ನಿಷ್ಪಕ್ಷ ತನಿಖೆಗೆ ಪೇಜಾವರ ಶ್ರೀ ಆಗ್ರಹ
Team Udayavani, Jul 21, 2018, 12:26 PM IST
ಉಡುಪಿ: ಶೀರೂರು ಶ್ರೀ ಲಕ್ಷ್ಮೀವರ ತೀರ್ಥರ ಸಾವಿಗೆ ಹಲವು ಕಾರಣಗಳಿರಬಹುದು. ಆದರೆ ಇದಕ್ಕೂ ಇತರ ಏಳು ಮಠಾಧೀಶರಿಗೂ ಸಂಬಂಧವಿಲ್ಲ. ಸಾವಿನ ಬಗ್ಗೆ ನಿಷ್ಪಕ್ಷ ತನಿಖೆ ನಡೆಯಲಿ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸರು ತನಿಖೆಗಾಗಿ ಯಾರನ್ನೂ ಪ್ರಶ್ನಿಸಬಹುದು. ಹೊಡೆಯುವುದು ಬಡಿಯುವುದು ಬೇಡ. ಏನೂ ಗೊತ್ತಿಲ್ಲದೆ ಅಷ್ಟ ಮಠಾಧೀಶರ ಕೈವಾಡವಿದೆ ಎಂಬಂತೆ ಹೇಳುತ್ತಿರುವ ಕರಾವಳಿಯ ಕೆಲವು ಮಠಾಧೀಶರು ಜವಾಬ್ದಾರಿಯುತ ಹೇಳಿಕೆ ನೀಡಬೇಕು ಎಂದರು.
ಹಲವು ಅನುಮಾನ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ವಿಷಪ್ರಾಶನ ಎಂದು ಹೇಳಲಾಗುತ್ತಿದೆ. ಇದು ವಿಷ ಸೇವನೆಯಿಂದ ಆಗಿದೆಯೆ? ಬೇರೆ ಆಹಾರ ದೋಷದಿಂದ ಆಗಿದೆಯೆ? ಅವರಿಗೆ ಮದ್ಯಪಾನ ಅಭ್ಯಾಸವಿತ್ತು. ಅತಿಯಾದ ಪಾನದಿಂದ ಆಯಿತೇ? ಇವರ ಸಂಪರ್ಕದ ಇಬ್ಬರು ಮಹಿಳೆಯರ ನಡುವಿನ ಜಗಳದಿಂದ ಆಗಿದೆಯೇ? ಗೊತ್ತಿಲ್ಲ. ಕಾಯಿಲೆಯೂ ಇದ್ದಿರಬಹುದು. ಸ್ವಾಮೀಜಿ ಸೋದರ ಲಾತವ್ಯ ಆಚಾರ್ಯರನ್ನು ಮಂಗಳವಾರ ಕೇಳಿದಾಗ “ಕಲಾಯಿ ಹಾಕದ ಪಾತ್ರೆಯಲ್ಲಿ ತಯಾರಿಸಿದ ಆಹಾರ ಸ್ವೀಕಾರದಿಂದ ಫುಡ್‌ಪಾಯ್ಸನ್ ಆಗಿದೆ. ಚೇತರಿಸಿಕೊಳ್ಳುತ್ತಿದ್ದಾರೆ’ ಎಂದಿದ್ದರು. ಮರುದಿನ ವಿಷ ಪ್ರಾಶನದ ಸುದ್ದಿ ಕೇಳಿಬಂತು ಎಂದು ವಿವರಿಸಿದರು. ಪ್ರಕರಣದಲ್ಲಿ ಇತರ ಏಳು ಮಠಾಧೀಶರ ಯಾವುದೇ ಪಾತ್ರವಿರಲು ಸಾಧ್ಯವಿಲ್ಲ. ಏಕೆಂದರೆ ಈ ಯಾರಿಗೂ ಶೀರೂರು ಶ್ರೀಗಳ ಸಂಪರ್ಕವಿರಲಿಲ್ಲ. ಏನೇ ತೊಂದರೆ ಆಗಿದ್ದರೆ ಅದು ಅವರ ಮಠದಿಂದಲೇ ಹೊರತು ಬೇರೆಯವರಿಂದಲ್ಲ ಎಂದರು. ಎಲ್ಲ ಜಾತಿಯವರ ಜತೆ ಉತ್ತಮ ಸಂಪರ್ಕ, ಎಲ್ಲರಿಗೂ ಸಹಾಯ ಮಾಡುತ್ತಿರುವಂಥದ್ದು ಇತ್ಯಾದಿ ಒಳ್ಳೆ ಗುಣಗಳಿದ್ದ ಕಾರಣ ನನಗೂ ಅವರಲ್ಲಿ ವಿಶ್ವಾಸವಿತ್ತು. ಆದರೆ ಸನ್ಯಾಸ ಧರ್ಮಕ್ಕೆ ವಿರುದ್ಧ ವಾಗಿ ಕೆಲವು ನಡವಳಿಕೆ ಹೊಂದಿದಾಗ ತಿಳಿವಳಿಕೆ ನೀಡಿದ್ದೆ. ಪ್ರಯೋಜನವಾಗಿರಲಿಲ್ಲ ಎಂದರು. ವಿಶ್ವವಿಜಯತೀರ್ಥರು ಅಷ್ಟಮಠಗಳಿಗೆ ಸಂವಿಧಾನ ಅಗತ್ಯ ಎಂದು ಹೇಳಿದ್ದಾರಲ್ಲ ಎಂಬುದಕ್ಕೆ, “ಸಂವಿಧಾನ ರಚಿಸಲು ನಮ್ಮದೇನೂ ಅಡ್ಡಿ ಇಲ್ಲ. ವಿದೇಶ ಪ್ರಯಾಣ, ವಿಮಾನಯಾನ ಇತ್ಯಾದಿ ವಿಷಯಗಳಿಗೆ ಸರ್ವಾನುಮತ ಅಗತ್ಯ’ ಎಂದರು.
