ರಾಜಕಾರಣ, ಪತ್ರಿಕೋದ್ಯಮ ಅಂದು-ಇಂದು: ವಿಚಾರ ಸಂಕಿರಣ
Team Udayavani, Aug 22, 2017, 9:10 AM IST
ಕುಂದಾಪುರ: ಪ್ರಜಾಪ್ರಭುತ್ವ ಹಾಗೂ ಪತ್ರಿಕೋದ್ಯಮ ಪರಿಷ್ಕರಣೆಗೆ ಒಳಗಾಗಬೇಕಿದೆ. ಹಣದ ಪ್ರಭಾವ ಮಾಧ್ಯಮದಲ್ಲಿ ನಡೆಯುತ್ತಿದೆ ಎನ್ನುವ ವಿಚಾರಗಳು ಕೇಳಿ ಬರುತ್ತಿವೆ. ಪತ್ರಿಕೆಗಳು ಲಾಭ – ನಷ್ಟದ ವ್ಯವಹಾರದಲ್ಲಿ ತೊಡಗದೇ ಸತ್ಯಾಸತ್ಯತೆ ಬಿತ್ತರಿಸುವುದರೊಂದಿಗೆ ಜನರಿಗೆ ಉಪಯೋಗವಾಗಬಲ್ಲ ವಿಚಾರಗಳತ್ತ ಹೆಚ್ಚಿನ ಗಮನಕೊಡಬೇಕಾಗಿದೆ ಎಂದು ಹಿರಿಯ ಪತ್ರಕರ್ತ ಈಶ್ವರ ದೈತೋಟ ಹೇಳಿದರು.
ಅವರು ರವಿವಾರ ಸಂಜೆ ಕಲಾಕ್ಷೇತ್ರ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರದ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ರಾಜಕಾರಣ ಮತ್ತು ಪತ್ರಿಕೋದ್ಯಮ ಅಂದು – ಇಂದು ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಅಂದು ಹಾಗೂ ಇಂದು ಎನ್ನುವ ವಿಚಾರ ಮಂಡಿಸಿ ಮಾತನಾಡಿದರು.
ರಾಜ್ಯ ಬಿಜೆಪಿ ವಕ್ತಾರ ವಾಮನ ಆಚಾರ್ಯ ಅವರು ವಿಚಾರಸಂಕಿರಣವನ್ನು ಉದ್ಘಾಟಿಸಿದರು.
ಜನಪ್ರತಿನಿಧಿಯ ಮುಷ್ಟಿಯಲ್ಲಿ ಪಕ್ಷ: ರಾಜಕಾರಣ ಅಂದು-ಇಂದು ಈ ಕುರಿತು ಮಾತನಾಡಿದ ಮಂಗಳೂರು ಎಂ.ಐ.ಎಫ್. ಡಿ. ಕಾಲೇಜಿನ ನಿರ್ದೇಶಕ ಎಂ.ಜಿ. ಹೆಗ್ಡೆ ಮಾತನಾಡಿ, ಪಕ್ಷದ ನಾಯಕರು, ಕಾರ್ಯಕರ್ತರು ಒಂದೇ ಸ್ಥಿತಿಯಲ್ಲಿದ್ದ ಪಕ್ಷದ ರಾಜಕಾರಣ ಇಂದು ಪರಿವರ್ತನೆಯ ಹಾದಿಯನ್ನು ಕಂಡಿರುವುದನ್ನು ರಾಜಕೀಯ ಅಂದು ಹಾಗೂ ಇಂದಿನ ಸ್ಥಿತಿಯ ಅರಿವಾಗುತ್ತದೆ. ಇಂದು ಚುನಾಯಿತ ಜನಪ್ರತಿನಿಧಿಗಳ ಕಪಿ ಮುಷ್ಟಿಯಲ್ಲಿ ಪಕ್ಷ ಇದೆ ಹೊರತು ಪಕ್ಷದ ಮುಷ್ಠಿಯಲ್ಲಿ ಜನಪ್ರತಿನಿಧಿಗಳಿಲ್ಲ ಎನ್ನುವುದಕ್ಕೆ ಪಕ್ಷಾಂತರಗಳ ಅತಿರೇಕವೇ ಉತ್ತರ ಕೊಡುತ್ತದೆ ಎಂದರು.
ರಾಜಕೀಯ ಹಳೆಯ ವಿಜ್ಞಾನವಿದ್ಧಂತೆ: ರಾಜ್ಯ ಬಿಜೆಪಿ ವಕ್ತಾರ ವಾಮನಾಚಾರ್ಯ ರಾಜಕಾರಣ ಅಂದು-ಇಂದು ಈ ಕುರಿತು ಮಾತನಾಡಿ, ರಾಜಕಾರಣ ಇಂದು ಸ್ವಾರ್ಥಕ್ಕಾಗಿ ಹಾಗೂ ಹಣಕ್ಕಾಗಿ ನಡೆಯುತ್ತಾ ಗೊಂದಲದ ಮೂರ್ತ ಸ್ವರೂಪ ಪಡೆದುಕೊಳ್ಳುತ್ತಿದೆ ಎನ್ನುವುದು ಬೇಸರದ ವಿಚಾರ. ಸ್ವಾತಂತ್ರÂ ಬಂದ ಅನಂತರ ದೇಶ ಅನೇಕ ಬಗೆಯ ರಾಜಕಾರಣವನ್ನು ಕಂಡುಕೊಂಡವು. ಸೆಕ್ಯುಲರಿಜಂ, ಬಡತನ, ದಲಿತ, ರೈತರ ಹಾಗೂ ಕಾರ್ಮಿಕರ ರಾಜಕೀಯ ಕಂಡುಕೊಂಡ ದೇಶಕ್ಕೆ ಪ್ರಸ್ತುತ ಪ್ರದಾನಿ ನರೇಂದ್ರ ಮೋದಿ ಅವರು ಪ್ರಗತಿಯ ರಾಜಕಾರಣವನ್ನು ಜನರ ಮುಂದಿಟ್ಟಿದ್ದಾರೆ. ಇದು ಪ್ರಸ್ತುತವೂ ಆಗಿದೆ ಎಂದರು.
ರಾಜಕಾರಣದಲ್ಲಿ ಬದಲಾವಣೆ ಅಗತ್ಯ: ಮಾಜಿ ಸಂಸದೆ ತೇಜಸ್ವಿನಿ ಗೌಡ ಮಾತನಾಡಿ. ಇಂದು ಹಣ ಬಲ ಹಾಗೂ ತೋಳು ಬಲದಿಂದ ರಾಜಕಾರಣ ನಡೆಯುತ್ತಿದೆ. ದೇಶದ ಪ್ರಗತಿಯ ಬಗ್ಗೆ ಚಿಂತಿಸಬೇಕಾದ ಸಮಯದಲ್ಲಿ ಆಹಾರ ಭದ್ರತೆ ಹಕ್ಕು ಕಾಯಿದೆ ಜಾರಿಗೆ ತರುವ ಆವಶ್ಯಕತೆ ಇಲ್ಲ. ಬದಲಾವಣೆ ಜನರ ಮುಂದಿದೆ. ಒಳ್ಳೆಯ ರಾಜಕೀಯ ವ್ಯವಸ್ಥೆಯನ್ನು ಸೃಷ್ಟಿಸುವ ಹೊಣೆಗಾರಿಕೆ ಅವರ ಮೇಲಿದೆ ಎಂದರು.
ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಉಪನ್ಯಾಸಕ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.