ಮಕ್ಕಳಿಂದ ಶಾಲಾ ಶೌಚಾಲಯ ತೊಳೆಸುವಂತಿಲ್ಲ
ಇದೇ ಮೊದಲ ಬಾರಿ ಮಕ್ಕಳ ಗ್ರಾಮಸಭೆ ಮಾದರಿಯಲ್ಲಿ ಮಕ್ಕಳ ಪುರಸಭೆ
Team Udayavani, Jan 4, 2020, 5:01 AM IST
ಕುಂದಾಪುರ: ಮಕ್ಕಳಿಂದ ಶಾಲಾ ಶೌಚಾಲಯ ತೊಳೆಸುವಂತಿಲ್ಲ. ಅದಕ್ಕಾಗಿ ಶಾಲಾ ಆಡಳಿತ ಮಂಡಳಿ ಪ್ರತ್ಯೇಕ ವ್ಯವಸ್ಥೆಯನ್ನುಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಶುಕ್ರವಾರ ಇಲ್ಲಿನ ಪುರಸಭೆಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಪುರಸಭೆ ಕುಂದಾಪುರ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಕ್ಕಳ ಪುರಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುರಸಭೆ ವ್ಯಾಪ್ತಿಯಲ್ಲಿ ಕನ್ನಡ ಶಾಲೆಗಳಿಗೆ ಉಚಿತ ನೀರು ನೀಡುವ ಕುರಿತು ನಿರ್ಣಯಿಸಲಾಗಿದೆ. ಶಾಲೆಗಳ ಮೂಲಸೌಕರ್ಯಕ್ಕೆ ಯಾವುದೇ ಕ್ಷಣದಲ್ಲಿ ಕಚೇರಿಯನ್ನು ಸಂಪರ್ಕಿಸಬಹುದು. ಪ್ರೌಢಶಾಲೆಗಳಿಗೆ ಅಗತ್ಯವಿರುವ ಪ್ಯಾಡ್ ಬರ್ನರ್‌ಗಳನ್ನು ನೀಡುತ್ತೇವೆ ಎಂದರು.
ಉದ್ಘಾಟಿಸಿದ ಸಹಾಯಕ ಕಮಿಷನರ್ ಕೆ. ರಾಜು, ಆಡಳಿತದ ಅರಿವು ಮಕ್ಕಳಿಗಾಗಲಿ ಎಂಬ ಉದ್ದೇಶದಿಂದ, ಮುಂದಿನ ನಾಗರಿಕರು, ಅಧಿಕಾರಿಗಳು ಇಂದಿನ ಮಕ್ಕಳೇ ಆಗಿರುವುದರಿಂದ ತಿಳಿವಳಿಕೆಗಾಗಿ ಇಂತಹ ಸಭೆ ಆಯೋಜಿಸಲಾಗುತ್ತಿದೆ. ಮಕ್ಕಳು ಪ್ರಶ್ನಿಸುವ ಸ್ವಭಾವ ಬೆಳೆಸಿಕೊಳ್ಳಿ. ಅಂತೆಯೇ ಈ ಮಾಹಿತಿ ಯುಗದಲ್ಲಿ ಮಾಹಿತಿಯನ್ನು ಅರಿಯಿರಿ ಎಂದರು.
ಪ್ರಸ್ತಾವಿಸಿದ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ದಿವಾಕರ ಕುಮಾರ್, ಮಕ್ಕಳ ಗ್ರಾಮಸಭೆ ಮಾದರಿಯಲ್ಲಿ ಇದೇ ಮೊದಲ ಬಾರಿ ಮಕ್ಕಳ ಪುರಸಭೆ ಆಯೋಜಿಸಲಾಗಿದೆ. ಮಕ್ಕಳಿಗೆ ಬದುಕು, ರಕ್ಷಣೆ, ಶಿಕ್ಷಣದ ಹಕ್ಕಿನ ಕುರಿತು ಅರಿವು ಮೂಡಿಸಲಾಗುತ್ತದೆ ಎಂದರು.
