ಉಡುಪಿ: ಕೃಷಿಗೆ ಶರಣಾದ ಮುಂಬಯಿ ಪತ್ರಕರ್ತ, ಹೊಟೇಲ್ ಉದ್ಯಮಿ
Team Udayavani, Mar 18, 2022, 8:00 AM IST
ಕಟಪಾಡಿ: ಕೊರೊನಾ ಸೋಂಕು ಕಾರಣದಿಂದ ಮುಂಬಯಿಯಿಂದ ಊರಿಗೆ ಮರಳಿದ ಪತ್ರಕರ್ತ, ಹೊಟೇಲ್ ಉದ್ಯಮಿಯೊಬ್ಬರು ಕೃಷಿಯಲ್ಲಿ ತೊಡಗಿ ಪ್ರಯೋಗಶೀಲನಾಗಿದ್ದಾರೆ. ಇದರಿಂದಾಗಿ ಆಹಾರದಲ್ಲಿ ಸ್ವಾವಲಂಬಿಯಾಗಬೇಕೆಂಬ ಒಟ್ಟಾರೆ ಆಶಯಕ್ಕೆ ಇಂಬು ಸಿಕ್ಕಿದಂತಾಗಿದೆ.
ಮೂಲತಃ ಕಟಪಾಡಿ ಮಟ್ಟು ನಿವಾಸಿ ಹರೀಶ್ ರಾಜು ಪೂಜಾರಿ ಮುಂಬಯಿಯಲ್ಲಿ ಸ್ಟಾರ್ ಡಸ್ಟ್ ಪತ್ರಿಕೆಯ ಸಂಪಾದಕರಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ಮುಲುಂಡ್(ವೆಸ್ಟ್)ನ ಮಾಲೊಂದರಲ್ಲಿ 20 ವರ್ಷ ಕಾಲ ಬನಾನ ಲೀಫ್ ಫಾಸ್ಟ್ ಫುಡ್ ಮಾಲಕರಾಗಿದ್ದರು. ಕೊರೊನಾ ಮಹಾಮಾರಿಯ ಸಂದರ್ಭ ಹೊಟೇಲ್ ಉದ್ಯಮವು ಕೈ ಕೊಟ್ಟಿದ್ದು, ಕಳೆದ 6 ತಿಂಗಳ ಹಿಂದೆ ಹುಟ್ಟೂರಿಗೆ ಮರಳಿದರು.
ಬದುಕು ಕಟ್ಟಿಕೊಳ್ಳಲು ಕೃಷಿಯನ್ನು ನೆಚ್ಚಿಕೊಂಡರು. ಹಿರಿಯರ ಪಾಲಿಗೆ ಬಂದಿದ್ದ ಜಮೀನಿನಲ್ಲಿ ಹೀರೆಕಾಯಿ, ಸೌತೆಕಾಯಿ, ಸೋರೆಕಾಯಿ, ಮಟ್ಟುಗುಳ್ಳ ಸಹಿತ ಇತರೆ ಬೆಳೆಗಳನ್ನು ಬೆಳೆಸಿದ್ದಾರೆ. ಕೃಷಿ ಕೂಲಿ ಕಾರ್ಮಿಕರನ್ನು ಅವಲಂಬಿಸದೆ ಸ್ವತಃ ತಾನೇ ಗದ್ದೆಗಿಳಿದು ಕೆಲಸ ಮಾಡುತ್ತಾರೆ. ಸಹೋದರನ ಮಾರ್ಗದರ್ಶನದಲ್ಲಿ ಬಾಲ್ಯದಲ್ಲಿ ತಾತನಿಂದ ಕಲಿತಿದ್ದ ಕೃಷಿಯ ಜತೆಗೆ ಆಧುನಿಕ ಕೃಷಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಪಡೆದು ಅವುಗಳನ್ನು ಕೃತಿರೂಪಕ್ಕೆ ಇಳಿಸುತ್ತಿದ್ದಾರೆ.
ಸಾವಯವ ತರಕಾರಿ ಬೆಳೆ :
ಇಲ್ಲಿ ಬೆಳೆಯುವ ಬೆಳೆಗಳಿಗೆ ಸಾವಯವ ಗೊಬ್ಬರವನ್ನು ಹೆಚ್ಚಾಗಿ ಕೋಳಿ ಗೊಬ್ಬರ ಮತ್ತು ಈ(ನೀ)ರುಳ್ಳಿ ಸಿಪ್ಪೆಯ ಗೊಬ್ಬರವನ್ನು ಬಳಸುತ್ತಾರೆ. ಈರುಳ್ಳಿ ಸಿಪ್ಪೆ ಮತ್ತು ಕೋಳಿ ಗೊಬ್ಬರವನ್ನು ನೀರಿದ್ದ ಡ್ರಮ್‌ನಲ್ಲಿ ಸುಮಾರು 48 ತಾಸುಗಳ ಕಾಲ ನೆನೆಹಾಕಿ ಅದರ ನೀರನ್ನು ಗದ್ದೆಗೆ ಕೊಡುತ್ತಾರೆ. ಸ್ಥಳೀಯವಾಗಿ ಮಾರುಕಟ್ಟೆಯನ್ನು ಕಂಡು ಕೊಂಡಿದ್ದು ಉತ್ತಮ ಆದಾಯ ಬರಬಹುದು ಎಂಬ ನಿರೀಕ್ಷೆ ಇದೆ.
