ಪಲಿಮಾರು: ಇನ್ನೂ ಆಗದ ಹಿಂದೂ ರುದ್ರಭೂಮಿ
ಶವ ಸಂಸ್ಕಾರಕ್ಕೆ ಪಕ್ಕದ ಗ್ರಾಮಗಳನ್ನು ಆಶ್ರಯಿಸಿದ ಗ್ರಾಮಸ್ಥರು
Team Udayavani, Feb 8, 2020, 5:19 AM IST
ರುದ್ರಭೂಮಿಗೆ ಗುರುತಿಸಿದ ಜಾಗ.
ಪಡುಬಿದ್ರಿ: ನಂದಿಕೂರು ಮತ್ತು ಪಲಿಮಾರು ಕಂದಾಯ ಗ್ರಾಮಗಳಿಂದ ಕೂಡಿದ ಪಲಿಮಾರು ಗ್ರಾಮ ಪಂಚಾಯತ್‌ಗೆ ಇದುವರೆಗೂ ಸಾರ್ವಜನಿಕ ಹಿಂದೂ ರುದ್ರಭೂಮಿ ಕನಸು ಕನಸಾಗಿಯೇ ಉಳಿದಿದೆ. ಜಮೀನು ವ್ಯಾಜ್ಯ ಸೇರಿದಂತೆ ವಿವಿಧ ಕಾರಣಗಳಿಂದ ಹಿಂದೂ ರುದ್ರಭೂಮಿ ಸಂಕಲ್ಪ ಈಡೇರಿಲ್ಲ. ಈಗ ಚುನಾವಣೆಯ ಸುದ್ದಿ ಕೇಳಿಬರುತ್ತಿರುವುದರಿಂದ ಯೋಜನೆ ಮತ್ತಷ್ಟು ನನೆಗುದಿಗೆ ಬೀಳಲು ಕಾರಣವಾಗಿದೆ.
ಕೂಡಿ ಬರದ ಕಾಲ
ಉಡುಪಿ ಅಷ್ಟಮಠಗಳಲ್ಲೊಂದಾದ ಪಲಿಮಾರು ಮೂಲಮಠವಿರುವ ಪಲಿಮಾರು ಗ್ರಾಮ 3347.57 ಚ.ಅ ಭೌಗೋಳಿಕ ವಿಸ್ತೀರ್ಣ ಹೊಂದಿದೆ. ಗ್ರಾಮದಲ್ಲಿ 2011ರ ಜನಗಣತಿಯಂತೆ ಸುಮಾರು 6,316 ಜನಸಂಖ್ಯೆಯಿದೆ. ಅದರಲ್ಲಿ ಪ.ಜಾತಿ 1,300 ಹಾಗೂ ಪ. ಪಂಗಡದ 135 ಜನರಿದ್ದಾರೆ. ಗ್ರಾಮಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ಶ್ರಮಿಸಿದ್ದಾರೆ. ಆದರೆ ಸೂಕ್ತ ಸರಕಾರಿ ಜಮೀನಿನ ಕೊರತೆಯಿಂದಾಗಿ ಬಹು ವರ್ಷಗಳಿಂದ ಬೇಡಿಕೆಯಿರುವ ಸಾರ್ವಜನಿಕ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಕಾಲ ಕೂಡಿ ಬಂದಿಲ್ಲ.
ಕೊನೆಯಾಗದ ವ್ಯಾಜ್ಯ
ರುದ್ರಭೂಮಿ ಹಾಗೂ ಘನ ದ್ರವ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕಾಗಿ ಗ್ರಾಮದ ಸರ್ವೆ ಸಂಖ್ಯೆ 87/2ರಲ್ಲಿ 1.05 ಎಕ್ರೆ ಜಮೀನನ್ನು 2016 ನವೆಂಬರ್ 16ರಂದು ಅಂದಿನ ಜಿಲ್ಲಾಧಿಕಾರಿ ಮಂಜೂರು ಮಾಡಿ ತರಾತುರಿಯಲ್ಲಿ ಗ್ರಾ.ಪಂ. ಹೆಸರಿನಲ್ಲಿ ಪಹಣಿ ಪತ್ರವನ್ನೂ ನೀಡಿದ್ದರು. ಆದರೆ ಆ ಜಮೀನಿಗೆ ಹೊಂದಿಕೊಂಡಿರುವ ಖಾಸಗಿ ಜಮೀನಿನವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪ್ರಕರಣವು ಇನ್ನೂ ಇತ್ಯರ್ಥವಾಗದೆ ರುದ್ರಭೂಮಿ ನಿರ್ಮಾಣಕ್ಕೆ ತೊಡಕಾಗಿದೆ. 2017ರಲ್ಲಿ ಇಲ್ಲಿನ ವ್ಯಕ್ತಿಯೊಬ್ಬರು ಮೃತಪಟ್ಟಾಗ ಶವಸಂಸ್ಕಾರಕ್ಕಾಗಿ ರುದ್ರಭೂಮಿಯಿಲ್ಲದೆ ಗ್ರಾ.ಪಂ. ಮುಂಭಾಗದಲ್ಲಿ ಚಿತೆ ನಿರ್ಮಿಸಿ ಪ್ರತಿಭಟನೆ ಮಾಡಿ ಗಮನ ಸೆಳೆಯಲಾಗಿತ್ತು.