ಯುವ ಮಠಾಧೀಶರಲ್ಲಿ ನೈತಿಕ ಪ್ರಜ್ಞೆ
ಇತರ ಎಲ್ಲ ಮಠಾಧೀಶರೂ ಸರಿಯಾಗಿ ದ್ದಾರೆಯೇ ಎಂದು ಪ್ರಶ್ನಿಸಿದಾಗ “ಚಾತುರ್ಮಾಸ್ಯದ ಅವಧಿಯಲ್ಲಿ ಹೆಚ್ಚು ಕಡಿಮೆ ಯಾಗುವುದೇ ಇತ್ಯಾದಿ ಸಣ್ಣಪುಟ್ಟ ದೋಷ ಇರಬಹುದು. ಆದರೆ ಸಂಸಾರ, ಮದ್ಯಪಾನದಂತಹ ಅಕ್ಷಮ್ಯ ಅಪರಾಧಗಳಿಲ್ಲ. ಈಗಂತೂ ಯುವ ಮಠಾಧೀಶರು ನೈತಿಕತೆಗೆ ಬಹಳ ಮಹತ್ವ ಕೊಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು. ಆರೋಪ ಯಾರ ಮೇಲೂ ಮಾಡಬಹುದು. ಐದನೆಯ ಪರ್ಯಾಯಕ್ಕೆ ಕುಳಿತುಕೊಳ್ಳುವ ಮುನ್ನ ನಮಗೂ ಸಂಸಾರವಿದೆ ಎಂದು ಆರೋಪಿಸಿ ಹತ್ತು ಸಾವಿರ ಕರಪತ್ರ ಮುದ್ರಿಸುತ್ತೇವೆಂದು ಹೆಸರು ಇಲ್ಲದ ಬೆದರಿಕೆ ಪತ್ರವೊಂದು ಬಂದಿತ್ತು ಎಂದು ತಿಳಿಸಿದರು. ಶೀರೂರು ಮಠದ ಶಿಷ್ಯ ಸ್ವೀಕಾರದ ಬಗ್ಗೆ ಕೇಳಿದಾಗ “ಸರಿಯಾದ ವ್ಯಕ್ತಿ ಸಿಗಬೇಕಲ್ಲ. ಮುಂದಿನ ಕ್ರಮವನ್ನು ಸೋದೆ ಮಠಾಧೀಶರು ನೋಡ ಕೊಳ್ಳುತ್ತಾರೆ’ ಎಂದರು.
