40 ವರ್ಷದಿಂದ ವಾಸ್ತವ್ಯವಿದ್ದರೂ ಸಿಕ್ಕಿಲ್ಲ ಹಕ್ಕುಪತ್ರ
Team Udayavani, Jul 23, 2018, 6:00 AM IST
ತಲ್ಲೂರು: 40 ವರ್ಷದಿಂದ ಇವರಿಗೆ ಪುಟ್ಟ ಕ್ಯಾಂಟೀನೇ ಮನೆ. 94 ಸಿಯಡಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದರೂ, ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಇರುವ ಮನೆಗೂ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ. ಇದು ಇದು ತಲ್ಲೂರು ಪೇಟೆಯಲ್ಲಿಯೇ ಇರುವ ನಾರಾಯಣ ಶೆಟ್ಟಿ – ಗಿರಿಜಾ ದಂಪತಿಯ ಕುಟುಂಬವು ನಿವೇಶನ ಹಕ್ಕುಪತ್ರ, ವಿದ್ಯುತ್ ಸಂಪರ್ಕಕ್ಕಾಗಿ ಪಡುತ್ತಿರುವ ಸಂಕಷ್ಟದ ಕಥೆ.
ನಮಗೆ ಮಾತ್ರ ಯಾಕಿಲ್ಲ?
ಹಲವು ವರ್ಷಗಳಿಂದ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಮೆಸ್ಕಾಂಗೆ ಅರ್ಜಿ ಹಾಕಿದರೂ, ಮನೆ ಕಟ್ಟಿರುವ ಜಾಗ ಗೋಮಾಳವೆಂದು ಹೇಳಿ ತಲ್ಲೂರು ಗ್ರಾಮ ಪಂಚಾಯತ್ ಸಿಬಂದಿ ನಿರಾಕ್ಷೇಪಣಾ ಪತ್ರ ನೀಡಲು ಹಿಂದೇಟು ಹಾಕಿದ್ದಾರೆ. ಆದರೆ ಸುತ್ತಮುತ್ತಲಿರುವ ಅಂಗಡಿ ಸಹಿತ ಇನ್ನಿತರ ವಾಣಿಜ್ಯ ಮಳಿಗೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ನೀಡಿದ್ದಾರೆ. ನಮ್ಮದೊಂದು ಪುಟ್ಟ ಕ್ಯಾಂಟೀನ್/ಮನೆಗೆ ಯಾಕೆ ಕೊಡುತ್ತಿಲ್ಲ ಎನ್ನುವುದು ಈ ದಂಪತಿಯ ಪ್ರಶ್ನೆ.
ಕ್ಯಾಂಟೀನಲ್ಲೇ ವಾಸ
ಈ ದಂಪತಿಗೆ ಕ್ಯಾಂಟೀನ್ ಮನೆಯಾಗಿದೆ. 3 ವರ್ಷದ ಹಿಂದೆ ನಿವೇಶನಕ್ಕಾಗಿ 94 ಸಿಯಡಿ ಅರ್ಜಿ ಸಲ್ಲಿಸಿದ್ದೇವೆ. ಆದರೆ ಈವರೆಗೆ ಹಕ್ಕುಪತ್ರ ಮಾತ್ರ ಸಿಕ್ಕಿಲ್ಲ. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಆರ್ಥಿಕ ಸಂಕಷ್ಟವೂ ಇರುವುದರಿಂದ ಬೇರೆ ಕಡೆಗೆ ಹೋಗಿ ಮನೆ ಕಟ್ಟಿ ಬದುಕುವುದು ಕಷ್ಟವಾಗಿದೆ ಎನ್ನುತ್ತಾರೆ. ನಾರಾಯಣ ಶೆಟ್ಟಿ ಮನೆಗೆ ವಿದ್ಯುತ್ ಸಂಪರ್ಕ ಇಲ್ಲ ಎನ್ನುವುದರ ಈ ಕುರಿತು “ಉದಯವಾಣಿ’ ಕಳೆದ ಜನವರಿಯಲ್ಲಿ ವಿಶೇಷ ವರದಿ ಮೂಲಕ ಗಮನಸೆಳೆದಿತ್ತು. ಆ ಬಳಿಕ ಅಂದರೆ ತಲ್ಲೂರು ಗ್ರಾ.ಪಂ. ವತಿಯಿಂದ ಕಳೆದ ಮಾರ್ಚ್‌ನಲ್ಲಿ ಜಿ.ಪಂ. ಸದಸ್ಯೆ ಜ್ಯೋತಿಯವರು ನಾರಾಯಣ ಶೆಟ್ಟಿ ಅವರ ಮನೆಗೆ ಸೋಲಾರ್ ದೀಪವನ್ನು ನೀಡಿದ್ದರು.
