ಉಡುಪಿ ಜಿಲ್ಲೆಯಲ್ಲಿ ಪೂರ್ಣಕಾಲೀನ ಅಧಿಕಾರಿ ಒಬ್ಬರೇ
Team Udayavani, Jan 1, 2019, 4:36 AM IST
ಉಡುಪಿ: ಅನ್ನ ಸಂತರ್ಪಣೆ ನಡೆಯುವ ಎಲ್ಲ ದೇವಸ್ಥಾನಗಳಲ್ಲಿ ವಿಶೇಷವಾಗಿ ಅಡುಗೆ ಕೋಣೆಗಳಿಗೆ ಸಿಸಿಟಿವಿ ಅಳವಡಿಸಬೇಕು, ಪ್ರಸಾದ ವಿತರಣೆಗೆ ಮುನ್ನ ಆಹಾರ ಸುರಕ್ಷೆ ಬಗೆಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಸರಕಾರ ಸುತ್ತೋಲೆ ಹೊರಡಿಸಿದೆ. ಆದರೆ ಪರೀಕ್ಷೆ ನಡೆಸಬೇಕಿರುವ ಆಹಾರ ಸುರಕ್ಷಾ ಇಲಾಖೆಯ ಸಿಬಂದಿ ಸ್ಥಿತಿಗತಿ ಗಮನಿಸಿದರೆ ಇದರ ಕಾರ್ಯಸಾಧ್ಯತೆಯ ಬಗ್ಗೆ ಅನುಮಾನ ಮೂಡುತ್ತದೆ.
ಅಡುಗೆಯನ್ನು ಪರೀಕ್ಷೆ ಮಾಡಬೇಕು ಎಂದು ನಿರ್ದೇಶನ ನೀಡಿದಷ್ಟು ಸರಳವಾಗಿ ಇದರ ಜಾರಿ ಕಷ್ಟ. ಸರಕಾರವು ಆಹಾರ ಸುರಕ್ಷಾ ಇಲಾಖೆಗೆ ಈ ಜವಾಬ್ದಾರಿ ವಹಿಸಿದೆ. ಇದುವರೆಗೆ ಈ ಇಲಾಖೆಯ ಅಧಿಕಾರಿಗಳ ಕಾರ್ಯಭಾರ ಆಹಾರ ಮಾರಾಟ ಮಾಡುವವರ ಬಗ್ಗೆ ಮಾತ್ರ ಇತ್ತು. ಈಗ ಉಚಿತವಾಗಿ ಆಹಾರ ವಿತರಿಸುವ ದೇವಸ್ಥಾನಗಳಿಗೂ ಅಧಿಕಾರ ವಿಸ್ತರಣೆಯಾಗಿದೆ. ಈ ಇಲಾಖೆಯಲ್ಲಿ ಎಷ್ಟು ಸಿಬಂದಿ ಇದ್ದಾರೆ ಎಂದು ಗಮನಿಸಿದರೆ ಗಾಬರಿಯಾದೀತು. ಸುತ್ತೋಲೆ ಪ್ರಕಾರ ಊಟ ನಡೆಯುವಲ್ಲೆಲ್ಲ ಇವರು ಹೋಗಿ ಪರೀಕ್ಷಿಸಬೇಕು.
ಉಡುಪಿ ಜಿಲ್ಲೆಯಲ್ಲಿ, ಉಡುಪಿ ತಾಲೂಕಿನಲ್ಲಿ ಮಾತ್ರ ಒಬ್ಬ ಆಹಾರ ಸುರಕ್ಷಾಧಿಕಾರಿ ಇದ್ದಾರೆ. ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಿಗೆ ಆಹಾರ ಸುರಕ್ಷಾಧಿಕಾರಿಯ ಹೆಚ್ಚುವರಿ ಪ್ರಭಾರ ನೀಡಲಾಗಿದೆ. ಈ ಮೂವರಿಗೆ ಅಂಕಿತಾಧಿಕಾರಿಯಾಗಿ ಜಿಲ್ಲೆಗೆ ಒಬ್ಬರೇ ಜಿಲ್ಲಾ ಸರ್ವೇಕ್ಷಣಾಧಿಕಾರಿ ಇದ್ದಾರೆ. ಅದರಲ್ಲೂ ಇವರಿಗೆ ಅಂಕಿತಾಧಿಕಾರಿ ಪಟ್ಟ ಹೆಚ್ಚುವರಿ ಹೊಣೆ. ಇವರಿಗೆ ಚಾಲಕರು, ಅಟೆಂಡರ್ ಇತ್ಯಾದಿ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಇದು ಕೇವಲ ಉಡುಪಿ ಜಿಲ್ಲೆಯ ಕಥೆಯಲ್ಲ, ಇಡೀ ರಾಜ್ಯದ ಕಥೆಯೂ ಹೌದು.
