“ಭಾರತೀಯ ಸಂಸ್ಕೃತಿಯನ್ನು ಉಳಿಸುವ ಸಂಕಲ್ಪ ಆಗಬೇಕು’:ಸಪ್ನಾ ನಾಗರಾಜ ಶೆಟ್ಟಿ
ಉದಯವಾಣಿಯ ರೇಷ್ಮೆ ಜತೆ ದೀಪಾವಳಿ ಬಹುಮಾನ ವಿತರಣೆ
Team Udayavani, Dec 13, 2022, 8:57 PM IST
ಉಡುಪಿ: ಉದಯವಾಣಿ ದಿನಪತ್ರಿಕೆಯು ಉದ್ಯಾವರದ ವಸ್ತ್ರದ ಮಳಿಗೆ ಜಯಲಕ್ಷ್ಮೀ ಸಿಲ್ಕ್ಸ್ ಸಹಭಾಗಿತ್ವದೊಂದಿಗೆ ದೀಪಾವಳಿಯ ಸಂಭ್ರಮ, ಸಡಗರವನ್ನು ಇನ್ನಷ್ಟು ಹೆಚ್ಚಿಸಲು ನಡೆಸಿದ ರೇಷ್ಮೆ ಜತೆ ದೀಪಾವಳಿ-2022ರ ಸ್ಪರ್ಧೆಯ ವಿಜೇತರಿಗೆ ಮಂಗಳವಾರ ವುಡ್‌ಲ್ಯಾಂಡ್ಸ್ ಹೊಟೇಲ್‌ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಬ್ರಿಯ ಎಸ್‌ಆರ್ ಪಬ್ಲಿಕ್ ಸ್ಕೂಲ್‌ನ ಕಾರ್ಯದರ್ಶಿ ಸಪ್ನಾ ನಾಗರಾಜ ಶೆಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಜಯಲಕ್ಷ್ಮೀ ಸಿಲ್ಕ್ಸ್ ನ ನಿರ್ದೇಶಕರಾದ ಜಯಲಕ್ಷ್ಮೀ ವೀರೇಂದ್ರ ಹೆಗ್ಡೆ ಹಾಗೂ ಅಪರ್ಣಾ ರವೀಂದ್ರ ಹೆಗ್ಡೆ ಬಹುಮಾನ ವಿತರಿಸಿದರು.
ಅನಂತರ ಸಪ್ನಾ ನಾಗರಾಜ್ ಶೆಟ್ಟಿಯವರು ಮಾತನಾಡಿ, ಪರೀಕ್ಷೆ ನಡೆಸುವುದು ಸುಲಭ, ಮೌಲ್ಯಮಾಪನ ಕಠಿನ. ಹಾಗೆಯೇ ಇಂತಹ ಸ್ಪರ್ಧೆಗಳನ್ನು ನಡೆಸುವುದು ಸುಲಭ. ವಿಜೇತರ ಆಯ್ಕೆ ಸವಾಲಿನ ಕೆಲಸವಾಗಿದೆ. ಅದನ್ನು ಉದಯವಾಣಿ ತುಂಬಾ ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದೆ. ಉದಯವಾಣಿಯ ರೇಷ್ಮೆ ಜತೆ ದೀಪಾವಳಿಯು ಎಲ್ಲರನ್ನು ಒಂದು ಮಾಡಿರುವ ಜತೆಗೆ ದೀಪಾವಳಿ ಹಬ್ಬದ ಖುಷಿ, ಸಂಭ್ರಮ ಮತ್ತು ಸಡಗರವನ್ನು ಹೆಚ್ಚಿದೆ. ಪ್ರತಿ ಮನೆಯ ಮಹಿಳೆ ಮಾತ್ರವಲ್ಲದೆ ಇಡೀ ಕುಟುಂಬ ಇದರಲ್ಲಿ ಭಾಗಿಯಾಗಿದೆ ಎಂದರು.
