ಮಳೆಗಾಲ ಹತ್ತಿರ: ಮಲೇರಿಯಾ ಬಗ್ಗೆ ಎಚ್ಚರ!
Team Udayavani, May 20, 2018, 6:25 AM IST
ಉಡುಪಿ: ಮಳೆಗಾಲ ಇನ್ನು ಕೆಲವೇ ದಿನಗಳಲ್ಲಿ ಕಾಲಿಡಲಿದೆ. ವಾಸ ಸ್ಥಳಗಳ ಪಕ್ಕವೇ ನೀರು ನಿಲ್ಲುವ ಸಾಕಷ್ಟು ಉದಾಹರಣೆಗಳಿದ್ದು, ಮಲೇರಿಯಾ ಪ್ರಕರಣಗಳು ಕಾಣದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯ ಹೆಚ್ಚಿದೆ.
ನಿರ್ಮಾಣ ಕಾಮಗಾರಿ ನಡೆಯುವ ನಗರ ಪ್ರದೇಶಗಳಲ್ಲಿ ಸೊಳ್ಳೆ ಸಂತಾನೋತ್ಪತ್ತಿಗೆ ಪೂರಕವಾದ ಸ್ಥಳಗಳು ಹೆಚ್ಚಾಗಿದ್ದು, ಮಲೇರಿಯಾ ಶೀಘ್ರವಾಗಿ ಹರಡಲು ಕಾರಣವಾಗುತ್ತವೆ. ಕಾರ್ಮಿಕರ ಶುಚಿ ಇಲ್ಲದ ವಾಸಸ್ಥಳಗಳು, ಬಯಲು ಪ್ರದೇಶಗಳಲ್ಲಿ ಮಲಗುವುದು ಇತ್ಯಾದಿಗಳಿಂದಲೂ ಮಲೇರಿಯಾ ಹೆಚ್ಚಳವಾಗುತ್ತಿದೆ. ಕರ್ನಾಟಕದಲ್ಲಿ ಮಲೇರಿಯಾ ಪ್ರಕರಣಗಳು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿವೆ.
ರೋಗ ಲಕ್ಷಣ
ಮಲೇರಿಯಾ ರೋಗಾಣು ಹೊಂದಿದ ಅನಾಫಿಲೀಸ್ ಸೊಳ್ಳೆ ಕಚ್ಚಿದ 10ರಿಂದ 14 ದಿನಗಳೊಳಗೆ ರೋಗ ಹರಡುತ್ತದೆ. ವಿಪರೀತ ಚಳಿ, ಅನಂತರ ಜ್ವರ, ಮೈ ಬೆವರುವುದು, ಮೈಕೈ ನೋವು, ತಲೆನೋವು, ಕೆಲವರಿಗೆ ವಾಂತಿ, ನಿಶ್ಶಕ್ತಿ ಇವು ಮಲೇರಿಯಾದ ಲಕ್ಷಣಗಳು. ಇದು ದಿನಬಿಟ್ಟು ದಿನ ಅಥವಾ ಪ್ರತಿದಿನ ಉಂಟಾಗಬಹುದು. ರಕ್ತ ಪರೀಕ್ಷೆಯ ಮೂಲಕ ಮಾತ್ರವೇ ಮಲೇರಿಯಾ ಪತ್ತೆ ಹಚ್ಚಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹಿತ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಲೇರಿಯಾ ತಪಾಸಣೆ ಮತ್ತು ಚಿಕಿತ್ಸೆ ಇದೆ.
ರೋಗದ ನಿಯಂತ್ರಣ
ಜ್ವರ ಬಂದ ಕೂಡಲೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಲೇರಿಯಾ ದೃಢಪಟ್ಟರೆ ಚಿಕಿತ್ಸೆ ಪಡೆಯಬೇಕು. ಮಲೇರಿಯಾಕ್ಕೆ ಸಂಪೂರ್ಣ ಚಿಕಿತ್ಸೆ ಅಗತ್ಯ. ಇಲ್ಲವಾದರೆ ಅದು ಮತ್ತೂಮ್ಮೆ ದುಷ್ಪರಿಣಾಮ ಉಂಟು ಮಾಡುವ ಸಾಧ್ಯತೆ ಹೆಚ್ಚು. ಎಲ್ಲಾ ಕೋಣೆಗಳಿಗೂ ಕೀಟನಾಶಕವನ್ನು ಸಿಂಪಡಿಸಿ ಸೊಳ್ಳೆಗಳನ್ನು ನಿಯಂತ್ರಿಸುವುದು ಅಗತ್ಯ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.
ಮಲಗುವಾಗ ತಪ್ಪದೆ ಸೊಳ್ಳೆ ಪರದೆಗಳನ್ನು ಉಪ ಯೋಗಿಸಬೇಕು. ಸೊಳ್ಳೆ ಗಳ ನಿರ್ನಾಮವಾದರೆ ಮಲೇರಿಯಾ ಕೂಡ ಬಹುತೇಕ ನಿರ್ನಾಮ ಆದಂತೆ.
