ಬ್ಯಾಂಕ್ ಗಳ ವಿಲೀನ ಏಕಾಯಿತು- ಚಿಂತನೀಯ ಪ್ರಶ್ನೆ: ಮಹಾಬಲೇಶ್ವರ
ನಾಲ್ವರು ಸಾಧಕರಿಗೆ ಹೊಸವರ್ಷದ ಪ್ರಶಸ್ತಿ ಪ್ರದಾನ
Team Udayavani, Jan 14, 2023, 8:18 PM IST
ಮಣಿಪಾಲ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಸಿಂಡಿಕೇಟ್, ಕೆನರಾ, ವಿಜಯ, ಕಾರ್ಪೋರೇಶನ್ ಹಾಗೂ ಕರ್ಣಾಟಕ ಬ್ಯಾಂಕ್‌ಗಳಿಗೆ ಜನ್ಮ ನೀಡಿದೆ. ಆದರೆ ಈ ಐದು ಬ್ಯಾಂಕ್‌ಗಳಲ್ಲಿ ಈಗ ಎರಡು ಮಾತ್ರ ಉಳಿದಿದೆ. ಯಾಕೆ ಹೀಗಾಯಿತು ಎಂದು ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾದ ಅನಿವಾರ್ಯ ಇದೆ ಎಂದು ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಎಂ.ಎಸ್. ಮಹಾಬಲೇಶ್ವರ ಹೇಳಿದರು.
ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಾಹೆ, ಎಂಇಎಂಜಿ, ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ. ಮತ್ತು ಡಾ| ಟಿ.ಎಂ.ಎ. ಪೈ ಫೌಂಡೇಶನ್ ಜತೆಗೂಡಿ ನೀಡುವ ಹೊಸ ವರ್ಷ-2023ರ ಪ್ರಶಸ್ತಿಯನ್ನು ಶನಿವಾರ ಮಣಿಪಾಲದ ಹೊಟೇಲ್ ವ್ಯಾಲಿ ವ್ಯೂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿ ಅವರು ಮಾತನಾಡಿದರು.
ಆಧುನಿಕ ಮಣಿಪಾಲದ ನಿರ್ಮಾತೃ ಡಾ| ಟಿ.ಎಂ.ಎ. ಪೈ ಅವರು ಆಧುನಿಕ ಪರಶುರಾಮನಂತೆ ಮಣಿಪಾಲದ ಗುಡ್ಡವನ್ನು ಬಂಗಾರದ ಗಣಿಯಾಗಿ ರೂಪಿಸಿದರು ಎಂದ ಅವರು, ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಆಚರಿಸಿಕೊಳ್ಳುವ ಹೊಸ್ತಿಲಲ್ಲಿದೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಲು ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಕರಾವಳಿಯ ಕೊಡುಗೆ ಅಪಾರ ಎಂದು ಹೇಳಿದರು.
ಕಠಿನ ಪರಿಶ್ರಮ ಅಗತ್ಯ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿಶು ಚಿಕಿತ್ಸಾ ವಿಷಯದ ಹಿರಿಯ ಪ್ರಾಧ್ಯಾಪಿಕೆ ಡಾ| ಪುಷ್ಪಾ ಜಿ. ಕಿಣಿ, ಸಾಧನೆಗೆ ಶಾರ್ಟ್‌ಕಟ್ ಮಾರ್ಗ ಇಲ್ಲ. ಕಠಿನ ಪರಿಶ್ರಮದ ಮೇಲೆ ನಂಬಿಕೆ ಇಡಬೇಕು ಮತ್ತು ಸಾಧನೆಗಾಗಿ ಕಠಿನ ಪರಿಶ್ರಮ ಪಡಬೇಕು. ಇದರಿಂದಲೇ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು. ಶಿಶು ಚಿಕಿತ್ಸಾ ವಿಭಾಗದ ತಮ್ಮ ಅನುಭವ ಹಾಗೂ ಮಾಹೆ ವಿ.ವಿ.ಯ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿಕೊಂಡಡರು.
ಸಣ್ಣ ಭೂಮಿಯಲ್ಲೂ ಕೃಷಿ ಸಾಧ್ಯ
ಪ್ರಶಸ್ತಿಗಾಗಿ ನಾನೇನೂ ಮಾಡಿಲ್ಲ. ಕೃಷಿ ಕ್ಷೇತ್ರದಲ್ಲಿ ಮಾಡಿದ ಕಾರ್ಯವನ್ನು ಗುರುತಿಸಿ ಕೇಂದ್ರ ಸರಕಾರ ಸಹಿತ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ, ಸಮ್ಮಾನ ನೀಡಿವೆ. ಪದ್ಮಶ್ರೀ ಪ್ರಶಸ್ತಿಯು ಇಡೀ ರಾಜ್ಯದ ಜನತೆಗೆ ಸಿಕ್ಕಿರುವ ಗೌರವ. ನೀರಿಗಾಗಿ ನಿರಂತರ ಪ್ರಯತ್ನ ನಡೆಸಿದ್ದೆ. 3 ಕಡೆ ಬಾವಿ ತೋಡಿ, 6 ಸುರಂಗ ತೋಡಿದರೂ ನೀರು ಬರಲಿಲ್ಲ. ಆದರೂ ಛಲ ಬಿಡಲಿಲ್ಲ. ಏಳನೇ ಸುರಂಗದಲ್ಲಿ ನೀರು ಬಂತು. ಹೀಗಾಗಿ ಕೃಷಿಯಿಂದ ಯಾರೂ ವಿಮುಕ್ತರಾಗಬಾರದು. ತುಂಡು ಭೂಮಿಯಿದ್ದರೂ ಕೃಷಿ ಮಾಡಬಹುದು. ಕನಿಷ್ಠ ಒಂದು ಗಿಡ ನೆಟ್ಟರೂ ಅದರಿಂದ ಪಕ್ಷಿಗಳಿಗಾದರೂ ಅನುಕೂಲವಾಗುತ್ತದೆ. ನೀರನ್ನು ಜಾಗರೂಕತೆಯಿಂದ ಬಳಸಬೇಕು ಎಂದು ಪ್ರಶಸ್ತಿ ಸ್ವೀಕರಿಸಿದ ಛಲದ ಬದುಕಿನ ಹಳ್ಳಿಯ ಭಗೀರಥ ಅಮೈ ಮಹಾಲಿಂಗ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಯದ ನಿರ್ವಹಣೆ ಅಗತ್ಯ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಸ್ಥಿ ಶಸ್ತ್ರಚಿಕಿತ್ಸಾ ತಜ್ಞ ಡಾ| ಪಿ. ಶ್ರೀಪತಿ ರಾವ್, ಪ್ರಾಧ್ಯಾಪಕ, ಸರ್ಜನ್ ಹಾಗೂ ಆಡಳಿತಾಧಿಕಾರಿಯಾಗಿ ಸಮಯದ ನಿರ್ವಹಣೆ ಅತ್ಯಂತ ಕಠಿನವಾಗಿತ್ತು. ಡಾ| ರಾಮದಾಸ್ ಪೈ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಎಲ್ಲವೂ ಸಾಧ್ಯವಾಯಿತು. ಸಮಯದ ಸರಿಯಾದ ನಿರ್ವಹಣೆಯಿಂದ ಮಾತ್ರ ಸಾಧನೆ ಶಿಖರವೇರಲು ಸಾಧ್ಯ ಎಂದರು.
