![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 22, 2019, 5:00 AM IST
"ಮನೆ ಮನೆಯಲ್ಲಿ ಯಶೋದಾ ಕೃಷ್ಣ' ಛಾಯಾ ಚಿತ್ರ ಸ್ಪರ್ಧೆಯ ವಿಜೇತರೊಂದಿಗೆ ಮುಖ್ಯ ಅತಿಥಿಗಳು.
ಉಡುಪಿ: ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ “ಉದಯವಾಣಿ’ಯು ನಗರದ ಗೀತಾಂಜಲಿ ಸಿಲ್ಕ್ಸ್ ನ ಸಹಯೋಗದಲ್ಲಿ ಏರ್ಪಡಿಸಿದ್ದ “ಮನೆ ಮನೆಯಲ್ಲಿ ಯಶೋದಾ ಕೃಷ್ಣ’ ಫೋಟೋ ಸ್ಪರ್ಧೆಯ ವಿಜೇತರಿಗೆ ಶನಿವಾರ ನಗರದ ಗೀತಾಂಜಲಿ ಸಿಲ್ಕ್ಸ್ ಮಳಿಗೆಯಲ್ಲಿ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ತೀರ್ಪು ಗಾರರಾದ ನೃತ್ಯಗುರು ವಿದುಷಿ ಲಕ್ಷ್ಮೀ ಗುರುರಾಜ್ ಅವರು ಮಾತನಾಡಿ, “ಸ್ಪರ್ಧೆಗೆ ಬಂದಿದ್ದ 3,500ಕ್ಕೂ ಅಧಿಕ ಫೋಟೋಗಳಲ್ಲಿ ಆಯ್ಕೆ ಮಾಡು ವುದೇ ದೊಡ್ಡ ಸವಾಲಾಗಿತ್ತು. ಸಾಂಪ್ರದಾಯಿಕ ದಿರಿಸು, ಸನ್ನಿವೇಶ, ಸೃಜನಶೀಲತೆಗೆ ಹೆಚ್ಚು ಆದ್ಯತೆ ನೀಡಿ ಆಯ್ಕೆ ಮಾಡಿದ್ದೆವು. ಅತ್ಯಂತ ಕ್ರಮಬದ್ಧವಾಗಿ, ನಿಷ್ಪಕ್ಷವಾಗಿ ಆಯ್ಕೆ ನಡೆದಿದೆ. ಉದಯವಾಣಿಯ ಸ್ಪರ್ಧೆಗೆ ಓದುಗರ ಪ್ರತಿಕ್ರಿಯೆ ಅತ್ಯದ್ಭುತವಾಗಿತ್ತು’ ಎಂದು ಹೇಳಿದರು.
ಪ್ರಾಯೋಜಕರಾದ ಗೀತಾಂಜಲಿ ಸಿಲ್ಕ್ಸ್ ನ ಆಡಳಿತ ಪಾಲುದಾರ ರಾಮಕೃಷ್ಣ ನಾಯಕ್ ಅವರು ಮಾತನಾಡಿ, “ಉದಯವಾಣಿಯು ಯಶೋದಾ ಕೃಷ್ಣ ಸ್ಪರ್ಧೆಯ ಮೂಲಕ ಉತ್ತಮ ಛಾಯಾಚಿತ್ರಗಳನ್ನು ಸೃಷ್ಟಿಸಿರುವ ಜತೆಗೆ ಯಶೋದಾ ಕೃಷ್ಣ ಸಂಭ್ರಮವನ್ನು ಮನೆಮನೆಗಳಲ್ಲಿ ಮೂಡಿಸಿದೆ. ಶ್ರೀಕೃಷ್ಣ ಪರಮಾತ್ಮ ಈ ಲೋಕದ ಆಗುಹೋಗುಗಳಲ್ಲಿ ಮುಂಚೂಣಿಯಲ್ಲಿರುತ್ತಾನೆ. ಮಕ್ಕಳು ಕೂಡ ಮುಂದೆ ಎತ್ತರಕ್ಕೇರಲಿ. ಉದಯವಾಣಿ ಮುಂದಿನ ದಿನಗಳಲ್ಲಿ ಆಯೋಜಿಸುವ ಇಂಥ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಲು ಉತ್ಸುಕರಾಗಿದ್ದೇವೆ’ ಎಂದರು.
