ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ;ಒಂದೆಡೆ ನಮಾಜ್-ಇನ್ನೊಂದೆಡೆ ಪೂಜೆ
Team Udayavani, Jun 26, 2017, 11:48 AM IST
ಉಡುಪಿ: ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಮೂರನೆಯ
ಪರ್ಯಾಯದಲ್ಲಿ (1984-85) ರಾಜಾಂಗಣದಲ್ಲಿ ಈದ್ ಹಬ್ಬದ ಪ್ರಯುಕ್ತ ಸೌಹಾರ್ದ ಸಮಾವೇಶವನ್ನು ನಡೆಸಿದ್ದರೆ
ಈಗ ಐದನೆಯ ಪರ್ಯಾಯದಲ್ಲಿ ಇದೇ ಪ್ರಥಮ ಬಾರಿಗೆ ಈದ್ ಉಪಾಹಾರ ಕೂಟವನ್ನು ಶನಿವಾರ ಏರ್ಪಡಿಸಿದರು.
ಪೇಜಾವರ ಶ್ರೀಗಳು ಏನೇ ಮಾಡಿದರೂ ಅದು ಐತಿಹಾಸಿಕವಾಗಿರುತ್ತದೆ. ನಾನು ರಾಜ್ಯ ಸರಕಾರದ ಪ್ರತಿನಿಧಿಯಾಗಿ ಶ್ರೀಗಳವರನ್ನು ಅಭಿನಂದಿಸುತ್ತೇನೆ ಎಂದು ರಾಜ್ಯ ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದರು. ಇದೊಂದು ಐತಿಹಾಸಿಕ ಘಟನೆ. ಜಗದೊಡೆಯ ಸೃಷ್ಟಿಕರ್ತ ಕೊನೆಯ ಉಪವಾಸದ ದಿನ ಈ ಘಟನೆಯನ್ನು ಆಗುವಂತೆ ಮಾಡಿದ್ದಾನೆ. ಪೇಜಾವರ ಮಠಾಧೀಶರು ಮತ್ತು ಕರಾವಳಿಯ ಎಲ್ಲ ಖಾಝಿಗಳು
ಸೇರಿ ಶಾಂತಿ ನೆಲೆಸುವಂತೆ ಮಾಡಬೇಕು, ಕರಾವಳಿಯನ್ನು ರಕ್ಷಿಸಬೇಕು ಎಂದು ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾ
ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ ಹೇಳಿದರು.
ಸರ್ವೇ ಭವಂತು ಸುಖಿನಃ
“ಸರ್ವೇ ಭವಂತು ಸುಖೀನಃ…’ (ಅರ್ಥ: ಎಲ್ಲರೂ ಆರೋಗ್ಯದಿಂದಿರಬೇಕು, ಎಲ್ಲರೂ ದುರಾಸೆಯಿಂದ
ಮುಕ್ತರಾಗಿರಬೇಕು, ಸೌಹಾರ್ದದಿಂದ ಬದುಕಬೇಕು, ರೋಗಮುಕ್ತರಾಗಿರಬೇಕು) ಎಂಬ ಶ್ಲೋಕವನ್ನು
ಹೇಳುವ ಮೂಲಕ ಪೇಜಾವರ ಶ್ರೀಗಳು ಆಶೀರ್ವಚನ ಆರಂಭಿಸಿದರು. ಜಗತ್ತನ್ನು ಸೃಷ್ಟಿಸಿದ ದೇವರು ಒಬ್ಬನೇ.
ಒಬ್ಬರು ನಮಸ್ಕಾರವೆಂದರೆ, ಇನ್ನೊಬ್ಬರು ನಮಾಜ್ ಎನ್ನುತ್ತಾರೆ. ದೇಶದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದ
ನೆಲೆಗೊಳ್ಳಬೇಕು ಎಂದರು.
ಶ್ರೀಕೃಷ್ಣ ಮಠಕ್ಕೆ ಮುತ್ತಿಗೆ ಹಾಕುತ್ತೇವೆಂದಾಗ ಮೊದಲು ಇದರ ವಿರುದ್ಧ ಹೇಳಿಕೆ ನೀಡಿದವರು ಮುಸ್ಲಿಮರು
ಎಂಬುದನ್ನು ಶ್ರೀಗಳು ಸ್ಮರಿಸಿದರು. ಪೇಜಾವರ ಕಿರಿಯ ಶ್ರೀಗಳು ಉಪಸ್ಥಿತರಿದ್ದರು. ಅಂಜುಮನ್ ಮಸೀದಿಯ
ಮುಖ್ಯಸ್ಥ ಮಹಮ್ಮದ್ ಶೀಶ್, ಇಮಾಮ್ ಇನಾಯತುಲ್ಲಾ, ಮುಂದಾಳುಗಳಾದ ಅಬುಬಕ್ಕರ್ ವೆನಿಲ್ಲಾ, ಸಂಘಟಕ
ಆರಿಫ್, ಅಬ್ದುಲ್ ರೆಹಮಾನ್ ಮಣಿಪಾಲ, ಅಬೂಬಕರ್ ಪರ್ಕಳ ಉಪಸ್ಥಿತರಿದ್ದರು. ಬಿಜೆಪಿ ಮುಂದಾಳು ಗುರ್ಮೆ
ಸುರೇಶ್ ಶೆಟ್ಟಿ ವಿಷಯ ತಿಳಿದು ಭೇಟಿ ನೀಡಿದರು.
ಈದ್ ಉಪಾಹಾರದ ಮೆನು
ಉಪವಾಸ ಬಿಡುವಾಗ ವಿವಿಧ ಹಣ್ಣುಗಳು, ಒಣಹಣ್ಣುಗಳಿದ್ದರೆ ಬಳಿಕ ಉಪಾಹಾರದಲ್ಲಿ ತುಪ್ಪದ ಅನ್ನ ( ರೈಸ್), ಮೊಸರು ಅವಲಕ್ಕಿ, ಮೋಹನ ಲಾಡು, ಚಕ್ಕುಲಿ, ಕೀರು ಪಾಯಸ, ಗೋಳಿಬಜೆ, ಆದ್ರಾìನಕ್ಷತ್ರವಾದ ಕಾರಣ
ಹುರುಳಿ ಧಾನ್ಯದೊಂದಿಗೆ (ಕುಡು) ಆದ್ರಾ ಸೊಪ್ಪಿನ (ಮೊನ್ನಾಯ್ ಸೊಪ್ಪು) ಸಾರು ಇತ್ಯಾದಿ ಬಗೆಗಳಿದ್ದವು.
ಒಂದೆಡೆ ನಮಾಜ್- ಇನ್ನೊಂದೆಡೆ ಪೂಜೆ
ಮುಸ್ಲಿಂ ಬಂಧುಗಳು ಅನ್ನಧರ್ಮ ಸಭಾಂಗಣದಲ್ಲಿ ಉಪವಾಸವನ್ನು ಮುಗಿಸಿದ ಬಳಿಕ ಉಡುಪಿ ಅಂಜುಮಾನ್ ಮಸೀದಿ ಇಮಾಮ್ ಇನಾಯತುಲ್ಲಾ ನೇತೃತ್ವದಲ್ಲಿ ಈದ್ ನಮಾಜ್ ನಡೆಸಿದರು. ಇದೇ ವೇಳೆ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ಚಾಮರಸೇವೆಯನ್ನು ನಡೆಸುತ್ತಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.