ಸಂಧಾನ ಪ್ರಯತ್ನ
ಈ ಮಧ್ಯೆ ಖಾಸಗಿ ಜಮೀನಿನವರಲ್ಲಿ ಸಂಧಾನ ನಡೆಸುವ ಪ್ರಯತ್ನಗಳು ಮುಂದುವರಿದಿತ್ತು. ಗ್ರಾ. ಪಂ. ಈ ಯೋಜನೆಗೆ ಪರ್ಯಾಯವಾಗಿ ಸರಕಾರದಿಂದ ಮಂಜೂರಾದ ಜಮೀನಿನಲ್ಲಿ ಸುಸಜ್ಜಿತ ಆಸ್ಪತ್ರೆ ಮತ್ತು ಪಲಿಮಾರು ಗ್ರಾಮಕ್ಕೆ ಹೊಂದಿಕೊಂಡೇ ಇರುವ ಇನ್ನಾ° ಗ್ರಾಮದಲ್ಲಿ ಸಾರ್ವಜನಿಕ ರುದ್ರಭೂಮಿಯನ್ನು ಎರಡೂ ಗ್ರಾಮಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ ಬಳಕೆ ಮಾಡುವ ಬಗ್ಗೆಯೂ ಕೆಲವು ಸ್ಥಳೀಯರು ಸಲಹೆ ನೀಡಿದ್ದರು. ಇದಕ್ಕೆ ಗ್ರಾ.ಪಂ. ಸಮ್ಮತಿಸಿರಲಿಲ್ಲ.
ಇನ್ನಷ್ಟು ವಿಳಂಬ?
ಖಾಸಗಿ ಜಮೀನಿನವರು ಕೆಲವು ಬೇಡಿಕೆಯಿಟ್ಟು ತಮ್ಮ ಜಮೀನಿನ ಕೊನೆಯಲ್ಲಿ ರಸ್ತೆ ಸೇರಿದಂತೆ 50 ಸೆಂಟ್ಸ್ ಜಮೀನನ್ನು ಗ್ರಾ. ಪಂ.ಗೆ ನೀಡಲು ಮುಂದಾಗಿದ್ದರು. ಈ ಕುರಿತಂತೆ ಜಿಲ್ಲಾಧಿಕಾರಿಯವರಿಗೂ ಪತ್ರ ಬರೆಯಲಾಗಿತ್ತು. ಒಂದು ವೇಳೆ ಖಾಸಗಿ ಜಮೀನು ಪಡೆಯುವುದಿದ್ದರೂ, ದಾನಪತ್ರ ಪಡೆದು ಹಸ್ತಾಂತರ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಗ್ರಾ.ಪಂ.ಗೆ ಸೂಚನೆ ನೀಡಿದ್ದರು. ಆದರೆ ಕಾರಣಾಂತರದಿಂದ ಅದೂ ಮುರಿದು ಬಿತ್ತು. ಇದೀಗ ಖಾಸಗಿ ಜಮೀನುದಾರರು ಹಸ್ತಾಂತರಕ್ಕೆ ಮುಂದಾಗಿದ್ದರೂ ಚುನಾವಣೆ ಸಮೀಪಿಸುತ್ತಿರುವುದರಿಂದ ಗ್ರಾಮಾಡಳಿತ ಉತ್ಸುಕತೆ ವಹಿಸುತ್ತಿಲ್ಲ. ಪರಿಣಾಮವಾಗಿ ಈಗಲೂ ಪ್ರಕರಣ ನ್ಯಾಯಾಲಯದಲ್ಲಿಯೇ ಇತ್ಯರ್ಥವಾಗಬೇಕಾದ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾದಲ್ಲಿ ರುದ್ರಭೂಮಿ ನಿರ್ಮಾಣ ಇನ್ನಷ್ಟು ವಿಳಂಬವಾಗುವುದರಲ್ಲಿ ಸಂಶಯವಿಲ್ಲ.
