ಎನ್‌ಸಿಸಿ ಅಧಿಕಾರಿಗಳ ವರ್ಗಾವಣೆ ಕಿರಿಕಿರಿ : ಕಾಲೇಜುಗಳ ಎನ್‌ಸಿಸಿ ಘಟಕ ಮುಚ್ಚುವ ಭೀತಿ
Team Udayavani, Aug 28, 2022, 2:06 PM IST
ಉಡುಪಿ : ಸರಕಾರಿ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೈನ್ಯದಿಂದ ತರಬೇತಿ ಪಡೆದು ಎನ್‌ಸಿಸಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವವರು ಕಡ್ಡಾಯ ವರ್ಗಾವಣೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಎನ್‌ಸಿಸಿ ಅಧಿಕಾರಿಗಳ ವರ್ಗಾವಣೆಯಿಂದ ಕಾಲೇಜಿನಲ್ಲಿ ಎನ್‌ಸಿಸಿ ಘಟಕ ಮುಚ್ಚುವ ಸ್ಥಿತಿಗೆ ತಲುಪುತ್ತಿದೆ.
10 ವರ್ಷಕ್ಕಿಂತ ಹೆಚ್ಚುಕಾಲ ಒಂದೇ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಧ್ಯಾಪಕರನ್ನು ಕಾಲೇಜು ಶಿಕ್ಷಣ ಇಲಾಖೆ ಕಡ್ಡಾಯವಾಗಿ ವರ್ಗಾವಣೆ ಮಾಡುತ್ತಿದೆ. ಇದೇ ನಿಯಮವನ್ನು ಎನ್‌ಸಿಸಿ ಅಧಿಕಾರಿಗಳಿಗೂ ಅನ್ವಯಿಸಿರುವುದರಿಂದ ವರ್ಗಾವಣೆ ಪಡೆದ ಎನ್‌ಸಿಸಿ ಅಧಿಕಾರಿಗಳು ತಾವು ಹೊಸದಾಗಿ ಸೇವೆ ಆರಂಭಿಸುವ ಕಾಲೇಜಿನಲ್ಲಿ ಎನ್‌ಸಿಸಿ ಘಟಕ ಇಲ್ಲದೆ ಇರುವುದರಿಂದ ಪಡೆದ ತರಬೇತಿಗೆ ಅರ್ಥವೇ ಇಲ್ಲದಂತಾಗುತ್ತಿದೆ ಎಂದು ಬೇಸರ ತೋಡಿಕೊಳ್ಳುತ್ತಿದ್ದಾರೆ.
ರಾಜ್ಯದ 430 ಸರಕಾರಿ ಪದವಿ ಕಾಲೇಜುಗಳಲ್ಲಿ 120ಕ್ಕೂ ಅಧಿಕ ಕಾಲೇಜುಗಳಲ್ಲಿ ಎನ್‌ಸಿಸಿ ಘಟಕವಿದೆ. ವೃತ್ತಿಗೆ ಸೇರಿದ ಪ್ರಾಧ್ಯಾಪಕರು ಎನ್‌ಸಿಸಿ ಅಧಿಕಾರಿಯಾಗಬೇಕಾದರೆ ಸೇನೆಯಿಂದ ಮೂರು ತಿಂಗಳ ತರಬೇತಿ ಪಡೆಯಬೇಕು. ತರಬೇತಿಯ ಅನಂತರದಲ್ಲಿ ಲೆಫ್ಟಿನೆಂಟ್ ರ್‍ಯಾಂಕ್ ಲಭ್ಯವಾಗುತ್ತದೆ. 8 ವರ್ಷಗಳ ಸೇವೆ ಪೂರೈಸಿ ಇನ್ನೊಂದು ತಿಂಗಳ ವಿಶೇಷ ತರಬೇತಿ ಪಡೆದರೆ ಕ್ಯಾಪ್ಟನ್ ರ್‍ಯಾಂಕ್ ಲಭಿಸುತ್ತದೆ. ಆರು ವರ್ಷದ ಸೇವೆಯ ಅನಂತರ ಮೇಜರ್ ರ್‍ಯಾಂಕ್ ಬರಲಿದೆ. ಹೀಗೆ ವಿವಿಧ ರ್‍ಯಾಂಕ್ ಪಡೆಯುವ ಮಧ್ಯದಲ್ಲಿ ಎನ್‌ಸಿಸಿ ಇಲ್ಲದ ಕಾಲೇಜಿಗೆ ವರ್ಗಾವಣೆ ಹೊಂದಿದರೆ ರ್‍ಯಾಂಕ್ ತಪ್ಪಿ ಹೋಗುತ್ತದೆ. ಇದರಿಂದ ಎನ್‌ಸಿಸಿ ಕೆಡೆಟ್‌ಗಳಾಗಿರುವ ವಿದ್ಯಾರ್ಥಿಗಳಿಗೂ ಎನ್‌ಸಿಸಿ ಅಧಿಕಾರಿಯಾಗಿರುವ ಪ್ರಾಧ್ಯಾಪಕರಿಗೂ ತೊಂದರೆ ಆಗುತ್ತಿದೆ.
