ಒತ್ತಿನೆಣೆ: ಮತ್ತೆ ಕುಸಿತ; ಸಂಚಾರ ಅಸ್ತವ್ಯಸ್ತ
Team Udayavani, Jun 12, 2017, 2:13 PM IST
ಬೈಂದೂರು: ಬೈಂದೂರು ಸಮೀಪದ ಒತ್ತಿನೆಣೆಯಲ್ಲಿ ರವಿವಾರ ಮತ್ತೆ ಗುಡ್ಡ ಜರಿದು ರಾಷ್ಟ್ರೀಯ ಹೆದ್ದಾರಿಯ ಮೇಲೆ ಬಿದ್ದ ಕಾರಣ ಐದು ಗಂಟೆಗೂ ಅಧಿಕ ಕಾಲ ವಾಹನಗಳ ಸಂಚಾರಕ್ಕೆ ತಡೆ ಉಂಟಾಯಿತು.
ಬುಧವಾರ ಬೆಳಗ್ಗೆ ಗುಡ್ಡ ಕುಸಿದು ರಸ್ತೆ ತಡೆ ಉಂಟಾಗಿತ್ತು. ರವಿವಾರ ಬೆಳಗ್ಗೆ ಘಟನೆ ಮರುಕಳಿಸಿದೆ. ಕಳೆದೆರಡು ದಿನ ಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರವಿವಾರ ಮುಂಜಾನೆ ನಾಲ್ಕು ಗಂಟೆಯ ವೇಳೆಗೆ ಮಣ್ಣು ಕುಸಿತ ಸಂಭವಿಸಿತು. ಇದರಿಂದಾಗಿ ಹೆದ್ದಾರಿಯಲ್ಲಿ ಮಣ್ಣು ಶೇಖರಣೆಗೊಂಡಿತು. ದೊಂಬೆ ಹಾಗೂ ಮಧ್ದೋಡಿ ರಸ್ತೆಯ ಮೂಲಕ ವಾಹನ ಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು.
ಮುನ್ನೆಚ್ಚರಿಕೆ ಕೊರತೆ
ಒತ್ತಿನೆಣೆ ಭಾಗದಲ್ಲಿ ಜೂನ್ 7ರಂದು ಗುಡ್ಡ ಕುಸಿತ ಉಂಟಾಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಕುಂದಾಪುರ ಉಪವಿಭಾಗಾಧಿಕಾರಿ ಸೂಕ್ತ ಮುನ್ನೆಚ್ಚರಿಕೆಯ ಜತೆಗೆ ಶೀಘ್ರ ಬದಲಿ ಮಾರ್ಗದ ವ್ಯವಸ್ಥೆ ಸಿದ್ಧತೆ ಮಾಡಿ ಕೊಳ್ಳುವುದಾಗಿ ತಿಳಿಸಿದ್ದರು. ಹಾಗೆಯೇ ಯಾವುದೇ ಕಾರಣಕ್ಕೂ ರಸ್ತೆ ತಡೆ ಉಂಟಾಗಬಾರದು ಎಂದು ಕಾಮಗಾರಿ ನಡೆಸುವ ಕಂಪೆನಿ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಕೇವಲ ಎರಡು ದಿನಗಳ ಅಂತರದಲ್ಲಿ ಮತ್ತೆ ಗುಡ್ಡ ಕುಸಿದಿದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಭಯದಿಂದ ಪ್ರಯಾಣಿಸುವಂತಾಗಿದೆ. ಈಗಾಗಲೇ ಗುಡ್ಡದ ಬಹುತೇಕ ಭಾಗ ಕುಸಿದಿದೆ. ಇನ್ನಷ್ಟು ಗುಡ್ಡದ ಮೇಲ್ಭಾಗ ಕುಸಿಯುವ ಭೀತಿಯಿದೆ. ಇದುವರೆಗೆ ಕರಾವಳಿ ರಸ್ತೆ ಮತ್ತು ಮಧ್ದೋಡಿ ಪರ್ಯಾಯ ರಸ್ತೆ ನಿರ್ಮಾಣವಾಗದಿರುವುದರಿಂದ ಬಹುತೇಕ ವಾಹನಗಳು ಅಪಾಯಕಾರಿ ಗುಡ್ಡದ ರಸ್ತೆಯಲ್ಲೇ ನಿಧಾನಕ್ಕೆ ಸಾಗುತ್ತಿವೆ.
ರವಿವಾರವಾದ್ದರಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಕಡಿಮೆ ಇತ್ತು. ಪರಿಸ್ಥಿತಿ ಗಂಭೀರವಾಗಿದ್ದರೂ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಬೈಂದೂರಿಗೆ ಆಗಮಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಬೈಂದೂರಿನಲ್ಲಿ ಅಧಿಕಾರಿಗಳ ಜತೆ ಸಾರ್ವಜನಿಕ ಸಭೆ ಕರೆದು ಒತ್ತಿನೆಣೆ ಕುರಿತು ಜಿಲ್ಲಾಡಳಿತ ಸಮರ್ಪಕ ನಿರ್ಧಾರ ಕೈಗೊಳ್ಳಬೇಕು ಎಂದು ಜನತೆ ಆಗ್ರಹಿಸಿದ್ದಾರೆ.
ಅಧಿಕಾರಿಗಳಿಗೆ ತರಾಟೆ
ಕುಸಿತ ಸಂಭವಿಸಿದ ಸ್ಥಳಕ್ಕೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಒಂದೊಮ್ಮೆ ಪ್ರಾಣಾಪಾಯ ಸಂಭವಿಸಿದರೆ ಇಲಾಖೆಯೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರಕಾರದ ವ್ಯಾಪ್ತಿಗೆ ಒಳಪಡುತ್ತದೆ. ಸಂಸದರಿಗೆ ಹೆಚ್ಚಿನ ಜವಾಬ್ದಾರಿಗಳಿವೆ. ಈಗಾಗಲೇ ಜಿಲ್ಲಾಧಿಕಾರಿ ಜತೆ ಮಾತನಾಡಿದ್ದೇನೆ. ಜನರಿಗೆ ತೊಂದರೆಯಾಗದ ರೀತಿಯಲ್ಲಿ ಸೂಕ್ತ ಮುಂಜಾಗ್ರತೆ ವಹಿಸಿ ಕಾಮಗಾರಿ ನಡೆಸಬೇಕು ಮತ್ತು ಮಳೆಗಾಲದಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸುವುದಾಗಿ ಮತ್ತು ಒತ್ತಿನೆಣೆ ಅವ್ಯವಸ್ಥೆ ಕುರಿತು ಸದನದಲ್ಲಿ ಗಮನಕ್ಕೆ ತರುವುದಾಗಿ ತಿಳಿಸಿದರು.
ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ವೃತ್ತ ನಿರೀಕ್ಷಕ ರಾಘವ ಪಡೀಲ್, ಬೈಂದೂರು ಠಾಣಾಧಿಕಾರಿ ಸಂತೋಷ ಆನಂದ ಕಾಯ್ಕಿಣಿ, ಐಆರ್‌ಬಿ ಪ್ರಾಜೆಕ್ಟ್ ಮ್ಯಾನೇಜರ್ ಯೋಗೇಂದ್ರಪ್ಪ, ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ ಗೌರಯ್ಯ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.