ಸೀಡ್ಲಿಂಗ್ ಗನ್ ಬಳಸಿ ಬೆಂಡೆ ಬಿತ್ತನೆ :
ಕೋಟೆಯ ಕಜಕಡೆಯ ಹೊಳೆಯ ಬಳಿಯ ಗದ್ದೆಯನ್ನು ಸಿದ್ಧಪಡಿಸಿ ಪ್ರಥಮ ಪ್ರಯತ್ನ ಎಂಬಂತೆ ವಾಣಿಜ್ಯ ಬೆಳೆಯಾಗಿ 12 ಇಂಚು ಉದ್ದ ಬೆಳೆಯುವ ಬೆಂಡೆಯ ಬೀಜವನ್ನು ಬಿತ್ತಲಾಗಿದೆ. ಪ್ರಥಮ ಬಾರಿಗೆ ಒಂದು ಹಿಡಿ ಗೊಬ್ಬರ ಮತ್ತು ಬೆಂಡೆಯ ಬೀಜವನ್ನು ಸೇರಿಸಿ ಸ್ಟೀಲ್ ಪೈಪ್ ಮೂಲಕ ಸಿದ್ಧಪಡಿಸಲಾಗಿದೆ. ಸೀಡ್ಲಿಂಗ್ ಗನ್ ಪೈಪ್ ಒಳಕ್ಕೆ ಹಾಕಿ ಸಿದ್ಧಪಡಿಸಲಾದ ಗದ್ದೆಯಲ್ಲಿ ಊರಿ ಟ್ರಿಗರ್ ಒತ್ತುವ ಮೂಲಕ ನಾಟಿ ಮಾಡಲಾಗುತ್ತದೆ. ಬಿತ್ತನೆ ಬೀಜದ ಜತೆಯೇ ಗೊಬ್ಬರವು ಉಳಿದುಕೊಳ್ಳಲಿದೆ. ಪ್ಲಾಸ್ಟಿಕ್ ಹಾನಿಕರ ಎಂದು ಮಲಿcಂಗ್ ಶೀಟ್ ಬಳಸುತ್ತಿಲ್ಲ. 50 ಸೆಂಟ್ಸ್ ಸ್ಥಳದಲ್ಲಿ ಎರಡೂವರೆ ಸಾವಿರ ಬೀಜ ಬಿತ್ತನೆ ಮಾಡಲಾಗಿದ್ದು, ಕನಿಷ್ಠ 4 ಟನ್ ಬೆಂಡೆ ಉತ್ಪಾದನೆಯ ಮೂಲಕ ಸುಮಾರು ಮೂರು ಲಕ್ಷ ರೂ.ಗೂ ಅಧಿಕ ಆದಾಯ ಗಳಿಸುವ ಗುರಿ ಇರಿಸಿ ಕೊಂಡಿದ್ದಾರೆ.
ಬರಡಾಗಿದ್ದ ಕೃಷಿ ಗದ್ದೆಯಲ್ಲೀಗ ಹಸುರು:
ಹರೀಶ್ ರಾಜು ಪೂಜಾರಿ ಬಲು ಅಪರೂಪ ವೆಂಬಂತೆ ಕೃಷಿ ಮೂಲಕ ಸ್ವಾವಲಂಬಿಯಾಗುತ್ತಿದ್ದಾರೆ. ಬರಡಾಗಿದ್ದ ಕೃಷಿ ಗದ್ದೆಗಳು ಮತ್ತೆ ಹಸುರಾಗಿ ಕಂಗೊಳಿಸುವಂತಾಗಿದೆ.
ಸೀರೆಯೇ ಭದ್ರ ಕಾವಲು :
ಫಸಲು ಕೊಡುವ ಸಮಯದಲ್ಲಿ ನವಿಲು, ಮುಳ್ಳುಹಂದಿ ಸಹಿತ ಇತರ ಪ್ರಾಣಿಗಳಿಂದ ಉಪಟಳ ಆಗದಂತೆ ಗದ್ದೆಯ ನಾಲ್ಕೂ ಬದಿಗಳಲ್ಲಿ ಹಳೆಯ ಸೀರೆಗಳನ್ನು ಅಳವಡಿಸಿ ಬೆಳೆಯನ್ನು ರಕ್ಷಿಸಲಾಗುತ್ತಿದೆ.
– ವಿಜಯ ಆಚಾರ್ಯ ಉಚ್ಚಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.