ಎಎಸ್‌ಐ ಸುಧಾಕರ್, ಮಕ್ಕಳ ಮೇಲೆ ಹಲ್ಲೆ ನಡೆಸುವುದು ಅಪರಾಧ. ಬಾಲ್ಯವಿವಾಹದಂತಹ ಚಟುವಟಿಕೆ ಕೂಡ ಅಪರಾಧ. ಶಿಕ್ಷಣದ ಕೊರತೆಯಿಂದ ಅಪರಾಧಗಳು ನಡೆಯುತ್ತವೆ ಎನ್ನುವುದು ಸುಳ್ಳು. ಸಂಸ್ಕಾರದ ಕೊರತೆಯಿಂದ ನಡೆಯುತ್ತದೆ ಎಂದು ಹೇಳಬಹುದು. ಮಕ್ಕಳು ಅಪರಿಚಿತರ ಜತೆ ವ್ಯವಹರಿಸಬೇಡಿ. ಅಪರಿಚಿತರು ನೀಡಿದ ತಿಂಡಿ ತಿನಿಸು ಸ್ವೀಕರಿಸಬೇಡಿ. ಅಸಂಬದ್ಧ ವರ್ತನೆಯವರ ಕುರಿತು ನಿಗಾ ಇರಲಿ ಎಂದರು.
ಕಾರ್ಮಿಕ ನಿರೀಕ್ಷಕ ಸತ್ಯನಾರಾಯಣ, ಹಿರಿಯ ಆರೋಗ್ಯಾಧಿಕಾರಿ ರಮೇಶ್ ಶೆಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗ್ಲೀಷಾ, ಎಎಸ್‌ಐ ತಾರಾನಾಥ್, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರತೀಕ್ಷಾ ಪೈ, ಆದಿತ್ಯ ಉಪಸ್ಥಿತರಿದ್ದರು. ತಿಲೋತ್ತಮ ನಾಯಕ್ ಸ್ವಾಗತಿಸಿ, ಬಿ. ಮೋಹನಚಂದ್ರ ಕಾಳಾವರ ನಿರ್ವಹಿಸಿ, ಮಂಜುನಾಥ್ ವಂದಿಸಿದರು.
ಪ್ರಶ್ನೆಗಳು
ಕೋಡಿ ಸರಕಾರಿ ಉರ್ದು ಶಾಲೆಯ ಅನ್ವಿತಾ, ಬೆಂಚ್ ಕೊರತೆ ಇದೆ, ರಸ್ತೆ ಸರಿ ಇಲ್ಲ ಎಂದಾಗ ಈ ಶೈಕ್ಷಣಿಕ ವರ್ಷದಲ್ಲಿ ಬೆಂಚು ನೀಡಲಾಗುವುದು ಎಂದು ಶಿಕ್ಷಣ ಇಲಾಖೆಯವರು ಹೇಳಿದರು. ಟಿ.ಟಿ. ರೋಡ್ ಸರಕಾರಿ ಶಾಲೆಯ ಶೌಚಾಲಯ ನೀರು ಹೋಗುವುದಿಲ್ಲ ಎಂದಾಗ ಸರಿಪಡಿಸುವ ಭರವಸೆ ಬಂತು. ಹೋಲಿ ರೋಜರಿ ಆಂಗ್ಲಮಾಧ್ಯಮ ಶಾಲೆಯ ದಶಮಿಯಿಂದ ಸಮೀಪದ ಚರಂಡಿ ವಾಸನೆಯಿಂದ ಅಸಹನೀಯ ವಾತಾವರಣ ಇದೆ ಎಂಬ ದೂರು ಬಂತು. ಗರ್ಲ್ಸ್ ಶಾಲೆಯ ವರಲಕ್ಷ್ಮೀ, ಬಾಲಕರ ಶೌಚಾಲಯದ ಮಾಡು ನಾದುರಸ್ತಿಯಲ್ಲಿದೆ. ಮರಗಳು ಬೀಳುವ ಸ್ಥಿತಿಯಲ್ಲಿವೆ ಎಂದರು. ಮರ ತೆಗೆಯಲು ಅರಣ್ಯ ಇಲಾಖೆಗೆ ಕ್ರಮಕ್ಕೆ ಸೂಚಿಸುವುದಾಗಿ ಎಸಿ ಹೇಳಿದರು. ಛಾವಣಿ ದುರಸ್ತಿಗೆ ಈ ಬಾರಿ ಅನುದಾನ ಇಡಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಹೇಳಿದರು.
