ಪರ್ಕಳ: ಮನೆ ಮನೆ ಸುತ್ತಿದರೂ ಕೊಡ ನೀರು ಸಿಗುತ್ತಿಲ್ಲ!
Team Udayavani, May 17, 2019, 6:10 AM IST
ಉಡುಪಿ: ಪರ್ಕಳ ವಾರ್ಡ್‌ನಲ್ಲಿ ನಗರಸಭೆಯ ಬಾವಿಗಳಿವೆ. ಅದರೆ ಸಂಪೂರ್ಣ ಬತ್ತಿವೆ. ವಾರ್ಡ್‌ನ ನೀರಿನ ಮೂಲಗಳ ಸಂರಕ್ಷಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ನೀರಿನ ಸಮಸ್ಯೆ ತೀವ್ರ ಸ್ವರೂಪ ಕಂಡಿದೆ.
ಇಲ್ಲಿ ಸಾವಿರಕ್ಕೂ ಹೆಚ್ಚಿನ ಮನೆ ಗಳಿವೆ. ಆರು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು ವಾರ್ಡ್‌ನ ಕೆಲವೊಂದು ಭಾಗಗಳಿಗೆ ತಲುಪುತ್ತಿಲ್ಲ. ನಗರಸಭೆ ಬಾವಿಗಳು ಇದ್ದರೂ ಕಾಲಕ್ಕೆ ಹೂಳೆತ್ತದೆ ನೀರು ಸಿಗದಾಗಿದೆ.
ಪರ್ಕಳ ವಾರ್ಡ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವ ಹೆರ್ಗ, ಮಂಜುನಾಥ ನಗರ ಸೇರಿದಂತೆ ಮೊದಲಾದೆಡೆ ಉದಯವಾಣಿ ತಂಡ ಭೇಟಿ ನೀಡಿದಾಗ ಅಲ್ಲಿನ ಜನರು ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ.
ಹೊಟ್ಟೆಗೆ ತಣ್ಣೀರು ಬಟ್ಟೆ !
ನೀರು ಕೊರತೆಯಿಂದ ಕುಟುಂಬಕ್ಕೆ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯೇ ಗತಿ. ನರ್ಸರಿ ಹಾಕಿ ನಾಲ್ಕು ವರ್ಷವಾಗಿದೆ. ಆದರೆ ಈ ಬಾರಿಯಂತೆ ಎಂದೂ ನೀರಿನ ಸಮಸ್ಯೆ ಕಂಡಿರಲಿಲ್ಲ. ಗಿಡಗಳು ಒಣಗಿ ಹೋಗಿದೆ. ಜನರು ಸಸಿಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆ ಪ್ರತಿವಾರಕ್ಕೆ 15 ಸಾವಿರ ಗಿಡಗಳನ್ನು ಆಮದು ಮಾಡುತ್ತಿದ್ದೆ. ಆದರೆ ಮಾರ್ಚ್ ತಿಂಗಳಿನಿಂದ ಒಂದು ಗಿಡವನ್ನೂ ಹೊಸದಾಗಿ ಹಾಕಿಲ್ಲ ಎನ್ನುತ್ತಾರೆ ಇಲ್ಲಿನ ನರ್ಸರಿ ಮಾಲಕ ರಿಯಾಸ್ ಅವರು .
ಅಂಗನವಾಡಿಯಲ್ಲಿ ನೀರಿಲ್ಲ !
ಅಂಗನವಾಡಿಗೆ ಆರು ದಿನಕ್ಕೊಮ್ಮೆ ನೀರು ಬರುತ್ತಿದೆ. ಆ ನೀರು ಮಕ್ಕಳ ಆಹಾರ ತಯಾರಿಕೆಗೆ ಬಳಸಲು ಯೋಗ್ಯವಾಗಿಲ್ಲ. ನೀರಿಗಾಗಿ ಅಕ್ಕಪಕ್ಕದ ಮನೆಗಳ ಬಾವಿಗೆ ತೆರಳಬೇಕಾಗಿದೆ. ಮಕ್ಕಳ ಮುಖ ನೋಡಿ ನೀರು ಕೊಡುತ್ತಾರೆ. ಇದೀಗ ಮಕ್ಕಳು ಸಹ ನೀರಿನ ಸಮಸ್ಯೆಯಿಂದ ಅಂಗನವಾಡಿಗೆ ಗೈರಾಗುತ್ತಿದ್ದಾರೆ. ಪೋಷಕರು ಬೇಗನೆ ಬಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎನ್ನುತ್ತಾರೆ ಪರ್ಕಳ ವಾಡ್‌ನ ಹೆರ್ಗದ ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಅವರು.
