![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Mar 18, 2018, 8:00 AM IST
ಪಡುಬಿದ್ರಿ: ಎಲ್ಲೆಡೆಯೂ ಅಂತರ್ಜಲ ಮಟ್ಟ ಪಾತಾಳ ಕ್ಕಿಳಿದಿದ್ದು ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರದ ಯತ್ನಗಳೂ ಮುಂದುವರಿದಿವೆ. ಆದರೆ ಇದರಲ್ಲಿ ಉತ್ತಮ ಫಲಿತಾಂಶವನ್ನು ಕಂಡಿಲ್ಲ. ಪಶ್ಚಿಮ ವಾಹಿನಿ ಯೋಜನೆ ಈ ನಿಟ್ಟಿನಲ್ಲಿ ಉತ್ತಮ ಪ್ರಯತ್ನವಾಗಿದ್ದರೂ ಯೋಜನೆಯ ಕಾರ್ಯಾನುಷ್ಠಾನದಲ್ಲಿ ಸರಕಾರ ಈಗಷ್ಟೇ ಎಚ್ಚೆತ್ತುಕೊಂಡಿದೆ.
ಸುಲಭೋಪಾಯವಾಗಿ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವುದು ಅಷ್ಟೇ ಅಗತ್ಯ, ಪಡುಬಿದ್ರಿಗೂ ಇಂತಹ ಅಣೆಕಟ್ಟುಗಳ ಆವಶ್ಯಕತೆ ಬಹಳಷ್ಟಿದೆ.
ಮಳೆಯ ನೀರನ್ನೇ ಬಳಸಿ ಹಿಂದಿನ ರೈತರು ಬೇಸಾಯವನ್ನು ನೂರಕ್ಕೆ ನೂರು ಮಾಡುತ್ತಿದ್ದರು. ಆಗ ಸಣ್ಣಪುಟ್ಟ ತೋಡುಗಳಲ್ಲಿ ಹರಿಯುವ ಮಳೆನೀರು ಪೋಲಾಗಲು ಬಿಡುತ್ತಿರಲಿಲ್ಲ. ಈಗ ಬೇಸಾಯದ ಶೇಕಡಾವಾರು ಪ್ರಮಾಣವೂ ಇಳಿಕೆಯಾಗಿದ್ದು, ಮಳೆ ನೀರು ತೋಡುಗಳ ಮೂಲಕ ಹರಿದು ಸಮುದ್ರವನ್ನು ಸೇರುವಂತಾಗಿದೆ. ಒಡ್ಡುಗಳನ್ನು ಕಟ್ಟುತ್ತಿದ್ದ ರೈತರು ಈಗ ಅವುಗಳ ಸಹವಾಸಕ್ಕೆ ಹೋಗುತ್ತಲೇ ಇಲ್ಲ. ಇವಕ್ಕೆ ಮತ್ತೂಂದು ಪ್ರಮುಖ ಕಾರಣವೆಂದರೆ, ಪಡುಬಿದ್ರಿಯಲ್ಲೂ ಕೊಳಚೆ ನೀರು ಮಳೆ ನೀರಿನ ತೋಡಿನಲ್ಲೇ ಹರಿಯುತ್ತಿದೆ.
ರೈತ ಮತ್ತೆ ತನ್ನ ಗದ್ದೆಯಲ್ಲಿ ಮೂರು ಬೆಳೆಗಳನ್ನು ಬೆಳೆಯುವಂತಾಗಲು ಅನುಕೂಲತೆ ಕಲ್ಪಿಸುವಲ್ಲಿ ಸರಕಾರ ಮತ್ತು ಕ್ಷೇತ್ರ ಶಾಸಕರ ಆದ್ಯತೆಯೂ ಇರಬೇಕು. ಹಾಗಾಗಿ ಎರ್ಮಾಳು ಅಳಿವೆಕೋಡಿ, ಪಡುಬಿದ್ರಿ ಕಲ್ಲಟ್ಟೆ ಹಾಗೂ ಪಡುಹಿತ್ಲು ಜಾರಂದಾಯ ದೈವಸ್ಥಾನದ ಬಳಿಯ ಭಾಗ ಗಳಲ್ಲಿ ಅಗತ್ಯವಾಗಿ ಮೂರು ಕಿಂಡಿ ಅಣೆಕಟ್ಟುಗಳ ನಿರ್ಮಾಣವಾಗಬೇಕಿದೆ. ಇವುಗಳನ್ನು ನಿರ್ಮಿಸಿದಾಗ ಸಮುದ್ರದ ಉಪ್ಪು ನೀರು ಬೇಸಾಯದ ಗದ್ದೆಗಳಿಗೆ ಬರುವುದನ್ನು ತಡೆಯಬಹುದಾಗಿದೆ. ರೈತರಿಗೆ ಮೂರು ಬೆಳೆಗಳನ್ನು ಬೆಳೆಯಲೂ ಅವಕಾಶವಾಗುತ್ತದೆ. ಮುಖ್ಯವಾಗಿ ಅಂತರ್ಜಲ ಮಟ್ಟದ ಏರಿಕೆಯಾಗುತ್ತದೆ. ಪಡುಬಿದ್ರಿ ನಂದನವನ ಆಗುತ್ತದೆ. ಇದರಿಂದಾಗಿ ಪಂಚಾಯತ್‌ನ ಬೋರ್‌ವೆಲ್‌ಗಳಲ್ಲೂ, ಗ್ರಾಮದ ಬಾವಿಗಳಲ್ಲೂ ನೀರಿನ ಮಟ್ಟ ಏರಲಿದೆ. ವೃಥಾ ಸಮುದ್ರಕ್ಕೆ ಹರಿದು ನೀರು ಪೋಲಾಗುವುದನ್ನೂ ನಾವು ತಡೆಯಬಹುದಾಗಿದೆ.
– ಪಿ.ಕೆ. ಜಯರಾಮ್
You seem to have an Ad Blocker on.
To continue reading, please turn it off or whitelist Udayavani.