ಕಾಪು: ಐದು ತಲೆಮಾರುಗಳಿಂದ ನಾಗಸ್ವರ ನುಡಿಸಿಕೊಂಡು ಬರುತ್ತಿದೆ ಮುಸ್ಲಿಂ ಮನೆತನ
ಉಪವಾಸದಲ್ಲಿಯೂ ವಾಲಗ ಸೇವೆ ನಿರಂತರ
Team Udayavani, Apr 4, 2022, 2:55 PM IST
ಕಾಪು: ಮುಸ್ಲಿಮರಿಗೆ ಪವಿತ್ರವಾದ ರಮ್ಜಾನ್ ಮಾಸ ರವಿವಾರ ಆರಂಭಗೊಂಡಿದೆ. ಇದು ಉಪವಾಸ ವ್ರತ ಆಚರಿಸುವ ತಿಂಗಳು. 5 ತಲೆಮಾರುಗಳಿಂದ ಕಾಪು ಸಾವಿರ ಸೀಮೆಯ ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ಕಲಾವಿದ ಶೇಖ್ ಜಲೀಲ್ ಸಾಹೇಬ್ ಅವರ ಮನೆತನ ನಾಗಸ್ವರ ನುಡಿಸಿಕೊಂಡು ಬರುತ್ತಿದೆ. ರಮ್ಜಾನ್ ಉಪವಾಸದ ನಡುವೆಯೂ ಅವರು ನಾಗಸ್ವರ ವಾದನ ಸೇವೆಯನ್ನು ನಿರಂತರವಾಗಿ ನಡೆಸುತ್ತಾರೆ.
ಈಗ ಶೇಖ್ ಜಲೀಲ್ ಸಾಹೇಬ್ ಮತ್ತು ಅವರ ಸಹೋದರ ಅಕ್ಬರ್ ಸಾಹೇಬ್ ವಾಲಗ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ತಂದೆ (ಪಿತ) ದಿ| ಬಾಬನ್ ಸಾಹೇಬ್, ತಾತ (ಪಿತಾಮಹ) ಇಮಾಮ್ ಸಾಹೇಬ್, ಮುತ್ತಾತ (ಪ್ರಪಿತಾಮಹ) ಮುಗ್ಧಂ ಸಾಹೇಬ್, ಹಿರಿ ಮುತ್ತಜ್ಜ (ಜ್ಯೇಷ್ಠ ಪ್ರಪಿತಾಮಹ) ಮತ್ತ ಸಾಹೇಬ್ ಹೀಗೆ ಐದು ತಲೆಮಾರುಗಳ ಇತಿಹಾಸ ಮನೆತನಕ್ಕಿದೆ.
ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ಮಾರಿಗುಡಿ ದೇವಸ್ಥಾನ, ಹೊಸಮಾರಿಗುಡಿ ದೇವಸ್ಥಾನ, ಮೂರನೇ ಮಾರಿಗುಡಿ ದೇವಸ್ಥಾನ, ಕೊಪ್ಪಲಂಗಡಿ ವಾಸುದೇವ ದೇವಸ್ಥಾನ, ಕಲ್ಯ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಧರ್ಮದೈವ ಕಲ್ಕುಡ ದೈವಸ್ಥಾನ, ಕಲ್ಯ ಬೀಡು ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವಸ್ಥಾನ, ಪಡುಗ್ರಾಮ ಧೂಮಾವತಿ ದೈವಸ್ಥಾನ, ಬ್ರಹ್ಮಬೈದರ್ಕಳ ಪೊಯ್ಯ ಪೊಡಿಕಲ್ಲ ಗರೋಡಿ, ಬಬ್ಬರ್ಯ ದೈವಸ್ಥಾನ, ಮಲ್ಲಾರು ಧೂಮಾವತಿ ದೈವಸ್ಥಾನ, ಮಲ್ಲಾರು ಬ್ರಹ್ಮಬೈದರ್ಕಳ ಗರೋಡಿ, ಮೂಳೂರು ಸರ್ವೇಶ್ವರ ಕೊಡಮಣಿತ್ತಾಯ ಬಬ್ಬರ್ಯ ದೈವಸ್ಥಾನಗಳೂ ಸೇರಿದಂತೆ ವಿವಿಧೆಡೆ ನಡೆಯುವ ವಾರ್ಷಿಕ ಉತ್ಸವ, ಕೋಲ, ನೇಮ, ನಾಗ ದರ್ಶನ, ಆಶ್ಲೇಷಾ ಬಲಿ, ನಾಗ ಮಂಡಲ ಸಹಿತವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇವರದ್ದೇ ವಾಲಗ ಸೇವೆ ಕಾಣಸಿಗುತ್ತದೆ.
