ಕೋಟಿಲಿಂಗೇಶ್ವರನ ಸನ್ನಿಧಾನಕ್ಕೆ ಆಗಮಿಸಿದ ಬೃಹತ್ ಕೊಡಿಮರ
Team Udayavani, Aug 28, 2019, 12:26 PM IST
ತೆಕ್ಕಟ್ಟೆ: ಕೋಟೇಶ್ವರದ ಪುರಾಣ ಪ್ರಸಿದ್ಧ ಕೋಟಿ ಲಿಂಗೇಶ್ವರ ದೇವಸ್ಥಾನಕ್ಕೆ ನೂತನ ಕೊಡಿಮರದ ಆಗಮನವಾಗಿದೆ. ಸುಮಾರು 65 ವರ್ಷಗಳ ನಂತರ ದೇವಸ್ಥಾನದ ಕೊಡಿಮರವನ್ನು ಬದಲಿಸಲು ಸಂಕಲ್ಪಿಸಲಾಗಿದ್ದು ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಿಂದ ಬೃಹತ್ ಕೊಡಿ ಮರವನ್ನು ತೆಕ್ಕಟ್ಟೆಗೆ ತರಲಾಯಿತು. 90 ಅಡಿ ಉದ್ದ ಮತ್ತು 6.45 ಮೀಟರ್ ಸುತ್ತಳತೆಯ ಈ ಬೃಹತ್ ಕೊಡಿಮರವನ್ನು ತೆಕ್ಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಕೋಟೇಶ್ವರ ದೇವಸ್ಥಾನಕ್ಕೆ ಸಾಗಿಸಲಾಯಿತು.
ಕೊಡಿ ಮರ ಸಾಗಾಟ ಮೆರವಣಿಗೆಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಹಿರಿಯ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಅವರು ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿದ್ಯುಕ್ತ ಚಾಲನೆ ನೀಡಿದರು. ಕೋಟಿಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ಐತಾಳ್ ಅವರ ನೇತೃತ್ವದಲ್ಲಿ ಕೊಡಿ ಮರ ಸಮರ್ಪಣಾ ಕಾರ್ಯ ನಡೆಯಿತು.
ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿಯ ಆಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ್ ಕೋಣಿ, ಶ್ರೀಧರ ಕಾಮತ್, ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ, ತಾಂತ್ರಿಕ ಶಿಲ್ಪಿ ಕೋಟ ರಾಮಚಂದ್ರ ಆಚಾರ್, ರಾಜೇಶ್ ಕಾವೇರಿ, ಸಮಿತಿಯ ಸದಸ್ಯರು, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕೋಟೇಶ್ವರ ಹಾಗೂ ತೆಕ್ಕಟ್ಟೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ಕಾರ್ಯಕರ್ತರು ನೂತನ ಕೊಡಿ ಮರಕ್ಕೆ ಹೂವಿನ ಅಲಂಕಾರ ಮಾಡುವ ಮೂಲಕ ಭವ್ಯ ಮೆರವಣಿಗೆಗೆ ಸಾಥ್ ನೀಡಿದರು. ಕೊಡಿಮರ ಸಾಗಾಟ ಮೆರವಣಿಗೆಯಲ್ಲಿ ಸ್ಥಳೀಯರು ಮತ್ತು ಕೋಟಿಲಿಂಗೇಶ್ವರನ ಅಪಾರ ಭಕ್ತ ವರ್ಗ ನೆರೆದಿದ್ದು ವಿಶೇಷವಾಗಿತ್ತು.
ಆಕರ್ಷಕ ಚೆಂಡೆ ವಾದನ, ನಾದಸ್ವರ ವಾದನದ ಜೊತೆಯಲ್ಲಿ ನಾಗಾ ಸಾಧು ವೇಷಧಾರಿಯೊಬ್ಬರು ಮೆರವಣಿಗೆಯಲ್ಲಿ ಗಮನ ಸೆಳೆದರು.
ಚಿತ್ರ ಮಾಹಿತಿ: ಲೋಕೇಶ್ ತೆಕ್ಕಟ್ಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.