ಎನ್‌ಸಿಸಿಯಿಂದ ಎನ್‌ಸಿಸಿಗೆ ವರ್ಗಾವಣೆ ಆಗಬೇಕು
ಎನ್‌ಸಿಸಿ ಅಧಿಕಾರಿಗಳಿಗೆ ಪ್ರತ್ಯೇಕ ಕೌನ್ಸೆಲಿಂಗ್ ವ್ಯವಸ್ಥೆ ಇಲ್ಲ. ಸಾಮಾನ್ಯ ಕೌನ್ಸೆಲಿಂಗ್ ವೇಳೆಯಲ್ಲಿ ಇವರು ಭಾಗವಹಿಸಬೇಕು. ಸದಸ್ಯ ನಿಯಮದ ಪ್ರಕಾರ 4 ವರ್ಷ ಮತ್ತು ಅನಂತರ 2 ವರ್ಷ ವಿನಾಯಿತಿ ಹೀಗೆ ಒಂದೇ ಕಾಲೇಜಿನಲ್ಲಿ ಒಟ್ಟು 6 ವರ್ಷ ಸೇವೆ ಸಲ್ಲಿಸಲು ಅವಕಾಶವಿದೆ. ಆರು ವರ್ಷ ಅನಂತರ ವರ್ಗಾವಣೆ ಪಡೆಯಲೇ ಬೇಕಾಗುತ್ತದೆ. ವರ್ಗಾವಣೆ ಪಡೆಯುವ ಸಂದರ್ಭದಲ್ಲಿ ಎನ್‌ಸಿಸಿ ಘಟಕ ಇರುವ ಇನ್ನೊಂದು ಕಾಲೇಜಿಗೆ ವರ್ಗಾವಣೆ ಮಾಡಿದಾಗ ಅಥವಾ ಎನ್‌ಸಿಸಿ ಅಧಿಕಾರಿಗಳ ನಡುವೆ ಪರಸ್ಪರ ಹೊಂದಾಣಿಕೆಯ ವರ್ಗಾವಣೆ ವ್ಯವಸ್ಥೆ ಕಲ್ಪಿಸಿದಾಗ ವಿದ್ಯಾರ್ಥಿಗಳಿಗೂ ಪ್ರಾಧ್ಯಾಪಕರಿಗೂ ಹೆಚ್ಚು ಅನುಕೂಲವಾಗಲಿದೆ ಎಂಬುದು ಎನ್‌ಸಿಸಿ ಅಧಿಕಾರಿಗಳ ವಾದ.
ರಾಜ್ಯದ ಹಲವು ಸರಕಾರಿ ಕಾಲೇಜುಗಳಲ್ಲಿ ಎನ್‌ಸಿಸಿ ಘಟಕಕ್ಕೆ ಬೇಡಿಕೆಯಿದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಸೇನೆಯ ಬಗ್ಗೆ ಒಲವು ಮೂಡಿಸಲು ಮತ್ತು ಎನ್‌ಸಿಸಿ ಕೆಡೆಟ್‌ಗಳು ಸುಲಭದಲ್ಲಿ ಸೈನ್ಯ ಸೇರುತ್ತಾರೆ. ಹೀಗಾಗಿ ಎಲ್ಲ ಕಡೆಗಳಲ್ಲೂ ಎನ್‌ಸಿಸಿಗೆ ಬೇಡಿಕೆಯಿದೆ. ಆದರೆ ಎನ್‌ಸಿಸಿ ಘಟಕ ತೆರೆಯಲು ಕರ್ನಾಟಕ-ಗೋವಾ ಡೈರೆಕ್ಟರೇಟ್ ಕಚೇರಿಯ ಅನುಮತಿಯೂ ಬೇಕಾಗುತ್ತದೆ. ಒಂದು ಘಟಕ ಆರಂಭಿಸಲು ಕನಿಷ್ಠ 100 ವಿದ್ಯಾರ್ಥಿಗಳು ಇರಬೇಕಾಗುತ್ತದೆ. ಈಗ ಇರುವ ಅಧಿಕಾರಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ವರ್ಗಾವಣೆಯಿಂದ ರಾಜ್ಯದ ನಾಲ್ಕೈದು ಕಾಲೇಜುಗಳಲ್ಲಿ ಎನ್‌ಸಿಸಿ ಘಟಕ ಮುಚ್ಚುವ ಸ್ಥಿತಿಗೆ ಬಂದಿದೆ.
ಸರಕಾರಿ ಪದವಿ ಕಾಲೇಜಿನ ಎನ್‌ಸಿಸಿ ಅಧಿಕಾರಿಗಳನ್ನು ಇನ್ನೊಂದು ಕಡೆಗೆ ವರ್ಗಾವಣೆ ಮಾಡುವಾಗ ಎನ್‌ಸಿಸಿ ಘಟಕ ಇರುವ ಕಾಲೇಜಿಗೆ ಮಾಡಬೇಕು ಎಂಬ ನಿಯಮ ಈಗ ಇಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಗಂಭೀರವಾಗಿ ಯೋಚನೆ ನಡೆಸಲಿದ್ದೇವೆ. ವರ್ಗಾವಣೆಗೆ ಎರಡು ವರ್ಷಗಳ ವಿನಾಯಿತಿ ಕಲ್ಪಿಸಲಾಗಿದೆ.
– ಪಿ. ಪ್ರದೀಪ್, ಆಯುಕ್ತ, ಕಾಲೇಜು ಶಿಕ್ಷಣ ಇಲಾಖೆ
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.