ಸ್ತ್ರೀಶಕ್ತಿ ಸ್ವ.ಸ. ಸಂಘಗಳಿಗೆ ಸಾಲ ನೀಡಲು ಹಿಂದೇಟು
Team Udayavani, Mar 18, 2019, 3:39 AM IST
ಉಡುಪಿ: ಜಿಲ್ಲೆಯ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳು ಸಾಲ ಮರು ಪಾವತಿಸುವಲ್ಲಿ ಮೇಲುಗೈ ಸಾಧಿಸಿದ್ದರೂ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳು ಸಾಲ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಮೀಟರ್ ಬಡ್ಡಿಗೆ ಮೊರೆ ಹೋಗ ಬೇಕಾದ ಪ್ರಸಂಗ ಉದ್ಭವಿಸಿದೆ.
ಇದರಿಂದಾಗಿ ಗ್ರಾಮೀಣ ಭಾಗದ ಮಹಿಳೆಯರು ತೀರಾ ಸಂಕಷ್ಟಕ್ಕೀಡಾಗಿ ದ್ದಾರೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ರಾಜ್ಯ ಸರಕಾರ 18 ವರ್ಷಗಳ ಹಿಂದೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳನು° ರಚಿಸಿತ್ತು. ಆಗ ಲಕ್ಷಾಂತರ ಮಹಿಳೆಯರು ಈ ಗುಂಪುಗಳ ಸದಸ್ಯತ್ವ ಪಡೆದಿದ್ದರು. ಕೋ-ಆಪರೇಟಿವ್ ಬ್ಯಾಂಕ್ (ಸಹಕಾರಿ ಸಂಘ)ನಲ್ಲಿ ಸಂಘದ ಖಾತೆ ತೆರೆದು ತಿಂಗಳಿಗೆ 20 ರೂ.ನಿಂದ ಆರಂಭಿಸಿದ ಉಳಿತಾಯ ಇಂದು 53. 33 ಕೋ. ರೂ.ಗೆ ತಲುಪಿದೆ. ಆದರೂ ರಾಷ್ಟ್ರೀ ಕೃತ ಬ್ಯಾಂಕ್‌ಗಳ ಕೆಲವು ಶಾಖೆಗಳು ಸಾಲ ನೀಡಲು ಒಪ್ಪುತ್ತಿಲ್ಲ ಎಂಬುದು ಕೇಳಿ ಬರುತ್ತಿರುವ ಆರೋಪ.
ಕೋ-ಆಪ್ ಬ್ಯಾಂಕ್‌ನಿಂದ ವರ್ಗಾವಣೆ
ಅನೇಕ ವರ್ಷಗಳಿಂದ ಸಹಕಾರಿ ಬ್ಯಾಂಕ್‌ಗಳಲ್ಲಿ ಹೊಂದಿದ್ದ ಖಾತೆಗಳನ್ನು ಸರಕಾರದ ಸವಲತ್ತು ಪಡೆಯುವ ಸಲುವಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ವರ್ಗಾಯಿಸಲು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಆದೇಶಿಸಲಾಗಿತ್ತು. ಅಂತೆಯೇ ಕಳೆದ ವರ್ಷ ಜಿಲ್ಲೆಯ ಎಲ್ಲ 2,930 ಗುಂಪುಗಳ ಖಾತೆಗಳು ತಮ್ಮ ಖಾತೆಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ವರ್ಗಾಯಿಸಿದವು. ಪ್ರಾರಂಭದಲ್ಲಿ ಸರಕಾರದಿಂದ ಸಿಗುವ ಸವಲತ್ತುಗಳು ಚೆಕ್ ಮೂಲಕ ಪ್ರತಿ ಸಂಘಗಳಿಗೆ ದೊರಕುತ್ತಿದ್ದವು. ಬಳಿಕ ಆನ್‌ಲೈನ್ ಮೂಲಕ ನಗದು ಪಾವತಿ ಪ್ರಕ್ರಿಯೆ ಆರಂಭವಾಯಿತು. ಈ ಸಂದರ್ಭ ಕೋ-ಆಪರೇಟಿವ್ ಬ್ಯಾಂಕ್‌ಗಳಿಗೆ ಐಎಫ್ಎಸ್‌ಸಿ ಕೋಡ್ ಇಲ್ಲದ್ದರಿಂದ ಖಾತೆಯನ್ನು ರಾಷ್ಟ್ರೀಕೃತ ಬ್ಯಾಂಕ್‌ಗೆ ವರ್ಗಾಯಿಸುವಂತೆ ಸೂಚಿಸಲಾಗಿದೆ.
