ಕೆರ್ವಾಶೆ: ವಿದ್ಯುತ್ ಕಡಿತಗೊಂಡರೆ ನೆಟ್‌ವರ್ಕ್ ಸಂಪರ್ಕ ಕಡಿತ
ತುಕ್ಕು ಹಿಡಿದ ಜನರೇಟರ್; ಕೆರ್ವಾಶೆ ಪಂಚಾಯತ್ ಕೆಲಸಕ್ಕೂ ಸಮಸ್ಯೆ
Team Udayavani, Sep 6, 2019, 5:28 AM IST
ಕೆಟ್ಟು ಹೋದ ಜನರೇಟರ್
ಅಜೆಕಾರು: ಕೆರ್ವಾಶೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಇದ್ದೂ ಇಲ್ಲದಂತಹ ಪರಿಸ್ಥಿತಿ ಕಳೆದ ಐದಾರು ವರ್ಷಗಳಿಂದ ಇದೆ. ಗ್ರಾಮದಲ್ಲಿ ವಿದ್ಯುತ್ ಕಡಿತಗೊಂಡರೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಕೂಡ ತತ್‌ಕ್ಷಣದಿಂದ ಸ್ಥಗಿತಗೊಳ್ಳುತ್ತದೆ.
ಮೊಬೈಲ್ ಟವರ್ ನಿರ್ಮಾಣ ಸಂದರ್ಭ ಅಳವಡಿಸಲಾಗಿರುವ ಜನರೇಟರ್ ಕಾರ್ಯ ನಿರ್ವಹಿಸದೆ ತುಕ್ಕು ಹಿಡಿದಿದೆ. ಹೀಗಾಗಿ ವಿದ್ಯುತ್ ಸಂಪರ್ಕ ಇರುವ ಸಂದರ್ಭ ಮಾತ್ರ ಗ್ರಾಮಸ್ಥರಿಗೆ ನೆಟ್‌ವರ್ಕ್ ಭಾಗ್ಯ ದೊರೆಯುತ್ತದೆ.
ಕೆರ್ವಾಶೆ ಗ್ರಾಮ ಅರಣ್ಯ ಪ್ರದೇಶಗಳನ್ನೊಳಗೊಂಡ ಗ್ರಾಮೀಣ ಭಾಗ ವಾಗಿರುವುದರಿಂದ ಮಳೆಗಾಲದಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಇದೆ. ಈ ಸಂದರ್ಭಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಹ ಕಡಿತಗೊಳ್ಳುವುದರಿಂದ ಜನತೆ ತುರ್ತು ಸಂದರ್ಭಗಳಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೆಟ್ಟು ಹೋಗಿರುವ ಜನರೇಟರ್ ದುರಸ್ತಿಪಡಿಸದೇ ಇಲಾಖೆ ನಿರ್ಲಕ್ಷ್ಯ ವಹಿಸಿರುವುದರಿಂದ ಜನರೇಟರ್ ಸಂಪೂರ್ಣ ತುಕ್ಕು ಹಿಡಿದಿದೆ.
ಜನರೇಟರ್ ಕೆಟ್ಟು ಹೋದ ಸಂದರ್ಭ ತಾತ್ಕಾಲಿಕ ನೆಲೆಯಲ್ಲಿ ಕಡಿಮೆ ಸಾಮಥ್ಯದ ಚಿಕ್ಕ ಜನರೇಟರ್‌ವೊಂದನ್ನು ಟವರ್ ಸನಿಹದಲ್ಲಿಯೇ ಇಡಲಾಗಿದೆಯಾದರೂ ಇದರಿಂದ ಪ್ರಯೋಜನ ಇಲ್ಲದಂತಾಗಿದೆ. ಟವರಿಗೆ ಗಿಡಮರ, ಬಳ್ಳಿಗಳು ಸುತ್ತಿಕೊಂಡಿರುವುದಲ್ಲದೆ ಕಾಯ್ದಿರಿಸಿದ ಜಾಗದಲ್ಲಿ ಸಂಪೂರ್ಣ ಗಿಡಗಂಟಿಗಳು ತುಂಬಿ ಹೋಗಿ ಟವರ್ ಸಮೀಪ ಹೋಗುವುದೇ ಅಸಾಧ್ಯವಾಗಿದೆ.
ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಬಿಎಸ್ಸೆನ್ನೆಲ್ ಟವರ್ ಇದ್ದರೂ ಸಹ ಅಗತ್ಯ ಸಂದರ್ಭಗಳಲ್ಲಿ ಪ್ರಯೋಜನಕ್ಕೆ ಬಾರದಂತಾಗಿದೆ.
ಪಂಚಾಯತ್‌ಗೆ ಸಂಕಷ್ಟ
ಅತ್ಯಂತ ಗ್ರಾಮೀಣ ಪಂಚಾಯತ್ ಆಗಿರುವ ಕೆರ್ವಾಶೆ ಪಂಚಾಯತ್‌ಗೆ ನೆಟ್‌ವರ್ಕ್ ಸಮಸ್ಯೆಯಿಂದಾಗಿ ತೀವ್ರ ಸಂಕಷ್ಟ ಉಂಟಾಗಿದೆ. ಇದಕ್ಕೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಂಪರ್ಕ ಮಾತ್ರ ಇದ್ದು ಕೆರ್ವಾಶೆಯಲ್ಲಿ ವಿದ್ಯುತ್ ಸ್ಥಗಿತಗೊಂಡ ತತ್‌ಕ್ಷಣ ನೆಟ್‌ವರ್ಕ್ ಕಡಿತಗೊಳ್ಳುವುದರಿಂದ ಪಂಚಾಯತ್‌ನ ದಿನನಿತ್ಯದ ಕಾರ್ಯ ಚಟುವಟಿಕೆಗೆ ತೊಂದರೆ ಉಂಟಾಗುತ್ತಿದೆ.ಇಲ್ಲಿಯ ಎಲ್ಲಾ ಸೇವೆಗಳು ಆನ್‌ಲೈನ್ ಮೂಲಕವೇ ನಡೆಯುತ್ತದೆ.
ಸ್ಥಳೀಯರಿಗೆ ಸಮಸ್ಯೆ
ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಯಿದಾಗಿ ಸ್ಥಳೀಯರು ತೀವ್ರ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಗ್ರಾಮದಲ್ಲಿ ಬಹುತೇಕ ಜನರಲ್ಲಿ ಈ ಮೊಬೈಲ್ ಸಂಪರ್ಕವೇ ಇದ್ದು ಇಲಾಖೆಯ ನಿರ್ಲಕ್ಷ್ಯದಿಂದಾಗಿ ಜನರು ಸಂಕಷ್ಟಪಡುವಂತಾಗಿದೆ.
-ಪ್ರಭಾಕರ್ ಜೈನ್ ಕೆರ್ವಾಶೆ, ಸ್ಥಳೀಯರು
ತ್ವರಿತ ಸೇವೆಗೆ ಅನನುಕೂಲ
ಪಂಚಾಯತ್‌ನಲ್ಲಿ ಆನ್‌ಲೈನ್ ಸೇವೆಗೆ
ನೆಟ್‌ವರ್ಕ್ ಅತ್ಯಗತ್ಯವಾಗಿದ್ದು ನೆಟ್‌ವರ್ಕ್ ಸಮಸ್ಯೆಯಿಂದ ಪಂಚಾಯತ್‌ನ ದಿನನಿತ್ಯದ ಕಾರ್ಯಗಳಿಗೆ ಅಡಚಣೆಯುಂಟಾಗುತ್ತಿದೆ. ಇದರಿಂದಾಗಿ ಗ್ರಾಮಸ್ಥರಿಗೆ ತ್ವರಿತಗತಿಯ ಸೇವೆ ನೀಡಲು ಅನನುಕೂಲವಾಗುತ್ತಿದೆ.
-ಮಧು ಎಂ.ಸಿ., , ಪಿಡಿಒ ಕೆರ್ವಾಶೆ ಗ್ರಾಮ ಪಂಚಾಯತ್
– ಜಗದೀಶ್ ಅಜೆಕಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.