ಅದಮಾರು ಪರ್ಯಾಯ ಸಂಭ್ರಮಕ್ಕೆ ಕಳೆಗಟ್ಟಿದ ನಗರ
ಎಲ್ಲೆಡೆ ಹಬ್ಬದ ವಾತಾವರಣ, ಮಾರುಕಟ್ಟೆಯಲ್ಲಿ ಖರೀದಿ ಜೋರು
Team Udayavani, Jan 18, 2020, 12:28 AM IST
ಉಡುಪಿ: ಪರ್ಯಾಯದ ಸಡಗರದಲ್ಲಿರುವ ಪೊಡವಿಗೊಡೆಯ ಉಡುಪಿ ಶ್ರೀ ಕೃಷ್ಣನ ನಾಡು ಈಗಾಗಲೇ ಪರಿಸರ ಸ್ನೇಹಿ ವಸ್ತುಗಳಿಂದ ನವವಧುವಿನಂತೆ ಶೃಂಗಾರಗೊಂಡಿದ್ದು, ಜನರಲ್ಲೂ ಸಂಭ್ರಮದ ಕಳೆ ಮೂಡಿಸಿದೆ.
ಶುಕ್ರವಾರ ಬೆಳಗ್ಗೆಯಿಂದಲೇ ನಗರದಲ್ಲಿ ಜನರ ಓಡಾಟ ಹೆಚ್ಚಿದ್ದು, ಊರಪರವೂರ ಜನರು ತಂಡೋಪತಂಡವಾಗಿ ಉಡುಪಿಗೆ ಆಗಮಿಸಿ ದ್ದಾರೆ. ಸಾಮಾನ್ಯ ದಿನಗಳಿಗಿಂತ ಬಸ್ ನಿಲ್ದಾಣಗಳಲ್ಲಿ ಜನ ಸಂಚಾರ ಹೆಚ್ಚಾಗಿತ್ತು. ಇಡೀ ನಗರ ಕಳೆಗಟ್ಟುತ್ತಿರುವುದರಿಂದ ಆಗಮಿಸಿದ ಜನರಲ್ಲೂ ಹಬ್ಬದ ಸಂಭ್ರಮ ಮೂಡಿಸಿತು. ರಥಬೀದಿ, ನಗರದ ಅಂಗಡಿ ಮುಂಗಟ್ಟುಗಳಲ್ಲೂ ಜನ ಸಂದಣಿ ಇದ್ದು “ನಾಡಹಬ್ಬ’ಕ್ಕೆ ಸಿದ್ಧಗೊಳ್ಳುತ್ತಿರುವುದು ಕಂಡು ಬಂದಿದೆ.
ಶಾಪಿಂಗ್ ಮೂಡ್
ಭಕ್ತರು ಕೃಷ್ಣನ ದರ್ಶನಕ್ಕೆ ತೆರಳುವ ದೃಶ್ಯ ಬೆಳಗ್ಗಿನ ಹೊತ್ತು ಕಂಡುಬಂತು. ಮಧ್ಯಾಹ್ನದ ಹೊತ್ತು ಬಿಸಿಲ ತಾಪವನ್ನು ಲೆಕ್ಕಿಸದೆ ರಥಬೀದಿಯ ಸುತ್ತಲಿನ ವಿವಿಧ ಅಂಗಡಿ, ಮಾರುಕಟ್ಟೆಯಲ್ಲಿ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಮಹಿಳೆಯರು ಕೊಡೆಗಳನ್ನು ಹಿಡಿದುಕೊಂಡು ಸಂತೆ, ಮಠದ ಸುತ್ತಲ ಪರಿಸರ ವೀಕ್ಷಣೆ ಮಾಡುವುದು ಕಂಡುಬಂತು. ಬಡಗುಪೇಟೆ, ರಾಜಾಂಗಣ ರಸ್ತೆ, ಚಿತ್ತರಂಜನ್ ರಸ್ತೆಗಳಲ್ಲಿ ವಿದ್ಯಾರ್ಥಿಗಳೂ ಶಾಪಿಂಗ್‌ನಲ್ಲಿ ತೊಡಗಿದ್ದರು. ಇನ್ನು ಮಕ್ಕಳು ಪರ್ಯಾಯ ಸಂಭ್ರಮದ ನಿಮಿತ್ತ ಆಗಮಿಸಿದ ಸಂತೆಗಳಲ್ಲಿ ಆಟಿಕೆ ವಸ್ತುಗಳನ್ನು ಖರೀದಿಸುತ್ತಿದ್ದರು.
ವಾಹನಗಳ ಸಾಲು
ರಾಜಾಂಗಣದ ಬಳಿ ಪಾರ್ಕಿಂಗ್ ಸೇರಿ ರಥಬೀದಿಗಳ ಇಕ್ಕೆಲಗಳಲ್ಲಿ ನೂರಾರು ವಾಹನಗಳ ಸಾಲು ಬೆಳಗ್ಗಿನಿಂದಲೇ ಕಂಡು ಬಂದವು. ಅದರಲ್ಲೂ ಮುಖ್ಯವಾಗಿ ದ್ವಿಚಕ್ರವಾಹನಗಳ ಸಂಖ್ಯೆ ಹೆಚ್ಚಿತ್ತು. ನಗರದ ಹೊಟೇಲ್, ಬಟ್ಟೆ, ಚಿನ್ನದ ಅಂಗಡಿಗಳಲ್ಲೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕಿನ್ನಿಮೂಲ್ಕಿ, ಕೋರ್ಟ್ ರೋಡ್, ಹನುಮಾನ್ ಸರ್ಕಲ್, ಡಯಾನ ಸರ್ಕಲ್‌ಗಳಲ್ಲಿ ಪರ್ಯಾಯಕ್ಕೆ ಆಗಮಿಸುವವರ ವಾಹನಗಳು ಹೆಚ್ಚಿದ್ದು ಸಂಚಾರ ದಟ್ಟಣೆ ಕಂಡುಬಂದಿದೆ.
ಮೊಬೈಲ್ ಎಟಿಎಂ ವ್ಯವಸ್ಥೆ
ರಾಜಾಂಗಣ ಪಾರ್ಕಿಂಗ್ ಬಳಿ ಜನರ ಅನುಕೂಲದ ಸಲುವಾಗಿ ವಾಹನದಲ್ಲಿ ವಿಶೇಷ ಎಟಿಎಂ ಸೇವೆಯನ್ನು ಎಸ್‌ಬಿಐ ಕಲ್ಪಿಸಿದೆ. ಈ ಎಟಿಎಂ ಪರ್ಯಾಯ ಅವಧಿಯ 2 ದಿನ ಸೇವೆಗೆ ಲಭ್ಯವಿದೆ. ಪಕ್ಕದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಕರಕುಶಲ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಾಹಿತಿ ಕಾರ್ಯಕ್ರಮ ನಡೆದಿದೆ. ಇದರ ಪಕ್ಕ ಆದರ್ಶ ಆಸ್ಪತ್ರೆಯಿಂದ ಉಚಿತ ವೈದ್ಯಕೀಯ ಸೇವೆ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಇಲ್ಲೆಲ್ಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಾಹಿತಿ ಪಡೆಯುತ್ತಿರುವುದು ಕಂಡುಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.