ಅಕ್ರಮಗಳನ್ನು ಪೋಷಿಸಿದ ಅಧಿಕಾರಿಗಳಿಗೆ ಶಿಕ್ಷೆ ಏನು?
Team Udayavani, Feb 15, 2021, 4:20 AM IST
ಸಾಂದರ್ಭಿಕ ಚಿತ್ರ
ಉಡುಪಿ :ನಗರದಲ್ಲಿ ವಾಹನ ನಿಲುಗಡೆಗೆ ಇರುವ ಸ್ಥಳಾವಕಾಶದ ಕೊರತೆ ಮತ್ತು ಅದ ರಿಂದ ವಾಹನಗಳ ಸುಗಮ ಸಂಚಾರದ ಮೇಲಾಗು ತ್ತಿರುವ ದುಷ್ಪರಿಣಾಮಗಳನ್ನು ತಡೆಯಲು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಥಮ ಪ್ರಯತ್ನವನ್ನು ಆರಂಭಿಸಿದ್ದಾರೆ. ಮೂರು ದಿನಗಳ ಹಿಂದಿನ ಅಧಿಕಾರಿಗಳ ಸಭೆಯಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ಪ್ರಸ್ತಾವಿ ಸಿರುವುದಲ್ಲದೆ ಸಮಸ್ಯೆ ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇದೊಂದು ಅಭಿನಂದನೀಯ ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಭೆಯಲ್ಲಿ “ಉದಯವಾಣಿ’ ಹೆಸರನ್ನು ಪ್ರಸ್ತಾವಿಸದಿದ್ದರೂ ಒಂದು ವಾರದಿಂದ ನಿರಂತರವಾಗಿ ಪಾರ್ಕಿಂಗ್ ಸಮಸ್ಯೆಯ ವಿವಿಧ ಆಯಾಮಗಳನ್ನು ಜನರಿಗೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ತಿಳಿಯಪಡಿಸುವ ಪ್ರಯತ್ನ ವನ್ನು “ಉದಯವಾಣಿ’ಯು ಸುದಿನ ಸಂಚಿಕೆಯಲ್ಲಿ ನಿರಂತರವಾಗಿ ನಡೆಸುತ್ತಿದೆ.
ಈಗಾಗಲೇ ನಗರಸಭೆಯ ಕೆಲವು ಅಧಿಕಾರಿಗಳ ಅಕ್ರಮ ನಡೆಯಿಂದ ಸಮಸ್ಯೆ ಭೀಕರ ಹಂತವನ್ನು ತಲುಪಿದೆ. ಇದಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳು, “ನಗರ ಯೋಜನೆಯ ನಿಯಮಗಳನ್ನು ಗಾಳಿಗೆ ತೂರಿ, ತಮ್ಮ ವಾಣಿಜ್ಯ ಸಂಕೀರ್ಣಗಳನ್ನು ಪಾರ್ಕಿಂಗ್ ಉದ್ದೇಶಕ್ಕೆ ಬಳಸದೇ ಅನ್ಯ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವವರ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಿ’ ಎಂದು ನಗರಸಭೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆದರೆ ಇದರ ಜಾರಿ ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆ.
