ಕಾಪು: ಟರ್ಪಾಲಿನ ಮನೆಯಲ್ಲಿ ನಾಲ್ಕು ಮಂದಿ ವಾಸ, ಅಸಹಾಯಕತೆಯ ನಡುವೆಯೇ ಸಂಕಷ್ಟದ ಜೀವನ
Team Udayavani, Jun 21, 2021, 10:09 AM IST
ಕಾಪು: ಒಂದಡೆ ಕಿತ್ತು ತಿನ್ನುವ ಬಡತನ, ಮತ್ತೊಂದೆಡೆ ಹಾಸಿಗೆಯಲ್ಲಿ ಮಲಗಿರುವ ಮನೆಗೆ ಆಧಾರವಾಗಬೇಕಿದ್ದ ಕಿರಿಯ ಮಗ, ಇದರ ನಡುವೆ ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿರುವ ಹರುಕು-ಮುರುಕು ಮನೆ. ಇದು ಕಾಪು ಪುರಸಭಾ ವ್ಯಾಪ್ತಿಯ ಮಲ್ಲಾರು ಅಚ್ಚಾಲು ಗ್ರಾಮದ ಬಡ ವರ್ಗದ ನಾಗವೇಣಿ ಶೇರ್ವೆಗಾರ್ ಮತ್ತವರ ಮನೆಯವರ ಕರುಣಾಜನಕ ವ್ಯಥೆಯ ಕಥೆ.
ಕಾಪು ಪುರಸಭೆ ವ್ಯಾಪ್ತಿಯ ಮಲ್ಲಾರು ಅಚ್ಚಾಲು ಪರಿಸರದಲ್ಲಿ ಮನೆಗೆಲಸದೊಂದಿಗೆ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಮನೆಯೊಡತಿ ನಾಗವೇಣಿ ಶೇರ್ವೆಗಾರ್ (55 ವ) ಅವರು ತನ್ನ ವಯೋವೃದ್ಧ ಪತಿ ವಿಠಲ ಶೇರ್ವೇಗಾರ್ (62 ವ), ಕೆಲಸವಿಲ್ಲದೇ ಇರುವ ಹಿರಿಯ ಮಗ ಸುಧೀರ್, ಅನಾರೋಗ್ಯ ಪೀಡಿತನಾಗಿ ಹಾಸಿಗೆಯಲ್ಲಿ ಮಲಗಿರುವ ಮನೆಗೆ ಆಧಾರವಾಗ ಬೇಕಿದ್ದ ಕಿರಿಯ ಮಗ ಸುನೀಲ್ ಇವರೊಂದಿಗೆ ಟರ್ಪಾಲು ಸೂರಿನ ಮನೆಯಲ್ಲಿ ಭಗವಂತನನ್ನೇ ನಂಬಿ ಜೀವನ ಕಳೆಯುತ್ತಿದ್ದು ದಾನಿಗಳು ಮತ್ತು ಸಹೃದಯಿಗಳ ಸಹಕಾರದ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:ಪೊಲಿಪು, ಮೂಳೂರು ಕಡಲ್ಕೊರೆತ : ಶಾಸಕ ಲಾಲಾಜಿ ಮೆಂಡನ್ ವೀಕ್ಷಣೆ
ವೃತ್ತಿಯಲ್ಲಿ ದರ್ಜಿ (ಟೈಲರ್) ಯಾಗಿದ್ದ ವಿಠಲ ಶೇರ್ವೆಗಾರ್ ಕೆಲವು ವರ್ಷಗಳಿಂದ ಆಧುನಿಕತೆಯ ಭರಾಟೆಯಿಂದಾಗಿ ವೃತ್ತಿ ಬದುಕಿಗೆ ತಿಲಾಂಜಲಿಯಿಟ್ಟಿದ್ದು ಜೀವನ ಕಳೆಯಲು ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಮನೆಗೆ ಆಸರೆಯಾಗಬೇಕಿದ್ದ ಹಿರಿಯ ಮಗ ಸುಧಿರ್ ಸದಾ ಚಿಂತೆಯಲ್ಲೇ ಮುಳುಗಿದವನಂತಿದ್ದು, ಮನೆಗೆ ಆಧಾರವಾಗಿದ್ದ ಕಿರಿಯ ಮಗ ಸುನೀಲ್ ಕೆಲಸ ಮಾಡುತ್ತಿರುವಾಗಲೇ ಮರದಿಂದ ಬಿದ್ದು ಕಾಲಿಗೆ ಗಂಭೀರ ಏಟಾಗಿ ಐದಾರು ತಿಂಗಳಿನಿಂದ ಮಲಗಿದ್ದಲ್ಲಿಂದ ಏಳಲಾಗದೇ ಇದ್ದಲ್ಲೇ ಎಲ್ಲವನ್ನೂ ನಿಭಾಯಿಸುವ ಅಸಹಾಯಕತೆಗೆ ಸಿಲುಕಿದ್ದಾರೆ.
