ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭ
Team Udayavani, Oct 26, 2018, 11:17 AM IST
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಈ ಹಿಂದಿನಂತೆ ಮರಳು ಸಿಗುವವರೆಗೂ ಧರಣಿ ಮುಂದುವರಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಯವರ ಯಾವುದೇ ಭರವಸೆಗಳಿಗೆ ಒಪ್ಪಿಕೊಂಡು ಹೋರಾಟ ನಿಲ್ಲಿಸುವುದಿಲ್ಲ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಿಆರ್‌ಝಡ್ ಮತ್ತು ನಾನ್‌ಸಿಆರ್‌ಝಡ್‌ನ ಎಲ್ಲ ದಿಬ್ಬಗಳಲ್ಲಿ ಮರಳುಗಾರಿಕೆ ಆರಂಭಿಸಬೇಕೆಂದು ಆಗ್ರಹಿಸಿ ಮರಳಿಗಾಗಿ ಹೋರಾಟ ಸಮಿತಿ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಹಗಲು-ರಾತ್ರಿ ಅನಿರ್ದಿಷ್ಟಾವಧಿ ಧರಣಿಯ ಮೊದಲ ದಿನ ಗುರುವಾರ ಧರಣಿ ನಿರತರನ್ನುದ್ದೇಶಿಸಿ ಅವರು ಮಾತನಾಡಿದರು.
ಸ್ವತಃ ಮುಖ್ಯಮಂತ್ರಿಯವರೇ ಎರಡೆರಡು ಬಾರಿ ಸಭೆ ನಡೆಸಿ ಆದೇಶ ನೀಡಿದರೂ ಉಡುಪಿ ಡಿಸಿ ಅದನ್ನು ಪಾಲಿಸಿಲ್ಲ. ಗಣಿ ಸಚಿವರು ಅಥವಾ ಉಸ್ತುವಾರಿ ಕಾರ್ಯದರ್ಶಿ ಬಂದು ಭರವಸೆ ನೀಡಿ ಮರಳುಗಾರಿಕೆ ಆರಂಭಗೊಳ್ಳುವವರೆಗೂ ಧರಣಿ ನಡೆಯಲಿದೆ. ಚುನಾವಣಾ ನೀತಿಸಂಹಿತೆ ಮುಕ್ತಾಯಗೊಂಡ ಅನಂತರ (ನ. 8) ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ದಿಕ್ಕು ತಪ್ಪಿಸುವ ಯತ್ನ
ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅಡೆತಡೆಗಳಿಲ್ಲ. ನಾನ್ ಸಿಆರ್‌ಝಡ್‌ನಲ್ಲಿ ಟೆಂಡರ್ ಬದಲು ಲೀಸ್‌ನಲ್ಲಿ ಅವಕಾಶ ನೀಡಿದರೆ ನಾನ್‌ಸಿಆರ್‌ಝಡ್ ಸಮಸ್ಯೆ ಕೂಡ ಬಗೆಹರಿಯಲಿದೆ. ಆದರೆ ಜಿಲ್ಲಾಧಿಕಾರಿ ಸುಳ್ಳು ಹೇಳಿಕೆ ನೀಡಿ ಹೋರಾಟಗಾರರ ದಿಕ್ಕು ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಭಟ್ ಆರೋಪಿಸಿದರು.
ಪ್ರತ್ಯೇಕ ನೀತಿ ಬೇಕು
ಸಿಆರ್‌ಝಡ್‌ನ ಎಲ್ಲ ನದಿಗಳ (ಜೈವಿಕ ಸೂಕ್ಷ್ಮ ವಲಯ ಹೊರತುಪಡಿಸಿ) ಮರಳು ದಿಬ್ಬಗಳಲ್ಲಿ ಮರಳುಗಾರಿಕೆ ನಡೆಸಲು ಈ ಹಿಂದಿನಿಂದ ಪರವಾನಿಗೆ ಹೊಂದಿರುವ 171 ಅಥವಾ ಅದಕ್ಕಿಂತಲೂ ಹೆಚ್ಚು ಮಂದಿಗೆ ಅವಕಾಶ ಕೊಡಬೇಕು. ಮರಳುಗಾರಿಕೆ ನಡೆಸಬಾರದೆಂದು ಎನ್‌ಜಿಟಿ ಆದೇಶ ನೀಡಿಲ್ಲ. ನಿಯಮಬದ್ಧವಾಗಿ ಮರಳುಗಾರಿಕೆ ಮಾಡಲು ಮಾತ್ರ ಹೇಳಿದೆ. ಆದಾಗ್ಯೂ ಡಿಸಿಯವರಿಗೆ ಎನ್‌ಜಿಟಿ ಭಯವಿದ್ದರೆ ಅವರು ವರ್ಗಾವಣೆ ಮಾಡಿಸಿಕೊಂಡು ಹೋಗಬೇಕು. ನಾನ್ ಸಿಆರ್‌ಝಡ್ ಮರಳುಗಾರಿಕೆಗೆ ಕರಾವಳಿಗೆ ಪ್ರತ್ಯೇಕ ನೀತಿ ರೂಪಿಸಬೇಕು. ಎರಡೂ ವಲಯಗಳಲ್ಲಿ ಮರಳುಗಾರಿಕೆ ಒಟ್ಟಿಗೆ ಆರಂಭವಾಗಬೇಕು ಎಂದು ಭಟ್ ಆಗ್ರಹಿಸಿದರು.