ವಿದೇಶಿಗರು ನಮ್ಮ ಸಂಸ್ಕೃತಿಯನ್ನು ಮೆಚ್ಚಿ ಅದನ್ನು ಅನುಸರಿಸುತ್ತಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಉಳಿಸುವ ಸಂಕಲ್ಪ ಈಗ ಎಲ್ಲರಲ್ಲೂ ಜಾಗೃತವಾಗುತ್ತಿದೆ. ನಮ್ಮ ಸಂಸ್ಕೃತಿಯಿಂದ ದೂರಾಗುತ್ತಿದ್ದೇವೆ ಎಂಬ ಆತಂಕದ ಸಂದರ್ಭದಲ್ಲಿ ಇಂತಹ ಸ್ಪರ್ಧೆಗಳು ಸಂಸ್ಕೃತಿಯನ್ನು ಉಳಿಸುವ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಿದೆ. ರೇಷ್ಮೆ ಸೀರೆಯನ್ನು ಧರಿಸಿ ಸಂಭ್ರಮಿಸುವ ಅವಕಾಶ ಉದಯವಾಣಿ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು.
ಮಕ್ಕಳನ್ನು ತೊಡಗಿಸುವುದು ಮುಖ್ಯ
ಮನೆಗಳಲ್ಲಿ ಹಬ್ಬದ ಸಂಭ್ರಮ ಸುಂದರ. ಅದರಲ್ಲೂ ಮಹಿಳೆಯರಿಗೆ ಹಬ್ಬದ ದಿನಗಳಲ್ಲಿ ಹಲವು ರೀತಿಯ ಕಾರ್ಯಗಳು ಇರುತ್ತವೆ. ಇದೆಲ್ಲದರ ನಡುವೆಯೂ ರೇಷ್ಮೆ ಜತೆ ದೀಪಾವಳಿ ಆಚರಿಸಿಕೊಳ್ಳುತ್ತಿರುವುದು ಅವಿಸ್ಮರಣೀಯ. ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಕು. ಕೇವಲ ಉಪದೇಶದಿಂದ ಇದು ಸಾಧ್ಯವಿಲ್ಲ. ಅನುಷ್ಠಾನ ಅತಿ ಮುಖ್ಯ. ಉತ್ತಮ ಕಾರ್ಯಗಳಲ್ಲಿ ಅವರನ್ನು ತೊಡಗಿಸುವುದು ಅತಿ ಮುಖ್ಯ ಎಂದರು.
ಇನ್ನೋವೇಟಿವ್ ಐಡಿಯಾಸ್
ರೇಷ್ಮೆ ಜತೆ ದೀಪಾವಳಿ ಸಂಭ್ರಮವು ಹಲವು ಇನ್ನೋವೇಟಿವ್ ಐಡಿಯಾಸ್‌ಗೆ ದಾರಿಯಾಗಿತ್ತು. ಇನ್ನಷ್ಟು ಕ್ರಿಯಾತ್ಮಕವಾದ ಆಲೋಚನೆಗಳು ಬರುತ್ತಿರಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ ಉದಯವಾಣಿ ಸಂಪಾದಕ ಅರವಿಂದ ನಾವಡ ಅವರು, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಉದಯವಾಣಿ ಆರಂಭಿಸಿದ ರೇಷ್ಮೆ ಜತೆ ದೀಪಾವಳಿ ಸ್ಪರ್ಧೆಯು ಸಾಕಷ್ಟು ಮನೆಗಳಲ್ಲಿ ಕುಟುಂಬದ ಎಲ್ಲ ಸದಸ್ಯರು ಸೇರಿ ಸಂಭ್ರಮಿಸುವಂತೆ ಆಗಿದೆ. ಜೀವನದಲ್ಲಿ ಉತ್ಸಾಹ ಇಲ್ಲದೆ ಏನೂ ಸಾಧಿಸಲಾಗದು. ಓದುಗರು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಉತ್ಸಾಹ ತುಂಬುತ್ತಿದ್ದಾರೆ ಎಂದರು.
ಎಂಎಂಎನ್‌ಎಲ್ ಉಪಾಧ್ಯಕ್ಷ (ನೇಶನಲ್ ಹೆಡ್-ಮ್ಯಾಗಜಿನ್ ಆ್ಯಂಡ್ ಸ್ಪೆಶಲ್ ಇನೀಶಿಯೇಟಿವ್ಸ್ ) ರಾಮಚಂದ್ರ ಮಿಜಾರು ಸ್ವಾಗತಿಸಿ ಪ್ರಸ್ತಾವನೆಗೈದರು. ಉಡುಪಿಯ ಉಪ ಮುಖ್ಯ ವರದಿಗಾರ ರಾಜು ಖಾರ್ವಿ ಕೊಡೇರಿ ವಿಜೇತರ ಪಟ್ಟಿ ವಾಚಿಸಿದರು. ಮಾರುಕಟ್ಟೆ ಉಡುಪಿ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಕೊಡವೂರು ವಂದಿಸಿದರು. ಹಿರಿಯ ವಾಣಿಜ್ಯ ವರದಿಗಾರ ಎಸ್.ಜಿ.ನಾಯ್ಕ ಸಿದ್ದಾಪುರ ನಿರೂಪಿಸಿದರು.