ಮನೆಯ ಆಧಾರವಾಗಬೇಕಿದ್ದ ಕಿರಿಯ ಮಗ ಸುನೀಲ್ ಅವರು ಮರವೇರಿ ಕೆಲಸ ಮಾಡುವ ಸಂದರ್ಭ ಮರದಿಂದ ಬಿದ್ದು ಕಾಲು ಮುರಿತ ಗೊಂಡಿದ್ದು ನಡೆಯಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಮೂಲೆ ಸೇರಿ ಹಲವು ವರ್ಷಗಳು ಉರುಳುತ್ತಿವೆಯೇ ಹೊರತು ಗಾಯದಿಂದ ಗುಣಮುಖವಾಗುವ ಲಕ್ಷಣಗಳು ಮಾತ್ರ ತೋಚುತ್ತಿಲ್ಲ. ಸರಿಯಾದ ವೈದ್ಯಕೀಯ ಚಿಕಿತ್ಸೆ ಮಾಡಲು ಹಣಕಾಸಿನ ಅಭಾವ ಕಾಡುತ್ತಿದ್ದು, ಎಲ್ಲವನ್ನೂ ಭಗವಂತನ ಮೇಲೆ ಬಿಟ್ಟು ಆಕಾಶ ನೋಡುತ್ತಾ ಕುಳಿತುಕೊಳ್ಳುವಂತಹ ದಯನೀಯ ಸ್ಥಿತಿಗೆ ಬಡ ಕುಟುಂಬ ಸಿಲುಕಿ ಬಿಟ್ಟಿದೆ.
ರೇಷನ್ ಕಿಟ್ ನೀಡಲೆಂದು ತೆರಳಿದ ವೇಳೆ ಬೆಳಕಿಗೆ ಬಂದ ಕುಟುಂಬದ ಸ್ಥಿತಿ : ಉಳಿಯಾರು ಫ್ರೆಂಡ್ಸ್ – ಟೀಂ ಕಟ್ಟೆ ತಂಡದ ಸದಸ್ಯರು ರೇಷನ್ ಕಿಟ್ ನೀಡಲೆಂದು ಹೋದಾಗ ಅವರ ಮನೆಯ ಪರಿಆಸ್ಥಿತಿ ಬಯಲಾಯಿತು. ಮಳೆಯ ನಡುವೆ ಮಲಗಲು ಜಾಗವಿಲ್ಲದೇ ಪರದಾಡುತ್ತಿರುವುದು ಬೆಳಕಿಗೆ ಬಂದಿತ್ತು. ಬಿಪಿಎಲ್ ರೇಷನ್ ಕಾರ್ಡ್ ವೊಂದನ್ನು ಬಿಟ್ಟರೆ ಸರಕಾರದ ಬೇರೆ ಯಾವ ಸವಲತ್ತುಗಳು ಈ ಬಡ ಕುಟುಂಬವನ್ನು ತಲುಪುತ್ತಿಲ್ಲ. ಸಮರ್ಪಕ ದಾಖಲೆಯಿಲ್ಲದೇ, ಮಾಹಿತಿ, ಮಾರ್ಗದರ್ಶನವಿಲ್ಲದೇ ಇರುವುದರಿಂದ ಕನಿಷ್ಠ ಪಕ್ಷ ಬ್ಯಾಂಕ್ ಖಾತೆಯನ್ನೂ ಹೊಂದಿಲ್ಲದೇ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಬಡತನದ ಬೇಗೆಯಲ್ಲಿ ಬಡ ಕುಟುಂಬವು ನೊಂದು ಬೆಂದು ಹೋಗಿದ್ದು, ಸ್ವಾಭಿಮಾನ ಬಿಟ್ಟು ಇತರರ ಬಳಿ ಸಹಾಯ ಯಾಚಿಸುವ ಸ್ಥಿತಿಗೆ ಬಂದು ತಲುಪಿವೆ.
