ಉಡುಪಿ ಮೂಲದ ವೈದ್ಯೆಗೆ ಪುಟಿನ್ ಶಹಬ್ಟಾಸ್‌ಗಿರಿ
Team Udayavani, Nov 13, 2017, 12:03 PM IST
ಉಡುಪಿ: ಉಡುಪಿ ಗುಂಡಿಬೈಲು ಮೂಲದ ಡಾ| ರಚನಾ ಭಟ್ ರಷ್ಯಾದಲ್ಲಿ ನಡೆದ “ಜಾಗತಿಕ ಯುವ ಮತ್ತು ವಿದ್ಯಾರ್ಥಿಗಳ ಉತ್ಸವ’ದಲ್ಲಿ ವೈದ್ಯಕೀಯ ರಂಗದ ಪರವಾಗಿ ಮಾತನಾಡಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಂದ ಶಹಬ್ಟಾಸ್‌ಗಿರಿ ಗಿಟ್ಟಿಸಿಕೊಂಡಿದ್ದಾರೆ.
185 ದೇಶಗಳ 25,000 ವಿದ್ಯಾರ್ಥಿಗಳಲ್ಲಿ ಭಾಷಣಕ್ಕೆ ಆಯ್ಕೆಯಾದ 12 ಮಂದಿಯಲ್ಲಿ ಡಾ| ರಚನಾ ಭಟ್ ಒಬ್ಬರು. ರೋಗನಿರೋಧಕ (ಆ್ಯಂಟಿ ಬಯೋಟಿಕ್) ಪ್ರಯತ್ನಕ್ಕೆ ಸಂಬಂಧಿಸಿ ಡಾ| ರಚನಾ ಮಂಡಿಸಿದ ವಿಷಯ ಪ್ರಶಂಸೆಗೆ ಒಳಗಾಯಿತು. 12 ಜನರು ವಿವಿಧ ವಿಷಯಗಳಿಗೆ ಸಂಬಂಧಿಸಿ ದವರು. ಇವರಲ್ಲಿ ಡಾ| ರಚನಾ ಅವರೊಬ್ಬರು ಮಾತ್ರ ವೈದ್ಯರು.
“ಪೀಪಲ್, ಆರ್ಗನೈಸೇಶನ್ ಆ್ಯಂಡ್ ಸ್ಟೇಟ್’ (ಪಿಒಎಸ್) ಪರವಾಗಿ ನಾವು ಮಾತನಾಡುತ್ತಿದ್ದೇವೆ. ಆ್ಯಂಟಿಬಯೋಟಿಕ್ ಶಕ್ತಿಯ ವಿಷಯಕ್ಕೆ ಸಂಬಂಧಿಸಿ ಔಷಧಗಳನ್ನು ಬರೆಯುವಾಗ ಎಚ್ಚರ ವಹಿಸಬೇಕಾಗಿದೆ. ತಪ್ಪು ಪ್ರಿಸ್ಕ್ರಿಪ್ಶನ್ ಕೂಡ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ವೈಯಕ್ತಿಕ ಆರೋಗ್ಯ ಸಲಹೆಯನ್ನು ನೀಡಬೇಕಾಗಿದೆ’ ಎಂದು ಡಾ| ರಚನಾ ತಿಳಿಸಿದರು.
ಇವರು ಉಡುಪಿಯ ಹಿರಿಯ ವೈದ್ಯ ಡಾ| ಆರ್.ಎನ್. ಭಟ್ ಮತ್ತು ವಿಜಯಾ ಭಟ್ ಅವರ ಪುತ್ರಿ. ಉಡುಪಿ ಎಂಜಿಎಂ ಕಾಲೇಜು, ಮಣಿಪಾಲ ಕೆಎಂಸಿ ಪ್ರಾಕ್ತನ ವಿದ್ಯಾರ್ಥಿಯಾದ ರಚನಾ ಸಿಇಟಿಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ್ದರು. ಡಾ| ರಚನಾ ಭಟ್ ಅವರು 2015ರಲ್ಲಿ ಜೂನಿಯರ್ ರೆಸಿಡೆಂಟ್‌ಆಗಿ ದಿಲ್ಲಿಯ ಅ.ಭಾ. ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ಸೇರಿದ್ದರು.