ಎಂ.ಎಸ್. ಮಹಾಬಲೇಶ್ವರ ಅವರಿಗೆ ಎಂಇಎಂಜಿ ಅಧ್ಯಕ್ಷ ಹಾಗೂ ಅಕಾಡೆಮಿ ರಿಜಿಸ್ಟ್ರಾರ್ ಡಾ| ರಂಜನ್ ಆರ್. ಪೈ ಹಾಗೂ ಡಾ| ಎಚ್.ಎಸ್. ಬಲ್ಲಾಳ್, ಡಾ| ಪುಷ್ಪಾ ಜಿ. ಕಿಣಿ ಅವರಿಗೆ ಮಾಹೆ ಟ್ರಸ್ಟ್ ಟ್ರಸ್ಟಿ ವಸಂತಿ ಆರ್. ಪೈ ಹಾಗೂ ಡಾ| ರಂಜನ್ ಆರ್. ಪೈ, ಅಮೈ ಮಹಾಲಿಂಗ ನಾಯ್ಕ ಅವರಿಗೆ ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ ಹಾಗೂ ಡಾ| ಟಿಎಂಎ ಪೈ ಫೌಂಡೇಶನ್ ಅಧ್ಯಕ್ಷ ಟಿ. ಅಶೋಕ್ ಪೈ, ಡಾ| ಪಿ. ಶ್ರೀಪತಿ ರಾವ್ ಅವರಿಗೆ ವಸಂತಿ ಆರ್. ಪೈ ಹಾಗೂ ಡಾ| ಎಚ್.ಎಸ್. ಬಲ್ಲಾಳ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಮಾಹೆ ಸಹ ಕುಲಾಧಿಪತಿ, ಅಕಾಡೆಮಿಯ ಅಧ್ಯಕ್ಷ ಡಾ| ಎಚ್.ಎಸ್. ಬಲ್ಲಾಳ್ ಸ್ವಾಗತಿಸಿ ಸಹ ಕುಲಪತಿ ಡಾ| ಶರತ್ ಕುಮಾರ್ ರಾವ್ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
ಮೂಲ್ಕಿ ವಿಜಯ ಕಾಲೇಜು ಪ್ರಾಂಶುಪಾಲೆ ಡಾ| ಶ್ರೀಮಣಿ ಶೆಟ್ಟಿ ವಂದಿಸಿದರು. ಕಾಮರ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಪ್ರಿನ್ಸಿಯಾ ನಿಖೀತಾ ಡಯಾಸ್ ನಿರೂಪಿಸಿದರು.
ಡಾ| ಟಿ.ಎಂ.ಎ. ಪೈ ಬಂಗಾರದ ಮಣಿ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಂ.ಎಸ್. ಮಹಾಬಲೇಶ್ವರ ಅವರು, ಇದು ಪರಶುರಾಮ ಸೃಷ್ಟಿಯ ನೆಲ ಅನ್ನುತ್ತಾರೆ. ಪರಶುರಾಮನ ಬಳಿ ಒಂದು ಬಂಗಾರದ ಮಣಿ ಇತ್ತು. ಅದನ್ನು ಯಾವುದೇ ವಸ್ತುವಿಗೆ ಸ್ಪರ್ಶಿಸಿದರೆ ಬಂಗಾರವಾಗುತ್ತಿತ್ತಂತೆ. ಅದೇ ರೀತಿ ಟಿ.ಎಂ.ಎ. ಪೈ ಅವರು, ಬೋಳು ಗುಡ್ಡೆಯಾಗಿದ್ದ ಮಣಿಪಾಲಕ್ಕೆ ಬಂಗಾರದ ಮಣಿ ಸ್ಪರ್ಶಿಸಿ ಬಂಗಾರದ ಬೆಳೆಯನ್ನೇ ತೆಗೆದು ತೋರಿಸಿದ್ದಾರೆ ಎಂದು ಹಿರಿಯ ಸಾಧಕರನ್ನು ನೆನೆದು, ಪ್ರಶಸ್ತಿ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ಜಲ ಸಂರಕ್ಷಣೆಯ ಅಗತ್ಯ ಸಾರಿದ ಮಹಾಲಿಂಗ ನಾಯ್ಕ
ಪ್ರಶಸ್ತಿ ಸ್ವೀಕರಿಸಿ ತುಳುವಿನಲ್ಲೇ ಮಾತನಾಡಿದ ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ ಅವರು, ನಾನು ಎಂದಿಗೂ ಪ್ರಶಸ್ತಿಗಾಗಿ ಕೆಲಸ ಮಾಡಿದವನಲ್ಲ. ಆದರೆ ಹಠ ತೊಟ್ಟು ನೀರಿಗಾಗಿ ಗುಡ್ಡದಲ್ಲಿ ಸುರಂಗ ತೋಡಿ ಸೋತು ಗೆದ್ದವ. ಪ್ರಶಸ್ತಿಗಳನ್ನೂ ಎಂದಿಗೂ ನಿರೀಕ್ಷಿಸಿರಲಿಲ್ಲ. ಆದರೆ ನನ್ನ ಸಾಧನೆ ಗುರುತಿಸಿ ಪದ್ಮಶ್ರೀ ನೀಡಿ ಪ್ರಧಾನಿ ನರೇಂದ್ರ ಮೋದಿ ನನ್ನನ್ನು ಗೌರವಿಸಿದರು. ಬರಡು ಭೂಮಿಯಾಗಿದ್ದ ನನ್ನ ಸ್ಥಳದಲ್ಲಿ ಇಂದು ಅನೇಕರು ಬಂದು ಒಂದು ಲೋಟ ನೀರು ಕುಡಿದು ಹೋಗುವುದು ಸಂತಸ ತರುತ್ತಿದೆ. ಇಂತಹ ವೇದಿಕೆಗಳಲ್ಲಿ ಮುಂದಿನ ಪೀಳಿಗೆಗೆ ನಾವು ಜಲ ಸಂರಕ್ಷಣೆಯ ಕುರಿತ ಅಗತ್ಯವನ್ನು ಸಾರಿ ಹೇಳಬೇಕಾಗಿದೆ ಎಂದರು.
