ಕೋವಿಡ್ ಗೆದ್ದ ಗರ್ಭಿಣಿಯರು ಅಂಕಿ-ಅಂಶದಲ್ಲಿ ಭಾರೀ ವ್ಯತ್ಯಾಸ !
Team Udayavani, Jan 11, 2021, 3:03 AM IST
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ನೂರಾರು ಗರ್ಭಿಣಿಯರು ಸುರಕ್ಷಿತವಾಗಿ ಗುಣಮುಖವಾಗಿರುವುದು ವರದಿಯಾಗಿದೆ. ಆದರೆ ಜಿಲ್ಲಾ ಆರೋಗ್ಯ ಇಲಾಖೆಯ ಮೂಲಗಳಿಗೂ ಖಾಸಗಿ ಆಸ್ಪತ್ರೆ ಮೂಲಗಳಿಗೂ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸ ಕಂಡುಬರುತ್ತಿದೆ.
ಜಿಲ್ಲಾ ಆರೋಗ್ಯ ಇಲಾಖೆಯವರ ಪ್ರಕಾರ ಇದುವರೆಗೆ 110 ಗರ್ಭಿಣಿಯರು ಗುಣಮುಖರಾಗಿದ್ದಾರೆ. ಆದರೆ ಕೋವಿಡ್ 19 ನಿಯೋಜಿತ ಆಸ್ಪತ್ರೆಯಾದ ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯೊಂದರಲ್ಲಿಯೇ 250 ಗರ್ಭಿಣಿಯರು ಚಿಕಿತ್ಸೆ ಪಡೆದಿದ್ದಾರೆ. 65 ಮಂದಿಯ ಹೆರಿಗೆಯೂ ಆಗಿದೆ.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ 125 ಗರ್ಭಿಣಿಯರು ಚಿಕಿತ್ಸೆ ಪಡೆದಿದ್ದಾರೆ. ಅವರಲ್ಲಿ ಕೆಲವರು ಕೋವಿಡ್ ಪಾಸಿಟಿವ್ ಎಂದು ತಿಳಿದು ಆಸ್ಪತ್ರೆಗೆ ಬಂದಿದ್ದರೆ, ಕೆಲವರಿಗೆ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ಬಳಿಕ ತಿಳಿದುಬಂದಿತ್ತು. ಅವರಲ್ಲಿ 84 ಮಂದಿಯ ಹೆರಿಗೆ ಆಗಿದೆ.
ಎರಡೂ ಆಸ್ಪತ್ರೆಗಳಲ್ಲಿ ಅರ್ಧಾಂಶ ಸಹಜ ಹೆರಿಗೆ, ಉಳಿದ ಅರ್ಧಾಂಶ ಸಿಸೇರಿಯನ್ ಆಗಿದೆ. ಉಳಿದವರು 9 ತಿಂಗಳಾಗುವ ಮುನ್ನವೇ ಸೋಂಕಿತರಾಗಿ ಬಂದು ಹೆರಿಗೆಗೆ ಮುನ್ನವೇ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಓರ್ವ ಗರ್ಭಿಣಿಗೆ, ಮಣಿಪಾಲ ಆಸ್ಪತ್ರೆಯಲ್ಲಿ ಇಬ್ಬರಿಗೆ ಮಾತ್ರ ಐಸಿಯು ಬೇಕಾಗಿತ್ತು. ಮಣಿಪಾಲ ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ಬಂದು ಐಸಿಯುಗೆ ಸೇರಿದ ಇಬ್ಬರು ಗರ್ಭಿಣಿಯರು ಮರಣ ಹೊಂದಿದ್ದರು.
ಅಜ್ಜರಕಾಡು ಜಿಲ್ಲಾಸ್ಪತ್ರೆ, ಕುಂದಾಪುರ ಮತ್ತು ಕಾರ್ಕಳದ ತಾಲೂಕು ಸರಕಾರಿ ಆಸ್ಪತ್ರೆ, ಉಡುಪಿಯ ಆದರ್ಶ, ಹೈಟೆಕ್, ಬ್ರಹ್ಮಾವರದ ಮಹೇಶ್, ಕುಂದಾಪುರ ಶ್ರೀದೇವಿ ಆಸ್ಪತ್ರೆಗಳಲ್ಲಿಯೂ ಕೋವಿಡ್ ಸೋಂಕಿತ ಗರ್ಭಿಣಿಯರನ್ನು ಉಪಚರಿಸಲಾಗಿತ್ತು. ಇದಲ್ಲದೆ ಸಾಂಸ್ಥಿಕ ಶುಶ್ರೂಷೆ, ಹೋಂ ಐಸೊಲೇಶನ್‌ನಲ್ಲಿಯೂ ಚಿಕಿತ್ಸೆ ನೀಡಲಾಗಿತ್ತು.
