ಪಡು ಇನ್ನಾ ಕೊರಗರ ಕೊರಗಿಗೆ ಸ್ಪಂದನೆ; ಪರಿಹಾರದ ಭರವಸೆ
Team Udayavani, Mar 10, 2017, 2:39 PM IST
ಬೆಳ್ಮಣ್: ಕಾರ್ಕಳ ತಾಲೂಕಿನ ಪಡು ಇನ್ನಾ ಗ್ರಾಮದ ಕೊರಗರ ಕಾಲನಿಯಲ್ಲಿರುವ ಮೂಲ ಸೌಕರ್ಯದ ಸಮಸ್ಯೆಯ ಬಗ್ಗೆ ಉದಯವಾಣಿ ವರದಿಯನ್ನು ಪ್ರಕಟಿಸಿದ ಬೆನ್ನಲ್ಲೇ ಬುಧವಾರ ಕಾಲನಿಯ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಲು ಯೋಜನೆಯ ಸಮನ್ವಯ ಅಧಿಕಾರಿ (ಐಟಿಡಿಪಿ ಅಧಿಕಾರಿ)ಗಳು ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಬಗ್ಗೆ ತಿಳಿಸಿದ್ದಾರೆ.
ಇನ್ನಾ ಗ್ರಾಮ ಪಂಚಾಯತ್‌ವ್ಯಾಪ್ತಿಯ ಪಡು ಇನ್ನಾ ಕೊರಗರ ಕಾಲನಿಯಲ್ಲಿ ಒಂದೆಡೆ ಕುಡಿಯುವ ನೀರಿನ ಸಮಸ್ಯೆಯಾದರೆ ಇನ್ನೊಂದೆಡೆ ಅಲ್ಲಲ್ಲಿ ಜೋತು ಬಿದ್ದ ಗುಡಿಸಲು, ನಿವೇಶನ ಸರಿಪಡಿಸಲು ದಾಖಲೆ ಪತ್ರಗಳ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳ ನಡುವೆ ಪಡು ಇನ್ನಾ ಕೊರಗರ ಕಾಲನಿಯ ಜನ ಸಮಸ್ಯೆಯ ಸುಳಿಯಲ್ಲಿ ಬದುಕು ನಡೆಸುತ್ತಿದ್ದರು.
ಸರ್ವೆ ಕಾರ್ಯ ನಡೆಸಿಕೊಡಿ
ಸುಮಾರು 6 ಕುಟುಂಬಗಳು ವಾಸಿಸುವ ಈ ಕಾಲನಿಯಲ್ಲಿ ಹಲ ವಾರು ಮೂಲ ಸೌಕರ್ಯದ ಸಮಸ್ಯೆ ಕಾಡುತ್ತಿತ್ತು. ಕಾಲನಿಗೆ ಎರಡು ವರ್ಷಗಳ ಹಿಂದೆ ಹಾಕಲಾದ ಸೋಲರ್ ದೀಪಗಳು ತುಕ್ಕು ಹಿಡಿದು ಹೋಗಿದ್ದು ದೀಪವೇ ಉರಿಯುತ್ತಿರಲಿಲ್ಲ. ಇನ್ನು ವಾಸದ ಮನೆ ಯನ್ನಾದರೂ ಸುಂದರ ಮಾಡೋಣ ಎಂದರೂ ಇಲ್ಲಿ ಜಾಗದ ದಾಖಲೆ ಪತ್ರದ ಸಮಸ್ಯೆ ಎದುರಾಗಿತ್ತು. ಆರ್.ಟಿ.ಸಿ. ಯಲ್ಲಿ ಗೊಂದಲಗಳಿದ್ದು ಜಾಗದ ಸರ್ವೆ ಕಾರ್ಯವನ್ನು ನಡೆಸಿಕೊಡಿ ಎಂದು ಇಲ್ಲಿನ ನಿವಾಸಿಗಳು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪಡು ಇನ್ನಾದ ಈ ಕೊರಗರ ಕಾಲನಿಗೆ ನಳ್ಳಿ ನೀರಿನ ಸಂಪರ್ಕದ ವ್ಯವಸ್ಥೆಯನ್ನು ಪಂಚಾಯತ್ ಕಲ್ಪಿಸಿದ್ದು ಇಲ್ಲೊಂದು ಕುಡಿಯಲು ಯೋಗ್ಯವಾದ ತೆರೆದ ಬಾವಿಯ ನಿರ್ಮಾಣವಾಗಬೇಕಾಗಿತ್ತು. ನಳ್ಳಿಯಲ್ಲಿ ಬರುವ ನೀರು ಕೆಲವೊಮ್ಮೆ ಕುಡಿಯಲು ಯೋಗ್ಯವಾಗಿರುವುದಿಲ್ಲ ಹಾಗಾಗಿ ಇಲ್ಲೊಂದು ಬಾವಿಯನ್ನು ನಿರ್ಮಿಸಿಕೊಡಿ ಎಂದು ಜನಪ್ರತಿನಿಧಿಧಿಗಳಲ್ಲಿ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇನ್ನು ನಳ್ಳಿ ನೀರು ಕೆಟ್ಟು ನಿಂತರೇ ಇಲ್ಲಿನ ನಿವಾಸಿಗಳು ನಿತ್ಯ ಉಪಯೋಗದ ನೀರಿಗಾಗಿ ಪರದಾಟ ನಡೆಸುವ ಸಂದರ್ಭಗಳು ಎದುರಾಗಿತ್ತು. ಈ ಎಲ್ಲ ಸಮಸ್ಯೆಗಳ ನಡುವೆ ಇಲ್ಲಿನ ಗ್ರಾಮಸ್ಥರು ಜೀವನ ನಡೆಸುತ್ತಿರುವ ಬಗ್ಗೆ ಸಮಗ್ರ ವರದಿಯನ್ನು ಉದಯವಾಣಿ ಪ್ರಕಟಿಸಿದ್ದು ಸ್ಪಂದಿಸಿದ ಅಧಿಧಿಕಾರಿಗಳು ಪಡು ಇನ್ನಾ ಕೊರಗರ ಕಾಲನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶೀಘ್ರ ಕ್ರಮ: ಭರವಸೆ
ಯೋಜನಾ ಸಮನ್ವಯಾಧಿಕಾರಿ (ಐಟಿಡಿಪಿ ಅಧಿಕಾರಿ) ಹರೀಶ್ ಗಾಂವ್ಕರ್ ಹಾಗೂ ವಿಶ್ವನಾಥ ಶೆಟ್ಟಿ ದಿಢೀರ್ ಭೇಟಿ ನೀಡಿ ಈ ಕಾಲನಿಯ ಮೂಲ ಸೌಕರ್ಯಗಳನ್ನು ಕೂಡಲೇ ಒದಗಿಸುವುದಾಗಿ ತಿಳಿಸಿದರು. ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ಹಾಗೂ ವಸತಿ ಸಮಸ್ಯೆ ಹಾಗೂ ವಿದ್ಯುತ್ ಸಮಸ್ಯೆಯ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಪರಿಹರಿಸುವ ಭರವಸೆಯನ್ನು ನೀಡಿದ್ದಾರೆ. ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಬಬಿತಾ, ಉಪಾಧ್ಯಕ್ಷ ಕುಶಾ ಆರ್ ಮೂಲ್ಯ ಉಪಸ್ಥಿತರಿದ್ದು ಈ ಭಾಗದಲ್ಲಿ ಹಲವಾರು ಬೇಡಿಕೆಗಳಿದ್ದು ಆ ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಟ್ಟರು. ಅಧಿಕಾರಿಗಳು ಮುಂದಿನ ದಿನದಲ್ಲಿ ಈ ಭಾಗದ ಸಮಸ್ಯೆಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಉದಯವಾಣಿ ವರದಿಗೆ ಸ್ಪಂದಿಸಿದ ಇಲಾಖಾಧಿಕಾರಿಗಳ ಈ ನಡೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ವಸತಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಸಮಸ್ಯೆಗೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಇನ್ನು ಉಳಿದಂತೆ ಇಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಕಟ್ಟಡ ನಿರ್ಮಾಣ ನಡೆಯಲಿದೆ. ಬೇಡಿಕೆಗಳ ಪ್ರಸ್ತಾವನೆಯನ್ನು ಸಲ್ಲಿಸುತ್ತೇವೆ.
ಹರೀಶ್ ಗಾಂವ್ಕಂಕರ್, ಐಟಿಡಿಪಿ ಅಧಿಕಾರಿ
ಈ ಕಾಲನಿಯ ಸಮಸ್ಯೆಯ ಬಗ್ಗೆ ಪತ್ರಿಕಾ ವರದಿಗೆ ಸ್ಪಂದಿಸಿದ ಇಲಾಖಾಧಿಕಾರಿಗಳಿಗೆ ಕೃತಜ್ಞತೆಗಳು. ಬೇಡಿಕೆಗಳ ಬಗ್ಗೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಕುಶಾ ಆರ್. ಮೂಲ್ಯ, ಇನ್ನಾ ಗ್ರಾ.ಪಂ. ಉಪಾಧ್ಯಕ್ಷರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.