ಒಟ್ಟು 893 ದೇಗುಲ
ಜಿಲ್ಲೆಯಲ್ಲಿ ಎ ಶ್ರೇಣಿಯ 25, ಬಿ ಶ್ರೇಣಿಯ 19, ಸಿ ಶ್ರೇಣಿಯ 759 ಸೇರಿ ಒಟ್ಟು 893 ದೇವಸ್ಥಾನಗಳಿವೆ. ಎ ಮತ್ತು ಬಿ ಶ್ರೇಣಿ ದೇವಸ್ಥಾನಗಳಲ್ಲಿ ಈಗಾಗಲೇ ಸಿಸಿಟಿವಿ ಇದೆ. ಆದರೆ ಕೆಲವು ದೇವಸ್ಥಾನಗಳ ಅಡುಗೆ ಕೋಣೆಗಳಿಗೆ ಸಿಸಿಟಿವಿ ಅಳವಡಿಸಿಲ್ಲ. ಅಲ್ಲೂ ಸಿಸಿಟಿವಿ ಅಳವಡಿಸಲು ದತ್ತಿ ಇಲಾಖೆ ಸಹಾಯಕ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ಕೊಲ್ಲೂರು, ಮಂದಾರ್ತಿ, ಪೆರ್ಡೂರು, ನೀಲಾವರ, ಮಾರಣಕಟ್ಟೆ, ಮುಂಡ್ಕೂರು ಸಹಿತ ಜಿಲ್ಲೆಯ 9 ದೇವಸ್ಥಾನಗಳಲ್ಲಿ ನಿತ್ಯ ಅನ್ನಸಂತರ್ಪಣೆ ಇದೆ. ಖಾಸಗಿ ವಲಯದಲ್ಲಿರುವ ಶ್ರೀಕೃಷ್ಣ ಮಠ, ಆನೆಗುಡ್ಡೆ, ಸಾಲಿಗ್ರಾಮ ಮೊದಲಾದ ದೇವಸ್ಥಾನ ಗಳಲ್ಲಿಯೂ ಅನ್ನಸಂತರ್ಪಣೆ ಇದೆ. ಪ್ರಸ್ತುತ ದತ್ತಿ ಇಲಾಖೆಯ ಅಧಿಕಾರಿಗಳು ಖಾಸಗಿ ದೇವಸ್ಥಾನಗಳಿಗೆ ಸುತ್ತೋಲೆ ನೀಡಿಲ್ಲ. ಘಟ್ಟದ ಪ್ರದೇಶಗಳಲ್ಲಿ ಭಕ್ತರು ಹೊರಗೆ ಪ್ರಸಾದ ತಯಾರಿಸಿ ದೇವಸ್ಥಾನಗಳಲ್ಲಿ ತಂದು ವಿತರಣೆ ಮಾಡುವ ಕ್ರಮದಂತೆ ಕರಾವಳಿ ಜಿಲ್ಲೆಗಳಲ್ಲಿ ಇಲ್ಲದಿದ್ದರೂ ಮುಂಜಾಗ್ರತೆಯ ಭಾಗ ವಾಗಿ ಇಂತಹ ಸಂದರ್ಭ ಪೂರ್ವಾನುಮತಿ ಪಡೆಯಬೇಕೆಂದೂ ತಿಳಿಸಲಾಗಿದೆ.
ಕಾನೂನು ವ್ಯಾಪ್ತಿಗೆ ತರುವ ಮಾರ್ಗ
ಅನ್ನ ದಾಸೋಹ ನಡೆಸುವ ದೇವಸ್ಥಾನಗಳು 100 ರೂ. ಕೊಟ್ಟು ನೋಂದಣಿ ಮಾಡಿಸಿ ಕೊಳ್ಳಬೇಕು ಅಥವಾ 1,500 ರೂ.ನಿಂದ ವಿವಿಧ ದರ್ಜೆಯ ಶುಲ್ಕ ನೀಡಿ ಪರವಾನಿಗೆ ಪಡೆದುಕೊಳ್ಳಬೇಕೆಂದಿದೆ. ಇದು ದೇವಸ್ಥಾನ ಗಳನ್ನು ಸರಕಾರ ತನ್ನ ಕಾನೂನಿನ ವ್ಯಾಪ್ತಿಗೆ ತರುವ ಕ್ರಮವಾಗಿದೆ.
ನೈವೇದ್ಯವನ್ನೂ ಪರೀಕ್ಷಿಸಿ!
ದೇವರ ನೈವೇದ್ಯವನ್ನೂ ಪರೀಕ್ಷಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.
ದೇವಸ್ಥಾನಗಳಲ್ಲಿ ವಿತರಿಸುವ ಆಹಾರಗಳ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು ಎಲ್ಲ ದೇವಸ್ಥಾನಗಳಿಗೆ ಸೂಚನೆ ನೀಡಲಾಗಿದೆ.
ಪ್ರಶಾಂತ್ ಶೆಟ್ಟಿ, ತಹಶೀಲ್ದಾರ್, ಧಾರ್ಮಿಕ ದತ್ತಿ ಇಲಾಖೆ, ಉಡುಪಿ.
ಎಲ್ಲ ಮುಜರಾಯಿ ಇಲಾಖೆಯ ದೇವಸ್ಥಾನಗಳ ಪ್ರತಿನಿಧಿಗಳಿಗೆ ಆಹಾರ ಸುರಕ್ಷೆ ಕುರಿತು ಕಾರ್ಯಾಗಾರ ಮಾಡಲಾಗುವುದು. ಕಾರ್ಯಾಗಾರದಲ್ಲಿ ಆಹಾರ ಸುರಕ್ಷೆ ಕುರಿತು ತಿಳಿಸಲಾಗುವುದು.
ಡಾ| ವಾಸುದೇವ್, ಆಹಾರ ಸುರಕ್ಷಾ ಅಂಕಿತಾಧಿಕಾರಿ, ಉಡುಪಿ ಜಿಲ್ಲೆ.
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.