2 ವರ್ಷಗಳ ಆಯುರ್ವೇದಪೂರ್ವ ಕೋರ್ಸ್‌ಗೆ ಸಿದ್ಧತೆ : ಡಾ| ರಘುರಾಮ ಭಟ್
Team Udayavani, Oct 8, 2022, 11:00 AM IST
ಉಡುಪಿ : ಆಯುರ್ವೇದ ಶಿಕ್ಷಣಕ್ಕೆ ಪೂರಕವಾಗಿ ಭಾರತೀಯ ಗುರುಕುಲ ಮಾದರಿಯ ಎರಡು ವರ್ಷಗಳ ಕೋರ್ಸನ್ನು ಆರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೊಸದಿಲ್ಲಿಯ ಆಯುಷ್ ಮಂತ್ರಾಲಯದ ಮೆಡಿಕಲ್ ಅಸೆಸ್‌ಮೆಂಟ್ ಆ್ಯಂಡ್ ರೇಟಿಂಗ್ ಬೋರ್ಡ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಅಧ್ಯಕ್ಷ ಡಾ| ರಘುರಾಮ ಭಟ್ ತಿಳಿಸಿದ್ದಾರೆ.
ಮೂಲತಃ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನವರಾದ ಭಟ್ ಅವರು ಆಯುರ್ವೇದ ಕಾಲೇಜುಗಳಲ್ಲಿ ಪ್ರಾಧ್ಯಾಪಕರು, ಪ್ರಾಂಶುಪಾಲರಾಗಿ ಬಿಹಾರ, ಹೊಸದಿಲ್ಲಿ ಸೇರಿದಂತೆ ವಿವಿಧೆಡೆ ಕಾರ್ಯ ನಿರ್ವಹಿಸಿದವರು. “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೊಸ ಕೋರ್ಸ್, ಕಾಲೇಜುಗಳ ಆರಂಭ, ಆಯುರ್ವೇದ ಕಾಲೇಜಿನ ಗುಣಮಟ್ಟ ಮತ್ತಿತರ ಸಂಗತಿ ಕುರಿತು ಮಾತನಾಡಿದ್ದಾರೆ.
– ಹಿಂದಿನ ಆಯುರ್ವೇದ ಪಂಡಿತ ಪರಂಪರೆಯು ಆಧುನಿಕ ಸಂದರ್ಭದ ಕಾಲೇಜು, ವಿ.ವಿಗಳಂಥ ಔಪಚಾರಿಕ ಸ್ವರೂಪ ಬಂದ ಬಳಿಕ ಕಣ್ಮರೆಯಾಗುತ್ತಿವೆ. ಪ್ರಾಚೀನ ಜ್ಞಾನ ಪರಂಪರೆ ಮುಂದುವರಿಸಲು ಇರುವ ಯೋಜನೆಗಳೇನು?
ಇದೇ ಉದ್ದೇಶದಿಂದ ಆಯುರ್ವೇದ ಪದವಿ ಕೋರ್ಸ್‌ಗಳಿಗೆ ಪೂರಕವಾಗಿ ಎರಡು ವರ್ಷಗಳ ಗುರುಕುಲ ಮಾದರಿಯ ಪೂರ್ವಪದವಿ ಕೋರ್ಸ್ ಆರಂಭಿಸಲು ಸಿದ್ಧತೆ ನಡೆದಿದೆ. ಹತ್ತನೆಯ ತರಗತಿ ಬಳಿಕ ಈ ಕೋರ್ಸ್‌ಗೆ ಸೇರಬಹುದು. ಬಿಎಎಂಎಸ್ ಪದವಿ ತರಗತಿಗಳಿಗೆ ಈ ವಿದ್ಯಾರ್ಥಿಗಳು ಸೇರಿದರೆ ಗುಣಮಟ್ಟ ಉತ್ತಮಗೊಳ್ಳುತ್ತದೆ ಎಂಬುದು ಆಶಯ. ಈ ಹೊಸ ಕೋರ್ಸ್ ಅನ್ನು ವಿ.ವಿ. ಮಾನ್ಯತೆ ಪಡೆದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ನಡೆಸಲಿವೆ. ಇದರಲ್ಲಿ ಸಂಸ್ಕೃತ ಜ್ಞಾನ ಇರುವವರು, ಇಲ್ಲದಿರುವವರೂ ಪ್ರವೇಶ ಪಡೆಯಬಹುದು.
– ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಆಯುರ್ವೇದವಲ್ಲದೇ ಯುನಾನಿ, ಸಿದ್ಧ, ಸೊವಾರಿಗಾ³ (ಟಿಬೆಟಿಯನ್) ಪದ್ಧತಿಗಳೂ ಇವೆ. ಅವೆಲ್ಲವನ್ನೂ ಒಂದೆಡೆ ತರುವ ಇರಾದೆ ಇದೆಯೆ?
ಇವೆಲ್ಲವೂ ಸುಮಾರಾಗಿ ಒಂದೇ ತೆರನಾದದ್ದು. ಸಸ್ಯಜನ್ಯ ವಸ್ತುಗಳನ್ನು ಬಳಸಿಯೇ ನೀಡುವಂಥ ಚಿಕಿತ್ಸೆ. ಆದರೆ ಆಯುರ್ವೇದದಷ್ಟು ಜನಪ್ರಿಯತೆ ಉಳಿದವುಗಳಿಗಿಲ್ಲ. ಒಟ್ಟು 529 ಕಾಲೇಜುಗಳಲ್ಲಿ 453 ಆಯುರ್ವೇದ ಕಾಲೇಜು, 57 ಯುನಾನಿ, 13 ಸಿದ್ಧ, 6 ಸೊವಾರಿಗಾ³ ಆಗಿರುವುದು ಆಯುರ್ವೇದದ ಮುಂಚೂಣಿಯನ್ನು ತೋರಿಸುತ್ತದೆ. ಸಿದ್ಧ ಔಷಧ ಕ್ರಮ ಹೆಚ್ಚಾಗಿ ತಮಿಳುನಾಡಿನಲ್ಲಿ ಚಾಲ್ತಿಯಲ್ಲಿದೆ. ಯುನಾನಿ ಸಹ ಸೀಮಿತ. ಸಿದ್ಧ ಔಷಧ ಕ್ರಮವನ್ನು ಇತರ ಕ್ರಮದೊಂದಿಗೆ ವಿಲೀನಗೊಳಿಸಲು ಭಾಷಾಂತರವೇ ಮೊದಲಾದ ಕೆಲಸಗಳು ಆಗಬೇಕು. ಇಲ್ಲಿ ಭಾಷಾಭಿಮಾನವೂ, ಸಮುದಾಯ ಅಭಿಮಾನವೂ ತಲೆ ಎತ್ತುತ್ತದೆ. ಅವೆಲ್ಲವನ್ನೂ ಗಮನಿಸಿ ತೀರ್ಮಾನ ಕೈಗೊಳ್ಳಬೇಕು. ಅದು ಸದ್ಯಕ್ಕಿಲ್ಲ.
– ಹೊಸ ಆಯುರ್ವೇದ ಕಾಲೇಜು ಗಳ ಸ್ಥಾಪನೆಗೆ ಏನು ಕ್ರಮಗಳನ್ನು ಕೈಗೊಂಡಿದ್ದೀರಿ?
ಕೇಂದ್ರ ಆಯುಷ್ ಸಚಿವಾಲಯವು ಹೊಸ ಕಾಲೇಜುಗಳನ್ನು ತೆರೆಯುವುದಾದರೆ ರಾಜ್ಯ ಸರಕಾರಗಳಿಗೆ ಪ್ರೋತ್ಸಾಹ ನೀಡುತ್ತದೆ. ಇದರ ಪ್ರಕಾರ ರಾಜಸ್ಥಾನ ಸರಕಾರ 6, ಹರಿಯಾಣ ಹಾಗೂ ಮಹಾರಾಷ್ಟ್ರ ಸರಕಾರಗಳು ತಲಾ ಒಂದು ಕಾಲೇಜು ತೆರೆಯುತ್ತಿವೆ. ಕರ್ನಾಟಕದಿಂದ ಯಾವುದೇ ಪ್ರಸ್ತಾವ ಬಂದಿಲ್ಲ.
– ಆಯುರ್ವೇದ ಕಾಲೇಜುಗಳ ಗುಣಮಟ್ಟ ವರ್ಧನೆಗೆ ಏನು ಕ್ರಮ ವಹಿಸುತ್ತಿದ್ದೀರಿ?
