ವ್ಯಾಪಾರಿ-ಗಿರಾಕಿ ಸಂಧಿಸುವ ತಾಣಗಳೇ ಪಬ್‌ಗಳು, ಪಾರ್ಟಿಗಳು !
ಇವುಗಳಿಗೆ ಕಡಿವಾಣ ಹಾಕಲಿಕ್ಕೆ ಎಲ್ಲರ ಭಾಗೀದಾರಿಕೆ ಅಗತ್ಯ
Team Udayavani, Mar 2, 2023, 7:45 AM IST
ಈ ವಿಷಯ ಎಲ್ಲರಿಗೂ ತಿಳಿದಿರುವ ಸತ್ಯ. ಪೊಲೀಸರಿಂದ ಹಿಡಿದು ಜಿಲ್ಲಾಡಳಿತದವರೆಗೆ, ಜನಪ್ರತಿನಿಧಿಗಳಿಂದ ಆರಂಭವಾಗಿ ಜನ ಸಾಮಾನ್ಯರವರೆಗೆ ಎಲ್ಲರಿಗೂ ಈ ಸಮಸ್ಯೆಯ ಆಳದ ಅರಿವೂ ಇದೆ, ಅಪಾಯದ ಸಾಧ್ಯತೆಯ ಭಯವೂ ಇದೆ. ಎಲ್ಲರೂ ಒಟ್ಟಾಗಿ ಪರಿಹಾರಕ್ಕೆ ಪ್ರಯತ್ನಿಸಿದರೆ ಕತ್ತಲು ದಾರಿಯಲ್ಲಿ ಸಾಗುವುದು ಕಷ್ಟವೇನಲ್ಲ. ಅದಕ್ಕೆ ಎಲ್ಲರೂ ತಮ್ಮ ತಮ್ಮ ಪಾತ್ರ ನಿರ್ವಹಿಸಬೇಕಾದ ಕಾಲ ಈಗ ಬಂದಿದೆ.
ಉಡುಪಿ: ಪಬ್‌ಗಳು, ಬಾರ್‌ಗಳು ತಡರಾತ್ರಿವರೆಗೆ ನಡೆಯುವ ಪಾರ್ಟಿಗಳು ಹೆಚ್ಚಾಗಿ ಡ್ರಗ್ಸ್ ಪೆಡ್ಲರ್‌ಗಳು ಹಾಗೂ ಗ್ರಾಹಕರು ಸಂಧಿಸುವ ತಾಣಗಳು. ಇತ್ತೀಚೆಗೆ ಇದರ ಸಾಲಿಗೆ ಕೆಲವು ಪ್ರತಿಷ್ಠಿತ ಹೊಟೇಲ್‌ಗಳೂ ಸೇರುತ್ತಿವೆ ಎಂಬ ಅಭಿಪ್ರಾಯವಿದೆ.
ಮಂಗಳೂರಿನಿಂದ ಹಿಡಿದು ಮಣಿಪಾಲ ದವರೆಗೂ ಹೆಚ್ಚಾಗಿ ವಸತಿ ಸಹಿತ ಶಿಕ್ಷಣ ಸಂಸ್ಥೆಗಳೇ ಅಧಿಕ. ಈ ಕಾರಣದಿಂದ ಮಧ್ಯರಾತ್ರಿವರೆಗೂ, ತಡರಾತ್ರಿವರೆಗೂ ಇಬ್ಬಿಬ್ಬರೇ ಅಥವಾ ಗುಂಪು ಗುಂಪಾಗಿ ಸಂಚರಿಸಿದರೂ ಪೊಲೀಸರು ಸ್ಥಳೀಯ ವಿದ್ಯಾರ್ಥಿಗಳೆಂದು ಪ್ರಶ್ನಿಸುವುದು ಕಡಿಮೆ. ಇದನ್ನು ಡ್ರಗ್ಸ್ ಪೆಡ್ಲರ್‌ಗಳು ತಮ್ಮ ಅನುಕೂಲಕ್ಕೆ ಬಳಸುತ್ತಿದ್ದಾ ರೆ ಎಂಬುದೂ ಸುಳ್ಳಲ್ಲ.
