಬಯಲುಶೌಚ ಮುಕ್ತ ಪುರಸಭೆಯ ಕಿರೀಟದ ಗರಿಗೆ ಅಪವಾದ ಎಂಬಂತೆ ಖಾರ್ವಿಕೇರಿಯಲ್ಲಿ ಇನ್ನೂ ಅನೇಕ ಮನೆಗಳಿಗೆ ಶೌಚಾಲಯವೇ ಇಲ್ಲ. ರಚನೆಗೆ ಜಾಗವೂ ಇಲ್ಲ. ಒಂದೆರಡು ಸೆಂಟ್ಸ್‌ನಲ್ಲಿ ಮನೆಕಟ್ಟಿ ಕೂತವರಿದ್ದಾರೆ. ಅಂತಹವರಿಗೆ ಮನೆಯಡಿ ಬಿಟ್ಟರೆ ಬೇರೆ ಜಾಗವೇ ಇಲ್ಲ. ಒಂದಷ್ಟು ಮನೆಯವರು ಪುರಸಭೆಯ ಮಾತಿಗೆ ಬೆಲೆ ನೀಡಿ ಕೆಲವು ಸಮಯದ ಹಿಂದೆ ಶೌಚಾಲಯ ಮಾಡಿಸಿಕೊಂಡಿದ್ದಾರೆ. ಇನ್ನಷ್ಟು ಮಂದಿಗೆ ಸ್ವಂತ ಜಾಗವೇ ಇಲ್ಲ ಎಂಬ ದುರಂತ.
ವಾಸನೆ
ನದಿಗೆ ಚರಂಡಿ ನೀರು, ಶೌಚ ನೀರು ಹರಿದು ವಾಸನೆ ಬರುತ್ತದೆ, ಸೊಳ್ಳೆ ಬರುತ್ತದೆ, ನೊಣಗಳು ಉತ್ಪತ್ತಿಯಾಗುತ್ತವೆ ಎನ್ನುವುದು ಒಂದೆಡೆಯಾದರೆ ಖಾರ್ವಿಕೇರಿಗೆ ಸಂಬಂಧಿಸಿದಂತೆ ಇರುವ ಸುಡುಗಾಡು ತೋಡಿನಲ್ಲಿ ತೇಲಿಬರುವ ಹಂದಿ ತ್ಯಾಜ್ಯ ಕೂಡಾ ಇಲ್ಲಿನವರ ಅಸಮಾಧಾನಕ್ಕೆ ಕಾರಣವಾಗಿದೆ. ಹಂದಿ ತ್ಯಾಜ್ಯ ಹೊಳೆಗೆ ಬಿಡದಂತೆ ಪುರಸಭೆ ನೋಟಿಸ್ ಕೂಡ ನೀಡಿದೆ. ಸಮಸ್ಯೆ ನಿವಾರಣೆಯಾಗಿಲ್ಲ. 4 ವರ್ಷಗಳ ಹಿಂದೊಮ್ಮೆ ಸುಡುಗಾಡು ತೋಡನ್ನು ಸ್ವತ್ಛಗೊಳಿಸಲಾಗಿತ್ತು. ಆದರೆ ಸಮುದ್ರದ ಉಬ್ಬರ ಇಳಿತದ ಸಂದರ್ಭ ನೀರು ಹರಿದಾಗ ಎಲ್ಲೆಲ್ಲಿಯದೋ ತ್ಯಾಜ್ಯ ಮತ್ತೆ ಸೇರಿಕೊಂಡು ಉಳಿಯುತ್ತದೆ.
