ನೀರ್‌ದೋಸೆ, ಸಿಗಡಿ ಗಸಿ ಸವಿದ ರಾಹುಲ್ ಗಾಂಧಿ
Team Udayavani, Mar 21, 2018, 7:30 AM IST
ಉಡುಪಿ: ತೆಂಕ ಎರ್ಮಾಳು, ಪಡುಬಿದ್ರಿ, ಹೆಜಮಾಡಿಗಳಲ್ಲಿ ಮಾ. 20ರಂದು ನಡೆದ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಅವರ ರೋಡ್ ಶೋ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದಂತಿತ್ತು. ರೋಡ್ ಶೋ ನೋಡಲು ಮತ್ತು ರಾಹುಲ್ ಮಾತುಗಳನ್ನು ಆಲಿಸಲು ಕಾದು ಕುಳಿತಿದ್ದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಆಗಮನವಾಗುತ್ತಿದ್ದಂತೆಯೇ “ರಾಹುಲ್ ಗಾಂಧಿ ಕಿ ಜೈ’ ಎನ್ನುವ ಘೋಷಣೆಗಳನ್ನು ಕೂಗಿದರು. ರಾಹುಲ್ ಗಾಂಧಿ ಜತೆಗಿದ್ದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮೊದಲಾದ ಹಿರಿಯ ಮುಖಂಡರನ್ನು ಕೂಡ ನೋಡಲು ಕಾರ್ಯರ್ತರು ನುಗ್ಗಿ ಬಂದರು.
ಊಟ-ವಿಶ್ರಾಂತಿ
2.10ರ ಸುಮಾರಿಗೆ ಪಡುಬಿದ್ರಿಯ ಸಭೆ ಮುಗಿಸಿ ಹೆಜಮಾಡಿ ಶ್ರೀ ನಾರಾಯಣಗುರು ಸಭಾಭವನದಲ್ಲಿ ಪೂಜೆಯಲ್ಲಿ ಪಾಲ್ಗೊಂಡು ಅನಂತರ ಭೋಜನ ಸೇವಿಸಿದರು. ಅಲ್ಲಿ 3.45ರ ವರೆಗೂ ವಿಶ್ರಾಂತಿ ಪಡೆದರು. ಈ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್, ಪ್ರಮೋದ್ ಮಧ್ವರಾಜ್ ಮೊದಲಾದವರೊಡನೆ ಮಾತುಕತೆ ಕೂಡ ನಡೆಸಿದರು. ಅಲ್ಲಿಂದ ಮಂಗಳೂರಿನತ್ತ ಮತ್ತೆ ಜನಾಶೀರ್ವಾದ ಬಸ್‌ನಲ್ಲಿ ಪ್ರಯಾಣ ಬೆಳೆಸಿದರು.
ವಾಹನ ಸಂಚಾರ ವ್ಯತ್ಯಯ
ಪಡುಬಿದ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿಯೇ ಸಭಾ ವೇದಿಕೆ ನಿರ್ಮಿಸಿದ್ದರಿಂದ ವಾಹನ ಸಂಚಾರಕ್ಕೆ ಒಂದಷ್ಟು ಅಡಚಣೆ ಉಂಟಾಯಿತು. ಕೆಲವು ವಾಹನಗಳನ್ನು ಕಾರ್ಕಳ – ಮೂಡಬಿದಿರೆ ಮಾರ್ಗವಾಗಿ ಮಂಗಳೂರಿಗೆ ಕಳುಹಿಸಲಾಯಿತು. ಮಧ್ಯಾಹ್ನ ಒಟ್ಟಾರೆ ಸುಮಾರು ಅರ್ಧ ತಾಸುಗಳ ಕಾಲ ಹೆದ್ದಾರಿ ಸಂಚಾರದಲ್ಲಿ ಭಾರೀ ವ್ಯತ್ಯಯವಾಯಿತು.