ಹೆಚ್ಚುತ್ತಿರುವ ಪಾರ್ಟಿಗಳು
ಕೋವಿಡ್ ಬಳಿಕ ತಡರಾತ್ರಿವರೆಗಿನ ಪಾರ್ಟಿ ಗಳ ಸಂಖ್ಯೆ ಹೆಚ್ಚತೊಡಗಿವೆ. ಸರಕಾರಿ ರಜೆಗಳು, ವಿಶೇಷ ಹಬ್ಬಗಳ ದಿನಗಳು ಹಾಗೂ ವಾರಾಂತ್ಯ ದಿನಗಳಲ್ಲಿ ಕಾಲೇಜುಗಳಿಗೆ ರಜೆ ಇರುವ ಕಾರಣ ಪಾರ್ಟಿಗಳಿಗೆ ಬರವೇ ಇಲ್ಲ. ಜತೆಗೆ ಕಾಸರ ಗೋಡು ಸೇರಿದಂತೆ ಕೇರಳದ ವಿವಿಧೆಡೆಯಿಂದ, ರಾಜ್ಯದ ಮೈಸೂರು, ಕೊಡಗು, ಬೆಂಗಳೂರು ಹಾಗೂ ಮತ್ತಿತರ ಜಿಲ್ಲೆಗಳ ಕಾರುಗಳಲ್ಲಿ ಉಡುಪಿ ಮತ್ತು ಮಣಿಪಾಲ ಸುತ್ತಮುತ್ತಲ ಪಾರ್ಟಿಗೆಂದು ಬರುವವರ ಸಂಖ್ಯೆ ಹೆಚ್ಚಾಗಿದೆ.
ಈ ಹಿಂದೆ ಅಪ ರೂಪಕ್ಕೆ ಎನ್ನುವಂತೆ ಹೊರಗಿನ ಜಿಲ್ಲೆಯ ಮತ್ತು ರಾಜ್ಯದ ಕಾರುಗಳು ಕಾಣುತ್ತಿದ್ದವು. ಇವರೆ ಲ್ಲರನ್ನೂ ತಣಿಸುತ್ತಿರುವುದು ಕೆಲವು ಪಬ್‌ಗಳು ಮತ್ತು ಅಲ್ಲಿನ ತಡರಾತ್ರಿವರೆಗಿನ ಪಾರ್ಟಿಗಳು.ಅಲ್ಲಿ ಕುಡಿತ, ಕುಣಿತದೊಂದಿಗೆ ಮಾದಕ ವಸ್ತುಗಳ ವ್ಯಾಪಾರಕ್ಕೂ ವೇದಿಕೆಯಾಗುತ್ತಿದೆ ಎಂಬ ಅಭಿಪ್ರಾಯವಿದೆ.
ಕರಾವಳಿಯ ಕೆಲವು ನಗರಗಳು ಡ್ರಗ್ಸ್ ದಂಧೆ, ಪಾರ್ಟಿ ಇತ್ಯಾದಿಗೆ ನೆರೆರಾಜ್ಯಗಳನ್ನೂ ಮೀರಿಸುವಂತೆ ಬೆಳೆಯು ತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣ.
ಡ್ರಗ್ಸ್ ಪೆಡ್ಲರ್‌ಗಳು ಮೊದಲು ಗಿರಾಕಿಗೆ ಗಾಳ ಹಾಕುವುದು ಉಭಯ ಜಿಲ್ಲೆಗಳ ಕೆಲವು ಪ್ರತಿಷ್ಠಿತ ಪಬ್‌ಗಳಲ್ಲಿ. ಹೆಚ್ಚಾಗಿ ವಿದ್ಯಾರ್ಥಿಗಳೇ ಇರುವ ಪಬ್‌ಗಳನ್ನು ಈ ವ್ಯವಹಾರಕ್ಕೆ ಬಳಸಿಕೊಳ್ಳುತ್ತಾರೆ. ಇದರಲ್ಲಿ ಎರಡು ಲಾಭವಿದೆ. ಮೊದಲನೆಯದಾಗಿ ವಿದ್ಯಾರ್ಥಿ ಸಮೂಹ ದೊಡ್ಡದಿರುವುದರಿಂದ ಗಿರಾಕಿಗಳ ಸರಪಳಿ ಬೆಳೆಸಲು ಅಡ್ಡಿಯಿಲ್ಲ. ಎರಡನೆಯದಾಗಿ, ತಮ್ಮ ಜಾಲವನ್ನು ವಿಸ್ತರಿ ಸಲೂ ವಿದ್ಯಾರ್ಥಿಗಳು ಬಹಳ ಸುರಕ್ಷಿತ ಸಾಧನ ಗಳು ಎಂಬ ಲೆಕ್ಕಾಚಾರ. ಸ್ಥಳೀಯ ಶಿಕ್ಷಣ ಸಂಸ್ಥೆ ಗಳ ವಿದ್ಯಾರ್ಥಿಗಳಾಗಿರುವಾಗ ಸ್ಥಳೀಯ ಪೊಲೀಸರು ಸಂಶಯದಿಂದ ನೋಡಲಾರರು ಎಂಬ ನಂಬಿಕೆ ಈ ದಂಧೆಕೋರರದ್ದು.