ಡಾ| ಪಿ. ಶ್ರೀಪತಿ ರಾವ್ ಅವರು ಪ್ರಶಸ್ತಿ ಪಡೆದುದರ ಕುರಿತು ಸಂತಸ ವ್ಯಕ್ತಪಡಿಸಿ ಮಣಿಪಾಲದ ಕೆಎಂಸಿ ಯೊಂದಿಗಿನ ಒಡನಾಟ, ಸಾಧನೆಗೆ ನೆರವಾದುದನ್ನು ನೆನೆದರು. ನಾನು ಹೊಸ ವರ್ಷದ ಪುರಸ್ಕಾರ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದೆ, ಈ ಬಾರಿ ನಾನೇ ಸ್ವೀಕರಿಸುತ್ತಿರುವುದು ಅಪಾರ ಸಂತಸ ತಂದಿದೆ ಎಂದರು.
ಡಾ| ಪುಷ್ಪಾ ಕಿಣಿ ಅವರು ಪ್ರಶಸ್ತಿ ಸ್ವೀಕರಿಸಿ ಭಾವುಕರಾಗಿ, ತನ್ನ ವೈದ್ಯಕೀಯ ವೃತ್ತಿಯ ಸಾವಾಲುಗಳ ಕುರಿತು, ಮಣಿಪಾಲ ಸಂಸ್ಥೆಗಳ ಸರ್ವ ಸಾಧಕರ , ವಿದ್ಯಾರ್ಥಿಗಳ, ವೈದ್ಯರ ಸಹಕಾರದ ಕುರಿತು ನೆನಪಿಸಿಕೊಂಡರು.
ಪ್ರಶಸ್ತಿಗೆ ಭಾಜನರಾದವರ ಕಿರು ಪರಿಚಯ ಹೀಗಿದೆ
ಎಂ.ಎಸ್. ಮಹಾಬಲೇಶ್ವರ
ಖಾಸಗಿ ಕ್ಷೇತ್ರದ ಕರ್ಣಾಟಕ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕುಗಳನ್ನು ಮೀರಿಸಿ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಗೊಂಡು ದೇಶಾದ್ಯಂತ ಶಾಖೆಗಳನ್ನು ಹೊಂದಿ ಮುಂಚೂಣಿಯಲ್ಲಿರುವುದಕ್ಕೆ ಕಾರಣ ಕೆಲವು ತಲೆಮಾರುಗಳಿಗೆ ಸೇರಿದ ಬ್ಯಾಂಕಿನ ಅಧ್ಯಕ್ಷರು, ನಿರ್ದೇಶಕರು, ನಿಷ್ಠಾಧಿಕಾರಿ ವರ್ಗ, ಸಮರ್ಥ ಸಿಬಂದಿ ವರ್ಗ. ಸ್ಥಾಪಕ ಅಧ್ಯಕ್ಷರಾಗಿ ಕೆ. ಸೂರ್ಯನಾರಾಯಣ ಅಡಿಗ ಬ್ಯಾಂಕನ್ನು ಮುನ್ನಡೆಸಿದರು. ಪ್ರಸ್ತುತ ಬ್ಯಾಂಕಿನ ಆಡ ಳಿತ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಅವರು. ಕೃಷಿಯಲ್ಲಿ ಆಸಕ್ತರಾದ ಮಹಾಬಲೇಶ್ವರ ಅವರು ಬೆಂಗಳೂರಿನ ಕೃಷಿ ವಿ.ವಿ.ಯಲ್ಲಿ ಪದವಿ ಪಡೆದು ಬ್ಯಾಂಕಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದವರು. 