ಮೀನುಗಾರರೊಂದಿಗೆ ಮುಕ್ತ ಚರ್ಚೆ
ಈ ಸಂದರ್ಭ ತೆಂಕ ಎರ್ಮಾಳು ಮೊಗವೀರ ಮಹಾಸಭಾದ ಅಧ್ಯಕ್ಷ ದಾಮೋದರ ಸುವರ್ಣ ಅವರು ರಾಹುಲ್‌ಗಾಂಧಿ ಅವರಿಗೆ ಮೀನುಗಾರರ ಸಮಸ್ಯೆಗಳ ಕುರಿತು ವಿವರಿಸಿದರು. ಇದನ್ನು ಸಾವಧಾನವಾಗಿ ಆಲಿಸಿದ ರಾಹುಲ್ ಅವರು ವಿವಿಧ ಪ್ರಶ್ನೆಗಳನ್ನು ಕುತೂಹಲದಿಂದ ಕೇಳಿದರು. ಮೀನುಗಾರರ ವೃತ್ತಿ, ಅದರಿಂದ ಬರುವ ಲಾಭ ನಷ್ಟ, ಸ್ವಸಹಾಯ ಸಂಘದ ಚಟುವಟಿಕೆ ಮೊದಲಾದವುಗಳ ಕುರಿತು ರಾಹುಲ್ ಪ್ರಶ್ನಿಸಿದರು.
ಸ್ಥಳೀಯರಾದ ಪ್ರೇಮಾ ಮತ್ತು ಜಯ ಅವರು ಸಿಆರ್‌ಝೆಡ್ ಸಮಸ್ಯೆಯಿಂದಾಗಿ ಮನೆ ನಿರ್ಮಾಣಕ್ಕೆ ಲೈಸನ್ಸ್ ದೊರೆಯದಿರುವ ಸಮಸ್ಯೆ ಕುರಿತು ಗಮನ ಸೆಳೆದರು. ಸರಕಾರವು ಮೀನುಗಾರರಿಗೆ ಬಜೆಟ್‌ನಲ್ಲಿ ನೀಡಿರುವ ಸವಲತ್ತುಗಳ ಬಗ್ಗೆ ಸಿದ್ದರಾಮಯ್ಯ ತಿಳಿಸಿದರು. “ಮೀನುಗಾರರನ್ನು ಕೂಡ ಎಸ್‌ಟಿ ವರ್ಗಕ್ಕೆ ಸೇರಿಸಬೇಕು, ಮೀನುಗಾರರ ಸಾಲ ಮನ್ನಾ ಮಾಡಬೇಕು, ಸಿಆರ್‌ಝೆಡ್ ಮಿತಿಯನ್ನು ಕಡಿಮೆ ಮಾಡಬೇಕು, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು’ ಎಂದು ದಾಮೋದರ ಸುವರ್ಣ’ ಅವರು ಮನವಿ ಮಾಡಿದರು.
ಬಸ್‌ನಲ್ಲೇ ರೋಡ್ ಶೋ
ರಾಹುಲ್ ಅವರು ಅಲ್ಲಲ್ಲಿ ಪಾದಯಾತ್ರೆ ಅಥವಾ ತೆರೆದ ವಾಹನದಲ್ಲಿ ಜನರತ್ತ ಕೈ ಬೀಸುವರು ಎಂಬ ನಿರೀಕ್ಷೆ ಕೆಲವರಲ್ಲಿತ್ತು. ಆದರೆ ರಾಹುಲ್ ಅವರು ಜನಾಶೀರ್ವಾದಕ್ಕೆಂದು ಸಿದ್ಧಪಡಿಸಲಾದ ಬಸ್‌ನಲ್ಲೇ ಕೂತು ರೋಡ್‌ಶೋ ನಡೆಸಿದರು. ಬಸ್‌ಗೆ ಹತ್ತುವಾಗ ಮತ್ತು ಇಳಿಯುವಾಗ ಕಾರ್ಯಕರ್ತರ ಕೈ ಕುಲುಕಿದರು.