ಪಬ್‌ನವರಿಗೂ ಇವೆಲ್ಲ ತಿಳಿದಿಲ್ಲ ಎಂದೇನೂ ಇಲ್ಲ. ಆದರೆ ವ್ಯಾಪಾರದ ದೃಷ್ಟಿಯಿಂದ ಸಹಿಸಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಅಹಿತಕರ ಘಟನೆಗಳು ನಡೆದರೂ ಒಳಗೊಳಗೇ ರಾಜಿ ಮಾಡಿ ಕೊಂಡು ಪ್ರಕರಣ ಮುಚ್ಚಿ ಹಾಕಲಾಗುತ್ತಿದೆ. ಯಾಕೆಂದರೆ ಪೊಲೀಸರ ಬಳಿ ಹೋದರೆ ಗುಟ್ಟೆ ಲ್ಲವೂ ರಟ್ಟಾದೀತೆಂಬ ಭಯ ಪೆಡ್ಲರ್‌ಗಳಿಗೂ, ಗ್ರಾಹಕರಿಗೂ ಹಾಗೂ ಪಬ್‌ನವರಿಗೂ ಇರುತ್ತದೆ. ಆದ ಕಾರಣ ಪೊಲೀಸರ ಗಮನಕ್ಕೂ ಬರುತ್ತಿಲ್ಲ.
ಬಹಿರಂಗವಾಗಿಯೇ ವ್ಯಾಪಾರ
ರಾತ್ರಿ ವೇಳೆ ಕೆಲವರು ಪೆಡ್ಲರ್‌ಗಳು ಈ ಪಬ್‌ಗಳ ಬಳಿ, ಕಾಲೇಜು, ಸ್ಟುಡೆಂಟ್ಸ್ ಹಾಸ್ಟೆಲ್‌ಗಳ ಬಳಿ ಬಹಿರಂಗವಾಗಿಯೇ ಡ್ರಗ್ಸ್ ಬೇಕಾ ಎಂದು ಕೇಳಿ ಮಾರುವವರೂ ಇದ್ದಾರೆ. ಬೆÂಕ್ ಹಾಗೂ ಕಾರುಗಳಲ್ಲಿ ಆಗಮಿಸುವ ಈ ಪೆಡ್ಲರ್ಸ್ ಯಾರಿಗೂ ತಿಳಿಯದಂತೆಯೇ ವ್ಯಾಪಾರ ಮುಗಿಸಿ ಹೊರಡುತ್ತಾರೆ. ಸ್ಥಳೀಯರಾದರೆ ದೂರು ನೀಡಬಹುದೆಂಬ ಭೀತಿಯಿಂದ ಹೊರ ರಾಜ್ಯದವರಿಗೆ ಹೆಚ್ಚಾಗಿ ಗಾಳ ಹಾಕುತ್ತಾರೆ.
ಕಾರ್ಮಿಕರ ಬಳಕೆ
ಮಣಿಪಾಲ, ಮಂಗಳೂರು ಮತ್ತಿತರ ಕಡೆ ವಿವಿಧ ಕೈಗಾರಿಕೆಗಳಲ್ಲಿ ಬಿಹಾರ, ಛತ್ತೀಸ್‌ಗಢ, ಕೇರಳ, ಉತ್ತರ ಪ್ರದೇಶ ಹಾಗೂ ಈಶಾನ್ಯ ರಾಜ್ಯಗಳಿಂದ ಸಾಕಷ್ಟು ಮಂದಿ ಕಾರ್ಮಿಕರು ಕಾರ್ಯ ನಿರತರಾಗಿದ್ದಾರೆ. ಕೆಲವು ಮಾದಕ ವಸ್ತು ಮಾರಾಟಗಾರರು ಈ ಕಾರ್ಮಿಕರಲ್ಲಿಯೂ ಕೆಲವರಿಗೆ ಕಮಿಷನ್ ಆಸೆ ತೋರಿಸಿ ತಮ್ಮ ದಂಧೆಗೆ ಬಳಸುತ್ತಿದಾರೆಂಬ ಆರೋಪಗಳಿವೆ. ಅತ್ಯಂತ ಬೇಸರದ ಸಂಗತಿಯೆಂದರೆ ಹೀಗೆ ಬೇರೆಯವರಿಗೆ ಮಾದಕ ವಸ್ತುಗಳನ್ನು ತಲುಪಿ ಸಲು ಹೋಗಿ ಸಣ್ಣ ಪುಟ್ಟ ಕಾರ್ಮಿಕರೂ ಇದರ ದಾಸರಾಗುತ್ತಿದ್ದಾರೆ ಎಂಬುದು ದುರಂತ.