2017ರಲ್ಲಿ ಬ್ಯಾಂಕಿನ ಆಡಳಿತ ನಿರ್ದೇಶಕರಾದರು. ಅವರ ನಾಯಕತ್ವದಲ್ಲಿ ಅಭಿವೃದ್ಧಿ ಪಥದಲ್ಲಿ ಶೀಘ್ರಗತಿಯಲ್ಲಿ ಸಾಗುತ್ತಿದೆ. ಕೆಬಿಎಲ್ ವಿಕಾಸ್, ಡಿಜಿಟಲ್ ಬ್ಯಾಂಕಿಂಗ್, ಕೃಷಿ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿರುವ ಬ್ಯಾಂಕ್ ತನ್ನ ಗ್ರಾಹಕರು, ಠೇವಣಿದಾರರು, ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳು, ಕೃಷಿಕರು, ಸ್ವಂತ ಉದ್ಯೋಗಿ ಮಹಿಳೆಯರು, ಹೂಡಿಕೆದಾರರು, ಕಿರು ಉದ್ಯಮಿಗಳು, ಸಾಮಾನ್ಯ ವರ್ಗದ ವರ್ತಕರು-ಮುಂತಾದವರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಕಾಯಕದಲ್ಲಿ ನಿರತವಾಗಿವೆ. ಅನತಿ ದೂರದಲ್ಲಿ ಶತಮಾನದ ಯಶಸ್ಸನ್ನು ಉತ್ಸವ ಸ್ವರೂಪದಲ್ಲಿ ಆಚರಿಸಲಿರುವ ಬ್ಯಾಂಕಿನ ರಥಿಕ ಎಂ.ಎಸ್. ಮಹಾಬಲೇಶ್ವರ.
ಅಸ್ಥಿ ಶಸ್ತ್ರ ಚಿಕಿತ್ಸಾ ಪ್ರವೀಣ ಡಾ| ಪಿ. ಶ್ರೀಪತಿ ರಾವ್
ಡಾ| ಪಾಂಗಾಳ ಶ್ರೀಪತಿ ರಾವ್ 1953ರಲ್ಲಿ ಮಂಗಳೂರಲ್ಲಿ ಜನಿಸಿದರು. ಅವರ ತಂದೆ ಪ್ರೊ| ಸೇತು ಮಾಧವ ರಾವ್ ಮಂಗಳೂರು ಸರಕಾರಿ ಕಾಲೇಜಿನಲ್ಲಿ, ಬಳಿಕ ಸುರತ್ಕಲ್ ಎನ್‌ಐಟಿಕೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಶ್ರೀಪತಿ ರಾವ್ ಅವರು ಎಂಬಿಬಿಎಸ್ ಶಿಕ್ಷಣವನ್ನು ಬೆಂಗಳೂರಿನ ಸೇಂಟ್ ಜಾನ್ ಮೆಡಿಕಲ್ ಕಾಲೇಜಿನಲ್ಲಿ ಪಡೆದರು. ಮಣಿಪಾಲದ ಕೆಎಂಸಿಯಿಂದ 1978ರಲ್ಲಿ ಡಿ ಆರ್ಥೋ, 1981ರಲ್ಲಿ ಎಂಎಸ್ ಸ್ನಾತಕೋತ್ತರ ಪದವಿ ಪಡೆದರು. 1981 ರಲ್ಲಿ ಅಧ್ಯಾಪಕರಾಗಿ ಸೇರಿದ ಡಾ| ರಾವ್ 1996 -2001 ಅವಧಿಯಲ್ಲಿ ವಿಭಾಗದ ಮುಖ್ಯಸ್ಥರಾಗಿದ್ದರು.