ಅಧಿಕಾರಿಗಳಿಗೇನು ಮಾಡುತ್ತೀರಿ? :
ಸಾರ್ವಜನಿಕರ ವಾದವೆಂದರೆ, ಅಕ್ರಮ ಎಸಗಿರುವ ಅಥವಾ ನಿಯಮವನ್ನು ಉಲ್ಲಂ ಸಿ ರುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದು ಸರಿ. ಆದರೆ ಅದಕ್ಕೆ ಸೊಪ್ಪು ಹಾಕಿದ ಅಧಿಕಾರಿಗಳನ್ನು ಏನು ಮಾಡುತ್ತೀರಿ? ಇವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಕಳೆದ 25 ವರ್ಷಗಳಲ್ಲಿ ಈ ಅಕ್ರಮ ಹೆಚ್ಚಾಗಿದ್ದು, ಆಗಿನಿಂದ ಇರುವ ಅಧಿಕಾರಿಗಳು ಮತ್ತು ಬೇರೆ ಕಡೆಗೆ ವರ್ಗಾವಣೆಗೊಂಡ ಅಧಿಕಾರಿ ಗಳಿಗೆ ನೋಟಿಸ್ ಜಾರಿ ಮಾಡಬೇಕು. ವಿವರಣೆ ಕೋರಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಅವರ ಸೇವಾ ದಾಖಲೆಗಳಲ್ಲೂ ನಮೂದಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಪ್ರಸ್ತುತ ನಿಯಮದಲ್ಲಿ ಅಕ್ರಮ ಎಸಗುವ ಅಥವಾ ಪೋಷಿಸುವ, ಬೆಂಬಲಿಸುವ ಅಧಿಕಾರಿಗಳನ್ನು ಆರೋಪ ಬಂದ ಕೂಡಲೇ ಬೇರೆಡೆಗೆ ವರ್ಗಾಯಿಸುವ ಕ್ರಮ ಶಿಕ್ಷೆ ಮಾದರಿಯಲ್ಲಿದೆ. ಆದರೆ ಅದರಿಂದ ವಾಸ್ತವದಲ್ಲಿ ಏನೂ ಆಗದು. ಅವರು ಬೇರೆಡೆಗೆ ಹೋಗಿ ಮತ್ತೆ ಅಕ್ರಮದಲ್ಲಿ ತೊಡಗುತ್ತಾರೆ. ಅದರ ಬದಲು ತನಿಖೆಗೆ ಆದೇಶಿಸಿ, ಕ್ರಮ ಕೈಗೊಳ್ಳಬೇಕು. ಆರೋಪಿ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆಗೊಂಡರೂ ತನಿಖೆ ನಿಲ್ಲಬಾರದು. ತನಿಖಾ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಬೇಕು. ಈ ನಿಯಮ ಆಂಶಿಕವಾಗಿ ಅಪರೂಪಕ್ಕೆ ಜಾರಿಯಲ್ಲಿದ್ದರೂ ಸಂಪೂರ್ಣವಾಗಿ ಜಾರಿಯಾಗಿಲ್ಲ. ಒಂದುವೇಳೆ ಅದರಲ್ಲಿ ಯಾವು ದಾದರೂ ಸಮಸ್ಯೆಯಿದ್ದರೆ ಅದಕ್ಕೂ ಸುಧಾರಣೆ ತಂದು ಅಕ್ರಮವನ್ನು ತಡೆಯಬೇಕು ಎಂಬುದು ಜನರ ಅಭಿಪ್ರಾಯ.