ಎಸ್‌ಪಿಜಿ ಬಂದೋ ಬಸ್ತ್: ನಾಯಕರು ಸುಸ್ತು
ರಾಹುಲ್ ಜತೆಗಿದ್ದ ವಿಶೇಷ ಭದ್ರತಾ ಪಡೆ ಬಿಗಿ ಭದ್ರತೆಯಿಂದಾಗಿ ಸ್ಥಳೀಯ ನಾಯಕರು ಮಾತ್ರವಲ್ಲದೆ ರಾಜ್ಯಮಟ್ಟದ ನಾಯಕರು ಕೂಡ ಕಸಿವಿಸಿಗೊಂಡರಲ್ಲದೇ ವೇದಿಕೆ ಹಂಚಿಕೊಳ್ಳಲು ಸಾಹಸ ಪಡಬೇಕಾಯಿತು. ರಾಹುಲ್‌ಗಾಂಧಿ ರಾಜಕೀಯ ತರಬೇತಿ ಕೇಂದ್ರದ ಉದ್ಘಾಟನೆಯಲ್ಲಿ ಹೆಚ್ಚುವರಿ ಆಸನ ಜೋಡಿಸಲು ಭದ್ರತಾ ಸಿಬಂದಿ ನಿರಾಕರಿಸಿದರು. ಹಿರಿಯ ನಾಯಕರೋರ್ವರು ಅತಿಥಿಯಾಗಿದ್ದರೂ ಅವರನ್ನು ಮುಖ್ಯಮಂತ್ರಿಯವರು ಹೇಳುವವರೆಗೂ ವೇದಿಕೆಗೆ ತೆರಳಲು ಅವಕಾಶ ನೀಡಲಿಲ್ಲ. ನಾರಾಯಣಗುರು ಮಂದಿರದಲ್ಲಿ ರಾಹುಲ್ ಜತೆಗೆ ಊಟ ಮಾಡುವುದಕ್ಕಾಗಿ ಸ್ಥಳೀಯ ಅನೇಕ ನಾಯಕರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ನಿಗದಿತ ಸಮಯದ ಬಳಿಕ ಆಗಮಿಸಿದವರಿಗೆ ಒಳಗೆ ಪ್ರವೇಶ ನೀಡದೆ ಗೇಟಿನಲ್ಲೇ ನಿಲ್ಲಿಸಲಾಯಿತು.
ನೀರ್‌ದೋಸೆ, ಸಿಗಡಿ ಗಸಿ ರುಚಿ
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮತ್ತು ಮೀನುಗಾರರಾಗಿರುವ ಕಿಶೋರ್ ಕುಮಾರ್ ಅವರ ಮನೆಯಲ್ಲಿ ರಾಹುಲ್‌ಗಾಂಧಿ, ಸಿದ್ದರಾಮಯ್ಯ, ಸಚಿವ ಪ್ರಮೋದ್ ಮಧ್ವರಾಜ್ ಮತ್ತಿತರ ಮುಖಂಡರು ಬೊಂಡ ಕುಡಿದು ಅನಂತರ ನೀರ್‌ದೋಸೆ, ಸಿಗಡಿ ಗಸಿ, ಅಂಜಲ್ ಫ್ರೈ ರುಚಿ ಸವಿದರು. ಇದನ್ನು ಕುಸುಮಾ ಆರ್. ಸುವರ್ಣ ಅವರು ಸಿದ್ಧಪಡಿಸಿ ಬಡಿಸಿದರು. ಬೆಳ್ತಿಗೆ ಅನ್ನ, ಸಾರು ಮತ್ತು ಅಲಸಂಡೆ ಪಲ್ಯದ ರುಚಿ ಕೂಡ ನೋಡಿದರು.
ಸೆಲ್ಪಿ ನಿರಾಕರಿಸಿದ ಸಿದ್ಧರಾಮಯ್ಯ
ಮೀನುಗಾರರ ಮನೆಯಿಂದ ಹೊರಬರುವ ವೇಳೆ ಯುವತಿಯೋರ್ವಳು ಸಿದ್ದರಾಮಯ್ಯ ಅವರಲ್ಲಿ “ಸಾರ್ ಒಂದು ಸೆಲ್ಫಿ’ ಎಂದಾಗ “ನೋ ನೋ’ ಎಂದು ಸಿದ್ದರಾಮಯ್ಯ ತಪ್ಪಿಸಿಕೊಂಡು ಬಂದರು. ಮಹಿಳೆಯೋರ್ವಳ ಮಗುವಿನ ವಿದ್ಯಾಭ್ಯಾಸದ ಕುರಿತು ಪ್ರಶ್ನಿಸಿದ ಸಿದ್ದರಾಮಯ್ಯ ಅವರು “ಏನಮ್ಮ ನೀನು ಕೂಡ ಮಗುವನ್ನು ಇಂಗ್ಲಿಷ್ ಮೀಡಿಯಂಗೆ ಕಳುಹಿಸುತ್ತಿದ್ದೀಯಾ?’ ಎಂದು ಪ್ರಶ್ನಿಸಿದರು. ಇದಕ್ಕೆ ಆ ಮಹಿಳೆ “ಹೌದು ಸಾರ್…ಈಗ ಎಲ್ಲಾ ಇಂಗ್ಲೀಷ್ ಮೀಡಿಯಂ ಅಲ್ವಾ ಸಾರ್..’ ಎಂದರು. ರಾಹುಲ್‌ಗಾಂಧಿ ಅವರು ಇಂಗ್ಲಿಷ್‌ನಲ್ಲಿ ಮತ್ತು ಸಿದ್ದರಾಮಯ್ಯ ಅವರು ಕನ್ನಡದಲ್ಲಿ ಕೇಳಿದ ಪ್ರಶ್ನೆಗಳನ್ನು ಪ್ರಮೋದ್ ಮಧ್ವರಾಜ್ ಅವರು ತುಳುವಿಗೆ ಅನುವಾದಿಸಿದರು. ಅನಂತರ ಮೀನುಗಾರ ಮಹಿಳೆಯರು ತುಳುವಿನಲ್ಲಿ ಹೇಳಿದ ಉತ್ತರಗಳನ್ನು ಪ್ರಮೋದ್ ಅವರು ಇಂಗ್ಲಿಷ್ ಮತ್ತು ಕನ್ನಡಕ್ಕೆ ಅನುವಾದಿಸಿದರು.