ಆರ್ಥೋಸ್ಕೊಪಿಕ್ ಶಸ್ತ್ರಕ್ರಿಯೆಯಲ್ಲಿ ತಜ್ಞರಾದ ಮೊದಲಿಗರಲ್ಲಿ ಡಾ| ಶ್ರೀಪತಿ ರಾವ್ ಒಬ್ಬರು. 2007-2009ರ ಅವಧಿಯಲ್ಲಿ ಭಾರತದ ಆರ್ಥೋಸ್ಕೋಪಿಕ್ ಸೊಸೈಟಿಯ ಅಧ್ಯಕ್ಷರಾಗಿದ್ದ ಹಿರಿಮೆ ಡಾ| ರಾವ್ ಅವರದು. ಆಸ್ಟ್ರೇಲಿಯಾ, ಇರಾನ್ ಇಂಗ್ಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆಸಿದವರು. 2010ರಲ್ಲಿ ಅವರಿಗೆ ಎಫ್ಆರ್‌ಸಿಎಸ್ ಪದವಿ ದೊರಕಿತು. ಕೆಎಂಸಿ ಡೀನ್ ಆಗಿಯೂ ಡಾ| ಶ್ರೀಪತಿ ರಾವ್ ಹೊಣೆಗಾರಿಕೆ ವಹಿಸಿದ್ದರು. ಪತ್ನಿ ಡಾ| ಸುಗಂಧಿ ರಾವ್ ಮೈಕ್ರೋ ಬಯಾಲಜಿ ವಿಭಾಗದಲ್ಲಿ ಮುಖ್ಯಸ್ಥೆಯಾಗಿದ್ದರು. ತಮ್ಮ 60ನೇ ವರ್ಷದ ಬಳಿಕ ಕೆಲಕಾಲ ದುಬಾೖಯಲ್ಲಿ ಮೆಡ್ ಕೇರ್ ಅರ್ಥೋಪೆಡಿಕ್ಸ್ ಮತ್ತು ಸ್ಪಯಿನ್ ಆಸ್ಪತ್ರೆಯಲ್ಲಿ ಅವರು ಸಲಹಾ ತಜ್ಞ ಅಸ್ಥಿ ಶಸ್ತ್ರ ಚಿಕಿತ್ಸಕರಾಗಿದ್ದರು.
ಶಿಶು ಚಿಕಿತ್ಸಾ ತಜ್ಞೆ, ಪ್ರಾಧ್ಯಾಪಿಕೆ ಡಾ| ಪುಷ್ಪಾ ಕಿಣಿ
ಪ್ರಾಥಮಿಕ ಮತ್ತು ಹೈಸ್ಕೂಲು ವಿದ್ಯಾಭ್ಯಾಸವನ್ನು ಕೆನರಾ ಸಮೂಹ ಸಂಸ್ಥೆಗಳಲ್ಲಿ ಪಡೆದ ಪುಷ್ಪಾ ಕಿಣಿ ಪಿಯುಸಿ ವಿದ್ಯಾಭ್ಯಾಸವನ್ನು ಸೈಂಟ್ ಆ್ಯಗ್ನೆಸ್ ಕಾಲೇಜಿನಲ್ಲಿ ಮುಗಿಸಿದರು. ಕಾಲೇಜು ವಿದ್ಯಾಭ್ಯಾಸ ಕಾಲದಲ್ಲಿ ಬ್ಯಾಡ್ಮಿಂಟನ್, ಎನ್ನೆಸೆಸ್ ಮುಂತಾದ ಪಠ್ಯೇತರ ವಿಷಯಗಳಲ್ಲೂ ಆಸಕ್ತರಾಗಿದ್ದರು. ಎಂಬಿಬಿಎಸ್ ಮುಗಿಸಿದ ಕಾಲಕ್ಕೆ ಕಾಲೇಜಿನ ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿನಿಯಾಗಿದ್ದರು. ಅವರಿಗೆ 1982ರಲ್ಲಿ ಸಿಎಸ್‌ಐಆರ್‌ನಿಂದ ಪ್ರತಿಷ್ಠಿತ ಸಂಶೋಧನಾ ಫೆಲೋಶಿಪ್, 1984ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಡಿಸಿಎಚ್ ಪದವಿ ದೊರಕಿದುವು. 1986ರಿಂದ ನಿವೃತ್ತಿಯವರೆಗೂ ಮಣಿಪಾಲದ ಕೆಎಂಸಿಯ ಚಿಕಿತ್ಸಾ ವಿಭಾಗದಲ್ಲಿ ವಿವಿಧ ವೈದ್ಯಕೀಯ ಹುದ್ದೆಗಳಲ್ಲಿ ನಿಯುಕ್ತಿಯಾಗಿದ್ದರು. 1996, 2012, 2015, 2018- ಹೀಗೆ ಹಲವಾರು ಬಾರಿ ಶ್ರೇಷ್ಠ ಶಿಶು ಚಿಕಿತ್ಸಾ ಪ್ರಾಧ್ಯಾಪಿಕೆಯಾಗಿ ಗುರುತಿಸಲ್ಪಟ್ಟಿದ್ದರು. ರಾಷ್ಟ್ರೀಯ ವೈದ್ಯಕೀಯ ಸಮಿತಿಯ ಶಾಶ್ವತ ಸದಸ್ಯೆಯಾಗಿದ್ದ ಅವರು, ಟೀಂ ಎನ್‌ಎಚ್‌ಎ ಇಂಡಿಯಾ ಮತ್ತು ಐಸಿಎಮ್ ಆರ್ ಆಯುಷ್ಮಾನ್ ಭಾರತ ಯೋಜನೆಯ ಸಮಿತಿಗಳ ಸದಸ್ಯೆಯೂ ಆಗಿದ್ದರು.