ಚುನಾವಣೆ ಘೋಷಣೆಯಾದರೆ ತೊಡಕು
ಎರಡು ವರ್ಷಗಳ ಹಿಂದೆಯೇ ಪ್ರಕರಣ ಇತ್ಯರ್ಥವಾಗಿದ್ದಲ್ಲಿ ಗ್ರಾಮಕ್ಕೆ ಅಗತ್ಯವಿರುವ ಸಾರ್ವಜನಿಕ ರುದ್ರಭೂಮಿ ಸಹಿತ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಿ ಅದರಲ್ಲಿಯೇ ಮಾದರಿ ಎರೆಹುಳ ಗೊಬ್ಬರ ತಯಾರಿಕಾ ಘಟಕ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಖಾಸಗಿ ಜಮೀನು ಹಸ್ತಾಂತರಕ್ಕೆ ಈಗ ಮುಂದಾದಲ್ಲಿ ಚುನಾವಣೆ ಘೋಷಣೆಯಾದರೆ ಮತ್ತೆ ತೊಡಕಾಗಲಿದೆ.
-ಜಿತೇಂದ್ರ ಫುರ್ಟಾಡೋ, ಪಲಿಮಾರು ಗ್ರಾ. ಪಂ. ಅಧ್ಯಕ್ಷ
ಹಸ್ತಾಂತರ ಈಗಲೇ ಆದರೆ ಉತ್ತಮ
ರುದ್ರಭೂಮಿ ಹಾಗೂ ಎಸ್‌ಎಲ್‌ಆರ್‌ಎಂ ಘಟಕ ನಿರ್ಮಾಣಕ್ಕೆ ಅನುದಾನದ ಕೊರತೆಯಿಲ್ಲ. ಜಮೀನು ತ್ವರಿತ ಹಸ್ತಾಂತರಕ್ಕೆ ಖಾಸಗಿಯವರು ಒಪ್ಪಿದ್ದಾರೆ. ಈಗ ಹಸ್ತಾಂತರ ಮಾಡಿಕೊಳ್ಳಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ. ಚುನಾವಣೆ ನಡೆದರೂ ಮುಂದೆ ಬರುವ ಹೊಸ ಆಡಳಿತಕ್ಕೆ ಯೋಜನೆ ಕಾರ್ಯಗತ ಮಾಡಲು ಅನುಕೂಲವಾಗಲಿದೆ.
-ಸತೀಶ್, ಪಿಡಿಒ ಪಲಿಮಾರು ಗ್ರಾ. ಪಂ.
ವ್ಯಾಜ್ಯ ಇತ್ಯರ್ಥವಾದರೆ ರುದ್ರಭೂಮಿ ಶೀಘ್ರ ನಿರ್ಮಾಣ
ಜಾಗದ ವಿಚಾರಕ್ಕೆ ಸಂಬಂಧಿಸಿ ವ್ಯಾಜ್ಯವನ್ನು ಶೀಘ್ರ ಇತ್ಯರ್ಥಪಡಿಸಲು ನಾವು ಎದುರುನೋಡುತ್ತಿದ್ದೇವೆ. ಇದು ಬೇಗನೆ ಆದಷ್ಟೂ ಪಲಿಮಾರು ರುದ್ರಭೂಮಿ ನಿರ್ಮಾಣವೂ ವೇಗ ಪಡೆಯಲಿದೆ.
-ಮಧುಕರ್ ಸುವರ್ಣ, ಪಲಿಮಾರು ಗ್ರಾ.ಪಂ. ಸದಸ್ಯರು
6316 2011ರ ಜನಗಣತಿಯಂತೆ ಸುಮಾರು ಪಲಿಮಾರು ಗ್ರಾಮದಲ್ಲಿರುವ ಜನಸಂಖ್ಯೆ.
ಆರಾಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.