ನಂದಳಿಕೆ: ಕವಿ ಮುದ್ದಣ ಸ್ಮಾರಕ ನಿರ್ಮಾಣಕ್ಕೆ ಮುನ್ನುಡಿ
Team Udayavani, Sep 19, 2018, 1:40 AM IST
ವಿಶೇಷ ವರದಿ – ಬೆಳ್ಮಣ್ : ಕನ್ನಡದ ಮುಂಗೋಳಿ ಖ್ಯಾತಿಯ ಕವಿ ಮುದ್ದಣನ (ನಂದಳಿಕೆ ಲಕ್ಷ್ಮೀನಾರಣಪ್ಪ) ಹೆಸರಲ್ಲಿ ನಂದಳಿಕೆಯಲ್ಲಿ ಭವ್ಯ ಸ್ಮಾರಕ ನಿರ್ಮಿಸುವ ಬಗ್ಗೆ ಸ್ಥಳೀಯ ಸಂಘವೊಂದು ಹೆಜ್ಜೆ ಇರಿಸಿದ್ದು ಸುಮಾರು 9 ಕೋಟಿ ರೂ. ಬಜೆಟ್‌ನ ಯೋಜನೆ ತಯಾರಾಗಿದೆ. ಈ ಹಿಂದೆ ಇದಕ್ಕೆ 9 ಎಕರೆ ಜಮೀನು ಮಂಜೂರಾಗಿತ್ತು. ಆದರೆ ಯಾವುದೇ ಬೆಳವಣಿಗೆಗಳು ನಡೆದಿರಲಿಲ್ಲ. ಈಗ ನಂದಳಿಕೆ ಕವಿ ಮುದ್ದಣ ಮಿತ್ರಮಂಡಳಿ(ರಿ) ಕವಿಯ ಹೆಸರಲ್ಲಿ ಸ್ಮಾರಕ ನಿರ್ಮಿಸಲು ಉದ್ದೇಶಿಸಿದೆ.
ಬೃಹತ್ ಕ್ರೀಡಾಂಗಣ
ಮುದ್ದಣ ಕವಿಯಾಗಿ ಹೆಸರಾಗಿದ್ದರೂ ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರೆಂಬ ಉಲ್ಲೇಖವಿದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯಿಕ ಚಿಂತನೆಗಳ ಜತೆ ಕ್ರೀಡಾಪೋಷಣೆಯ ದೃಷ್ಟಿಯಿಂದ ಯೋಜನೆಯಲ್ಲಿ 2 ಕೋಟಿ ರೂ. ಅಂದಾಜಿನ ಬೃಹತ್ ಕ್ರೀಡಾಂಗಣ ನಿರ್ಮಾಣದ ಉದ್ದೇವಿದೆ ಎಂದು ಮಿತ್ರ ಮಂಡಳಿಯ ಕಾರ್ಯದರ್ಶಿ ರವಿರಾಜ್ ಭಟ್ ತಿಳಿಸಿದ್ದಾರೆ.
ಮಿತ್ರಮಂಡಳಿಯ ಬಗ್ಗೆ …
ಮುದ್ದಣನ ಹೆಸರಿನಲ್ಲೇ ಇರುವ ನಂದಳಿಕೆ ಕವಿ ಮುದ್ದಣ ಸ್ಮಾರಕ ಮಿತ್ರಮಂಡಳಿ ರಲ್ಲಿ ಪ್ರಾರಂಭಗೊಂಡು ಈಗಾಗಲೇ ಮುದ್ದಣನ ಹೆಸರಿನಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. 24/1/58ರಲ್ಲಿ ಸುಂದರರಾಮ ಹೆಗ್ಡೆ ಆಧ್ಯಕ್ಷರಾಗಿ, ಮೂಡುಮನೆ ಭಾಸ್ಕರ ರಾವ್ ಪ್ರಧಾನ ಕಾರ್ಯದರ್ಶಿಯಾಗಿ ಪ್ರಾರಂಭಗೊಂಡ ಕವಿ ಮುದ್ದಣ ರೈತ ಸಂಘ 1979ರ ಜನವರಿ 24ರಂದು ಮಿತ್ರ ಮಂಡಳಿಯ ರೂಪ ಪಡೆಯಿತು. ಈಗ ಮುದ್ದಣ ಹೆಸರು ಶಾಶ್ವತವಾಗಿರಿಸಲು ಊರಿನಲ್ಲಿ ಸ್ಮಾರಕ ಮತ್ತು ಅಧ್ಯಯನ ಕೇಂದ್ರ ನಿರ್ಮಾಣಕ್ಕೆ ಮುಂದಾಗಿದೆ.