ಓದುಗರೊಂದಿಗೆ ಸಂವಹನ
ಎಂಎಂಎನ್‌ಎಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್ ಕುಮಾರ್ ಅವರು ಮಾತನಾಡಿ, “ಉದಯವಾಣಿ ತನ್ನ ಓದುಗರೊಂದಿಗಿನ ಸಂವಹನ, ಸಂವಾದವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದಕ್ಕಾಗಿ ರೇಷ್ಮೆ ವಿದ್ ದೀಪಾವಳಿ, ವರ್ಲ್ಡ್ಕಪ್ ಧಮಾಕಾ ಮೊದಲಾದವುಗಳನ್ನು ಆಯೋಜಿಸುತ್ತಾ ಬಂದಿದೆ. ಅದರ ಮುಂದುವರಿದ ಭಾಗವಾಗಿ ಯಶೋದಾ ಕೃಷ್ಣ ಸ್ಪರ್ಧೆ ಆಯೋಜಿಸಿದೆ. ಇಂಥ ಹಲವು ಓದುಗಸ್ನೇಹಿ ಉಪಕ್ರಮಗಳನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸುತ್ತೇವೆ’ ಎಂದರು. ಮಾ| ಪ್ರಥಮ್ ಅವರು ಜಾದೂ ಮೂಲಕ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಮೆರುಗು ತುಂಬಿದರು. ಸಂಪಾದಕ ಅರವಿಂದ ನಾವಡ ಸ್ವಾಗತಿಸಿದರು. ಉಡುಪಿ ಜಾಹೀರಾತು ವಿಭಾಗದ ಮುಖ್ಯಸ್ಥ ಕೆ. ರಾಧಾಕೃಷ್ಣ ಭಟ್ ವಂದಿಸಿದರು. ಸುಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಸ್ವಾತಂತ್ರ್ಯೋತ್ಸವ ಪ್ರಬಂಧ ಸ್ಪರ್ಧೆ
ಸ್ವಾತಂತ್ರ್ಯೋತ್ಸವ ಪ್ರಯುಕ್ತ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೂ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನ ಪಡೆದ ಬಂಟ್ವಾಳದ ಎಸ್‌ವಿಎಸ್ ಆಂಗ್ಲಮಾಧ್ಯಮ ಶಾಲೆಯ ಶ್ರವಣ ರಾಮಕುಂಜರ ಬದಲಾಗಿ ಅವರ ತಾಯಿ ಹಿರಣ್ಮಯಿ ಬಹುಮಾನ ಸ್ವೀಕರಿಸಿದರು. ದ್ವಿತೀಯ ಬಹುಮಾನ ಪಡೆದ ಉಡುಪಿಯ ವಳಕಾಡು ಸರಕಾರಿ ಪ್ರೌಢ ಶಾಲೆಯ ಅಲ್‌ಶೀಫಾ ಬಾನು ಅವರಿಗೂ ಬಹುಮಾನ ನೀಡಲಾಯಿತು.
ಶ್ರೀಕೃಷ್ಣನಂತೆ ಸವಾಲು ಎದುರಿಸೋಣ
ಯಶೋದಾ ಕೃಷ್ಣ ಸ್ಪರ್ಧೆ ನಮ್ಮ ಮನೆಯಲ್ಲಿಯೂ ಸಂಭ್ರಮ ಮೂಡಿಸಿದೆ. ಶ್ರೀಕೃಷ್ಣ ದೇವರು ಹುಟ್ಟುವಾಗಲೇ ಕಷ್ಟಗಳನ್ನು ಎದುರಿಸುತ್ತಾ ಬೆಳೆದವರು. ಅವರನ್ನು ಆದರ್ಶವಾಗಿಟ್ಟುಕೊಂಡು, ಪ್ರಾರ್ಥಿಸಿ ನಾವು ಕೂಡ ನಮ್ಮ ಎದುರಿರುವ ಸವಾಲುಗಳನ್ನು ಧೈರ್ಯವಾಗಿ ಎದುರಿಸಬೇಕು.
– ಸುಶ್ಮಿತಾ ಜಿ. ಹೆಗ್ಡೆ, ಪ್ರಥಮ ಬಹುಮಾನ ವಿಜೇತರು
You seem to have an Ad Blocker on.
To continue reading, please turn it off or whitelist Udayavani.