ತಪ್ಪಿನ ಒಪ್ಪಿಗೆ
ಶೀರೂರು ಶ್ರೀಗಳು ಸ್ವತಃ ವೀಡಿಯೋ ಕ್ಲಿಪ್ಪಿಂಗ್‌ನಲ್ಲಿ ತಮಗೆ ಮಕ್ಕಳು ಇದೆ ಎಂದು ಒಪ್ಪಿಕೊಂಡಿದ್ದರು. ಹೀಗಿರುವಾಗ ಅವರನ್ನು ಮಾನ್ಯ ಮಾಡುವುದು ಹೇಗೆ? ಸ್ವಾಮೀಜಿಯವರಿಗೆ ನೈತಿಕತೆ ಬೇಕು ಎಂದು ಬಹಿರಂಗ ಸಭೆಯಲ್ಲಿ ಕರೆ ಕೊಟ್ಟಿದ್ದೆ. ಸಾಕಷ್ಟು ಅಪವಾದಗಳಿದ್ದ ಕಾರಣ ನಮ್ಮ ಐದನೆಯ ಪರ್ಯಾಯದಲ್ಲಿ ಅವರಿಗೆ ಪೂಜೆಗೆ ಅವಕಾಶ ಕೊಟ್ಟಿರಲಿಲ್ಲ. ಆದರೆ ಅವರ ದೇವರಿಗೆ ಕೃಷ್ಣಮಠದಲ್ಲಿ ಪೂಜೆ ನಡೆಸಿದ್ದೇವೆ. ಪೂಜೆಗೆ ಅವಕಾಶ ಕೊಡದೇ ಇದ್ದುದು ಅವರಿಗೆ ನಮ್ಮ ಮೇಲಿನ ಅಸಮಾಧಾನಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ಬಹಿರಂಗವಾಗಿ ಅನಗತ್ಯ ಹೇಳಿಕೆ ನೀಡಿದ್ದರಿಂದ ಎಲ್ಲ ಮಠಾಧೀಶರೂ ಪಟ್ಟದ ದೇವರನ್ನು ಅವರಿಗೆ ಕೊಡಲು ಒಪ್ಪಲಿಲ್ಲ. ಶಿಷ್ಯ ಸ್ವೀಕಾರ ನಡೆಸಿದರೆ ಕೊಡುವುದಾಗಿ ಹೇಳಿದ್ದರು. ಈ ಸಭೆಯಲ್ಲಿ ನಾನಿಲ್ಲದಿದ್ದರೂ ಒಪ್ಪಿಗೆ ಕೊಟ್ಟಿದ್ದೆ. ಪುತ್ತಿಗೆ ಶ್ರೀಗಳದ್ದು ವಿದೇಶ ಪ್ರಯಾಣ ಮಾತ್ರ ವಿಷಯವಾಗಿತ್ತು. ಇದು ಹಾಗಲ್ಲ ಎಂದು ವಿವರಿಸಿದರು. ಮಠಾಧೀಶರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, “ನಾನು ಧಾರವಾಡದಲ್ಲಿದ್ದೆ. ವಿಷಯ ತಿಳಿಯುವಾಗಲೇ ತಡವಾಯಿತು. ಏಳೆಂಟು ಗಂಟೆ ಪ್ರಯಾಣ ಮುಗಿಸಿ ಬರುವುದು ಕಷ್ಟವಾಯಿತು. ಪರ್ಯಾಯ ಪಲಿಮಾರು ಸ್ವಾಮೀಜಿಯವರು ಕೃಷ್ಣಮಠದಲ್ಲಿ ಪಾಲ್ಗೊಂಡರು. ಸೋದೆ, ಕಾಣಿಯೂರು, ಅದಮಾರು ಶ್ರೀಗಳು ಶೀರೂರಿನಲ್ಲಿ ಪಾಲ್ಗೊಂಡರು ಎಂದರು.
ಸೋದೆ ಶ್ರೀ ಜಾಗರೂಕ ನಡೆ
ಉಡುಪಿ,: ಶೀರೂರು ಮಠಕ್ಕೆ ಉತ್ತರಾಧಿಕಾರಿ ನೇಮಿಸುವ ವಿಚಾರದಲ್ಲಿ ಜಾಗರೂಕ ಹೆಜ್ಜೆಯನ್ನು ಇಡಲು ಸೋದೆ ಮಠ ನಿರ್ಧರಿಸಿದೆ. ಉತ್ತರಾಧಿಕಾರಿ ನೇಮಕ ಹೊಣೆ ಹೊಂದಿ ರುವ ದ್ವಂದ್ವ ಮಠವಾದ ಸೋದೆ ಮಠದ ಶ್ರೀ ವಿಶ್ವವಲ್ಲಭ ಸ್ವಾಮೀಜಿ ಅವರು ಮೊದಲು ಶೀರೂರು ಮಠದ ಪೂಜೆ ಪುನಸ್ಕಾರಗಳನ್ನು ವ್ಯವಸ್ಥಿತಗೊಳಿಸಲು ಆದ್ಯತೆ ನೀಡಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ. ಎರಡನೇ ಹಂತದಲ್ಲಿ ಮಠದ ಆಡಳಿತ, ಆರ್ಥಿಕ ಶಿಸ್ತು ಜಾರಿಗೊಳಿಸಿ ಬಳಿಕ ಉತ್ತರಾಧಿ ಕಾರಿಯನ್ನು ನೇಮಕದ ಬಗ್ಗೆ ಯೋಚಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.