ಫೆಬ್ರವರಿ ಅಂತ್ಯಕ್ಕೆ ಮನೆ ಬಾಗಿಲಿಗೆ ಪಿಂಚಣಿ
ಉಡುಪಿಯಲ್ಲಿ ಪೈಲಟ್ ಯೋಜನೆ ಅನುಷ್ಠಾನ ಆರಂಭ
Team Udayavani, Feb 15, 2020, 5:32 AM IST
ಉಡುಪಿ: ಸಾಮಾಜಿಕ ಭದ್ರತೆ ಯೋಜನೆಯಡಿ ವಿವಿಧ ಮಾಸಿಕ ಪಿಂಚಣಿಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೇ ತಲುಪಿಸುವ ಯೋಜನೆ ಉಡುಪಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬಂದಿದ್ದು, ಕಂದಾಯ ಅಧಿಕಾರಿಗಳು ಅರ್ಹರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ.
ಅದರ ಸಾಧಕ ಬಾಧಕಗಳನ್ನು ತಿಳಿದುಕೊಳ್ಳಲು ಉಡುಪಿಯನ್ನು ಆರಿಸಲಾ ಗಿತ್ತು. ಜಿಲ್ಲಾಧಿಕಾರಿಗಳ ವಿಶೇಷ ಆಸಕ್ತಿಯಿಂದ ಆಂದೋಲನ ರೂಪದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಸಾರ್ವಜನಿಕ ರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಗುರುತಿಸುವಿಕೆ ಹೇಗೆ?
ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳಲ್ಲಿ ಎಲ್ಲ ಕುಟುಂಬಗಳ ಮಾಹಿತಿಗಳಿವೆ. ಆಧಾರ್ ಸಂಖ್ಯೆ ಮತ್ತು ಕುಟುಂಬದಲ್ಲಿ 60 ವರ್ಷ ತುಂಬಿದವರ ವಿವರ, ಜಾತಿ, ವಯಸ್ಸು, ಲಿಂಗ, ಪಿಂಚಣಿ ಪಡೆಯಲು ಮಾನದಂಡವಾದ ವಾರ್ಷಿಕ ವರಮಾನ, ಆಸ್ತಿ ವಿವರ, ಕುಟುಂಬ ವಿವರ ಇತ್ಯಾದಿ ಲಭ್ಯವಿದ್ದು, ಅರ್ಹ ಕುಟುಂಬಗಳನ್ನು ಪಟ್ಟಿ ಮಾಡಲಾಗುತ್ತದೆ. ಪಟ್ಟಿಯ ಜತೆಗೆ ಅಧಿಕಾರಿಗಳು ಫಲಾನುಭವಿಗಳ ಮನೆಗಳಿಗೆ ತೆರಳಿ ಅವರು ಅರ್ಹರು ಹೌದೋ ಅಲ್ಲವೋ ಎಂದು ದೃಢಪಡಿಸಿಕೊಳ್ಳುತ್ತಾರೆ. ಅರ್ಹರಿಂದ ಪಿಂಚಣಿಗೆ ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸುತ್ತಾರೆ. ತಾತ್ಕಾಲಿಕವಾಗಿ ಪಿಂಚಣಿ ಮಂಜೂರಾತಿ ಆದೇಶದ ನಕಲು ಪ್ರತಿಯನ್ನು ಕೂಡ ನೀಡುತ್ತಾರೆ. ಬಳಿಕ ನಾಡಕಚೇರಿ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿದ ಬಳಿಕ ವೇತನದ ಮೂಲ ಪ್ರತಿಯನ್ನು ಅಂಚೆ ಮೂಲಕ ಕಳಿಸಿಕೊಡಲಾಗುತ್ತದೆ.
ಉದ್ದೇಶವೇನು?
ಸಾಮಾಜಿಕ ಭದ್ರತೆ ಯೋಜನೆಯ ಸೌಲಭ್ಯವನ್ನು ಅರ್ಹರಿಗೆ ದೊರಕಿಸು ವುದು ಯೋಜನೆಯ ಉದ್ದೇಶ. ವೃದ್ಧರು, ಅಂಗವಿಕಲರು, ವಿಧವೆಯರು ಸರಕಾರಿ ಕಚೇರಿಗಳಿಗೆ ಅಲೆಯುವುದು ಇದರಿಂದ ತಪ್ಪುತ್ತದೆ. ಮಧ್ಯವರ್ತಿಗಳ ಕಿರುಕುಳ ನಿಲ್ಲುತ್ತದೆ. ಅಕ್ರಮಗಳಿಗೆ ಕಡಿವಾಣ ಬೀಳುತ್ತದೆ.
ಫೆಬ್ರವರಿ ಅಂತ್ಯಕ್ಕೆ
ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆ ಪೂರ್ಣಗೊಳಿ ಸುವ ನಿರೀಕ್ಷೆ ಯನ್ನು ಜಿಲ್ಲಾಡಳಿತ ಇರಿಸಿಕೊಂಡಿದೆ.
ಉತ್ತಮ ಸ್ಪಂದನೆ
ಜಿಲ್ಲಾಧಿಕಾರಿಗಳ ಸೂಚನೆಯಂತೆ ಮನೆಗಳಿಗೆ ತೆರಳಿ ಪಿಂಚಣಿ ಯೋಜನೆಗೆ ಅರ್ಜಿ ಪಡೆಯುತ್ತಿದ್ದೇವೆ. ಉತ್ತಮ ಸ್ಪಂದನೆ ಲಭಿಸುತ್ತಿದೆ. ದಿನವೊಂದಕ್ಕೆ 25ರಷ್ಟು ಮನೆಗಳನ್ನು ತಲುಪಲು ಸಾಧ್ಯವಾಗುತ್ತಿದೆ ಎಂದು ಕೋಟ ಉಪತಹಶೀಲ್ದಾರ್ ವಿಶ್ವನಾಥ ಕಿದಿಯೂರು ತಿಳಿಸಿದ್ದಾರೆ.
ಜಿಲ್ಲಾಡಳಿತವೇ ಮನೆ ಬಾಗಿಲಿಗೆ ತೆರಳಿ ಪಿಂಚಣಿ ಯೋಜನೆ ಸವಲತ್ತನ್ನು ನೀಡುತ್ತಿದೆ. ಉಡುಪಿ ಜಿಲ್ಲೆಯಲ್ಲಿ 3,000 ಮಂದಿಗೆ ಏಕಕಾಲದಲ್ಲಿ ಸೌಲಭ್ಯವನ್ನು ವಿತರಿಸಲಾಗುತ್ತಿದೆ. ಕಂದಾಯ ಸಚಿವ ಆರ್. ಅಶೋಕ್ ಅವರು ಫೆಬ್ರವರಿ ಅಂತ್ಯದೊಳಗೆ ಜಿಲ್ಲೆಗಾಗಮಿಸಿ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ವಿತರಿಸಲಿದ್ದಾರೆ. ಅನಂತರವೂ ಅಭಿಯಾನ ಮುಂದುವರಿಯಲಿದೆ.
– ಜಿ. ಜಗದೀಶ್ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.