ಯಾರೂ ನೀರು ನೀಡುತ್ತಿಲ್ಲ
ಉತ್ತರ ಕನ್ನಡದಿಂದ ಬಂದು ಪರ್ಕಳದಲ್ಲಿ ನೆಲೆ ಕಂಡುಕೊಂಡಿದ್ದೇವೆ. ನಮ್ಮಲ್ಲಿ ಸಹ ಇಷ್ಟು ನೀರಿನ ಸಮಸ್ಯೆಯಿಲ್ಲ. ಒಂದು ಕಡೆ ಬಂದರೆ ಇನ್ನೊಂದೆಡೆ ನೀರು ಬರೋದಿಲ್ಲ. ಇದುವರೆಗೆ ಟ್ಯಾಂಕರ್ ನೀರು ಸಹ ಸಿಕ್ಕಿಲ್ಲ. ಮೇ 16ರಂದು ನೀರು ಬಂದಿದೆ. ಆದರೆ ಆ ನೀರು ಮೇಲಿನ ಟ್ಯಾಂಕಿಗೆ ಹೋಗುತ್ತಿಲ್ಲ. ಬಟ್ಟೆ ಒಗೆಯುವಂತಿಲ್ಲ, ಸಾನ್ನ ಮಾಡುತ್ತಿಲ್ಲ. ಬಾವಿ ಇರುವವರ ಮನೆ ಕದ ತಟ್ಟಿದರೂ ನೀರು ಕೊಡುತ್ತಿಲ್ಲ. ಖಾಸಗಿ ಟ್ಯಾಂಕರ್ ನೀರಿಗೆ ಕರೆ ಮಾಡಿದರೂ ನೀರು ಸಿಗುತ್ತಿಲ್ಲ ಎನ್ನುತ್ತಾರೆ ಮಂಜುನಾಥ ನಗರದ ಮಂಗಳಾ ಅವರು.
ಬಾವಿ ನೀರು ಸಾಕಾಗುತ್ತಿಲ್ಲ
ಬಾವಿ ನೀರು ಬತ್ತಿ ಹೋಗಿದೆ. ಪಕ್ಕದ ಮನೆಯವರು ನೀರಿಗಾಗಿ ಬೇಡಿಕೆಯಿಟ್ಟು ಕೊಡಲು ಸಾಧ್ಯವಾಗುತ್ತಿಲ್ಲ. ನಗರಸಭೆ ಯಿಂದ ಬರುವ ನೀರು ನಂಬಿಕೊಂಡರೆ ಬೇಸಗೆಯಲ್ಲಿ ಬದುಕೋದು ಕಷ್ಟ. ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವುದು ಅರಿವಿಗೆ ಬಾರದಷ್ಟು ಅಧಿಕಾರಿಗಳು ದಡ್ಡರೇ? ನಾವು ನಮ್ಮ ಬಾವಿಯ ನೀರಿನ ಮಟ್ಟ ಹೆಚ್ಚಿಸಲು ಪ್ರತಿವರ್ಷ ಹೂಳು ತೆಗೆಯುತ್ತೇವೆ. ಆದರೆ ಸರಕಾರಿ ಬಾವಿಗಳಲ್ಲಿ ಮಾತ್ರ ಹೂಳು ತುಂಬಿಕೊಂಡಿದೆ. ಅದನ್ನು ತೆಗೆದರೆ ವಾರ್ಡ್‌ಗೆ ಅಗತ್ಯವಿರುವ ನೀರು ಸಿಗುತ್ತದೆ ಎನ್ನುತ್ತಾರೆ ಹೆರ್ಗದ ಸಂಪಾ.
ವಾರ್ಡ್‌ನವರ ಬೇಡಿಕೆ
– ಡ್ಯಾಂನಲ್ಲಿ ತುಂಬಿರುವ ಹೂಳು , ಬಂಡೆಕಲ್ಲು ತೆರವುಗೊಳಿಸಬೇಕು.
– ನೀರಿನ ಒತ್ತಡ ಹೆಚ್ಚಳಗೊಳಿಸಿ
– ಎರಡು ದಿನಕ್ಕೊಮ್ಮೆ ನಳ್ಳಿ ನೀರು ಬಿಡುವಂತೆ ಮಾಡಿ.
– ಬಾವಿಗಳ ದುರಸ್ತಿಗೆ ಮನವಿ
- ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.