ಕಾರ್ಕಳದಲ್ಲಿ ಎರಡೇ ದಿಬ್ಬ
ಶಾಸಕ ಸುನಿಲ್ ಕುಮಾರ್ ಮಾತನಾಡಿ, ಕಾರ್ಕಳದಲ್ಲಿ ನಾನ್‌ಸಿಆರ್‌ಝಡ್ ಪ್ರದೇಶ ಹೆಚ್ಚು. ಒಂದು ಮರಳು ದಿಬ್ಬ 5 ಎಕರೆ ಇದ್ದರೆ ಮಾತ್ರ ಮರಳುಗಾರಿಕೆಗೆ ಅವಕಾಶ ಎಂಬ ನಿಯಮ ಇದೆ. ಆದರೆ ಇಷ್ಟು ದೊಡ್ಡ ದಿಬ್ಬಗಳು ನಮ್ಮಲ್ಲಿ ಇಲ್ಲ. ಹಾಗಾಗಿ ನಿಯಮ ಬದಲಿಸಿ 50 ಸೆಂಟ್ಸ್‌ಗೆ ಇಳಿಸುವಂತೆ ಡಿಸಿಗೆ ಮನವಿ ಮಾಡಿದ್ದೆ. ಅವರು ಕೇವಲ 2 ದಿಬ್ಬಗಳನ್ನು ಮಾತ್ರ ಗುರುತಿಸಿದ್ದಾರೆ. ಮಂಗಳೂರಿನ ಗುರುಪುರದಿಂದ ಕಾರ್ಕಳಕ್ಕೆ ಮರಳು ಸಾಗಿಸುವುದಕ್ಕೆ ಪರವಾನಿಗೆಗೆ ಮನವಿ ಮಾಡಲಾಗಿತ್ತು. ಅದಕ್ಕೂ ಸ್ಪಂದಿಸಿಲ್ಲ ಎಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ ಭೋಜೇಗೌಡ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ, ಇತರ ಜನಪ್ರತಿನಿಧಿಗಳು, ಉಡುಪಿ ಜಿಲ್ಲಾ ಎಂಜಿನಿಯರ್ ಅಸೋಸಿಯೇಶನ್, ಲಾರಿ ಮಾಲಕರ ಸಂಘ, ಬಿಲ್ಡರ್ ಅಸೋಸಿಯೇಶನ್, ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್, ಕರ್ನಾಟಕ ರಕ್ಷಣಾ ವೇದಿಕೆ, ದೋಣಿ ಮಾಲಕರ ಸಂಘ, ಬ್ರಹ್ಮಾವರ ತಾಲೂಕು ಹೋರಾಟ ಸಮಿತಿ, ಗ್ಯಾರೇಜ್ ಮಾಲಕರ ಸಂಘ ಮತ್ತು ವಿವಿಧ ಸಂಘಟನೆಗಳ ಪ್ರಮುಖರು, ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಡಿಸಿ ಮನವೊಲಿಕೆ ಯತ್ನ ವಿಫಲ
ರಾತ್ರಿ 7 ಗಂಟೆಯ ಸುಮಾರಿಗೆ ಧರಣಿ ಸತ್ಯಾಗ್ರಹಕ್ಕೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಧರಣಿ ನಿರತರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಇದಕ್ಕೆ ಧರಣಿ ನಿರತರು ಒಪ್ಪಲಿಲ್ಲ. ಜಿಲ್ಲಾಧಿಕಾರಿ ಜತೆ ಸಿಇಒ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ವಿದ್ಯಾ ಆಗಮಿಸಿದ್ದರು. ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರುತ್ತೇನೆ ಎಂದು ಜಿಲ್ಲಾಧಿಕಾರಿ ತಿಳಿಸಿ ತೆರಳಿದರು.
ನ. 6ರ ಅನಂತರ ಡಿಸಿ ವರ್ಗ?
ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ವಿಧಾನಪರಿಷತ್ ಸದಸ್ಯ ಭೋಜೇಗೌಡ ಅವರು ಉಡುಪಿ ಜಿಲ್ಲೆಯಲ್ಲಿ ಅಧಿಕಾರಿಗಳಿಂದಾಗಿ ಮರಳು ಸಮಸ್ಯೆ ಉಂಟಾಗಿದೆ. ಈ ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯಿಂದ ಕೆಲಸ ಆಗುವುದಿಲ್ಲ ಎಂದು ಅರ್ಥವಾಗಿದೆ. ನೀತಿಸಂಹಿತೆ ಮುಗಿದ ಅನಂತರ (ನ. 6) ಜಿಲ್ಲಾಧಿಕಾರಿ ಮತ್ತು ಗಣಿ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುವುದು ಎಂದರು.
ಇದರಲ್ಲಿ ಸರಕಾರದ ತಪ್ಪಿಲ್ಲ. ಅಧಿಕಾರಿಗಳ ವ್ಯತಿರಿಕ್ತ ತೀರ್ಮಾನದಿಂದ ಆಗಿದೆ. ಜಿಲ್ಲಾಧಿಕಾರಿ ಸಹಕಾರ ನೀಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕೂಡ ದೂರಿದ್ದಾರೆ. ಮರಳು ಸಮಸ್ಯೆ ಪರಿಹರಿಸಲು ಸ್ವತಃ ಮುಖ್ಯಮಂತ್ರಿಯವರೆ ನಿರ್ಧಾರ ಮಾಡಿದ್ದಾರೆ. ಹಾಗಾಗಿ ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ಮರಳು ಸಮಸ್ಯೆ ಪೂರ್ಣ ಬಗೆಹರಿಯಲಿದೆ. ನಾನ್ ಸಿಆರ್‌ಝಡ್ ಕುರಿತು ಕೂಡ ಸರಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಭೋಜೇಗೌಡ ಅವರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.