ದ್ವಿಚಕ್ರ ವಾಹನದಲ್ಲಿ ನಾಡಬಾಂಬ್ ಸಾಗಾಟ: ಮೂವರ ಬಂಧನ
Team Udayavani, Nov 23, 2017, 10:57 AM IST
ಉಡುಪಿ: ದ್ವಿಚಕ್ರ ವಾಹನದಲ್ಲಿ ನಾಡ ಬಾಂಬ್ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಮೂವರನ್ನು ಬಂಧಿಸಿ ನಾಡ ಬಾಂಬ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಬ್ರಿ ಕನ್ಯಾನ ಅರ್ಕುಂಜೆ ನಿವಾಸಿ ನಾಗೇಶ್ ನಾಯಕ್ (35), ಅಲಾºಡಿ ಗ್ರಾಮದ ಆರ್ಡಿಯ ಗುಣಕರ ಶೆಟ್ಟಿ (56) ಮತ್ತು ಮಡಾಮಕ್ಕಿಯ ಲಕ್ಷ್ಮಣ ಶೆಟ್ಟಿ ಯಾನೆ ಲಚ್ಚು ಶೆಟ್ಟಿ (67) ಬಂಧಿತರು.
ನ. 21ರಂದು ಹೆಬ್ರಿ ಪಿಎಸ್ಸೆ„ ಜಗನ್ನಾಥ ಟಿ.ಟಿ. ಅವರು ಗಸ್ತಿನಲ್ಲಿದ್ದಾಗ ಸಂಜೆ ಶಿವಪುರ ಗ್ರಾಮದ ಬ್ಯಾಣ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದ ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಸೀಟಿನ ಕೆಳಭಾಗದಲ್ಲಿ 30 ನಾಡಬಾಂಬ್‌ಗಳು ಹಾಗೂ ತಲೆಗೆ ಕಟ್ಟುವ ಟಾರ್ಚ್, ಚೂರಿ ಮತ್ತು ರೈನ್ ಕೋಟ್ ಪತ್ತೆಯಾಗಿದ್ದವು. ಆ ಸಂದರ್ಭ ಆರೋಪಿ ನಾಗೇಶ್ ನಾಯಕ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಪ್ರಾಣಿಗಳನ್ನು ಕೊಲ್ಲಲು ಬಳಸುತ್ತಿದ್ದರು
ಬಂಧಿತ ಆರೋಪಿ ನಾಗೇಶ್ ನಾಯಕ್‌ನನ್ನು ವಿಚಾರಣೆ ನಡೆಸಿದಾಗ, ತಾನು ನಾಡ ಬಾಂಬ್‌ಗಳನ್ನು ಅಲಾºಡಿಯ ಗುಣಕರ ಶೆಟ್ಟಿಯವರಿಂದ ಹಣ ಕೊಟ್ಟು ಖರೀದಿ ಮಾಡಿಕೊಂಡು ಬಂದಿರುವುದಾಗಿ ಹಾಗೂ ನಾಡ ಬಾಂಬ್‌ಗಳನ್ನು ಬಳಸಿ ಕಾಡು ಪ್ರಾಣಿಗಳನ್ನು ಕೊಲ್ಲಲು ಕಾಡಿನಲ್ಲಿ ಇಡಲು ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದ. ಅದರಂತೆ ನ. 22ರಂದು ಕಾರ್ಕಳ ಎಎಸ್‌ಪಿ ಹೃಷಿಕೇಶ್ ಸೋನಾವಾನೆ ಅವರ ನಿರ್ದೇಶದಲ್ಲಿ ಸಿಪಿಐ ಜಾಯ್ ಅಂಥೊನಿ, ಹೆಬ್ರಿ ಎಸ್‌ಐ ಜಗನ್ನಾಥ ಟಿ.ಟಿ. ಮತ್ತು ಸಿಬಂದಿ ದಾಳಿ ನಡೆಸಿ ನಾಡಬಾಂಬ್ ತಯಾರಿಸಿ ಮಾರಾಟ ಮಾಡುತ್ತಿದ್ದ ಗುಣಕರ ಶೆಟ್ಟಿ ಹಾಗೂ ಲಕ್ಷ್ಮಣ ಶೆಟ್ಟಿಯನ್ನು ಬಂಧಿಸಿದ್ದರು.
ಒಂದು ಬಾಂಬ್‌ಗ 500 ರೂ. !