ಸಚಿವೆಗೆ ಮನವಿ
ಸೋಮವಾರ ಮಿತ್ರಮಂಡಳಿಯ ಅಧ್ಯಕ್ಷ ಸುಹಾಸ್ ಹೆಗ್ಡೆ ಯೋಜನೆಯ ಕಡತಗಳೊಂದಿಗೆ ಸಮಾನ ಮನಸ್ಕರ ನಿಯೋಗದ ಜತೆ ಸಚಿವೆ ಡಾ| ಜಯಮಾಲಾರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ನಿಯೋಗದಲ್ಲಿ ನಿವೃತ್ತ ಶಿಕ್ಷಕ ಎನ್. ತುಕಾರಾಮ ಶೆಟ್ಟಿ, ಸತೀಶ್ ಮಾಡ, ಸತೀಶ್ ಶೆಟ್ಟಿ, ಯೋಗೀಶ್ ಶೆಟ್ಟಿ ಮತ್ತಿತರರಿದ್ದರು.
ಅಧ್ಯಯನ ಕೇಂದ್ರಕ್ಕೆ ಆದ್ಯತೆ
ನಂದಳಿಕೆ ಕವಿ ಮುದ್ದಣ ಪ್ರತಿಷ್ಠಾನದ ಮೂಲಕ ಅಧ್ಯಯನ ಕೇಂದ್ರ ತೆರೆಯುವ ಉದ್ದೇಶವಿದೆ. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಅಥವಾ ಹಂಪಿಯ ಕನ್ನಡ ವಿಶ್ವವಿದ್ಯಾಲಯದೊಂದಿಗೆ ಕೇಂದ್ರವನ್ನು ಸಂಯೋಜಿಸಿ ಪಿಎಚ್‌ಡಿ ಅಧ್ಯಯನಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಲಾಗಿದೆ.
ಯೋಜನೆಯಲ್ಲೇನಿದೆ ..?
ಈ ಯೋಜನೆಯು ಗ್ರಂಥಾಲಯ, ಅಧ್ಯಯನ ಕೊಠಡಿಗಳು, ಕವಿ ಕುಟೀರಗಳು, ಅತಿಥಿ ಗೃಹಗಳು, ಆಡಳಿತ ಕಛೇರಿ, ನಿರ್ದೇಶಕರು ಹಾಗೂ ಸಿಬ್ಬಂದಿಗಳ ಕಛೇರಿ, ಸಾಂಸ್ಕೃತಿಕ ಸಭಾಭವನ, ಬಯಲು ರಂಗಮಂದಿರ, ಯಕ್ಷಗಾನ ತರಬೇತಿ ಕೇಂದ್ರ, ಬ್ರಹತ್ ಕ್ರೀಡಾಂಗಣ, ವ್ಯಾಯಾಮ ಶಾಲೆ, ಜಾನಪದ ಮತ್ತು ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತಿನ್ನಿತರ ಪರಿಕಲ್ಪನೆಗಳನ್ನು ಹೊಂದಿದೆ. ಈ ಮೂಲಕ ರಾಜ್ಯದ ಇತರ ಮೇರು ಕವಿಗಳಾದ ಕುವೆಂಪು, ಬೇಂದ್ರೆ ಮತ್ತಿನ್ನಿತರ ಕವಿಗಳಿಗೆ ಸಿಕ್ಕಿದ ಗೌರವ ನಮ್ಮೂರ ಹೆಮ್ಮೆಯ ಕವಿ ಮುದ್ದಣನಿಗೂ ಸಿಗಬೇಕೆಂದು ಮಿತ್ರ ಮಂಡಳಿಯ ಅಧ್ಯಕ್ಷ ಸುಹಾಸ್ ಹೆಗ್ಡೆ ಅಭಿಮತ.
ಇಲಾಖೆ ಸ್ಪಂದನೆ ಅಗತ್ಯ
ಮುದ್ದಣ ಅಧ್ಯಯನ ಕೇಂದ್ರ ಸ್ಥಾಪನೆಗೆ ಮುಂದಾಗಿದ್ದೇವೆ. ಸರಕಾರದ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದರೆ ಮಾದರಿ ಯೋಜನೆಯೊಂದನ್ನು ಮಾಡಿ ತೋರಿಸುತ್ತೇವೆ.
– ಸುಹಾಸ್ ಹೆಗ್ಡೆ, ಅಧ್ಯಕ್ಷ, ಕವಿ ಮುದ್ದಣ ಮಿತ್ರ ಮಂಡಳಿ
ಯೋಚನೆ ಸಕಾಲಿಕ
ಕವಿ ಮುದ್ದಣ ಕನ್ನಡ ನಾಡು ಕಂಡ ಶ್ರೇಷ್ಠ ಕವಿ. ಈತನ ಹುಟ್ಟೂರಿನಲ್ಲಿ ಸ್ಮಾರಕ ನಿರ್ಮಾಣದ ಜತೆ ಆಧ್ಯಯನ ಕೇಂದ್ರ ನಿರ್ಮಾಣದ ಬಗ್ಗೆ ಯೋಚನೆ ಸಕಾಲಿಕ.
– ಎನ್.ತುಕಾರಾಮ ಶೆಟ್ಟಿ, ನಿವೃತ್ತ ಶಿಕ್ಷಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.