ಉಡುಪಿ ಜಿಲ್ಲೆಯಲ್ಲಿ ನೆಲಗಡಲೆ ಬೀಜದ ಕೊರತೆ
Team Udayavani, Nov 30, 2018, 1:20 AM IST
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತದ ಕೃಷಿಯನ್ನೇ ನೆಚ್ಚಿಕೊಂಡವರು ಹೆಚ್ಚಿದ್ದರೆ, ಹಿಂಗಾರು ಹಂಗಾಮಿನಲ್ಲಿ ನೀರು, ಹವಾಮಾನಕ್ಕೆ ತಕ್ಕಂತೆ ನೆಲಗಡಲೆ ಕೃಷಿಯನ್ನು ಅವಲಂಬಿಸಿಕೊಂಡವರು ಹೆಚ್ಚಿದ್ದಾರೆ. ಆದರೆ ಈಗ ನೆಲಗಡಲೆ ಬಿತ್ತನೆ ಪ್ರಕ್ರಿಯೆ ಆರಂಭವಾದರೂ ಅಗತ್ಯವಿರುವಷ್ಟು ನೆಲಗಡಲೆ ಬೀಜ ಸಿಗುತ್ತಿಲ್ಲ. ಉಡುಪಿ ಜಿಲ್ಲೆಯ ಹವಾಮಾನಕ್ಕೆ ತಕ್ಕಂತೆ ಕಡಿಮೆ ತೇವಾಂಶದಲ್ಲಿ, ಕಡಿಮೆ ದಿನದಲ್ಲಿ ಬೆಳೆಯುವ ಬೀಜದ ಅಗತ್ಯ ಹೆಚ್ಚಿದೆ. ಆದರೆ ಅದರ ಕೊರತೆಯಿದೆ.
ನೆಲಗಡಲೆ ಬೆಳೆಯುವ ರೈತರು ಉಡುಪಿ ಜಿಲ್ಲೆಯಾದ್ಯಂತ ಇಲ್ಲದಿದ್ದರೂ ಕೋಟ, ಕುಂದಾಪುರ, ಬೈಂದೂರು ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿದ್ದು, ಸ್ವಲ್ಪ ಭಾಗ ಮಾತ್ರ ವಂಡ್ಸೆ ಹೋಬಳಿಯಲ್ಲಿ ಕಾಣಸಿಗುತ್ತಾರೆ. ಒಟ್ಟು ಸುಮಾರು 18,000 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಕೃಷಿಯನ್ನು ಬೆಳೆಯಲಾಗುತ್ತದೆ. ಅಂದಾಜು 4 ಸಾವಿರಕ್ಕೂ ಹೆಚ್ಚು ರೈತರು ಹಿಂಗಾರು ಹಂಗಾಮಿನಲ್ಲಿ ಇದನ್ನೇ ನೆಚ್ಚಿಕೊಂಡಿದ್ದಾರೆ. ಅದರಲ್ಲೂ ಕಾರ್ಕಡ, ಸಾಸ್ತಾನ, ಗುಂಡ್ಮಿ, ಸಾಲಿಗ್ರಾಮ, ಉಪ್ಪುಂದ, ನಾಗೂರು, ಕಿರಿಮಂಜೇಶ್ವರ, ಬೈಂದೂರು ಭಾಗದಲ್ಲಿಯೇ ಹೆಚ್ಚು ಮಂದಿ ರೈತರು ನೆಲಗಡಲೆಯನ್ನು ಬೆಳೆಯುತ್ತಾರೆ.