ನಮ್ಮ ಸಂಸ್ಥೆ ಇರುವುದೇ ಗುಣಮಟ್ಟ ವರ್ಧನೆಯ ನಿಗಾ ವಹಿಸಲು. ಶಿಕ್ಷಣ ಕ್ರಮದ ಮೇಲ್ವಿಚಾರಣೆ, ಅನುಮತಿ ನವೀಕರಣಗಳನ್ನು ನಿರ್ವಹಿಸುತ್ತದೆ. ಉತ್ತಮ ಗುಣಮಟ್ಟ ಒದಗಿಸಬೇಕೆಂಬ ಆಶಯ ಕಾಲೇಜುಗಳಿಗೇ ಇದೆ. ಕರ್ನಾಟಕದ ಬಹುತೇಕ ಕಾಲೇಜುಗಳು ಪರವಾಗಿಲ್ಲ. ಉತ್ತರ ಪ್ರದೇಶ, ಮಧ್ಯಪ್ರದೇಶ ಮೊದಲಾದೆಡೆ ಗುಣಮಟ್ಟ ಕಡಿಮೆ ಇದೆ. ನಾವು ಪ್ರತಿ ವರ್ಷವೂ ಗುಣಮಟ್ಟ ಆಧರಿಸಿ ಪ್ರಮಾಣಪತ್ರ ಕೊಡುತ್ತೇವೆ. “ಎ’, “ಎ+’ ಶ್ರೇಣಿ ಬರಬೇಕೆಂಬ ಆಶಯವಿದೆ.
– ಆಯುರ್ವೇದ ಕಾಲೇಜಿನ ಪಠ್ಯಕ್ರಮ ಬದಲಾವಣೆ ನಡೆಯುತ್ತಿದೆಯೆ? ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಬದಲಾವಣೆಗಳಿವೆಯೆ?
ಎನ್‌ಇಪಿ ಅನ್ವಯ ಆಗುತ್ತಿದೆ. ಬಿಎಎಂಎಸ್ ಪದವಿಯ ಮೊದಲ ವರ್ಷದ ಪಠ್ಯಕ್ರಮ ಈಗಾಗಲೇ ಬದಲಾವಣೆಯಾಗಿದೆ. ಥಿಯರಿ ಮತ್ತು ಪ್ರಾಕ್ಟಿಕಲ್ ಆಧಾರಿತ ಶಿಕ್ಷಣ ಕ್ರಮದ ಅನುಪಾತ ಇದುವರೆಗೆ 1:1 ಇದ್ದರೆ, ಹೊಸ ಕ್ರಮದಲ್ಲಿ 1:2 ಮಾಡಿದ್ದೇವೆ. ಥಿಯರಿಗಿಂತ ರೋಗಿಯ ಚಿಕಿತ್ಸೆ, ತಜ್ಞರೊಂದಿಗೆ ಸಂವಹನ, ಹೀಗೆ ಹೆಚ್ಚು ಹೆಚ್ಚು ಪ್ರಾಯೋಗಿಕ ಜ್ಞಾನಕ್ಕೆ ಆದ್ಯತೆ ಕೊಡುತ್ತಿದ್ದೇವೆ. ಇದುವರೆಗೆ ಮೊದಲ ಮೂರು ವರ್ಷ ತಲಾ ಒಂದು ವರ್ಷದಂತೆ, ಕೊನೆಯಲ್ಲಿ ಒಂದೂವರೆ ವರ್ಷದಂತೆ, ಅನಂತರ ಒಂದು ವರ್ಷದ ಇಂಟರ್ನ್ಶಿಪ್ ಶಿಕ್ಷಣ ಕ್ರಮವಿದ್ದರೆ, ಮುಂದೆ ಒಂದೂವರೆ ವರ್ಷದಂತೆ ಮೂರು ವರ್ಷಗಳ ಅಧ್ಯಯನವಿರಲಿದೆ. ಇದರ ಬಳಿಕ ಹಿಂದಿದ್ದಂತೆ ಒಂದು ವರ್ಷ ಇಂಟರ್ನ್ಶಿಪ್ ಶಿಕ್ಷಣ ಇರಲಿದೆ. ಈಗ ಎರಡನೆಯ ವರ್ಷದ ಪಠ್ಯಕ್ರಮದ ನಿರೂಪಣೆ ನಡೆಯುತ್ತಿದೆ.
– ಅಲೋಪತಿ, ಆಯುರ್ವೇದವೇ ಮೊದಲಾದ ವೈದ್ಯಕೀಯ ಪದ್ಧತಿಗಳನ್ನು ಸಮಗ್ರಗೊಳಿಸುವ ಶಿಕ್ಷಣ ಕ್ರಮದ ಆಶಯವೇನಾಗಿದೆ?
ಇದೊಂದು ಚಿಂತನೆ ಮಾತ್ರ. ಚರ್ಚೆಯ ಹಂತದಲ್ಲಿದೆ. ಸದ್ಯದಲ್ಲಿ ಇದರ ಬಗ್ಗೆ ಮುಂದುವರಿದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.