ಇದನ್ನೂ ಓದಿ: ನೇಷನ್ ಫಸ್ಟ್ ತಂಡದಿಂದ ನಾಗಸಂಪಿಗೆ ಭತ್ತದ ತಳಿಯ ನೇಜಿ ನಾಟಿ
ನಾಗವೇಣಿ ಸೇರ್ವೆಗಾರ್ ಮತ್ತು ಅವರ ಕುಟುಂಬಕ್ಕೆ ಅಗತ್ಯವಾದ ಸೂರು, ಅವರ ಮಗ ಸುನೀಲ್ ಸೇರ್ವೇಗಾರ್ ಅವರ ವೈದ್ಯಕೀಯ ಖರ್ಚಿಗಾಗಿ ತುರ್ತಾಗಿ ಹಣಕಾಸಿನ ವ್ಯವಸ್ಥೆಗಳು ಜೋಡಣೆಯಾಗಬೇಕಿದ್ದು, ಉಳಿಯಾರು ಫ್ರೆಂಡ್ಸ್ – ಟೀಂ ಕಟ್ಟೆ ತಂಡ ಸದಸ್ಯರು ಯುವಕರು ತಮ್ಮ ಕೈಲಾದ ಸಹಾಯವನ್ನು ಮಾಡಲು ಮುಂದೆ ಬಂದಿದ್ದಾರೆ. ಕುಟುಂಬದ ಹಿರಿಯ ಜೀವಗಳು ನೆಮ್ಮದಿಯ ಜೀವನಕ್ಕಾಗಿ ಹೋರಾಟ ಮಾಡುತ್ತಿದ್ದು ಸಹೃದಯಿ ದಾನಿಗಳು ಮಾನವೀಯತೆಯ ನೆಲೆಯಲ್ಲಿ ಸಹಕರಿಸುವಂತೆ ಉಳಿಯಾರು ಫ್ರೆಂಡ್ಸ್ – ಟೀಂ ಕಟ್ಟೆ ತಂಡದ ಸದಸ್ಯರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಉಳಿಯಾರು ಫ್ರೆಂಡ್ಸ್ – ಟೀಂ ಕಟ್ಟೆ ತಂಡದ ಸದಸ್ಯ ರೂಪೇಶ್ ಪೂಜಾರಿ ಮಾತನಾಡಿ, ಹೊಸದಾಗಿ ಅಸ್ತಿತ್ವಕ್ಕೆ ಬಂದ ಉಳಿಯಾರು ಫ್ರೆಂಡ್ಸ್ – ಟೀಂ ಕಟ್ಟೆ ತಂಡದ ತಂಡವು ಮಾನವೀಯ ನೆಲೆಯಲ್ಲಿ ಬಡ ಕುಟುಂಬಕ್ಕೆ ಆಸರೆಗಾಗಿ ಮನೆ ಕಟ್ಟಿ ಕೊಡಲು ಮುಂದಾಗಿದ್ದು, ಪಾರದರ್ಶಕ ರೀತಿಯಲ್ಲಿ ಖರ್ಚು ವೆಚ್ಚಗಳನ್ನು ನಿಭಾಯಿಸಲು ನಿರ್ಧರಿಸಿದೆ. ಮನೆಯವರ ಬಳಿ ಬ್ಯಾಂಕ್ ಖಾತೆಯೂ ಇಲ್ಲದಿರುವುದರಿಂದ ತಂಡದ ಸದಸ್ಯರ ಖಾತೆಗೆ ಹಣ ಪಡೆದುಕೊಂಡು ಮನೆ ನಿರ್ಮಿಸಿ ಕೊಡಲಾಗುವುದು. ದಾನಿಗಳು ಸ್ವತಃ ಬಂದು, ಅವರ ಮನೆಯ ಪರಿಸ್ಥಿತಿಯನ್ನು ಅವಲೋಕಿಸಿ ಧನ ಸಹಾಯವನ್ನು ಒದಗಿಸಬಹುದಾಗಿದೆ.
ನಾಗವೇಣಿ ಶೇರ್ವೆಗಾರ್ ಮತ್ತು ಅವರ ಕುಟುಂಬದ ನೋವಿಗೆ ಧ್ವನಿಯಾಗುವ ಪ್ರಯತ್ನಕ್ಕೆ ಕೈ ಜೋಡಿಸಲು ಇಚ್ಛಿಸುವ ದಾನಿಗಳು ಉಳಿಯಾರು ಫ್ರೆಂಡ್ಸ್ – ಟೀಂ ಕಟ್ಟೆ ತಂಡದ ಸದಸ್ಯ ರೂಪೇಶ್ ಅವರ ಗೂಗಲ್ ಪೇ ಅಕೌಂಟ್ 9964840148 ಅಥವಾ Roopesh
Karnataka Bank 4572500100260601
Ifsc : KARB0000457 ಈ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸ ಬಹುದು.
ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.