ಮಳೆಯ ನೀರು ಇಂಗಿಸಲು ಇಂಗುಗುಂಡಿ ಸಿದ್ಧತೆ
Team Udayavani, Jun 24, 2019, 5:51 AM IST
ಕಟಪಾಡಿ: ಕೋಟೆಗ್ರಾಮ ಪಂಚಾಯತ್ ವ್ಯಾಪ್ತಿಯ ವಿನೋಭಾ ನಗರದಲ್ಲಿರುವ ಸಾರ್ವಜನಿಕ ಹಿಂದು ರುದ್ರಭೂಮಿಯ ಆವರಣದೊಳಗೆ ಜಲಸಂರಕ್ಷಣೆಗಾಗಿ ಬೃಹತ್ ಗಾತ್ರದ ಇಂಗು ಗುಂಡಿಯನ್ನು ನಿರ್ಮಿಸಿ ಜಲ ಸಮೃದ್ಧಿ ಮಾಡಲಾಗುತ್ತಿದೆ.
ಪಂಚಾಯತ್ ಸದಸ್ಯ ರತ್ನಾಕರ ಕೋಟ್ಯಾನ್ ಹೆಚ್ಚಿನ ಮುತುವರ್ಜಿಯಿಂದ ಜಲಸಂರಕ್ಷಣೆಯ ಇಂಗುಗುಂಡಿ ನಿರ್ಮಿಸುವ ಮೂಲಕ ಕೃತಕ ನೆರೆ ನೀರಿನ ಆಪತ್ತು ಪರಿಹಾರಕ್ಕೆ ಮಾರ್ಗೋಪಾಯದ ಜೊತೆಗೆ, ಜಲಸಂರಕ್ಷಣೆಯನ್ನು ಮಾಡಲಾಗುತ್ತಿದೆ.ಈ ಬಾರಿಯ ಮಳೆ ನೀರು ಸರಾಗವಾಗಿ ಈ ಇಂಗುಗುಂಡಿಗೆ ಹರಿದು ಬರುವಂತೆ ವ್ಯವಸ್ಥೆಯನ್ನು ನಡೆಸಲಾಗುತ್ತಿದೆ.
50 ಫೀಟ್ ಉದ್ದ, 15 ಫೀಟ್ ಅಗಲ ಮತ್ತು 15 ಫೀಟ್ ಆಳದ ಈ ಇಂಗು ಗುಂಡಿಯಲ್ಲಿ ಏಕಕಾಲಕ್ಕೆ 2.5 ಲಕ್ಷ ಲೀಟರ್ ಪ್ರವಾಹದ ಮಳೆ ನೀರು ಸಂಗ್ರಹವಾಗುತ್ತದೆ.
ಪಕ್ಕದ ಮಸೀದಿಯೊಳಗಿನಿಂದ ಹರಿದು ಬರುವ ನೀರನ್ನೂ ಕೂಡಾ ಸರಾಗವಾಗಿ ಈ ಇಂಗು ಗುಂಡಿಗೆ ಬರುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆ ಮೂಲಕವಾಗಿ ಪಂಚಾಯತ್ ನೀರು ಸರಬರಾಜಿನ ಚರಮಧಾಮದ ಒಳಗಿದ್ದ ಕೊಳವೆ ಬಾವಿಯ ನೀರಿನ ಮಟ್ಟ ಏರಿಕೆಗೆ ಸಹಕಾರಿಯಾಗಿದೆ. ಆದರಿಂದ ಮೇ ತಿಂಗಳಾಂತ್ಯದಲ್ಲಿ ಬರುತ್ತಿದ್ದ ಕೆಂಪು ಬಣ್ಣ ಮಿಶ್ರಿತ ನೀರು ತಿಳಿಯಾಗಿದ್ದು, ಇದೀಗ ಶುದ್ಧ ನೀರು ಲಭ್ಯವಾಗಿದೆ ಎಂದು ಮಾಹಿತಿಯನ್ನು ನೀಡುತ್ತಿದ್ದಾರೆ.
ಎಲ್ಲೆಡೆ ನೀರು ಇಲ್ಲದಿದ್ದರೂ ವಿನೋಭಾನಗರದ ಬಾವಿಗಳಲ್ಲಿ ನೀರು ಬರಿದಾಗಿಲ್ಲ. ಹೊಸ ಬಾವಿಯಲ್ಲಿ ಉತ್ತಮ ಒಸರು ಇತ್ತು. ಪರಿಸರದಲ್ಲಿ ತೇವಾಂಶ, ನೀರಿನ ವೃಥಾ ಹರಿವನ್ನು ಬಳಸಿಕೊಂಡು 2-3 ಕಡೆಗಳಲ್ಲಿ ಇಂಗುಗುಂಡಿ ನಿರ್ಮಿಸುವ ಇರಾದೆಯನ್ನು ವ್ಯಕ್ತಪಡಿಸಿರುತ್ತಾರೆ.
ಮಸೀದಿಯ ಆವರಣಗೋಡೆಯ ಒಳಗಿನಿಂದ ನುಗ್ಗಿ ಬರುವ ಮಳೆ ನೀರಿನಿಂದ ಪ್ರತೀ ಭಾರಿಯೂ ನಾಲೈದು ಮನೆಯೊಳಗೆ ನೀರು ನುಗ್ಗಿ ಕೃತಕ ನೆರೆಯಿಂದ ಹಾವಳಿ ಉಂಟಾಗುತ್ತಿತ್ತು. ಮುಂದುವರೆದು ತೌಡಬೆಟ್ಟು ನಾಗಬನದ ಬಳಿಯ ಕೃಷಿ ಗದ್ದೆಗೆ ಈ ನೀರು ನುಗ್ಗಿ ಕೃಷಿ ಹಾನಿ ಸಂಭವಿಸುತ್ತಿತ್ತು. ಇಂಗುಗುಂಡಿ ನಿರ್ಮಾಣದ ಬಳಿಕ ಇದರ ಹಾವಳಿ ಬಹುತೇಕ ಕಡಿಮೆಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.