ಪಡುಬಿದ್ರಿ ಸಹಕಾರಿ ಸಂಘ ಮಾದರಿ: ಶಾಸಕ ಸೊರಕೆ
Team Udayavani, Aug 29, 2017, 8:55 AM IST
ಪಡುಬಿದ್ರಿ: ಸಹಕಾರ ರಂಗದ ಜತೆಗೆ ಗ್ರಾಮಾಭ್ಯುದಯದಲ್ಲೂ ತೊಡಗಿಕೊಂಡಿರುವ ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸಂಘವು ಇತರೆಲ್ಲಾ ಸಹಕಾರ ಸಂಘಗಳಿಗೆ ಮಾದರಿಯಾಗಿದೆ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಅವರು ಸೋಮವಾರ ತೆಂಕ ಎರ್ಮಾಳಿನ ಕಮಲ ಲಕ್ಷ್ಮಣ ಟವರ್‌ನಲ್ಲಿನ ಪಡುಬಿದ್ರಿ ಸಹಕಾರಿ ವ್ಯಾವಸಾಯಿಕ ಸಂಘದ ಪೂರ್ಣ ಹವಾನಿಯಂತ್ರಿತ ಎರ್ಮಾಳು ಶಾಖೆಯ ಸ್ಥಳಾಂತರ ಸಮಾರಂಭವನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಬಂಗಾರದ ಸಂಘ’
ಸಂಘದ ಸೇಫ್ ಲಾಕರನ್ನು ಉದ್ಘಾಟಿಸಿ ಪ್ರಥಮ ಗ್ರಾಹಕ ವೈ. ಜಯಕರ್ ಅವರಿಗೆ ಕೀಲಿ ಕೈ ಹಸ್ತಾಂತರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಅವರು, ಪಡುಬಿದ್ರಿ ಸಹಕಾರಿ ವ್ಯಾವಸಾಯಿಕ ಸಂಘವು “ಬಂಗಾರದ ಸಂಘ’. ಭದ್ರ ಸಹಕಾರಿ ಬುನಾದಿಯೊಂದಿಗೆ ಮುಂದುವರಿದಿದೆ. ಸರಕಾರದ ಶುದ್ಧ ಕುಡಿಯುವ ನೀರಿನ ಯೋಜನೆಯಲ್ಲೂ ಕೈಜೋಡಿಸಿದೆ. ಸಂಘದ ನೂತನ ಶಾಖೆಯ ಹವಾನಿಯಂತ್ರಣ ಸೌಲಭ್ಯ ಹಾಗೂ ಲಾಕರ್ ಸೌಲಭ್ಯ ಬಳಸಿಕೊಳ್ಳುವ ನಮ್ಮ ಸಹಕಾರಿ ಮಹಿಳಾ ಬಂಧುಗಳಿಗೆ ಅನುಕೂಲವಾಗುವಂತಹ ಪ್ರಸಾಧನ ಸಾಮಗ್ರಿಗಳೊಂದಿಗಿನ “ಮೇಕಪ್ ಕೊಠಡಿ’ಗೂ ಕೇಂದ್ರ ಸಹಕಾರಿ ಬ್ಯಾಂಕ್ ಮೂಲಕ ವೆಚ್ಚವನ್ನು ಭರಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿದ್ದ ಮಾಜಿ ಶಾಸಕ ಲಾಲಾಜಿ ಮೆಂಡನ್, ಉಡುಪಿ ಜಿ.ಪಂ. ಕೃಷಿ ಹಾಗೂ ಕೈಗಾರಿಕಾ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಠೇವಣಿ ಪತ್ರವನ್ನು ಬಿಡುಗಡೆಗೊಳಿಸಿದ ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉಡುಪಿಯ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಕರ್ಜೆ, ಉಡುಪಿ ಜಿಲ್ಲೆಯ ಸಹಕಾರಿ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್, ಉದ್ಯಮಿ ಶೇಖರ್ ಕೆ. ಕರ್ಕೇರ ಮಾತನಾಡಿದರು.
ವೇದಿಕೆಯಲ್ಲಿ ತಾ.ಪಂ. ಸದಸ್ಯ ಕೇಶವ ಮೊಲಿ, ತೆಂಕ ಗ್ರಾ.ಪಂ. ಅಧ್ಯಕ್ಷೆ ಅರುಣಾ ಕುಮಾರಿ, ಕಮಲ ಲಕ್ಷ್ಮಣ
ಟವರ್ ಮಾಲಕ ವೈ. ದಾಮೋದರ್, ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸಂಘದ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ಸಂಘದ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮಾನ
ಈ ಸಂದರ್ಭದಲ್ಲಿ ಬೆಸ್ಟ್ ಚೇರ್‌ಮನ್ ಪ್ರಶಸ್ತಿಗೆ ಪಾತ್ರರಾಗಿರುವ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಪಡುಬಿದ್ರಿ ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಎರ್ಮಾಳಿನ ಅಂತಾರಾಷ್ಟ್ರೀಯ ಕರಾಟೆ ಪ್ರತಿಭೆ ಚೈತ್ರಾ ಅವರನ್ನೂ ಗೌರವಿಸಲಾಯಿತು. ಸಂಘದ ಮೂವರು ಸದಸ್ಯರ ವೈದ್ಯಕೀಯ ನೆರವಿಗಾಗಿ ಸಹಾಯಧನ ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಪ್ರಸ್ತಾವನೆಗೈದು, ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸಂಘವು 77 ಕೋಟಿ ರೂ. ಠೇವಣಿಯೊಂದಿಗೆ 1.30 ಕೋಟಿ ರೂ. ಲಾಭ ಗಳಿಸಿದೆ. ಶೇ. 25 ಪಾಲು ಮುನಾಫೆಯನ್ನು ಸತತ 12 ವರ್ಷಗಳಿಂದಲೂ ನೀಡುತ್ತಾ ಬಂದಿದೆ ಎಂದು ಹೇಳಿದರು. ನಿಶ್ಮಿತಾ ಕಾರ್ಯಕ್ರಮ ನಿರ್ವಹಿಸಿದರು.
ಕೇಂದ್ರ ಸರಕಾರದಿಂದ ರೈತರ ಸಾಲ ಮನ್ನಾ ಮಾಡಿಸಿ: ಸೊರಕೆ
ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರವು ರಾಜ್ಯದ 22 ಲಕ್ಷ ರೈತರ 8,164 ಕೋಟಿ ರೂ. ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಮಾಡಿರುವಂತೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ರೈತರು ಸಾಲ ಮಾಡಿದ್ದಿದೆ. ಅದನ್ನು ಮಾಜಿ ಶಾಸಕ ಲಾಲಾಜಿ ಮೆಂಡನ್ ಹಾಗೂ ಜಿ.ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ ಅವರು ತಮ್ಮ ನಾಯಕರ ಮೂಲಕ ಕೇಂದ್ರದ ಮೇಲೆ ಪ್ರಭಾವ ಬಳಸಿ ಕೇಂದ್ರ ಸರಕಾರದಿಂದ ಮನ್ನಾ ಮಾಡಿಸಬೇಕೆಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.