ಪ್ರವಾಸೋದ್ಯಮಕ್ಕೂ ಕುತ್ತು
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಹೆಸರಾಗಿರುವುದು ಧಾರ್ಮಿಕ ಹಾಗೂ ಕಡಲ ತೀರದ ಪ್ರವಾಸೋದ್ಯಮಕ್ಕೆ. ಪ್ರತಿ ವರ್ಷವೂ ರಾಜ್ಯ ಹಾಗೂ ಹೊರರಾಜ್ಯಗಳಿಂದ ಲಕ್ಷಾಂತರ ಮಂದಿ ಇಲ್ಲಿನ ನೂರಾರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ, ನಮ್ಮ ಕಡಲ ತೀರಗಳಿಗೂ ಭೇಟಿ ನೀಡುತ್ತಿದ್ದಾರೆ. ಇವೆಲ್ಲವೂ ಸ್ಥಳೀಯ ಆರ್ಥಿಕತೆಯ ಜೀವಾಳ. ಆದರೆ, ದಿನೇ ದಿನೆ ಬೆಳೆಯುತ್ತಿರುವ ಮಾದಕ ವಸ್ತುವಿನ ಜಾಲ ಹಾಗೂ ಮಾದಕ ವ್ಯಸನಿಗಳಿಂದ ಧಾರ್ಮಿಕ ಭಾವಕ್ಕೆ ಕುತ್ತಾಗಲಿದೆ. ನೈಜ ಪ್ರವಾಸೋದ್ಯಮಕ್ಕೆ ಧಕ್ಕೆಯಾಗಲಿದೆ. ಜತೆಗೆ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಅಸುರಕ್ಷತೆ, ಅಭದ್ರತೆಯ ಭೀತಿಯೂ ಕಾಡಬಹುದು. ಅದಾಗದಂತೆ ಕೂಡಲೇ ಜಿಲ್ಲಾಡಳಿತ, ಪೊಲೀಸರು ಹಾಗೂ ಜನಪ್ರತಿನಿಧಿಗಳು ಶ್ರಮವಹಿಸಬೇಕಿದೆ.
ಇಂಥ ಕಡೆ ಪೊಲೀಸರ ನಿಗಾ ಹೆಚ್ಚಬೇಕು
ಈ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಮಣಿಪಾಲದಿಂದ ಪೆರಂಪಳ್ಳಿಗೆ ಹೋಗುವ ರಸ್ತೆಯ ಆರಂಭದಲ್ಲೇ ಕೆಲವೆಡೆ ದಾರಿ ದೀಪಗಳೂ ಇಲ್ಲ. ಕತ್ತಲೆ. ಮಾದಕ ವ್ಯಸನಿಗಳು ಹಾಗೂ ಮಾದಕ ವಸ್ತುಗಳ ಮಾರಾಟಗಾರರು ಇಂಥ ಜಾಗವನ್ನೇ ಆಯ್ದುಕೊಳ್ಳುತ್ತಾರೆ. ಜತೆಗೆ ಹಳೆಯ ಪಾಳು ಕಟ್ಟಡಗಳು ಸಿಕ್ಕರೆ ಇನ್ನೂ ಒಳ್ಳೆಯದು. ಇದಕ್ಕೆ ಪೂರಕವೆನಿಸುವ ಪರಿಸರ ಇಲ್ಲಿದೆ. ಹಾಗಾಗಿ ಅಂಥ ಸ್ಥಳಗಳಲ್ಲಿ ಯಾರು ಏನೇ ಮಾಡಿದರೂ ಜಗತ್ತಿಗೆ ತಿಳಿಯದು. ಪ್ರತಿ ದಿನ ರಾತ್ರಿ ವೇಳೆ ಇಲ್ಲಿ ಹಲವು ಬಾರಿ ಡೆಲಿವರಿ ಬಾಯ್‌ಗಳ ಬೈಕ್‌ಗಳಿರುತ್ತವೆ. ಕೆಲವೊಮ್ಮೆ ಕಾರುಗಳು ಬೆಳಕು ಆರಿಸಿಕೊಂಡು ನಿಂತಿರುತ್ತವೆ, ಇನ್ನೂ ಕೆಲವು ಬಾರಿ ಎರಡು ಮೂರು ಕಾರುಗಳಲ್ಲಿ ಹುಡುಗರು, ಹುಡುಗಿಯರು ಇರುತ್ತಾರೆ. ಇಂಥ ದೃಶ್ಯಗಳು ವಾರಾಂತ್ಯದಲ್ಲಂತೂ ಸಾಮಾನ್ಯ. ಇವುಗಳ ಮೇಲೆ ಪೊಲೀಸರ ನಿಗಾ ತೀರಾ ಅವಶ್ಯ.
– ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.