ಅಮೈ ಮಹಾಲಿಂಗ ನಾಯ್ಕ
ಅಮೈ ಮಹಾಲಿಂಗ ನಾಯ್ಕ ತನ್ನ ಬದುಕನ್ನೇ ತಾನೇ ರೂಪಿಸಿಕೊಂಡದ್ದು ಒಂದು ಐತಿಹಾಸಿಕ ವಿದ್ಯಮಾನ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಅವರು ಸುಮಾರು ಏಳು ದಶಕಗಳ ಹಿಂದೆ ಹಿಂದುಳಿದ ಗುಡ್ಡಗಾಡು ಪ್ರದೇಶದಲ್ಲಿ ಜನ್ಮ ತಾಳಿದರು. ಕೇಪು ಗ್ರಾಮದ ಅಮೈ ಹುಟ್ಟೂರು. ಶಾಲೆಗೆ ಹೋದವರಲ್ಲ. ಅಮೈ ವೆಂಕಪ್ಪ ನಾಯ್ಕ ಮತ್ತು ಅಕ್ಕು ಮಹಾಲಿಂಗ ಹೆತ್ತವರು. ತಮ್ಮದೇ ಆದ ಜಮೀನು ಇಲ್ಲ; ಸೂರು ಇಲ್ಲ. ಯೌವನಕ್ಕೆ ಕಾಲಿಟ್ಟಾಗ ತಂದೆಯ ಮರಣದಿಂದ ಮಹಾಲಿಂಗ ಅನಾಥರಾದರು. ದರ್ಖಾಸ್ತಾಗಿ ಸಿಕ್ಕಿದ ಶುಷ್ಕ ಜಮೀನಿನಲ್ಲಿ ನೀರನ್ನು ಪಡೆಯುವ ಒಂದೇ ಮಾರ್ಗವೆಂದರೆ ಗುಡ್ಡದಲ್ಲಿ ಸುರಂಗ ತೋಡುವುದು. ತನ್ನ ಗುಡ್ಡದಲ್ಲಿ ನೀರಿನ ಸೆಲೆ ಇರಬಹುದು ಎಂಬ ಆಸೆಯಿಂದ ಆರೇಳು ವರ್ಷಗಳ ಕಾಲ ಒಂದು ವ್ಯರ್ಥ ಪ್ರಯತ್ನದಿಂದ ಇನ್ನೊಂದು ವ್ಯರ್ಥ ಪ್ರಯತ್ನಕ್ಕೆ ಜಿಗಿದು ನಿರಾಸೆಯನ್ನೇ ಪ್ರತಿಫಲವಾಗಿ ಪಡೆದರು.
ಆತ್ಮಸ್ಥೈರ್ಯ, ಛಲ, ನಂಬಿಕೆ ಕೊನೆಗೂ ಅವರಿಗೆ ಯಶಸ್ಸನ್ನು ತಂದುವು. ಏಳನೆಯ ಸುರಂಗ ಯಶಸ್ವಿಯಾಗಿ ಗಂಗೆ ಧಾರೆಯಾಗಿ ಹರಿದು ಬಂದಳು. ಇಬ್ಬರು ಗಂಡು ಮಕ್ಕಳಿಗೂ ಒಬ್ಟಾಕೆ ಹೆಣ್ಣು ಮಗಳಿಗೂ ಸ್ವತಂತ್ರ ಬದುಕನ್ನು ನೀಡಿದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.