Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ
ಪಲಿಮಾರು-ಅವರಾಲು ಮಟ್ಟು ಗ್ರಾಮದ ದಂಪತಿ ಕಷ್ಟಕ್ಕೆ ತಹಶೀಲ್ದಾರ್ ಸಾಂತ್ವನ
Team Udayavani, Dec 28, 2024, 4:38 PM IST
ಪಡುಬಿದ್ರಿ: ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅವರಾಲು ಮಟ್ಟು ಗ್ರಾಮದ ವೃದ್ಧ ದಂಪತಿ ತಮ್ಮ ಮನೆಗೆ ಹೋಗಲು ಹೊಳೆಯೊಳಗಿನ ಶಿಥಿಲ ಕಾಲು ಸಂಕದಲ್ಲೇ ಸಾಗಬೇಕಾದ ಸಂಕಷ್ಟವನ್ನು ಸ್ವತಃ ಪರಿಶೀಲಿಸಿದ ತಹಶೀಲ್ದಾರ್ ಪ್ರತಿಭಾ ಆರ್. ಅವರು ಹೊಸ ಸುರಕ್ಷಿತ ಕಾಲು ಸಂಕ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.
ಗ್ರಾಮ ಒನ್ ಸೆಂಟರ್ ನಡೆಸುತ್ತಿರುವ ಇಸ್ಮಾಯಿಲ್ ಪಲಿಮಾರು ಅವರು ಅವರಾಲು ಮಟ್ಟು ಹೊಳೆಯಲ್ಲಿನ ಮುರಿದು ಬೀಳುವಂತಿರುವ ಸಂಕ ಮತ್ತು ಗ್ರಾಮದ ಭೋಜ ಸಾಲ್ಯಾನ್ (74 ವರ್ಷ) ಮತ್ತು ವಸಂತಿ (70 ವರ್ಷ) ದಂಪತಿ ಕಷ್ಟಪಟ್ಟು ಓಡಾಡುವ ಬಗ್ಗೆ ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದರು. ಶುಕ್ರವಾರ ತಹಶೀಲ್ದಾರ್ ಅವರು ಕಾಲು ಸಂಕವನ್ನು ದಾಟಿ ಮನೆಗೆ ಹೋಗಿ ಅಹವಾಲು ಸ್ವೀಕರಿಸಿದರು.
ವೃದ್ಧ ದಂಪತಿಯ ಗೋಳು
ಭೋಜ ಸಾಲ್ಯಾನ್ ಮತ್ತು ವಸಂತಿ ದಂಪತಿ ತಮ್ಮ ದಿನನಿತ್ಯದ ಕೆಲಸಗಳಿಗೆ ಹೊರಗೆ ಬರಬೇಕೆಂದರೆ ಈ ಶಿಥಿಲ ಕಾಲು ಸಂಕವನ್ನೇ ಅವಲಂಬಿಸಬೇಕು. ಅದು ಅಲ್ಲಾಡುತ್ತಾ ಇನ್ನೇನು ಮುರಿದುಬೀಳುವಂತಿದೆ. ಮರದ ಸಣ್ಣ ಹಲಗೆಯ ಮೇಲೆ ಜೀವ ಕೈಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ.
ಮುರುಕಲು ಸಂಕ
ಇಲ್ಲಿ ಹಳೆಯದಾದ ಸಣ್ಣ ಹಲಗೆಯ ರೀತಿಯ ಸಂಕ ಇದೆ. ಅದೂ ಮುರಿದಿದೆ. ನನಗೂ ನನ್ನ ಗಂಡನಿಗೂ ವಯಸ್ಸಾಗಿದೆ. ಆರೋಗ್ಯ ಸರಿ ಇಲ್ಲ, ಅವರಿಗಂತೂ ಇದರ ಮೂಲಕ ಆಚೆ ಬದಿಗೆ ಹೋಗಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಇದ್ದ ಒಬ್ಬ ಮಗಳಿಗೆ ಮದುವೆ ಮಾಡಿ ಕೊಟ್ಟಿದ್ದು ಗಂಡು ಮಕ್ಕಳಿಲ್ಲ. ಜೀವನವೇ ದುಸ್ತರವಾಗಿದೆ. ದಿನಸಿ, ಔಷಧ ತರಲು ನಾನೇ ಈ ಮುರುಕಲು ಸಂಕದ ಮೂಲಕ ಭಯದಿಂದಲೇ ಹೋಗಬೇಕು ಎಂದು ವಸಂತಿ ಕಷ್ಟ ಹೇಳಿಕೊಂಡರು.
ತಹಶೀಲ್ದಾರ್ ಅವರ ಜತೆಗೆ ಪಲಿಮಾರು ಗ್ರಾ.ಪಂ. ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಸದಸ್ಯರಾದ ಜಯಂತಿ, ಸತೀಶ್ ದೇವಾಡಿಗ, ಯೋಗಾನಂದ ಕೂಡ ಮನೆಗೆ ತೆರಳಿದ್ದರು.
ಹೊಸ ಕಾಲು ಸಂಕ ನಿರ್ಮಾಣ
ವಸಂತಿ, ಭೋಜ ಸಾಲ್ಯಾನ್ ವೃದ್ಧ ದಂಪತಿಯ ಪರಿಸ್ಥಿತಿ ನಿಜಕ್ಕೂ ಕಷ್ಟಕರವಾಗಿದೆ. ಮಳೆಗಾಲದಲ್ಲಿ ನೆರೆ ಆವರಿಸುತ್ತದೆ. ಪಕ್ಕದಲ್ಲೇ ಇರುವ ಇನ್ನೊಂದು ಮನೆಯವರು ಕಷ್ಟ ಸಹಿಸಲಾಗದೆ ಈಗಾಗಲೇ ಸ್ವಂತ ಮನೆ ತೊರೆದು ಬೇರೆ ಕಡೆಗೆ ಹೋಗಿದ್ದಾರೆ. ನಾನೂ ಸ್ವತಃ ಈ ಹಲಗೆಯ ಮೇಲೆ ನಡೆದುಕೊಂಡು ಬಂದು ಪರಿಶೀಲಿಸಿದ್ದೇನೆ. ಇಲ್ಲಿ ಇಲಾಖೆ ಮತ್ತು ದಾನಿಗಳ ನೆರವಿನಿಂದ ಹೊಸ ಕಾಲು ಸಂಕ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ.
-ಡಾ| ಪ್ರತಿಭಾ ಆರ್., ತಹಶೀಲ್ದಾರ್, ಕಾಪು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.