ಒಂದು ಸ್ಪರ್ಧೆ ತುಂಬುವ ಸಂಭ್ರಮವೇ ಅಚ್ಚರಿ
ಈ ಸ್ಪರ್ಧೆ ಕುರಿತು ನನ್ನದೇ ಒಂದು ಉದಾಹರಣೆಯಿದೆ. ನನ್ನ ಸಿಬಂದಿಯೊಬ್ಬರು ದಿಢೀರನೆ ರಜೆ ಕೇಳಿದರು. ವಾರದ ಮಧ್ಯೆ ರಜೆ ಸ್ವಲ್ಪ ಕಷ್ಟ. ಹಾಗಾಗಿ ಯಾಕೆ ಈ ದಿಢೀರ್ ರಜೆ ಎಂದು ಕೇಳಿದೆ. ಥಟ್ಟನೆ ಉತ್ತರಿಸಲಿಲ್ಲ. ಆಮೇಲೆ ಕಾರಣಕ್ಕಾಗಿ ಪಟ್ಟು ಹಿಡಿದಾಗ, “ನನ್ನ ಗೆಳತಿಯರೆಲ್ಲ ನಾಳೆ ಮನೆಗೆ ಬರುತ್ತಿದ್ದಾರೆ. ಉದಯವಾಣಿಯ ರೇಷ್ಮೆ ಜತೆ ದೀಪಾವಳಿ ಸ್ಪರ್ಧೆಗೆ ಫೋಟೋ ತೆಗೆಸಲು ರಜೆ ಬೇಕು’ ಎಂದರು. ನನಗೆ ಖುಷಿಯೆನಿಸಿ ರಜೆ ನೀಡಿದಾಗ ಅವರ ಮುಖದಲ್ಲಿ ಕಂಡ ಖುಷಿ ವರ್ಣಿಸಲು ಸಾಧ್ಯವಿಲ್ಲ. ಒಂದು ಸ್ಪರ್ಧೆ ಇಂಥದೊಂದು ಸಂಭ್ರಮ ತುಂಬುವುದೆಂದರೆ ನಿಜಕ್ಕೂ ಅಚ್ಚರಿ ಎಂದರು ಸಪ್ನಾ ನಾಗರಾಜ್ ಶೆಟ್ಟಿ. ಸಪ್ನಾ ನಾಗರಾಜ ಶೆಟ್ಟಿ, ಪೂರ್ಣಿಮಾ, ಜಯಲಕ್ಷ್ಮೀ ಸಿಲ್ಕ್ಸ್ ನ ಜಯಲಕ್ಷ್ಮೀ ವೀರೇಂದ್ರ ಹೆಗ್ಡೆ, ಅಪರ್ಣಾ ರವೀಂದ್ರ ಹೆಗ್ಡೆ ಬಹುಮಾನ ವಿತರಿಸಿದರು.
