“ಜನರ ಆಶೋತ್ತರಕ್ಕೆ ಸ್ಪಂದಿಸಿದಾಗ ಮಾತ್ರ ಸಮ್ಮಾನ ಸ್ವೀಕಾರಾರ್ಹ’
Team Udayavani, Jul 31, 2018, 6:40 AM IST
ಉಡುಪಿ: ಜನರು ಜನಪ್ರತಿನಿಧಿಗಳಲ್ಲಿ ಅಪಾರ ನಿರೀಕ್ಷೆ, ಭರವಸೆ ಇರಿಸಿ ಚುನಾಯಿಸಿ ಕಳುಹಿಸುತ್ತಾರೆ. ಹೀಗೆ ಚುನಾಯಿತರಾದವರು ಮಹತ್ತರ ಸಾಧನೆಗಳನ್ನು ಮಾಡಿದ್ದಾರೆಂದು ಅರ್ಥ ಅಲ್ಲ. ಚುನಾಯಿತ ಜನಪ್ರತಿನಿಧಿಗಳನ್ನು ಸಮ್ಮಾನಿಸುವುದಕ್ಕಾಗಿ ವಿಜೃಂಭಣೆಯ ಕಾರ್ಯಕ್ರಮ ಸಂಯೋಜಿಸುವುದು ಇತ್ತೀಚಿನ ದಿನಗಳಲ್ಲಿ ಹವ್ಯಾಸವಾಗಿ ಬಿಟ್ಟಿದೆ. ಇದರಿಂದ ಜನಪ್ರತಿನಿಧಿಗಳ ಸಮಯವೂ ಹಾಳಾಗುವುದಲ್ಲದೆ, ಅಪಾರ ಖರ್ಚು ವೆಚ್ಚಗಳಾಗುತ್ತವೆಯೇ ಹೊರತೂ ಪ್ರಯೋಜನವಿಲ್ಲ. ಜನಪ್ರತಿನಿಧಿಯು ಜನರ ಎಲ್ಲ ಆಶೋತ್ತರಗಳನ್ನು ಈಡೇರಿಸಿ ತೃಪ್ತಿ ಹೊಂದಿದಾಗ ಮಾತ್ರ ಆತನಿಗೆ ಸಲ್ಲುವ ಸಮ್ಮಾನಗಳು ಸ್ವೀಕಾರಾರ್ಹ ಎಂದು ಶಾಸಕ ಕೆ. ರಘುಪತಿ ಭಟ್ ಅಭಿಪ್ರಾಯಪಟ್ಟರು.
ಈಶ್ವರನಗರ ವಾರ್ಡ್ ಬಿಜೆಪಿ ಕಾರ್ಯಕರ್ತರ ಅಭಿನಂದನ ಸಭೆಯಲ್ಲಿ ಅವರು ಮಾತನಾಡಿ, ನನ್ನನ್ನು 3ನೇ ಬಾರಿಗೆ ಶಾಸಕನಾಗಿ ಚುನಾಯಿಸಿದ್ದಾರೆಂದರೆ ನನ್ನ ಈ ಹಿಂದಿನ ಎರಡು ಅವಧಿಯ ಕ್ಷಮತೆಯನ್ನು ಗಣನೆಗೆ ತೆಗೆದುಕೊಂಡು ಚುನಾಯಿಸಿದ್ದಾರೆ ಎಂದರ್ಥ. ಅವರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಗಮನಹರಿಸುತ್ತೇನೆ. ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳ ಅವಲೋಕನ ನಡೆಸಿದ್ದೇನೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ಮರು ಚಾಲನೆ ನೀಡಿ ವೇಗ ಹೆಚ್ಚಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ಮುಂಬರುವ ನಗರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಉಡುಪಿಯ ಅಬಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರನ್ನು ಬೆಂಬಲಿಸುವುದಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸುವಲ್ಲಿ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು.
ನಗರಸಭಾ ಸದಸ್ಯ ಮಹೇಶ್ ಠಾಕೂರ್, ಹೆರ್ಗ ಶಕ್ತಿ ಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಪೈ, ಹಿರಿಯ ಕಾರ್ಯಕರ್ತ ಜಯಶೇಖರ ಅಮೀನ್, ಮಾಜಿ ನಗರಸಭೆ ಸದಸ್ಯ ಮಂಜುನಾಥ ಶೆಟ್ಟಿ, ವಾರ್ಡ್ ಅಧ್ಯಕ್ಷ ಸುಧಾಮ, ಗುರುರಾಜ್, ಉಪಾಧ್ಯಕ್ಷ ಹರೀಶ್ ಜಿ. ಕಲ್ಮಾಡಿ, ಉಪಾಧ್ಯಕ್ಷೆ ಪುಷ್ಪಾ ಉದಯ ಕುಮಾರ್ ಪೈ, ಬೂತ್ ಅಧ್ಯಕ್ಷ ಸುಬ್ರಾಯ ಕೆ. ಆಚಾರ್, ಪ್ರಮುಖರಾದ ಶೈಲೇಂದ್ರ ಶೆಟ್ಟಿ, ಸತೀಶ್ ಸಾಲಿಯಾನ್, ಸತೀಶ್ ಎನ್., ಅಲ್ವಿನ್ ಡಿ’ಸೋಜಾ, ಧರಣೇಶ್ ಸಾಲಿಯಾನ್, ದಿನೇಶ್ ಶೆಟ್ಟಿಗಾರ್, ಮಾಯಾ ಕಾಮತ್, ಸುಮಾ ನಾಯಕ್, ರತಿ ನಾಯ್ಕ, ಗುಲಾಬಿ, ಗಿರೀಶ್, ರೀಮಾ ನಾಯರ್, ಕೃಷ್ಣ ನಾಯ್ಕ, ಸುಧಾಕರ ನಾಯ್ಕ ಉಪಸ್ಥಿತರಿದ್ದರು. ವಾರ್ಡ್ ಅಧ್ಯಕ್ಷ ರವೀಂದ್ರನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ್ ನಿರೂಪಿಸಿದರು.
ಪರ್ಕಳ – ಮಲ್ಪೆ ರಾ.ಹೆ. ಕಾಮಗಾರಿ
ರಾ.ಹೆ. 169ಎ ಭಾಗವಾದ ಪರ್ಕಳ – ಮಣಿಪಾಲ – ಮಲ್ಪೆ ರಸ್ತೆ ಕಾಮಗಾರಿಗೆ ಕ್ಷಣಗಣನೆ ನಡೆಯುತ್ತಿದ್ದು, ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು, ಕೇಂದ್ರ ಸರಕಾರದ ಪ್ರತಿನಿದಿಗಳೊಂದಿಗೆ ಐದಾರು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಮುಂದಿನ ಲೋಕಸಭೆ ಚುನಾವಣೆಯ ಸಂದರ್ಭ ಅದನ್ನು ಪೂರ್ಣಗೊಳಿಸುವ ಬದ್ಧತೆಯನ್ನು ಶಾಸಕನ ನೆಲೆಯಲ್ಲಿ ತಾನು ಹೊಂದಿದ್ದೇನೆ.
– ರಘುಪತಿ ಭಟ್,ಶಾಸಕರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.