375ಕ್ಕೂ ಅಧಿಕ :
375ಕ್ಕೂ ಅಧಿಕ ಡಾ| ಟಿಎಂಎ ಪೈ ಕೋವಿಡ್ ಆಸ್ಪತ್ರೆ ಮತ್ತು ಮಣಿಪಾಲ ಆಸ್ಪತ್ರೆಗಳ ಅಂಕಿ ಸಂಖ್ಯೆಗಳನ್ನು ಒಟ್ಟು ಸೇರಿಸಿದರೆ 375 ದಾಟುತ್ತದೆ. ಇತರ ಆಸ್ಪತ್ರೆಗಳ ಅಂಕಿ ಸಂಖ್ಯೆಗಳನ್ನು ಸೇರಿಸಿದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ. ಆರೋಗ್ಯ ಇಲಾಖೆಯವರು ಕೇವಲ 110 ಗರ್ಭಿಣಿಯರು ಚಿಕಿತ್ಸೆ ಪಡೆದಿರುವುದಾಗಿ ಹೇಳುತ್ತಾರೆ. ನಮ್ಮೆಲ್ಲಾ ರೋಗಿಗಳು ಸರಕಾರಿ ವ್ಯವಸ್ಥೆಯ ಮೂಲಕವೇ ಬಂದಿದ್ದಾರೆ ಎನ್ನುತ್ತಾರೆ ಡಾ| ಟಿಎಂಎ ಪೈ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ| ಶಶಿಕಿರಣ್ ಉಮಾಕಾಂತ್.
ದ.ಕ. ಜಿಲ್ಲೆ: ಪಕ್ಕಾ ಲೆಕ್ಕ :
ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಚಿಕಿತ್ಸೆಗೆಂದೇ ಮೀಸಲಾಗಿದ್ದ ವೆನ್ಲಾಕ್ ಆಸ್ಪತ್ರೆ ಸಹಿತ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 387 ಮಂದಿ ಗರ್ಭಿಣಿಯರು ಚಿಕಿತ್ಸೆ ಪಡೆದಿದ್ದು, ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ವೆನ್ಲಾಕ್ ಆಸ್ಪತ್ರೆಯಿಂದ ಶಿಫಾರಸು ಪಡೆದುಕೊಂಡು ಖಾಸಗಿ ಆಸ್ಪತ್ರೆಗಳಿಗೆ ತೆರಳಿದವರ ಮಾಹಿತಿಯನ್ನು ಮೊದಲೇ ವೆನ್ಲಾಕ್‌ನಲ್ಲಿ ನಮೂದಿಸಿಕೊಳ್ಳಲಾಗುತ್ತದೆ. ನೇರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಮಾಹಿತಿಯನ್ನೂ ಎಲ್ಲ ಆಸ್ಪತ್ರೆಗಳು ಚಾಚೂ ತಪ್ಪದೆ ನೀಡಿವೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಗೆದ್ದ ಗರ್ಭಿಣಿಯರ ಲೆಕ್ಕದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಎಲ್ಲ ಮಾಹಿತಿಯೂ ಇಲಾಖೆ ಬಳಿ ಇದೆ. – ಡಾ| ರಾಮಚಂದ್ರ ಬಾಯರಿ , ಜಿಲ್ಲಾ ಆರೋಗ್ಯಾಧಿಕಾರಿ
ವ್ಯತ್ಯಾಸಕ್ಕೆ ಕಾರಣ:ಅಂಕಿ-ಸಂಖ್ಯೆ ವ್ಯತ್ಯಾಸಕ್ಕೆ ಕಾರಣವೂ ಇದೆ. ಪ್ರತಿಯೊಬ್ಬರೂ ಜಿಲ್ಲಾಡಳಿತ ಸೂಚಿಸಿದ ಮಾರ್ಗದ ಮೂಲಕವೇ ಬಂದಿದ್ದರೂ ಅಲ್ಲಿ ಗರ್ಭಿಣಿಯರೆಂದು ಕಾಲಂನಲ್ಲಿ ದಾಖಲಿಸದೆ ಇರುವ ಸಾಧ್ಯತೆ ಇದೆ. ಅಗ ಅವರನ್ನು ಮಹಿಳೆಯರೆಂದು ಪರಿಗಣಿಸಲಾಗುತ್ತದೆಯೆ ವಿನಾ ಗರ್ಭಿಣಿಯರೆಂದು ಪರಿಗಣಿಸಿರುವುದಿಲ್ಲ. ಹೀಗಾಗಿರುವ ಸಾಧ್ಯತೆ ಹೆಚ್ಚು ಎಂದು ಕೋವಿಡ್ 19 ಜಿಲ್ಲಾ ನೋಡಲ್ ಅಧಿಕಾರಿ ಡಾ| ಪ್ರಶಾಂತ ಭಟ್ ಅವರು. ಕೆಲವೊಮ್ಮೆ ಒಬ್ಬರಿಗೆ ಎರಡು ಬಾರಿ ಪಾಸಿಟಿವ್ ಬಂದಲ್ಲಿ ನಾವು ಒಂದೇ ವ್ಯಕ್ತಿ ಎಂದು ಪರಿಗಣಿಸುತ್ತೇವೆ. ಅಂಕಿಅಂಶದ ವ್ಯತ್ಯಾಸದಲ್ಲಿ ಇದೂ ಕಾರಣವಿರಬಹುದು ಎಂಬ ಅಂಶವನ್ನು ಆರೋಗ್ಯ ಇಲಾಖೆಯ ಅಧಿಕಾರಿ ಡಾ| ಪ್ರೇಮಾನಂದ್ ಬೆಟ್ಟು ಮಾಡುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.