ಮೈದಾನ ಇಲ್ಲ
ಹುಂಚಾರಬೆಟ್ಟು ಶಾಲೆಯಲ್ಲಿ ಆಟದ ಮೈದಾನ ಇಲ್ಲ ಎಂದು ವಿದ್ಯಾಶ್ರೀ ಹೇಳಿದರು. ಶಾಲೆಗೆ ಇರುವುದೇ 10 ಸೆಂಟ್ಸ್ ಜಾಗ. ಅದರಲ್ಲಿ ಎರಡು ಕಟ್ಟಡ, ಅಂಗನವಾಡಿ, ಬಿಸಿಯೂಟ ಅಡುಗೆಕೊಠಡಿ ಇದೆ. ಶಾಲೆಯಿಂದ ಮಳೆಗಾಲದಲ್ಲಿ ಹೊರಗಿಳಿಯುವುದೇ ಕಷ್ಟ ಎಂಬ ಸ್ಥಿತಿ ಇದೆ ಎಂದು ಶಿಕ್ಷಕರು ವಿವರಿಸಿದರು. ಶಾಲೆಗೆ ಭೇಟಿ ನೀಡುವುದಾಗಿ ಎಸಿ ಹೇಳಿದರು.
ಹಾವು ಬರುತ್ತದೆ
ವಡೇರಹೋಬಳಿ ಶಾಲೆಗೆ ಹಾವು ಬರುತ್ತದೆ ಎಂದು ಒಬ್ಬ ವಿದ್ಯಾರ್ಥಿ ಹೇಳಿದರೆ, ಶಾಲೆಯ ಗೋಡೆಗಳು ಬಿರುಕುಬಿಟ್ಟಿವೆ. ಬಣ್ಣ ಮಾಸಿದೆ ಎಂದು ಮಂಜುನಾಥ್ ಹೇಳಿದರು. ಹಳೆಕಟ್ಟಡ ಕೆಡವಲು ಅನುಮತಿ ಕೇಳಲಾಗಿದೆ ಎಂದು ಶಿಕ್ಷಣ ಇಲಾಖೆಯವರು ಹೇಳಿ, ದುರಸ್ತಿಗೆ ನೆರೆ ಅನುದಾನ ಬಳಕೆಗೆ ಎಸಿ ಸಲಹೆ ನೀಡಿದರು.
ಅನ್ನ ಎಸೆಯಬೇಡಿ
ಬಿ.ಆರ್. ರಾಯರ ಶಾಲೆಯಲ್ಲಿ ಬಿಸಿಯೂಟ ಅನ್ನ ಉಳಿಯುತ್ತದೆ, ಪುರಸಭೆಯವರು ಕೊಂಡೊಯ್ಯಲ್ಲ ಎಂದು ವಿದ್ಯಾರ್ಥಿಯೊಬ್ಬ ದೂರಿದಾಗ, ಬಿಸಿಯೂಟದ ಅನ್ನ ವ್ಯರ್ಥ ಮಾಡಬಾರದು. ಒಂದು ಸೇರು ಅಕ್ಕಿ ಬೆಳೆಯಲು ಎಷ್ಟು ಕಷ್ಟ ಇದೆ ಗೊತ್ತಾ ಎಂದು ಪ್ರಶ್ನಿಸಿದ ಎಸಿ ಅನ್ನವನ್ನು ಹಾಳು ಮಾಡಬಾರದು. ಅಗತ್ಯವಿದ್ದಷ್ಟೇ ಬೇಯಿಸಿ, ಅಗತ್ಯವಿದ್ದಷ್ಟೇ ತಟ್ಟೆಗೆ ಹಾಕಿಕೊಳ್ಳಿ ಎಂದರು.