ಶೇಖ್ ಜಲೀಲ್ ಸಾಹೇಬ್ ಅವರ ವಂಶಸ್ಥರಿಗೆ ಲಕ್ಷ್ಮೀಜನಾರ್ದನ ದೇವಸ್ಥಾನದ ವತಿಯಿಂದ 1 ಎಕರೆ ಜಾಗವನ್ನು ಉಂಬಳಿ ಬಿಡಲಾಗಿತ್ತು. ಅದೇ ಜಮೀನಿಗೆ ತಾಗಿಕೊಂಡಂತೆ ಇರುವ ಪುರಾತನ ನಾಗಬನ ಮತ್ತು ಪಂಜುರ್ಲಿ ದೈವದ ಸಾನಿಧ್ಯಗಳ ನಿತ್ಯ ಆರಾಧಕರಾಗಿಯೂ ಇವರಿದ್ದಾರೆ. ಲಕ್ಷ್ಮೀ ಜನಾರ್ದನ ದೇವಸ್ಥಾನದ ವಾರ್ಷಿಕ ರಥೋತ್ಸವದಂದು ನಡೆಯುವ ಅನ್ನಸಂತರ್ಪಣೆಯ ಬಳಿಕ ದೇವಸ್ಥಾನದಿಂದ ಅನ್ನ, ಸಾಂಬಾರು ಸಹಿತ ವಿವಿಧ ಊಟದ ಸಾಮಗ್ರಿಗಳನ್ನು ಮನೆಗೆ ತಂದು ಹಿರಿಯರಿಗೆ ಅಗೆಲು ಬಡಿಸಿ, ತಾವು ಉಣ್ಣುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ.
ಬಂಗಾರದ ವಾಲಗ ಒಲ್ಲೆ:
ಜಲೀಲ್ ಅವರ ಮುತ್ತಾತ ಮುಗ್ಧಂ ಸಾಹೇಬ್ ಅವರಿಗೆ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಬಂಗಾರದ ನಾಗಸ್ವರವನ್ನು ನೀಡುವ ಬಗ್ಗೆ ಪ್ರಸ್ತಾವನೆ ಬಂದಿತ್ತು. ಆದರೆ ಕಳ್ಳಕಾಕರ ಭಯದಿಂದ ಅದನ್ನು ಪಡೆಯಲು ನಿರಾಕರಿಸಿದ್ದರು. ಆದರೂ ಹಠ ಬಿಡದ ಅಂದಿನ ಆಡಳಿತದವರು ಬೆಳ್ಳಿಯ ನಾಗಸ್ವರಕ್ಕೆ ಬಂಗಾರದ ಗುಬ್ಬಿಯನ್ನು ಜೋಡಿಸಿಕೊಟ್ಟಿದ್ದರು. 70-80 ವರ್ಷಗಳಿಂದಲೂ ಅದನ್ನು ಅತ್ಯಂತ ಜೋಪಾನವಾಗಿಟ್ಟುಕೊಂಡು ಬಂದಿರುವ ಶೇಖ್ ಜಲೀಲ್ ಸಾಹೇಬ್ ಈಗಲೂ ಪ್ರತೀ ಮಂಗಳವಾರ ಹೊಸ ಮಾರಿಗುಡಿಗೆ ಅದನ್ನು ಕೊಂಡೊಯ್ದು ವಾಲಗ ಸೇವೆ ನುಡಿಸುತ್ತಾರೆ.
