![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jan 1, 2018, 2:19 PM IST
ಉಡುಪಿ: ಉಡುಪಿ ಜಿಲ್ಲಾ ಎಸ್‌ಪಿ ಡಾ| ಸಂಜೀವ ಎಂ. ಪಾಟೀಲ್ ಅವರು ಬೆಂಗಳೂರು ಕಮಿಷನರೆಟ್‌ನ ಆಡಳಿತ ವಿಭಾಗದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ) ಆಗಿ ವರ್ಗಾವಣೆಗೊಂಡಿದ್ದಾರೆ.
ಉಡುಪಿ ನೂತನ ಎಸ್‌ಪಿ ಆಗಿ ಚಿತ್ರದುರ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ನೇಮಕಗೊಂಡಿದ್ದಾರೆ.
ಡಾ| ಸಂಜೀವ ಎಂ. ಪಾಟೀಲ್ ಅವರು “ಎಸ್‌ಪಿ ಫೋನ್-ಇನ್’ ಕಾರ್ಯಕ್ರಮ ಆರಂಭಿಸಿ ಜನ ಸಾಮಾನ್ಯರ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಸಾಮಾಜಿಕ ಕಳಕಳಿಯ ಈ ಕಾರ್ಯಕ್ರಮ ಜನಮನ್ನಣೆಗಳಿಸಿತ್ತು. ಉಡುಪಿಯಲ್ಲಿ ನಡೆದ ಐತಿಹಾಸಿಕ ಧರ್ಮ ಸಂಸದ್ ಅನ್ನು ಕೂಡ ಯಶಸ್ವಿಯಾಗಿ ನಿಭಾಯಿಸಿದ್ದರು.
ಅಕ್ರಮಗಳಿಗೆ ಕಡಿವಾಣ
ಮಟ್ಕಾ ದಂಧೆಯನ್ನು ನಿಯಂತ್ರಣಕ್ಕೆ ತಂದಿದ್ದ ಅವರು, 11 ಮಂದಿ ಆರೋಪಿ ಗಳನ್ನು ಗಡೀಪಾರು ಮಾಡುವಂತೆ ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಿದ್ದರು. ಮಟ್ಕಾದ ಪ್ರಮುಖ ಆರೋಪಿಯ ಪತ್ತೆಗೆ ಬಹುಮಾನ ಘೋಷಿಸಿದ್ದರು. ಮುಂಬಯಿಯಿಂದ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ 1 ಕೋ.ರೂ. ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಅಂತಾರಾಜ್ಯ ದರೋಡೆಕೋರರನ್ನು ಹಿಡಿಯುವಲ್ಲಿ ಸಂಜೀವ ಪಾಟೀಲ್ ನೇತೃತ್ವದ ತಂಡ ಯಶಸ್ವಿಯಾಗಿತ್ತು.
ನೂತನ ಎಸ್‌ಪಿಯಾಗಿ ನೇಮಕ ಗೊಂಡಿರುವ ಲಕ್ಷ್ಮಣ್ ನಿಂಬರ್ಗಿ ವಿಜಯಪುರದ ಇಂಡಿಯವರು. ಎಂಜಿನಿಯರಿಂಗ್ ಪದವೀಧರರಾದ ಇವರು, 2014ರ ಯುಪಿ ಎಸ್‌ಸಿ ಬ್ಯಾಚ್‌ನವರು. ದ.ಕ. ಜಿಲ್ಲೆಯ ಬಂಟ್ವಾಳ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಕೇವಲ 5 ತಿಂಗಳ ಸೇವೆ
ಡಾ| ಸಂಜೀವ ಎಂ. ಪಾಟೀಲ್ ಅವರು 2017ರ ಆ. 8ರಂದು ಉಡುಪಿಯ ಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ವರ್ಗಾವಣೆಗೊಂಡಿರುವ ಅವರು ಉಡುಪಿ ಜಿಲ್ಲೆಯಲ್ಲಿ ಕೇವಲ 5 ತಿಂಗಳು ಮಾತ್ರ ಸೇವೆ ಸಲ್ಲಿಸಿದಂತಾಗಿದೆ.
You seem to have an Ad Blocker on.
To continue reading, please turn it off or whitelist Udayavani.