ನೀರಿಲ್ಲ
ಹೋಲಿ ರೋಜರಿ ಶಾಲೆಯಲ್ಲಿ ಕುಡಿಯಲು ನೀರಿಲ್ಲ ಎಂದು ಸಮೃದ್ಧಿ, ಸಂತ ಜೋಸೆಫರ ಶಾಲೆಯಲ್ಲಿ ಶಿಕ್ಷಕರ ಕೊರತೆ, ಚಟುವಟಿಕೆ ಪುಸ್ತಕ ದೊರೆಯುತ್ತಿಲ್ಲ, ಸರಕಾರಿ ಶಾಲಾ ಮಕ್ಕಳಿಗೂ ನಮಗೂ ತಾರತಮ್ಯ ಏಕೆ, ಶೂ ಕೂಡಾ ದೊರೆಯುತ್ತಿಲ್ಲ ಎಂದು ಪ್ರಜ್ಞಾ ಹೇಳಿದರು. ಕೆಲವು ಸೌಲಭ್ಯಗಳು ಸರಕಾರಿ ಶಾಲೆಗಳಿಗೆ ಮಾತ್ರ ಎಂದು ಸ್ಪಷ್ಟನೆ ನೀಡಲಾಯಿತು. ಹುಂಚಾರಬೆಟ್ಟು ಶಾಲೆ ರಾತ್ರಿ ವೇಳೆ ಕುಡುಕರ ಸಾಮ್ರಾಜ್ಯವಾಗಿರುತ್ತದೆ ಎಂದು ವಿದ್ಯಾಶ್ರೀ, ಬಿ.ಆರ್. ರಾಯರ ಶಾಲೆ ಬಳಿ ತ್ಯಾಜ್ಯ ಎಸೆಯಲಾಗುತ್ತದೆ ಎಂದು ಉತ್ತಮ್ ಶೇಟ್, ಚಿಕ್ಕನ್‌ಸಾಲ್ ಶಾಲೆಗೆ ಆವರಣ ಗೋಡೆ ಇಲ್ಲ ಎಂದು ಚಿನ್ಮಯಿ, ಸಂತ ಮೇರಿ ಶಾಲೆಯಲ್ಲಿ ಕೊಠಡಿ ಕೊರತೆಯಿದೆ ಎಂದು ಜೋನಿಟಾ, ಸೌಂಡ್ ಬಾಕ್ಸ್ ಬೇಕು ಎಂದು ನಂದಿತಾ, ಆವರಣ ಗೋಡೆ ಬೇಕು ಎಂದು ಮಧುಸೂದನ ಕುಶೆ ಶಾಲೆಯ ಅರುಣ್, ಶೌಚಾಲಯದಲ್ಲಿ ನೀರಿನ ಕೊರತೆಯಿದೆ ಎಂದು ಬೋರ್ಡ್ ಹೈಸ್ಕೂಲಿನ ಸುಪ್ರೀತಾ, ನಲಿಕಲಿ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ ಎಂದು ವಡೇರಹೋಬಳಿಯ ಗೌತಮಿ, ಶಾಲೆ ಎದುರು ನೀರು ನಿಲ್ಲುತ್ತದೆ ಎಂದು ಮದ್ದುಗುಡ್ಡೆಯ ಶಶಾಂಕ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
MUST WATCH
ಹೊಸ ಸೇರ್ಪಡೆ
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್
Hukkeri: ಮೀನಿನ ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್ ಸ್ಟಾರ್
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.