ಜನಪ್ರತಿನಿಧಿಗಳೇನು ಮಾಡುತ್ತಾರೆ? :
ಜನಪ್ರತಿನಿಧಿಗಳೇನು ಮಾಡುತ್ತಿರುತ್ತಾರೆ? ಅಕ್ರಮವನ್ನು ತಡೆಯುವ ಹಕ್ಕು ಮತ್ತು ಜವಾಬ್ದಾರಿ ಅವರಿಗೂ ಇದೆಯಲ್ಲವೆ? ಅಧಿಕಾರಿಗಳು ಕಣ್ಣು ಮುಚ್ಚಿ ಹಾಲು ಕುಡಿಯುವಾಗ ಜನಪ್ರತಿನಿಧಿಗಳೂ ಏಕೆ ಕಣ್ಣುಮುಚ್ಚಿಕೊಳ್ಳುತ್ತಾರೆ? ಇದು ಉದ್ದೇಶ ಪೂರ್ವಕ ನಡೆಯಂತೆ ತೋರುತ್ತದೆ. ಜನಪ್ರತಿನಿಧಿ ಗಳು ಅಕ್ರಮ ಎಸಗುವ ಮತ್ತು ಪೋಷಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸುವಂತೆ ಸರಕಾರವನ್ನು ಒತ್ತಾಯಿಸಬೇಕು. ಒಂದುವೇಳೆ ಕಾನೂನಾತ್ಮಕ ಸಮಸ್ಯೆ, ಅಡ್ಡಿಗಳಿದ್ದರೆ ಶಾಸನರೀತ್ಯಾ ತಿದ್ದುಪಡಿ ತಂದು ಸರಿಪಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಶೇ. 90ರಷ್ಟು ನಿಯಮ ಉಲ್ಲಂಘನೆ :
ಈಗಾಗಲೇ ನಗರಸಭೆಯ ಲಭ್ಯ ಅಂಕಿಅಂಶಗಳ ಪ್ರಕಾರ, ಶೇ. 90ರಷ್ಟು ಅಕ್ರಮಗಳನ್ನು ಅಧಿಕಾರಿ ಗಳೇ ಸಕ್ರಮ ಮಾಡಿಕೊಟ್ಟಿದ್ದಾರೆ. ಈಗ ಇದನ್ನು
ಸರಿಪಡಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ನಿಯಮಗಳ ಪ್ರಕಾರ ಪಾರ್ಕಿಂಗ್‌ಗೆಂದು ಮೀಸಲಿಟ್ಟ ತಳ ಅಂತಸ್ತನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಅನುಮತಿ ಕೋರಿದಾಗ, ಅಧಿಕಾರಿಗಳು ನಿರಾಕರಿಸಬೇಕು. ಆದರೆ ಉಡುಪಿ ನಗರಸಭೆ ಪ್ರಕರಣದಲ್ಲಿ ಅಧಿಕಾರಿಗಳೇ ಅನುಮತಿ ನೀಡಿ,
ಡೋರ್ ನಂಬರ್ ಕೂಡ ಕೊಟ್ಟಿದ್ದಾರೆ. ಉದ್ದಿಮೆ ದಾರರು ತೆರಿಗೆ ಕಟ್ಟುತ್ತಿದ್ದಾರೆ ಎನ್ನಲಾಗಿದೆ. ಇವರನ್ನು ಎಬ್ಬಿಸಲು ಹೊರಟರೆ ಕೋರ್ಟ್‌ಗೆ ಅಲೆದಾಡಬೇಕಾದೀತು ಎಂಬ ಭಯ ಈಗ ನಗರಸಭೆಯವರದು. ಈ ಹಿನ್ನೆಲೆಯಲ್ಲಿ ಇದು ವರೆಗೂ ಕಠಿನ ಕ್ರಮಕ್ಕೆ ಮುಂದಾಗಿಲ್ಲ ಎಂಬುದು ಪಾಲಿಕೆ ವಲಯದ ಅಭಿಪ್ರಾಯ.
