ಊರು ದಾಟಲು ಸೇತುವೆಯ ಬೇಕಿದೆ!
Team Udayavani, Aug 11, 2021, 3:10 AM IST
ಕಾರ್ಕಳ: ಮಾಳ ಗ್ರಾಮದ ಪೊಲ್ಲಡ್ಕ ಬಾಲ್ದಬೆಟ್ಟು ಎಂಬಲ್ಲಿ ಹರಿಯುವ ನದಿಗೆ ಸೇತುವೆಯಾಗಬೇಕೆನ್ನುವುದು ಇಲ್ಲಿನವರ ದಶಕಗಳ ಕನಸು. ಆದರೇ ಸೇತುವೆ ಇದುವರೆಗೂ ಆಗಿಲ್ಲ.
ಬಾಲ್ದಬೆಟ್ಟು ಬಳಿ ಹೊಳೆಗೆ ಸೇತುವೆಯಿಲ್ಲದೆ ಬಾಲ್ದಬೆಟ್ಟು, ದೇವಸ್ಯ, ಆಂಚೋಟ್ಟು, ಊರಾಜೆ, ಮುಗೇರ್ಕಳ ಈ ಭಾಗಗಳ ನಾಗರಿಕರು ಪೊಲ್ಲಡ್ಕ ಮೂಲಕ ಬಜಗೋಳಿ ಸಂಪರ್ಕಿಸಲು ಸಮಸ್ಯೆ ಎದುರಿಸುತ್ತಿರುತ್ತಾರೆ. ಮಳೆಗಾಲದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಳ್ಳುವ ಮೊದಲೇ ಮಳೆ ಜೋರು ಬಂದರೆ ಹೊಳೆಯಲ್ಲಿ ನೆರೆ ಹೆಚ್ಚು ಹರಿಯುತ್ತದೆ. ಆಗ ಹೊಳೆಯ ಒಂದು ಬದಿಯಲ್ಲಿ ಮಕ್ಕಳು, ಮಹಿಳೆಯರು ನಿಂತು ನೆರೆ ನೀರು ಎಂದು ಇಳಿಯುತ್ತದೋ ಎಂದು ಕಾದು ಕುಳಿತಿರುತ್ತಾರೆ. ನೆರೆ ಇಳಿಯದಿದ್ದಾಗ ಅನಿವಾರ್ಯವಾಗಿ ಸುಮಾರು 10ರಿಂದ 12 ಕಿ.ಮೀ. ದೂರ ಸುತ್ತು ಬಳಸಿ ಬಜಗೋಳಿ ಪೇಟೆ, ಕಾರ್ಕಳಕ್ಕೆ ಪ್ರಯಾಣಿಸಬೇಕಾಗುತ್ತದೆ.
ಬಜಗೋಳಿ-ಕುದುರೆಮುಖ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಕಡಾರಿ ಬಳಿ ಬಲ ಭಾಗದಲ್ಲಿ ಅನತಿ ದೂರದ ಹೊಳೆಯಲ್ಲಿ ಸೇತುವೆ ನಿರ್ಮಾಣವಾಗಬೇಕಿದೆ. ಮಾಳ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರುತ್ತದೆ. ಹೊಳೆ ದಾಟಿದರೆ ಅತ್ತ ಭಾಗದಲ್ಲಿ ಕೃಷಿಯನ್ನೇ ಅವಲಂಬಿಸಿಕೊಂಡ ಸುಮಾರು 50ಕ್ಕೂ ಅಧಿಕ ರೈತ ಕುಟುಂಬಗಳಿವೆ. ಕೃಷಿಕರು, ಕೂಲಿ ಕಾರ್ಮಿಕರು ಎಲ್ಲ ವರ್ಗದವರು ಈ ಭಾಗದಲ್ಲಿ ವಾಸವಿದ್ದು ಸಂಪರ್ಕ ಸೇತುವೆಯಿಲ್ಲ ಎನ್ನುವುದೇ ಅವರಿಗಿರುವ ಚಿಂತೆಯಾಗಿದೆ.
ಮಳೆಗಾಲದಲ್ಲಿ ನದಿ ಉಕ್ಕಿ ಹರಿಯುತ್ತದೆ. ಶಾಲಾ ಮಕ್ಕಳು, ಕೃಷಿಕರು, ಮಹಿಳೆಯರು, ವೃದ್ಧರು ನದಿ ದಾಟಲು ಹರಸಾಹಸ ಪಡುತ್ತಾರೆ. ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂದು ಸ್ಥಳಿಯ ನಿವಾಸಿಗಳೆಲ್ಲ ಸೇರಿ ಅಡಿಕೆ ಮರ, ಸ್ಥಳೀಯ ಉತ್ಪನ್ನಗಳನ್ನು ಬಳಸಿ ತಾತ್ಕಾಲಿಕ ಮರದ ಕಾಲು ಸಂಕ ನಿರ್ಮಿಸಿಕೊಳ್ಳುತ್ತಿದ್ದಾರೆ. 70 ವರ್ಷಗಳಿಂದಲೂ ಈ ಸಮಸ್ಯೆ ಇದೆ ಎನ್ನುತ್ತಾರೆ ಸ್ಥಳೀಯರು.