ಉಡುಪಿಯಲ್ಲೂ ರೋಗಿಗಳ ಸಂಖ್ಯೆ ಅಧಿಕ
ನಗರದ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ, ಹೊಟೇಲ್‌ಗಳ ಬಳಿ ವಾಸಿಸುವವರಲ್ಲಿ, ಭದ್ರತಾ ಸಿಬಂದಿಗಳಲ್ಲಿ, ಮಲ್ಪೆ ಬಂದರು ಪರಿಸರದಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚು. ನಗರದಲ್ಲಿ ಹೊರ ಜಿಲ್ಲೆ, ರಾಜ್ಯಗಳ ಸಾವಿರಾರು ಮಂದಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆದರೆ ಅವರಲ್ಲಿ ಅನೇಕ ಮಂದಿಗೆ ಉಳಿದುಕೊಳ್ಳಲು ಸುರಕ್ಷಿತ ವಸತಿ ವ್ಯವಸ್ಥೆ ಇಲ್ಲ. ಬಯಲು ಪ್ರದೇಶದಲ್ಲಿಯೇ ಮಲಗಿಕೊಳ್ಳುವವರು ಕೂಡ ನೂರಾರು ಮಂದಿ ಇದ್ದಾರೆ. ಇಂಥವರು ಮಲೇರಿಯಾಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. 2016ರಲ್ಲಿ ಉಡುಪಿ ಜಿಲ್ಲೆಯಲ್ಲಿ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿಯೇ ಹೆಚ್ಚು ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದವು. ಜೂನ್‌ನಲ್ಲಿ 100, ಜುಲೈಯಲ್ಲಿ 169 ಮತ್ತು ಆಗಸ್ಟ್ ನಲ್ಲಿ 178 ಪ್ರಕರಣಗಳು ದೃಢಪಟ್ಟಿದ್ದವು.
ನಿಯಂತ್ರಣಕ್ಕೆ ಯತ್ನ
ಹತ್ತು ವರ್ಷಗಳ ಹಿಂದಕ್ಕೆ ಹೋಲಿಸಿದರೆ ಉಡುಪಿಯಲ್ಲಿ ಮಲೇರಿಯಾ ಪ್ರಮಾಣ ಈಗ ಕಡಿಮೆ. “ಅರ್ಬನ್ ಮಲೇರಿಯಾ ಪ್ರೋಗ್ರಾಂ’ನ್ನು ಉಡುಪಿ ಮತ್ತು ಮಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಅದರಂತೆ ಇಡಿಸಿಟಿ (ಶೀಘ್ರ ಪತ್ತೆ ಮತ್ತು ಸಂಪೂರ್ಣ ಚಿಕಿತ್ಸೆ)ಕಾರ್ಯಕರ್ತರು ಮಲೇರಿಯಾ ಹೆಚ್ಚು ಕಾಣಿಸಿಕೊಂಡಿರುವ ಸ್ಥಳಗಳಲ್ಲಿ ರಕ್ತಪರೀಕ್ಷೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡುತ್ತಾರೆ.
ಸೂಕ್ತ ವ್ಯವಸ್ಥೆ ಇಲ್ಲ
ಉಡುಪಿ ಮತ್ತು ಕುಂದಾಪುರಗಳಲ್ಲಿ ಬೇರೆ ಜಿಲ್ಲೆಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಇವರಿಗೆ ಉಳಿದು ಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ರಾತ್ರಿ ಬಯಲು ಪ್ರದೇಶದಲ್ಲಿ, ಕೊಳಚೆ ಪ್ರದೇಶಗಳ ಪಕ್ಕ ದಲ್ಲಿಯೇ ಮಲಗಿಕೊಳ್ಳುವುದರಿಂದ ಹೆಚ್ಚು ಪಸರಿಸುತ್ತಿದೆ. ಇಂತಹ ಕಾರ್ಮಿಕರನ್ನು ನಿರಂತರವಾಗಿ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ, ಮುನ್ನೆಚ್ಚರಿಕೆ ಕ್ರಮ ಗಳನ್ನು ತೆಗೆದುಕೊಳ್ಳಲಾಗು ತ್ತಿದೆ. ಅಂತಹ ಕಾರ್ಮಿಕರು, ಕೆಲಸ ಮಾಡಿಸು ವವರು ಹೆಚ್ಚಿನ ಕಾಳಜಿ ವಹಿಸಬೇಕು.
– ಡಾ| ಪ್ರೇಮಾನಂದ ಕೆ.
ಜಿಲ್ಲಾ ಮಲೇರಿಯಾ ಅಧಿಕಾರಿ
ಕಟ್ಟಡಕ್ಕೆ ಆರೋಗ್ಯ ಇಲಾಖೆ ಅನುಮತಿ ಕಡ್ಡಾಯ
ಮಳೆ ಬಂದು ಸ್ವಲ್ಪ ಸಮಯ ನಿಂತರೆ ಆಗ ಮಲೇರಿಯಾ ಸಮಸ್ಯೆ ಹೆಚ್ಚು. ಈ ಸಮಯದಲ್ಲಿ ಹೆಚ್ಚಿನ ನಿಗಾ ವಹಿಸ ಲಾಗುವುದು. ಕಟ್ಟಡ ನಿರ್ಮಿಸುವವರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಇತ್ತೀಚೆಗೆ ಬಂದಿರುವ ಸುತ್ತೋಲೆ ಪ್ರಕಾರ ಹೊಸ ಕಟ್ಟಡ ನಿರ್ಮಾಣಕ್ಕೆ ಆರೋಗ್ಯ ಇಲಾಖೆಯ ನಿರಾಕ್ಷೇಪಣ ಪತ್ರ ಕೂಡ ಕಡ್ಡಾಯ ಮಾಡಲಾಗಿದೆ.
– ಡಾ| ರೋಹಿಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಉಡುಪಿ ಜಿಲ್ಲೆ : ಮಲೇರಿಯಾ ದೃಢಪಟ್ಟ ಪ್ರಕರಣಗಳು
2014 1,639
2015 1,366
2016 1,168
2017 513
2018 ಮೇ 17ರ ವರೆಗೆ 39
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.