ಶಾಲಾ ಮಕ್ಕಳ ಖುಷಿ
ತೆಂಕ ಎರ್ಮಾಳು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮೈದಾನದಲ್ಲಿ ಹೆಲಿಕಾಪ್ಟರ್ ಇಳಿಯುತ್ತಿದ್ದಂತೆಯೇ ನೂರಾರು ಮಂದಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ರಾಹುಲ್ ಮತ್ತು ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದರು. ಹೆಲಿಪ್ಯಾಡ್‌ನಿಂದ ಇಳಿದು ಸೀದಾ ಶಾಲೆಯ ಒಳಗೆ ತೆರಳಿದ ರಾಹುಲ್‌ಗಾಂಧಿ ಮಕ್ಕಳೊಂದಿಗೆ ಬೆರೆತು ಮಕ್ಕಳು ರೋಮಾಂಚನಗೊಳ್ಳುವಂತೆ ಮಾಡಿದರು. ಹೇಗೆ ಓದುತ್ತಿದ್ದೀರಿ, ಯಾವ ತರಗತಿ ಎಂಬಿತ್ಯಾದಿಯಾಗಿ ಹಿಂದಿಯಲ್ಲಿ ಪ್ರಶ್ನಿಸಿದರು. ಮಕ್ಕಳಿಗೆ ಇದು ಅನಿರೀಕ್ಷಿತವಾಗಿತ್ತು. ನಗು ನಗುತ್ತಲೇ ಮಕ್ಕಳೊಂದಿಗೆ ಬೆರೆತು ಅಲ್ಲಿಂದ ಗ್ರಾ.ಪಂ. ಉಪಾಧ್ಯಕ್ಷ ಕಿಶೋರ್ ಕುಮಾರ್ ಅವರ ಮನೆಗೆ ತೆರಳಿ ಅಲ್ಲಿ ಉಪಹಾರ ಸೇವಿಸಿದರು.
ಊಟದ ಮೆನು ಹೀಗಿತ್ತು
ಮಧ್ಯಾಹ್ನದ ಊಟಕ್ಕೆ ಚಿಕನ್ ಸುಕ್ಕ, ಮಟನ್ ಪನೀರ್, ರಸಂ(ಪೆಪ್ಪರ್), ಸ್ಟೀಮ್‌ಡ್ ರೈಸ್, ಆಂಧ್ರ ವೆಜ್ ಪುಲಾವ್, ರುಮಾಲಿ ರೋಟಿ, ಮೊಸರು, ಪಾಪಡ್, ಉಪ್ಪಿನ ಕಾಯಿ, ಗೋಧಿ ಪಾಯಸ, ಕಾಣೆ ತವಾ ಫ್ರೈ ನಾಟಿ ಕೋಳಿ ರೋಟಿ, ಪಾಂಫ್ರೆಟ್ ಸ್ಲೆ„ಸ್ ಗಸಿ, ನೀರ್ ದೋಸೆ, ಸಿಗಡಿ ಚಟ್ನಿ, ಹೋಳಿಗೆ, ಮೈಸೂರು ಪಾಕ್‌ನ್ನು ಓಶಿಯನ್ ಪರ್ಲ್ ಹೊಟೇಲ್‌ನವರು ಸಿದ್ಧಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.