ಸ್ಪರ್ಧೆಯಲ್ಲಿ ವಿಜೇತರು
ಪ್ರಥಮ: ಶ್ರೇಯಾ ಮತ್ತು ಗೆಳತಿಯರು ತೆಕ್ಕಟ್ಟೆ
ದ್ವಿತೀಯ: ಸರಸ್ವತಿ ಮತ್ತು ಗೆಳತಿಯರು ಗೋಪಾಡಿ, ಕುಂದಾಪುರ
ತೃತೀಯ: ಪ್ರಿಯಾ ಮತ್ತು ಗೆಳತಿಯರು ಮಂಗಳೂರು
ಪ್ರೋತ್ಸಾಹಕ ಬಹುಮಾನ: ಸುಲೋಚನಾ ಮತ್ತು ಮನೆಯವರು ಬೀಜಾಡಿ, ಗಾಯತ್ರಿ ಮತ್ತು ತಂಡ ಕೋಡಿಕಲ್, ಸರಿತಾ ಮತ್ತು ಗೆಳತಿಯರು ಕರಿಂಜೆ ಮೂಡುಬಿದಿರೆ, ಜ್ಯೋತಿ ಮತ್ತು ತಂಡ ಎರ್ಮಾಳ್ ತೆಂಕ ಪಡುಬಿದ್ರಿ, ಭಾನುಪ್ರಿಯಾ ಮತ್ತು ಕುಟುಂಬ ಕಾಸರಗೋಡು, ವಿಜಯಲಕ್ಷ್ಮೀ ಮತ್ತು ಗೆಳತಿಯರು ಮಂಗಳೂರು, ಅತ್ತಾಜೆ ಸೋದರಿಯರು ಪುಂಜಾಲಕಟ್ಟೆ, ಐಶ್ವರ್ಯ ಮತ್ತು ಗೆಳತಿಯರು ಮರೋಳಿ, ಪವಿತ್ರಾ ಮತ್ತು ಗೆಳತಿಯರು ಬಿಕರ್ನಕಟ್ಟೆ, ಸುಚಿತ್ರಾ ಮತ್ತು ಗೆಳತಿಯರು ಉಡುಪಿ.
ಉದಯವಾಣಿಯ ರೇಷ್ಮೆ ಜತೆ ದೀಪಾವಳಿಯು ನಾನು ಮತ್ತು ಅಕ್ಕ ತವರುಮನೆಯಲ್ಲಿ ಒಟ್ಟಾಗಿ ಆಚರಿಸುವಂತೆ ಮಾಡಿದೆ. ಇದೊಂದು ಸ್ಪರ್ಧೆಯಲ್ಲಿ ಬಾಂಧವ್ಯದ ಬೆಸುಗೆ. ನಮ್ಮ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.
– ಅನಿತಾ ಬೀಜಾಡಿ
ಸ್ಪರ್ಧೆಗೆ ನಾವು ಸಿದ್ಧರಾಗಿದ್ದು, ಚಿತ್ರಗಳ ಆಯ್ಕೆ, ಅದರ ಫಲಿತಾಂಶದ ನಿರೀಕ್ಷೆ ಹೀಗೆ ಎಲ್ಲವೂ ನಮಗೆ ಹೊಸ ಎಕ್ಸೆ„ಟ್‌ಮೆಂಟ್ ನೀಡಿದೆ. ದೀಪಾವಳಿ ಹಬ್ಬ ಎಂದರೆ ಸಂಭ್ರಮ ಸಡಗರದ ಜತೆಗೆ ಗೋ ಪೂಜೆ, ಅಂಗಡಿಪೂಜೆ, ವಾಹನಪೂಜೆ ಎಲ್ಲವೂ ಇರುತ್ತದೆ. ಇದರ ಜತೆಜತೆಗೆ ರೇಷ್ಮೆ ಜತೆ ದೀಪಾವಳಿ ಆಚರಿಸಿದ್ದೇವೆ.
-ಮಹಿಮಾ ಪೈ ತೆಕ್ಕಟ್ಟೆ
ಕುಟುಂಬ ಸಮೇತವಾಗಿ ರೇಷ್ಮೆ ಜತೆ ದೀಪಾವಳಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ತುಂಬ ಖುಷಿ ಕೊಟ್ಟಿದೆ.
-ಗಾಯತ್ರಿ ಕೋಡಿಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
AjekarCase: ತನಿಖೆ ದಿಕ್ಕು ತಪ್ಪುತ್ತಿದೆ: ದಿಲೀಪ್ ತಂದೆ ವಿರುದ್ದ ಬಾಲಕೃಷ್ಣ ಮನೆಯವರ ಆರೋಪ
Katpadi: ಭತ್ತದ ತೆನೆಯಿಂದಲೇ ಆಟೋ ರಿಕ್ಷಾ ಅಲಂಕರಿಸಿ ಸಂಭ್ರಮಿಸಿದ ಚಾಲಕ
Udupi: ಗೀತಾರ್ಥ ಚಿಂತನೆ-83: ಅಪೇಕ್ಷಿತ-ಅನಪೇಕ್ಷಿತ ವಂಶವಾಹಿಗಳು
Congress Govt.,: ರಾಜ್ಯ ಸರಕಾರದ ವಿರುದ್ಧ ಮೂರು ಹಂತದ ಪ್ರತಿಭಟನೆ: ಕಿಶೋರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.