ಹೊಳೆಗೆ ಸಂಪರ್ಕ
ಇನ್ನು ಸಾರ್ವಜನಿಕ ಶೌಚಾಲಯದ ತ್ಯಾಜ್ಯ ಸಂಪರ್ಕವನ್ನು ಪುರಸಭೆ ವತಿಯಿಂದಲೇ ರಾಜಾರೋಷವಾಗಿ ಹೊಳೆಗೆ ಹರಿಯಬಿಡಲಾಗಿದೆ. ಇದಕ್ಕೆ ಕಾರಣ ಕೂಡಾ ಜಾಗದ ಕೊರತೆ. ಒಂದೆಡೆ ಕುಡಿಯುವ ನೀರಿನ ಪೈಪ್‌ಲೈನ್ ಇದೆ. ಮತ್ತೂಂದೆಡೆ ಮನೆಗಳಿವೆ. ಮಗದೊಂದೆಡೆ ರಸ್ತೆಯಿದೆ. ಈ ರಸ್ತೆಯನ್ನು ಅಗೆದು ಮಾಡಲು ನದಿನೀರಿನ ಪ್ರಾಕೃತಿಕ ತೊಂದರೆ, ರಸ್ತೆಯಲ್ಲಿ ವಾಹನಗಳ ಓಡಾಟ ಮೊದಲಾದ ಸಮಸ್ಯೆಗಳಿವೆ. ಗುಂಡಿ ತೆಗೆದರೆ ನೀರು ಸಂಗ್ರಹವಾಗುತ್ತದೆ. ಅದೇನೇ ಇದ್ದರೂ ಶೌಚಾಲಯ ತ್ಯಾಜ್ಯ ಹೊಳೆಗೆ ಬಿಡುವುದು ಸರಿಯಂತೂ ಅಲ್ಲವೇ ಅಲ್ಲ. ಏಕೆಂದರೆ ಇಲ್ಲಿನ ಜನ ಮೀನು ಗಾರಿಕೆಗೆ ಎಂದು ನದಿಗಿಳಿಯುವುದು ಇಲ್ಲಿಯೇ. ಖಾರ್ವಿಕೇರಿಯ ಇನ್ನೆರಡು ಕಡೆಯ ಶೌಚಾ ಲಯಕ್ಕೆ ಗುಂಡಿ ಮಾಡಲಾಗಿದ್ದು ನದಿಗೆ ಬಿಡುವುದಿಲ್ಲ.
ನದಿಗಿಳಿದರೆ ತುರಿಕೆ
ಶೌಚ ನೀರು ಸಾಲದು ಎಂಬಂತೆ ಚರಂಡಿ ನೀರು ಕೂಡ ಇಲ್ಲಿ ಹೊಳೆಗೇ ಸೇರುವುದು. ಒಳಚರಂಡಿ ವ್ಯವಸ್ಥೆ ಇಲ್ಲ. ಹಾಗಾಗಿ ಮೀನುಗಾರಿಕೆಗೆ ಎಂದು ನದಿಗೆ ಇಳಿದರೆ ಮೈಯೆಲ್ಲ ಅಸಾಧ್ಯವಾದ ತುರಿಕೆ ಉಂಟಾಗುತ್ತದೆ ಎನ್ನುತ್ತಾರೆ ಇಲ್ಲಿನವರು. ಸಮುದ್ರ ಉಬ್ಬರ ಸಂದರ್ಭ ಅಷ್ಟಿಲ್ಲದಿದ್ದರೂ, ಮಳೆಗಾಲದಲ್ಲಿ ಸಿಹಿನೀರು ನದಿಗಳಲ್ಲಿ ಬಂದಾಗ ಸಮಸ್ಯೆ ಆಗದಿದ್ದರೂ, ಸಮುದ್ರದ ಇಳಿತ ಇದ್ದಾಗ, ನದಿ ನೀರಿನ ಕೊರತೆಯಿದ್ದಾಗ ಕಷ್ಟವಾಗುತ್ತದೆ.
ರಿಂಗ್‌ರೋಡ್
ರಿಂಗ್‌ರೋಡ್ ಅಭಿವೃದ್ಧಿ ಆದರೆ ಸಾಕಷ್ಟು ಪ್ರಯೋಜನವಿದೆ ಎನ್ನುತ್ತಾರೆ ಸ್ಥಳೀಯರು. ಅಲ್ಲಲ್ಲಿ ಕಾಂಕ್ರೀಟ್ ಹಾಕಲಾಗಿದ್ದು ಇನ್ನೊಂ ದಷ್ಟು ಕಡೆ ಕಾಮಗಾರಿ ಬಾಕಿ ಇದೆ.
ಸುಂದರ ಖಾರ್ವಿಕೇರಿ
ಯುವಬ್ರಿಗೇಡ್ ಸೇರಿದಂತೆ ಸಂಘಟನೆ ಗಳು ಸ್ವತ್ಛತಾ ಕಾರ್ಯ ನಡೆಸುತ್ತಿವೆ. ಸುಂದರ ಖಾರ್ವಿಕೇರಿ ಮಾಡಿ, ಬೋಟಿಂಗ್ ವ್ಯವಸ್ಥೆ ಮಾಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕೆಂದು ಇಲ್ಲಿನವರಿಗೆ ಆಸಕ್ತಿಯಿದೆ.