ಇದು ಪ್ರತ್ಯಕ್ಷ ಅನುಭವ :
ಕಟ್ಟಡ ವಿನ್ಯಾಸ ಮತ್ತು ನಕಾಶೆ ಪರಿಶೀಲಿಸಿ ಉಡುಪಿಯ ವಾಣಿಜ್ಯ ಸಂಕೀರ್ಣಗಳ ಕಟ್ಟಡ ಪರವಾನಿಗೆ, ನೀಲ ನಕಾಶೆ ಪರಿಶೀಲಿಸಬೇಕಾಗಿದೆ. ಎಲ್ಲ ಕಟ್ಟಡಗಳ ನೆಲ ಅಂತಸ್ತುಗಳು ವಾಹನ ನಿಲುಗಡೆಗಾಗಿ ನಕ್ಷೆಯಲ್ಲಿ ಮಂಜೂರಾಗಿರುತ್ತವೆ. ಆದರೆ ಬಳಿಕ ಅವೆಲ್ಲವೂ ಪಾರ್ಕಿಂಗ್‌ಗೆ ಬದಲಾಗಿ ಅಂಗಡಿ, ಹೊಟೇಲ್ ಮೊದಲಾದ ವಾಣಿಜ್ಯ ವ್ಯಾಪಾರಕ್ಕೆ ಬಳಕೆಯಾಗುತ್ತಿವೆ. ಇದನ್ನು ಶೀಘ್ರ ತೆರವುಗೊಳಿಸಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.-ಸಿ. ಪ್ರಭಾಕರ, ಕುಕ್ಕಿಕಟ್ಟೆ, ಉಡುಪಿ
ಸಾರ್ವಜನಿಕ ಸ್ಥಳದಲ್ಲೂ ಬುಕ್ಕಿಂಗ್! :
ಅದು ಅಪರಾಹ್ನ 3.30ರ ಸಮಯ. ನಗರಸಭೆಯ ಎದುರು ಅನೇಕ ವಾಹನಗಳು ನಿಲುಗಡೆಗೊಂಡಿದ್ದವು. ಒಂದು ಕಾರು ನಿಲುಗಡೆ ಮಾಡಲು ಸಾಕಷ್ಟು ಜಾಗವಿದ್ದುದರಿಂದ ನನ್ನ ವಾಹನವನ್ನು ನಿಲುಗಡೆ ಮಾಡಲು ಹೋದೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ “ಇಲ್ಲಿ ಕಾರು ನಿಲ್ಲಿಸಬೇಡಿ, ನಾನು 20 ನಿಮಿಷಗಳಿಂದ ಬಿಸಿಲಿನಲ್ಲಿ ನಿಂತಿದ್ದೇನೆ. ಇದು ವೈದ್ಯರ ಕಾರು ನಿಲುಗಡೆಗೊಳಿಸುವ ಸ್ಥಳ. ಇನ್ನೇನು ಅವರು ಬರುವ ಹೊತ್ತಾಯಿತು’ ಎಂದ. ಆತನ ಮಾತು ಕೇಳಿ ಸಾರ್ವಜನಿಕ ರಸ್ತೆಯಲ್ಲೂ “ಮುಂಗಡ ಸ್ಥಳ ಕಾದಿರಿಸುವಿಕೆ’ಯ ಮಟ್ಟಕ್ಕೆ ನಾಗರಿಕರ ಮನಃಸ್ಥಿತಿಯನ್ನು ಉಡುಪಿಯ ವಾಹನ ನಿಲುಗಡೆ ಸಮಸ್ಯೆ ಕಸಿದುಕೊಂಡಿದೆ ಎಂದು ಅರಿವಾಗಿ ಬೇಸರವಾಯಿತು. –ಡಾ| ಶ್ರೀಶ ರಾವ್ ಕೊರಡ್ಕಲ್, ಕಟಪಾಡಿ
ವಾಹನ ಒಯ್ಯುವುದನ್ನೇ ಬಿಟ್ಟೆ :
ಪ್ರತೀ ವಾರ ನಾನು ಸ್ವಂತ ವಾಹನದಲ್ಲಿ ಮನೆಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಹಾಗೂ ಹಿರಿಯರಿಗೆ ಮಾತ್ರೆಗಳನ್ನು ತರಲು ನಗರಕ್ಕೆ ಹೋಗುತ್ತಿದ್ದೆ. ಬಹಳ ಹಿಂದಿನಿಂದಲೂ ಇದು ಆಚರಣೆಯಲ್ಲಿತ್ತು. ಆದರೆ ಈಗ ಕಷ್ಟವಾಗುತ್ತಿದೆ. ಎಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಒಂದುಚೂರು ಜಾಗ ಇದ್ದರೆ ಬೆಳಗ್ಗೆ ಕೆಲಸಕ್ಕೆ ಹೋಗುವವರು ಅಲ್ಲಿ ವಾಹನವನ್ನು ಇಟ್ಟು ಹೋಗುತ್ತಾರೆ. ಇದರಿಂದ ನಗರಕ್ಕೆ ವ್ಯವಹಾರಕ್ಕಾಗಿ ಹೋಗುವವವರಿಗೆ ಸಮಸ್ಯೆಯಾಗುತ್ತಿದೆ. ಈಗ ನಾನು ವಾಹನವನ್ನು ಬಿಟ್ಟು ಉಡುಪಿಗೆ ಬಸ್ಸಿನಲ್ಲಿ ಬಂದು ಬಸ್‌ಸ್ಟಾಂಡಿನಿಂದ ಅಗತ್ಯವಿರುವ ಅಂಗಡಿಗಳಿಗೆ ಅಟೋ ರಿಕ್ಷಾದಲ್ಲಿ ಹೋಗುತ್ತೇನೆ. ಇದರಿಂದ ನಮಗೆ ಹೆಚ್ಚಿನ ಹೊರೆಯಾಗುತ್ತಿದ್ದು, ನಮ್ಮಂಥ ಹಿರಿಯ ನಾಗಕರಿಗೆ ತುಂಬಾ ಕಷ್ಟವಾಗುತ್ತದೆ.–ಪಿ. ಪ್ರಭಾಕರ ಕಲ್ಯಾಣಿ, ಪೆರ್ಡೂರು
ಖಾಲಿ ಸ್ಥಳವನ್ನು ಪಾರ್ಕಿಂಗ್‌ಗೆ ಬಳಸಿ :
ಉಡುಪಿಯಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಬಹು ಮಹಡಿ ಪಾರ್ಕಿಂಗ್ ಕಟ್ಟಡವೇ ಪರಿಹಾರವಾಗಿದೆ. ಈ ಮಾದರಿಯನ್ನು ದೇಶದ ಹಲವು ನಗರಗಳು ಅನುಷ್ಠಾನಿಸಿ ಸೈ ಎನಿಸಿಕೊಂಡಿವೆ. ಕೆ.ಎಂ. ಮಾರ್ಗದಲ್ಲಿ ಅಲಂಕಾರ್ ಚಿತ್ರಮಂದಿರ ಎದುರು ಆಸ್ಪತ್ರೆ ಕಟ್ಟಡ ಪಂಚಾಂಗ ಹಾಕಿ ನನೆಗುದಿಗೆ ಬಿದ್ದು ವರ್ಷಗಳೇ ಕಳೆದಿವೆ. ಒಂದು ಕಡೆ ಪರಿಸ್ಥಿತಿ ಹೀಗಿರುವಾಗ ಇಲಾಖೆ ಮುಖಾಂತರ ಮಾತುಕತೆ ಮಾಡಿ ಆ ಜಾಗವನ್ನೇ ಪಾರ್ಕಿಂಗ್ ಕಟ್ಟಡವಾಗಿ ಪರಿವರ್ತಿಸುವುದು ಸೂಕ್ತ. ಇದು ಕೈಗೂಡಿದ್ದೇ ಆದರೆ ಈ ಎಲ್ಲ ಸಮಸ್ಯೆ ಪರಿಹಾರವಾಗುವುದರಲ್ಲಿ ಸಂಶಯವಿಲ್ಲ.–ಪ್ರಸನ್ನ ಕುಮಾರ, ನ್ಯಾಯವಾದಿ, ಉಡುಪಿ
ವಾಟ್ಸ್‌ಆ್ಯಪ್ ಮಾಡಿ :
ಉಡುಪಿ ನಗರದಲ್ಲಿ ವಾಹನ ನಿಲುಗಡೆಯ ಸಮಸ್ಯೆಯ ತೀವ್ರತೆ ನಿಮಗೆ ತಿಳಿದೇ ಇದೆ. ನೀವು ಈ ಕುರಿತು ಎದುರಿಸಿರುವ ಘಟನೆ, ಸಮಸ್ಯೆ ಇದ್ದರೆ ನಮಗೆ ತಿಳಿಸಿ. ಸೂಕ್ತವಾದವುಗಳನ್ನು ಪ್ರಕಟಿಸುತ್ತೇವೆ. 7618774529
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.