ರಾಮಮಂದಿರ ಪಕ್ಷಾತೀತ, ರಾಷ್ಟ್ರೀಯತೆಯ ವಿಚಾರ
Team Udayavani, Nov 24, 2018, 10:12 AM IST
ಉಡುಪಿ: ರಾಮಮಂದಿರ ನಿರ್ಮಾಣ ಪಕ್ಷಾತೀತವಾದ ರಾಷ್ಟ್ರೀಯತೆಯ ವಿಚಾರ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದರು.
ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಮಸೂದೆ ಮಂಡಿಸಬೇಕೆಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್ ವತಿಯಿಂದ ಡಿ. 2ರಂದು ಉಡುಪಿಯಲ್ಲಿ ಜರಗಲಿರುವ ಜನಾಗ್ರಹ ಸಭೆಯ ಪೂರ್ವಭಾವಿಯಾಗಿ ಉಡುಪಿ ಶ್ರೀಕೃಷ್ಣ ಮಠ ಆವರಣದ ನ್ಯೂ ಯಾತ್ರಿ ನಿವಾಸದ ಕಾರ್ಯಾಲಯದಲ್ಲಿ ಶುಕ್ರವಾರ ಕರಸೇವಕರನ್ನು ಗೌರವಿಸಿ ಆಶೀರ್ವಚನ ನೀಡಿದರು.
ಮಂದಿರ ಸ್ಪಷ್ಟ ಉಲ್ಲೇಖ
ಮಸೀದಿ ಕೆಡಹುವುದಕ್ಕೆ ನಿರ್ಣಯವಾಗಿರಲಿಲ್ಲ. ಅಲ್ಲಿ ಕರಸೇವೆಯಿಂದ ಶುಚಿಗೊಳಿಸಲು ಮಾತ್ರ ನಿರ್ಣಯವಾಗಿತ್ತು. ಆದರೆ ಅಲ್ಲಿ ಸೇರಿದ್ದ ಲಕ್ಷಾಂತರ ಕರ ಸೇವಕರು ನಿರ್ಣಯಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರು. ಅವರನ್ನು ತಡೆಯಲು ಯತ್ನಿಸಿದೆ. ಆದರೆ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಮುಂದೆ ಅಲ್ಲಿ ಪ್ರತಿಮೆ, ಸ್ವಸ್ತಿಕಾ, ವಿಗ್ರಹಗಳು ಪತ್ತೆಯಾದವು. ಶಿಲಾ ಲೇಖದಲ್ಲಿ ರಾಮಮಂದಿರದ ಸ್ಪಷ್ಟ ಉಲ್ಲೇಖವಿತ್ತು ಎಂದು ಶ್ರೀಗಳು ಹೇಳಿದರು.
ಕರಸೇವಕರಾದ ಸೋಮಶೇಖರ ಭಟ್, ಜಯಂತ್ ಮಲ್ಪೆ, ನಾರಾಯಣ ಕಾಮತ್ ಶಿರ್ವ, ಸುಬ್ರಹ್ಮಣ್ಯ ಸಾಮಗ,
ಶ್ಯಾಮ್‌ಪ್ರಸಾದ್ ಕುಡ್ವ, ಮೋಹನ್ ಉಪಾಧ್ಯ, ರಮೇಶ್ ಶೆಟ್ಟಿಗಾರ್, ದಿನೇಶ್ ಪಾಟ್ಕರ್ ಮಟ್ಟಾರು, ರಾಮ
ಚಂದ್ರ ಆಚಾರ್ಯ ಕಿನ್ನಿಮೂಲ್ಕಿ, ಕೇಶವ ಶೆಟ್ಟಿಗಾರ್ ಮಂದಾರ್ತಿ, ಮಾಧವ ಪ್ರಭು ಶಿರ್ವ, ಅನಂತ್ ನಾಯಕ್, ಅಣ್ಣಪ್ಪ ಆಚಾರ್ಯ, ಶ್ರೀಧರ್ ಆಚಾರ್ಯ, ಮಂಜುನಾಥ ಶೆಟ್ಟಿ, ಜಯರಾಂ ಶೆಟ್ಟಿ, ಜಗನ್ನಾಥ ಶೆಟ್ಟಿ ಮತ್ತು ಸುಕುಮಾರ್ ಅವರನ್ನು ಶ್ರೀಗಳು ಸಮ್ಮಾನಿಸಿದರು. ಸೋಮಶೇಖರ್ ಭಟ್ ಅವರು ನೆನಪುಗಳನ್ನು ಹಂಚಿಕೊಂಡರು. ಪ್ರಮುಖರಾದ ಪ್ರಮೋದ್ ಶೆಟ್ಟಿ, ಸಂತೋಷ್ ಸುವರ್ಣ ಬೊಳೆ, ಸುನಿಲ್ ಕೆ.ಆರ್., ದಿನೇಶ್ ಮೆಂಡನ್ ಉಪಸ್ಥಿತರಿದ್ದರು. ಸುರೇಂದ್ರ ಕೋಟೇಶ್ವರ ಸ್ವಾಗತಿಸಿದರು. ಭ್ಯಾಗ್ಯಶ್ರೀ ಐತಾಳ ಕಾರ್ಯಕ್ರಮ ನಿರ್ವಹಿಸಿದರು.
ಆಕಸ್ಮಿಕ ಪ್ರತಿಷ್ಠಾಪನೆ, ಮೊಲಿ-ವೆಂಕಟರಾಮನ್ ಸಹಕಾರ
ನಾನು ಸೇರಿದಂತೆ ಹಲವು ಮಠಾಧೀಶರು ಅಯೋಧ್ಯೆಯಲ್ಲಿದ್ದೆವು. ಮೊದಲ ಬಾರಿ ನಮ್ಮನ್ನು ಅಯೋಧ್ಯೆಯಲ್ಲಿ ವಶಕ್ಕೆ ತೆಗೆದುಕೊಂಡು ಅಯೋಧ್ಯೆಯಿಂದ ಹೊರಗೆ ಬಂಧನದಲ್ಲಿಡಲಾಯಿತು. ನನಗೆ ಅಯೋಧ್ಯೆ ಪ್ರವೇಶಿಸಲು ಅವಕಾಶ ನೀಡದಿದ್ದಾಗ ಅಂದಿನ ರಾಷ್ಟ್ರಪತಿ ವೆಂಕಟ ರಾಮನ್‌ಗೆ ಅರ್ಜಿ ಹಾಕಿದ್ದೆ. ಅನಂತರ ಅವಕಾಶ ದೊರೆಯಿತು. ಅಯೋಧ್ಯೆಯಲ್ಲಿ ಕರಸೇವೆ ಮರುದಿನ ಆಕಸ್ಮಿಕವಾಗಿ ನಾನೇ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದೆ. ಅಂದು ಉಡುಪಿ, ದ.ಕ. ಜಿಲ್ಲೆಯ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದೀಗ ನಿರ್ಮಾಣಕ್ಕಾಗಿ ನಡೆಯುವ ಜನಾಗ್ರಹ ಸಭೆಯಲ್ಲಿಯೂ ಪಾಲ್ಗೊಳ್ಳಬೇಕು ಎಂದು ಶ್ರೀಗಳು ಹೇಳಿದರು.