ಹಕ್ಕುಪತ್ರ ಇಲ್ಲ
ಇಲ್ಲಿನ ನೂರಾರು ಮನೆಗಳಿಗೆ ಜಾಗ ಇದ್ದರೂ ಹಕ್ಕುಪತ್ರಗಳೇ ಇಲ್ಲ. ಮೂರ್ನಾಲ್ಕು ದಶಕಗಳಿಂದ ವಾಸವಿದ್ದರೂ ಹಕ್ಕುಪತ್ರ ದೊರೆತಿಲ್ಲ. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ಆಗಬೇಕಿವೆ. ಎಸಿಯಾಗಿದ್ದ ಭೂಬಾಲನ್ ಅವರು ಸ್ವಲ್ಪಮಟ್ಟಿಗೆ ಪ್ರಯತ್ನಿಸಿದ್ದರು. ಅದರ ಅನಂತರ ಅಧಿಕಾರಿ ವಲಯವೂ ಅಷ್ಟೇನೂ ಗಂಭೀರವಾಗಿ ಚಿಂತಿಸಿಲ್ಲ. ಪುರಸಭೆ ಹಂತದ ಚಿಂತನೆ ಸಾಕಾದಂತಿಲ್ಲ.
ಆಗಬೇಕಾದ್ದೇನು?
ರಿಂಗ್‌ರೋಡ್ ಅಭಿವೃದ್ಧಿ
ಶೌಚಾಲಯದ ತ್ಯಾಜ್ಯ ಗುಂಡಿ
ಚರಂಡಿ ವ್ಯವಸ್ಥೆ
ಚರಂಡಿಯಾಗಲಿ
ಚರಂಡಿ ನೀರು ನೇರ ಪಂಚ ಗಂಗಾವಳಿ ಹೊಳೆಗೆ ಸೇರುತ್ತದೆ. ಘನ ವಾಹನ ಗಳ ಓಡಾಟ ಸಂದರ್ಭ ಚರಂಡಿ ಪೈಪ್ ಒಡೆದು ರಸ್ತೆ ತುಂಬಾ ಗಲೀಜು ನೀರು ಹರಿಯುವುದೂ ಇದೆ. ಇದಕ್ಕೊಂದು ಪರ್ಯಾಯ ವ್ಯವಸ್ಥೆಯಾಗಬೇಕು.
-ಗುರುಪ್ರಸಾದ್ ಖಾರ್ವಿ
ಮಧ್ಯಕೇರಿ, ಖಾರ್ವಿಕೇರಿ
ತ್ಯಾಜ್ಯ ನದಿಗೆ ಬಿಡಬಾರದು ನದಿಯ ಪಕ್ಕದಲ್ಲಿ ಶೌಚಾಲಯ ಕಟ್ಟಿದ ಪುರಸಭೆ ಅದಕ್ಕೊಂದು ಶೌಚಗುಂಡಿ ಮಾಡದ ಕಾರಣ ಅದರ ತ್ಯಾಜ್ಯ ನೇರ ನದಿಗೆ ಬಿಡುವಂತಾಗಿದೆ. ಗುಂಡಿ ತೆಗೆಯಲು ಒಂದೆಡೆ ರಸ್ತೆ, ಇನ್ನೊಂದೆಡೆ ಕುಡಿಯುವ ಪೈಪ್ ಲೈನಿದೆ. ಇದಕ್ಕೊಂದು ಪರಿಹಾರ ಕಾಣಿಸಬೇಕಿದೆ.
-ದೇವರಾಯ ಖಾರ್ವಿ
ಖಾರ್ವಿಕೇರಿ
ಜಾಗದ ಸಮಸ್ಯೆ
ಶೌಚಾಲಯ ಗುಂಡಿ ಮಾಡಲು ಜಾಗದ ಸಮಸ್ಯೆಯಿದೆ. ಈಚೆಗೆ ರಿಂಗ್‌ರೋಡ್ ಕಾಂಕ್ರೀಟ್, ರಿಂಗ್‌ರೋಡ್‌ನಲ್ಲಿ ಜಲ್ಲಿಮಿಶ್ರಣ, ರಿಂಗ್‌ರೋಡ್ ಹತ್ತಿರ ತೋಡು ನಿರ್ಮಾಣ, ಅದಕ್ಕೆ ಮುಚ್ಚಿಗೆ ಹಾಕಿಸಲಾಗಿದೆ. ಅನುದಾನ ಬಂದ ಕೂಡಲೇ ಇನ್ನಷ್ಟು ಕೆಲಸಗಳನ್ನು ಮಾಡಿಸಲಾಗುವುದು.
-ಚಂದ್ರಶೇಖರ ಖಾರ್ವಿ,
ಸದಸ್ಯರು, ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.