ಕಡಿಮೆ ತೇವಾಂಶದ ಬೀಜ ಅಗತ್ಯ
ಶೇಂಗ ಕೃಷಿಗೆ 2 ರೀತಿಯ ತಳಿಗಳಿದ್ದು, 120 ದಿನದಲ್ಲಿ ಹಾಗೂ 90 ದಿನಗಳಲ್ಲಿ ಬೆಳೆಯುವ ಬೀಜಗಳಿವೆ. ಕುಂದಾಪುರ, ಬೈಂದೂರು, ಕೋಟ ಭಾಗದಲ್ಲಿ ಉಪ್ಪು ನೀರಿನ ಪ್ರಭಾವವೂ ಜಾಸ್ತಿಯಿರುವುದರಿಂದ ಕಡಿಮೆ ತೇವಾಂಶ ಹಾಗೂ ಕಡಿಮೆ ದಿನಗಳಲ್ಲಿ ಬೆಳೆಯುವ ಬೀಜದ ಅಗತ್ಯವಿದೆ. ಇಲ್ಲಿ ಶೇ. 60ರಷ್ಟು ಜವಾರಿ (90 ದಿನಗಳಲ್ಲಿ) ಬೀಜ ಬೇಕಿದ್ದರೆ, ಜಿಪಿ ಬಿಡಿ-4 (120 ದಿನಗಳಲ್ಲಿ) ಶೇ. 40ರಷ್ಟು ಮಾತ್ರ ಅಗತ್ಯವಿದೆ. ಆದರೆ ಇಲ್ಲಿಗೆ ಹೆಚ್ಚಾಗಿ ಹೈಬ್ರಿಡ್ ತಳಿ ಅಂದರೆ 120 ದಿನಗಳಲ್ಲಿ ಬೆಳೆಯುವ ಜಿಪಿಬಿಡಿ – 4 ತಳಿಯನ್ನೇ ಇಲಾಖೆಯಿಂದ ಹೆಚ್ಚಾಗಿ ಪೂರೈಕೆ ಮಾಡುತ್ತಾರೆ ಎನ್ನುವುದು ರೈತರ ವಾದ. ಇಲಾಖೆಯಲ್ಲಾದರೆ 1 ಕೆ.ಜಿ. ಶೇಂಗಾ ಬೀಜಕ್ಕೆ 47 ರೂ. ಇದ್ದರೆ, ಹೊರಗಡೆ 65 ರೂ. ನೀಡಬೇಕಾಗುತ್ತದೆ.
ಬೀಜದ ಕೊರತೆಯಿಲ್ಲ
ಉಡುಪಿ ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ನೆಲಗಡಲೆ ಕೃಷಿಕರು ಇದ್ದಾರೆ. ಈಗಾಗಲೇ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ನೆಲಗಡಲೆ ಬೀಜವನ್ನು ಪೂರೈಕೆ ಮಾಡಲಾಗಿದೆ. ಅಗತ್ಯವಿರುವ ರೈತರು ಅಲ್ಲಿಂದಲೇ ಪಡೆಯಬಹುದು. ಜಿಲ್ಲೆಯಲ್ಲಿ 375 ಕ್ವಿಂಟಾಲ್ ಟಿಎಂಎ – 2 ಬೀಜ ಹಾಗೂ 245 ಕ್ವಿಂಟಾಲ್ ಜಿಪಿಬಿಡಿ – 4 ಬೀಜವನ್ನು ಪೂರೈಕೆ ಮಾಡಲಾಗಿದೆ.
– ಚಂದ್ರಶೇಖರ್ ಶೆಟ್ಟಿ, ಉಪನಿರ್ದೇಶಕರು, ಕೃಷಿ ಇಲಾಖೆ ಉಡುಪಿ
ಹುಬ್ಬಳ್ಳಿಯಿಂದ ತರಿಸಲಾಗಿದೆ
ಈ ಬಾರಿ ನ. 22 ರಿಂದ ನೆಲಗಡಲೆ ಬೀಜವನ್ನು ಇಲಾಖೆಯಿಂದ ಕೊಡುತ್ತಿದ್ದಾರೆ. ಆದರೆ ಇದು ತಡವಾಯಿತು. ನವೆಂಬರ್ ಎರಡನೇ ವಾರದಿಂದಲೇ ಕೊಡಬೇಕಾಗಿತ್ತು. ಉಪ್ಪುಂದ, ನಾಗೂರು, ನಾಯ್ಕನಕಟ್ಟೆ ಭಾಗಗಳಲ್ಲಿ ಕಡಿಮೆ ತೇವಾಂಶ ಇರುವ ಜಾಗವೇ ಹೆಚ್ಚಿದೆ. ನಮಗೆ ಅಗತ್ಯವಿರುವಷ್ಟು ಶೇಂಗಾ ಬೀಜ ಇಲ್ಲದೆ ಹುಬ್ಬಳ್ಳಿಯಿಂದ ಹೆಚ್ಚಿನ ಹಣ ಕೊಟ್ಟು ತರಿಸಲಾಗಿದೆ.
– ನಾಗರಾಜ್ ಉಪ್ಪುಂದ, ಶೇಂಗಾ ಕೃಷಿಕರು
— ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.