ಶಾಸಕರ ಸಚಿವರಾಗಿರುವುದು ವಿಶ್ವಾಸ ಹೆಚ್ಚಿಸಿದೆ :
ಕ್ಷೇತ್ರದ ಶಾಸಕರು ಸಚಿವರಾಗಿರುವುದು ಖುಷಿ ತಂದಿದೆ. ಕ್ಷೇತ್ರಕ್ಕೆ ಹೆಚ್ಚು ಅನುದಾನ ತರಿಸುವ ಪ್ರಯತ್ನ ಅವರಿಂದ ನಡೆಯುತ್ತದೆ. ಆಗ ಇಲ್ಲಿ ಸೇತುವೆ ನಿರ್ಮಾಣ ಮಾಡಿಯೇ ಮಾಡುತ್ತಾರೆ ಎನ್ನುವ ನಂಬಿಕೆಯಿದೆ. ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡುತ್ತೇವೆ. ಕ್ಷೇತ್ರದ ಸಂಸದರೂ ಕೇಂದ್ರದಲ್ಲಿ ಸಚಿವೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಖಂಡಿತ ನಮ್ಮ ಕನಸು ಈಡೇರುತ್ತದೆ ಎನ್ನುವ ವಿಶ್ವಾಸ ನಮಗೆಲ್ಲ ಇದ್ದೆ ಇದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ವಾಸುದೇವ ನಾಯಕ್ ಅವರು.
ಬೇಡಿಕೆ ಪಟ್ಟಿಯಲ್ಲಿ ನಮ್ಮದು ಸೇರಿದೆ :
ಕಾರ್ಕಳದ ಸಮಗ್ರ ಅಭಿವೃದ್ಧಿಗೆ 2018ರಲ್ಲಿ ಶಾಸಕರು ಅನುದಾನಕ್ಕೆ ಪ್ರಯತ್ನಿಸಿದ್ದರು. ಕ್ಷೇತ್ರದ ಒಟ್ಟು 108 ಕೋ.ರೂ. ಅನುದಾನದ ಪಟ್ಟಿಯಲ್ಲಿ ತಾಲೂಕಿನ ಪ್ರಮುಖ 12 ರಸ್ತೆಗಳು, 9 ಸೇತುವೆಗಳ ನಿರ್ಮಾಣವು ಸೇರಿದೆ ಎಂದು ಹೇಳಲಾಗಿತ್ತು. ಅದರಲ್ಲಿ ಮಾಳ ಗ್ರಾಮದ ಇದೇ ನೆಲ್ಲಿಕಟ್ಟೆ ಬಳಿ ಸೇತುವೆ ನಿರ್ಮಾಣಕ್ಕೆಂದು 100 ಕೋ.ರೂ. ಇದೆ ಎಂದು ಹೇಳಲಾಗಿತ್ತು. ಅದರಲ್ಲಿ ಸೇತುವೆ ಇಕ್ಕೆಲಗಳ ರಸ್ತೆ ನಿರ್ಮಾಣವೂ ಸೇರಿತ್ತು. ಆದರೇ ಯಾವುದೋ ಕಾರಣದಿಂದ ಅದಾಗಿಲ್ಲ, ಮುಂದೆ ಆಗಬಹುದು ಎಂದು ಅಲ್ಲಿಯ ನಿವಾಸಿಗಳು ಹೇಳುತ್ತಾರೆ.
ಇತರ ಸಮಸ್ಯೆಗಳೇನು? :
- ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆ ಗಂಭೀರವಾಗಿದೆ. ವಿದ್ಯುತ್ ಕೂಡ ಕೈಕೊಡುತ್ತಿರುತ್ತದೆ.
- ಕಾಡುಪ್ರಾಣಿಗಳ ಹಾವಳಿ ಹೆಚ್ಚಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿವೆ. ಕೃಷಿಗೂ ತೊಂದರೆ ಮಾಡುತ್ತಿರುತ್ತದೆ.
- ಈ ಭಾಗಕ್ಕೆ ಸಂಪರ್ಕಿಸುವ ರಸ್ತೆಗಳು ಕೂಡ ನಾದುರಸ್ಥಿತಿಯಲ್ಲಿದ್ದು ಸಂಪರ್ಕ ರಸ್ತೆ ಸಮಸ್ಯೆಯೂ ಇದೆ.
ಪ್ರಯತ್ನ ನಡೆಯುತ್ತಿದೆ:
ಸೇತುವೆ ನಿರ್ಮಾಣ ಸಂಬಂಧ ಪ್ರಯತ್ನಗಳು ನಡೆಯುತ್ತಲೇ ಇವೆ. ಅಲ್ಲಿನ ವಾರ್ಡ್ ಸಮಿತಿ ಅಧ್ಯಕ್ಷರ ಜತೆಯೂ ಚರ್ಚಿಸಿದ್ದೇವೆ. ಎಲ್ಲರ ಸಹಕಾರದಿಂದ ಸಾಧ್ಯವಾಗಲಿದೆ.-ಮಲ್ಲಿಕಾ ಶೆಟ್ಟಿ , ಅಧ್ಯಕ್ಷೆ ಗ್ರಾ.ಪಂ. ಮಾಳ
ಈಡೇರುವ ನಿರೀಕ್ಷೆ:
ಹೊಳೆಗೆ ಶಾಶ್ವತ ಸೇತುವೆ ಬೇಕೆನ್ನುವ ಬೇಡಿಕೆ ಹಿಂದಿನಿಂದಲೂ ಇದೆ. ಬಹುತೇಕ ಕಡೆಗಳಲ್ಲಿ ಸೇತುವೆ, ರಸ್ತೆಗಳು ಇತ್ತೀಚೆನ ದಿನಗಳಲ್ಲಿ ನಡೆದಿವೆ. ಇಲ್ಲಿಗೂ ಶೀಘ್ರ ಈಡೇರುವ ನಿರೀಕ್ಷೆಯಲ್ಲಿದ್ದೇವೆ-ಹರೀಶ್ಚಂದ್ರ ತೆಂಡೂಲ್ಕರ್, ಸ್ಥಳೀಯರು
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.