ಸಾಲಕ್ಕೆ ಕತ್ತರಿ
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸ್ವ -ಸಹಾಯ ಸಂಘಗಳ ಸದಸ್ಯರು ಪ್ರತಿ ತಿಂಗಳು ತಮ್ಮ ಉಳಿತಾಯದ ಹಣವನ್ನು ತಪ್ಪದೇ ಕಟ್ಟುತ್ತಿದ್ದಾರೆ. ಅಲ್ಲದೆ ಆಂತರಿಕ ಖಾತೆಯಲ್ಲಿ ತೆಗೆದ ಸಾಲವನ್ನೂ ಸಕಾಲದಲ್ಲಿ ಪಾವತಿ ಸುತ್ತಿದ್ದಾರೆ. ಆದರೂ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳ ಕೆಲವು ಶಾಖೆಗಳು ಹಲವು ಕುಂಟು ನೆವ ಹೇಳಿ ಸಾಲ ನೀಡಲು ನಿರಾಕರಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ.
2,930 ಸಂಘ
ಜಿಲ್ಲೆಯಲ್ಲಿ ಒಟ್ಟು 2,930 ಸ್ತ್ರೀಶಕ್ತಿ ಸಂಘಗಳಿವೆ. ಕುಂದಾಪುರದಲ್ಲಿ 1,067, ಕಾರ್ಕಳದಲ್ಲಿ 641, ಉಡುಪಿಯಲ್ಲಿ 1,222 ಗುಂಪುಗಳಿವೆ. ಅದರಲ್ಲಿ 3,070 ಪ.ಜಾ., 2,348 ಪ.ಪಂ., ಮತ್ತು 40,701 ಇತರೆ ಸದಸ್ಯರು ಸಹಿತ ಒಟ್ಟು 46,119 ಸದಸ್ಯರಿದ್ದಾರೆ. ಕರಾವಳಿಯಲ್ಲಿ ಸ್ತ್ರೀ ಶಕ್ತಿ ಸಂಘಗಳಿಂದ ಮರುಪಾವತಿ ಉತ್ತಮವಾಗಿದ್ದು, ಒಟ್ಟು 134.74 ಕೋ.ರೂ. ಬ್ಯಾಂಕ್ ಸಾಲ, ಸರಕಾರದಿಂದ 3.25 ಕೋ.ರೂ. ಸುತ್ತು ನಿಧಿಯನ್ನು ಪಡೆದಿವೆ.
ದೂರು ಬಂದಿಲ್ಲ
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸ್ತ್ರೀ ಶಕ್ತಿ ಗುಂಪುಗಳಿಗೆ ಸಾಲ ನೀಡಲು ನಿರಾಕರಿಸಿರುವ ಕುರಿತು ಇದುವರೆಗೆ ಯಾವುದೇ ದೂರು ಬಂದಿಲ್ಲ. ಈ ಸಮಸ್ಯೆ ಬಗ್ಗೆ ಲೀಡ್ ಬ್ಯಾಂಕ್ ಮುಖ್ಯಸ್ಥರೊಂದಿಗೆ ಚರ್ಚಿಸಲಾಗುವುದು.
ಗ್ರೇಸಿ ಗೋನ್ಸಾಲ್ವಿಸ್, ಉಪನಿರ್ದೇಶಕಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
ಮೀಟರ್ ಬಡ್ಡಿ ಸಾಲಕ್ಕೆ ಮೊರೆ
ಸಕಾರಣಗಳಿಲ್ಲ ದಿದ್ದರೂ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ನೀಡಲು ಒಪ್ಪುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ಆರ್ಥಿಕತೆ ಸಂಕಷ್ಟಕ್ಕೀಡಾಗಿದೆ. ಹಾಗಾಗಿ ಮೀಟರ್ ಬಡ್ಡಿಯಲ್ಲಿ ಸಾಲ ಪಡೆದುಕೊಳ್ಳುವ ಸನ್ನಿವೇಶ ಎದುರಾಗಿದೆ.
ಆಶಾ, ಸ್ತ್ರೀ ಶಕ್ತಿ ಗುಂಪಿನ ಸದಸ್ಯೆ.
ಗಮನಕ್ಕೆ ತನ್ನಿ
ಯಾವುದೇ ಸ್ತ್ರೀ ಶಕ್ತಿ ಗುಂಪುಗಳಿಗೆ ಸಾಲ ನೀಡಲು ಬ್ಯಾಂಕ್‌ಗಳು ಹಿಂದೇಟು ಹಾಕುವ ನಿರ್ದಿಷ್ಟ ಪ್ರಕರಣಗಳು ಕಂಡು ಬಂದರೆ ನನ್ನ ಗಮನಕ್ಕೆ ತಂದರೆ ಸರಿಪಡಿಸಲು ಪ್ರಯತ್ನಿಸಲಾಗುವುದು.
ಸಿಂಧೂ ರೂಪೇಶ್, ಸಿಇಓ ಉಡುಪಿ ಜಿ.ಪಂ., ಜಿಲ್ಲಾ ಬ್ಯಾಂಕಿಂಗ್ ಸಲಹಾ ಸಮಿತಿ ಅಧ್ಯಕ್ಷರು.
ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.