ದ್ವಿಚಕ್ರ ವಾಹನದಡಿ 30 ಸಿಕ್ಕರೆ, ಆರೋಪಿಯೋರ್ವನ ಮನೆಯಲ್ಲಿ ತಪಾಸಣೆ ನಡೆಸಿದಾಗ 3 ನಾಡ ಬಾಂಬ್ ಪತ್ತೆಯಾಗಿದ್ದು, ಹೀಗೆ ಒಟ್ಟು 33 ನಾಡಬಾಂಬ್‌ಗಳನ್ನು ಹಾಗೂ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗುಣಕರ ಶೆಟ್ಟಿಯನ್ನು ವಿಚಾರಣೆ ನಡೆಸಿದಾಗ ತಾನು ಒಂದು ಬಾಂಬ್ ಅನ್ನು 500 ರೂ.ನಂತೆ 30 ನಾಡಬಾಂಬ್‌ಗಳನ್ನು 15,000 ರೂ.ಗೆ ನಾಗೇಶ್ ನಾಯಕನಿಗೆ ಮಾರಾಟ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಶಂಕರನಾರಾಯಣ ಸ್ಫೋಟಕ್ಕೂ ನಂಟು?
ಕುಂದಾಪುರ ತಾಲೂಕು ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ಬಳಿಯಲ್ಲಿ 2 ತಿಂಗಳ ಹಿಂದೆ ಸ್ಫೋಟವೊಂದು ಸಂಭವಿಸಿದೆ. ಈ ಪ್ರಕರಣಕ್ಕೆ ಹಾಗೂ ಬಂಧಿತ ಆರೋಪಿಗಳಿಗೇನಾದರೂ ನಿಕಟ ಸಂಬಂಧವಿದೆಯೇ ಎನ್ನುವ ಕುರಿತು ತನಿಖೆ ನಡೆಯುತ್ತಿದೆ ಎಂದರು.
ಮನೆಯಲ್ಲಿಯೇ ತಯಾರಿ?
ಆರೋಪಿ ಗುಣಕರ ಶೆಟ್ಟಿಯು ಮನೆಯಲ್ಲಿಯೇ ನಾಡ ಬಾಂಬ್ ತಯಾರಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕಚ್ಚಾ ವಸ್ತು ಎಲ್ಲಿಂದ ಪಡೆಯುತ್ತಾರೆ? ಯಾರು ಸರಬರಾಜು ಮಾಡುತ್ತಾರೆ ಎನ್ನುವ ಬಗ್ಗೆ ಹಾಗೂ ಶಂಕರನಾರಾಯಣ ಸ್ಫೋಟದ ಬಗ್ಗೆ ಎಎಸ್‌ಪಿ ಹೃಷಿಕೇಶ್ ಸೋನಾವಾನೆ ಅವರು ತನಿಖೆ ನಡೆಸಲಿದ್ದಾರೆ ಎಂದು ಎಸ್‌ಪಿ ಡಾ| ಸಂಜೀವ ಎಂ. ಪಾಟೀಲ್ ತಿಳಿಸಿದ್ದಾರೆ.
ಮಾಹಿತಿ ಕೊಡಲು ಎಸ್‌ಪಿ ಮನವಿ
ಕಾಡಿನಲ್ಲಿ ಹಿಂದೆ ಏನಾದರೂ ಸ್ಫೋಟದ ಘಟನೆ ನಡೆದಿದೆಯೇ? ನಡೆದಿದ್ದರೆ ಅದರ ಮಾಹಿತಿಯನ್ನು ನೀಡಲು ಅರಣ್ಯ ಇಲಾಖೆ ಡಿಸಿಎಫ್ ಅವರಿಗೆ ತಿಳಿಸಲಾಗಿದೆ. ನಾಡಬಾಂಬ್ ತಯಾರಿ ಮತ್ತು ಮಾರಾಟದ ಬಗ್ಗೆಯೂ ತನಿಖೆ ನಡೆಯಲಿದೆ. ಕಾಡಿನಲ್ಲಿ ಬೇಟೆ ಆಡುವ, ಬಾಂಬ್ ಸಿಡಿಸಿ ಪ್ರಾಣಿ ಗಳನ್ನು ಕೊಲ್ಲುವ ಜನರ ಬಗ್ಗೆ ಮಾಹಿತಿ ಇದ್ದರೆ ಪೊಲೀಸ್ ಇಲಾಖೆಗೆ ಮಾಹಿತಿ ಕೊಡಿ ಎಂದು ಎಸ್‌ಪಿ ಮನವಿ ಮಾಡಿಕೊಂಡಿದ್ದಾರೆ.
ತಂಡಕ್ಕೆ ಬಹುಮಾನ ಘೋಷಣೆ
ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಭೇದಿಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಐದು ಸಾವಿರ ರೂ. ನಗದು ಬಹುಮಾನವನ್ನು ಘೋಷಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.