ಸಾಂತೂರು: ನೇತ್ರ ತಪಾಸಣೆ, ಆಯುಷ್ಮಾನ್ ಭಾರತ್ ಮಾಹಿತಿ
Team Udayavani, Oct 15, 2019, 5:28 AM IST
ಪಡುಬಿದ್ರಿ: ಪ್ರಸಾದ್ ನೇತ್ರಾಲಯ, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ( ಅಂದತ್ವ ವಿಭಾಗ) ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮುದರಂಗಡಿ, ಗ್ರಾ. ಪಂ. ಮುದರಂಗಡಿ ಹಾಗೂ ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ, ಮತ್ತು ಸಾಂತೂರು, ಪಿಲಾರು ಗ್ರಾಮಸ್ಥರ ಸಹಯೋಗದಲ್ಲಿ ಒಂದು ದಿನದ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ, ಮಸೂರ ಅಳವಡಿಕೆ, ಉಚಿತ ಆರೋಗ್ಯ ತಪಾಸಣಾ ಹಾಗೂ ಆಯುಷ್ಮಾನ್ ಭಾರತ್- ಕರ್ನಾಟಕ ಆರೋಗ್ಯ ಮಾಹಿತಿ ಶಿಬಿರವು ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರದಂದು ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಸಾಂತೂರು ಶ್ರೀ ದೇಗುಲದ ಅರ್ಚಕ ವೇ| ಮೂ| ವಿಟuಲ ಜೋಯಿಸ ಅವರು ಮಾತನಾಡಿ ಇಂದು ಸಾಂತೂರಿನ ಜನತೆಗೆ ಸಂತಸದ ದಿನವಾಗಿದ್ದು ಗ್ರಾಮಸ್ಥರು ಅವಶ್ಯವಾಗಿ ಇಂತಹಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.
ಮುಖ್ಯಅತಿಥಿ ಮುದರಂಗಡಿ ಪ್ರಾ. ಆ. ಕೇಂದ್ರದ ವೈದ್ಯಾಧಿಕಾರಿ ಡಾ | ಸುಬ್ರಹ್ಮಣ್ಯ ಅವರು ಇಂದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ರಕ್ತದೊತ್ತಡ ಹಾಗೂ ಡಯಾಬಿಟಿಸ್ ಕುರಿತಾಗಿ 30ವರ್ಷ ಪ್ರಾಯದ ನಂತರದಲ್ಲಿ ಆಗಾಗ್ಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತಿರಬೇಕು. ಜನೌಷಧ ಕೇಂದ್ರಗಳಿಂದ ತಮಗೆ ಬೇಕಾದ ಔಷಧಗಳನ್ನು ಕಡಿಮೆ ಬೆಲೆಗೆ ಪಡೆದುಕೊಳ್ಳಬಹುದೆಂದರು.
ವೇದಿಕೆಯಲ್ಲಿ ಮುದರಂಗಡಿ ಗ್ರಾ. ಪಂ. ಮಾಜಿ ಅಧ್ಯಕ್ಷ ರವೀಂದ್ರ ಪ್ರಭು, ಸಾಂತೂರು ಶ್ರೀ ದೇವಸ್ಥಾನದ ಅರ್ಚಕ ಅನಂತ ತಂತ್ರಿ, ಗ್ರಾ.ಪಂ. ಸದಸ್ಯ ಬಾಲಚಂದ್ರ ಶೆಟ್ಟಿ, ದಯಾನಂದ ಹೆಗ್ಡೆ, ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ| ಜೆಫ್ರಿ ಉಪಸ್ಥಿತರಿದ್ದರು. ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕಿ ಕೃತಿ ಸ್ವಾಗತಿಸಿದರು. ಉಡುಪಿ ಜಿಲ್ಲಾಸ್ಪತ್ರೆಯ ಮನು ಎಸ್. ಬಿ. ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಶಿಬಿರದಲ್ಲಿ ತಪಾಸಣೆಗೊಳಗಾಗಿದ್ದ 36ಮಂದಿಯನ್ನು ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಆಯ್ಕಮಾಡಲಾಗಿದ್ದು ಅ. 22ರಂದು ಇದು ನಡೆಯಲಿದೆ. 20 ಬಿಪಿ, 20ಡಯಾಬಿಟಿಸ್ ಬಾಧಿತರನ್ನು ಗುರುತಿಸಿ ಚಿಕಿತ್ಸೆಗೆ ಆರಂಭಿಸಲಾಗಿದೆ. 20ಮಂದಿಗೆ ಕನ್ನಡಕಗಳನ್ನು ನೀಡಲಾಗುವುದೆಂದು ಪ್ರಾಯೋಜಕರು ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ್ – ಕರ್ನಾಟಕ ಆರೋಗ್ಯ ಮಾಹಿತಿ
ಆರೋಗ್ಯವನ್ನು ಎಲ್ಲರೂ ಬಯಸುತ್ತಾರೆ. ಆದರೆ ಸರಕಾರಿ ಆಸ್ಪತ್ರೆಗಳನ್ನು ದೂರವಿಟ್ಟು ಆರ್ಥಿಕತೆಯ ಅಡಕತ್ತರಿಯಲ್ಲಿ ಸಿಲುಕಿಕೊಳ್ಳುವ ಮೊದಲು ಜನತೆ ಆಯುಷ್ಮಾನ್ ಭಾರತ್ – ಕರ್ನಾಟಕ ಆರೋಗ್ಯ ಯೋಜನೆಯ ಮಾಹಿತಿಯನ್ನು ಅವಶ್ಯ ಪಡೆದುಕೊಳ್ಳಬೇಕಿದೆ. ನೇರವಾಗಿ ಖಾಸಗಿ ವಲಯದ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವ ಮೊದಲಿಗೆ ಯೋಜನೆಯ ಅರಿವು ನಮಗೆ ಎಲ್ಲರಿಗೂ ಇರಬೇಕು. ಬಿಪಿಎಲ್ ಕಾರ್ಡುದಾರರಿಗೆ 5ಲಕ್ಷ ರೂ. ಹಾಗೂಎಪಿಎಲ್ ಕಾರ್ಡುದಾರರಿಗೆ 1.5ಲಕ್ಷ ರೂ. ಗಳ ಉಚಿತ ಚಿಕಿತ್ಸಾ ಸೌಲಭ್ಯ ಲಭ್ಯವಿದ್ದು ಮುಖ್ಯವಾಗಿ ಅವರವರ ಆಧಾರ್ ಕಾರ್ಡ್ ಕುಟುಂಬದ ಪಡಿತರ ಚೀಟಯೊಂದಿಗೆ ಲಿಂಕ್ ಆಗಿರುವುದು ಅತ್ಯಾವಶ್ಯಕವಾಗಿದೆ. ಯಾವುದೇ ವ್ಯಕ್ತಿ ಅಥವಾ ಮಹಿಳೆಯು ತನ್ನ ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಹಂತದ ಆರೋಗ್ಯ ಸಮಸ್ಯೆಗಳ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರ, ತಾ | ಆಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಗೆ ದಾಖಲಾಗಿ ಪರೀಕ್ಷಣೆಗೊಳಗಾಗಬೇಕು. ಚಿಕಿತ್ಸೆ ಖಾಸಗಿ ವಲಯದ ಆಸ್ಪತ್ರೆಗಳಲ್ಲಿ ಮುಂದುವರಿಸಬೇಕಾದಲ್ಲಿ ಸರಕಾರಿ ಆಸ್ಪತ್ರೆಯ ಸೂಚನಾಪತ್ರದ ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೂ ಆಯುಷ್ಮಾನ್ ಭಾರತ್ – ಕರ್ನಾಟಕ ಆರೋಗ್ಯ ಯೋಜನೆಯಡಿ ಚಿಕಿತ್ಸಾ ವೆಚ್ಚವನ್ನು ಭರಿಸಬಹುದಾಗಿದೆ. ಯಾವುದೇ ಹಂತದಲ್ಲೂ ಈ ಯೋಜನೆಯಲ್ಲಿ ಹಣದ ಮರು ಹೊಂದಾಣಿಕೆಯಂತೂ ಖಂಡಿತಾ ಇಲ್ಲ ಎಂಬುದಾಗಿ ಯೋಜನೆಯ ಸವಿವರವಾದ ಮಾಹಿತಿಯನ್ನಿತ್ತ ಉಡುಪಿ ಜಿಲ್ಲಾ ಆಸ್ಪತ್ರೆಯ ಆಯಷ್ಮಾನ್ ಭಾರತ್ ಯೋಜನಾ ಸಂಚಾಲಕ ಜಗನ್ನಾಥ್ ಗ್ರಾಮಸ್ಥರಿಗೆ ವಿವರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.