ಬೆಳಕಾಗದ “ಜ್ಯೋತಿ’
2015ರಲ್ಲಿ ಕೇಂದ್ರ ಸರಕಾರವು ಎಲ್ಲ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ದೀನ ದಯಾಳ ಉಪಾಧ್ಯಾಯ “ಗ್ರಾಮಜ್ಯೋತಿ’ ಯೋಜನೆ ಜಾರಿಗೆ ತಂದಿದ್ದು, ಇದರಂತೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬ ಕರೆಂಟಿಲ್ಲ ಅಂದರೆ ಅರ್ಜಿ ಸಲ್ಲಿಸಬಹುದು. ಆದರೆ ನಾರಾಯಣ ಶೆಟ್ಟಿ ಅವರು ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್ ಎಲ್ಲ ಹೊಂದಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.
ಕರೆಂಟು ಇಲ್ಲ, ಸೀಮೆಎಣ್ಣೆಯೂ ಸಿಗುತ್ತಿಲ್ಲ
ಮಗಳು ಪಿಯುಸಿ, ಮಗ ಎಸೆಸೆಲ್ಸಿ ಓದುತ್ತಿದ್ದಾರೆ. ನಮಗೆ ಕರೆಂಟಂತೂ ಇಲ್ಲ. ಆದರೆ ಕ್ಯಾಂಟೀನ್‌ಗಾಗಿ ಪಡಿತರ ಚೀಟಿಯಲ್ಲಿ ಗ್ಯಾಸ್ ಪಡೆಯುತ್ತಿರುವುದ ರಿಂದ ಸೀಮೆಎಣ್ಣೆಯೂ ಸಿಗುತ್ತಿಲ್ಲ. ಕಳೆದ ಮಾರ್ಚ್‌ನಲ್ಲಿ ಪಂಚಾಯತ್‌ನವರು ಸೋಲಾರ್ ಕೊಟ್ಟದ್ದು ಸಹಾಯವಾಗಿದೆ. ಆದರೆ ಈಗ ಮಳೆಗಾಲ. 1 ಗಂಟೆಗಿಂತ ಜಾಸ್ತಿ ಸೋಲಾರ್ ಉರಿಯುತ್ತಿಲ್ಲ ಎನ್ನುವುದು ನಾರಾಯಣ ಶೆಟ್ಟಿ ಅವರ ಪತ್ನಿ ಗಿರಿಜಾ ಅವರ ನೋವಿನ ನುಡಿ.
ಕರೆಂಟ್‌ಗೆ ಅನುಮತಿ ನೀಡಿ
ಜೀವನೋಪಾಯಕ್ಕೆ ಮನೆಯಲ್ಲೇ ಹಲವು ವರ್ಷಗಳಿಂದ ಒಂದು ಪುಟ್ಟ ಕ್ಯಾಂಟೀನ್ ನಡೆಸುತ್ತಿದ್ದರೂ, ಅದರಲ್ಲಿ ಏನೂ ಸಿಗುವುದಿಲ್ಲ. ಆದರೂ ಹೇಗೋ ದಿನ ನಡೆಯುತ್ತಿದೆ. ಪಂಚಾಯತ್‌ನವರು ಕರೆಂಟು ಕೊಡಲು ಅನುಮತಿ ನೀಡಿದರೆ ನಮಗೆ ಬಹಳ ದೊಡ್ಡ ಉಪಕಾರವಾಗುತ್ತದೆ.
– ನಾರಾಯಣ ಶೆಟ್ಟಿ, ತಲ್ಲೂರು
300 ಅರ್ಜಿ ಬಾಕಿ ಇವೆ
ನಾರಾಯಣ ಶೆಟ್ಟಿಯವರಿಗೆ ಗೋಮಾಳ ಜಾಗವಾದ್ದರಿಂದ ನಿರಪೇಕ್ಷಣಾ ಪತ್ರ ಕೊಟ್ಟಿಲ್ಲ. ಅಕ್ಕ- ಪಕ್ಕ ಪಂಚಾಯತ್ ಕಟ್ಟಡವಾದ್ದರಿಂದ ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನು ನಿವೇಶನ ಹಕ್ಕುಪತ್ರಕ್ಕಾಗಿ ತಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 300 ಮಂದಿ ಅರ್ಜಿ ಸಲ್ಲಿಸಿದ್ದು, ಅವರ್ಯಾರಿಗೂ ಸಿಕ್ಕಿಲ್ಲ. ಈಗಾಗಲೇ 50 ಸೆಂಟ್ಸ್ ಜಾಗ ಗುರುತಿಸಿದ್ದು, ಆದರೆ ಅದು ಸಾಕಾಗಲ್ಲ, ಹೆಚ್ಚಿನ ಜಾಗ ಕಾಯ್ದಿರಿಸಲು ತಹಶೀಲ್ದಾರ್‌ಗೆ ತಿಳಿಸಲಾಗಿದೆ.
– ಆನಂದ ಬಿಲ್ಲವ
ತಲ್ಲೂರು ಗ್ರಾ.ಪಂ. ಅಧ್ಯಕ್ಷ
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.