ದೇವರ ಸೇವೆಯಿಂದ ಬೆಳೆದಿದ್ದೇವೆ :
ಮನೆಯಲ್ಲಿದ್ದಾಗಲೆಲ್ಲ ಸಮುದಾಯದ ಧಾರ್ಮಿಕ ರೀತಿ, ನೀತಿ, ರಿವಾಜುಗಳನ್ನು ನಡೆಸುತ್ತೇವೆ. ಮಸೀದಿಗೆ ಹೋಗುವ ಸಮಯದಲ್ಲಿ ಮಸೀದಿಗೆ ಹೋಗುತ್ತೇವೆ. ದೇವರ ಸೇವೆ ಮಾಡುತ್ತೇವೆ. ದೇವರ ಸೇವೆ ಪರಂಪರಾಗತವಾಗಿ ಬಂದಿರುವ ಜವಾಬ್ದಾರಿಯಾಗಿದೆ. ಪವಿತ್ರ ರಮ್ಜಾನ್ ಮಾಸಾಚರಣೆಯಲ್ಲಿ ಉಪವಾಸವಿದ್ದಾಗಲೂ ದೇವರು ವಾಲಗ ಸೇವೆ ಮಾಡುವ ಶಕ್ತಿ ನೀಡುತ್ತಾನೆ. ಹಿರಿಯರ ಕಾಲದಿಂದಲೂ ದೇವರ ಆಶೀರ್ವಾದ ನಮ್ಮ ಜತೆಗಿದ್ದು, ನಮ್ಮನ್ನು ದೇವರೇ ರಕ್ಷಿಸುತ್ತಾರೆ. ಯಾರು ಏನೇ ಹೇಳಿದರೂ ದೇವರ ಸೇವೆಯನ್ನು ಮಾತ್ರ ನಿಲ್ಲಿಸುವುದಿಲ್ಲ. ಕಾಪು ಸಾವಿರ ಸೀಮೆಯ ದೈವ ದೇವರುಗಳ ಅನುಗ್ರಹದಿಂದಲೇ ನಮ್ಮ ಕುಟುಂಬ ಬೆಳೆದಿದೆ, ಬೆಳಗುತ್ತಿದೆ. ಮುಂದೆಯೂ ಇದೇ ನಂಬಿಕೆ ನಮ್ಮನ್ನು ಬೆಳೆಸುತ್ತದೆ ಎನ್ನುತ್ತಾರೆ ಶೇಖ್ ಜಲೀಲ್ ಸಾಹೇಬ್.
ನನ್ನ ಅಜ್ಜ ಇಮಾಮ್ ಸಾಹೇಬ್ ಅವರು ತೀರಿ ಹೋಗುವಾಗ ನನಗೆ 18 ವರ್ಷ. ಅಜ್ಜ ತೀರಿ ಹೋದ ಬಳಿಕ ತಂದೆಯ ಜತೆಗೆ ಸೇರಿಕೊಂಡು ಕಳೆದ 34 ವರ್ಷಗಳಿಂದ ವಾಲಗ ಸೇವೆ ನಡೆಸುತ್ತಾ ಬಂದಿದ್ದೇನೆ. ತಂದೆ ತೀರಿ ಹೋದ ಬಳಿಕ ಕಳೆದ 10 ವರ್ಷಗಳಿಂದ ಸಹೋದರ ಅಕ್ಬರ್ ಸಾಹೇಬ್ ನನ್ನೊಂದಿಗೆ ಕೈಜೋಡಿಸುತ್ತಿದ್ದಾನೆ. ನನ್ನಲ್ಲಿ ಗಂಡು ಸಂತಾನವಿಲ್ಲ, ಸಹೋದರರಿಗೆ ಗಂಡು ಸಂತಾನವಿದೆ. ಅವರು ಮುಂದುವರಿಸಿಕೊಂಡು ಹೋಗಬೇಕೆಂಬ ಆಶಯವಿದೆ. –ಶೇಖ್ ಜಲೀಲ್ ಸಾಹೇಬ್
-ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.