ಕೋವಿಡ್ ಪರೀಕ್ಷೆಗೆ ರೈಲ್ವೇ ಪ್ರಯಾಣಿಕರ ಹಿಂದೇಟು
ಆರ್‌ಟಿಪಿಸಿಆರ್ ವರದಿ ಕಡ್ಡಾಯವಾಗಿದ್ದರೂ ತಪ್ಪಿಸಿ ಸಾಗುತ್ತಿರುವ ಜನರು
Team Udayavani, Oct 11, 2021, 5:57 AM IST
ಉಡುಪಿ: ಕೋವಿಡ್ ಸಕ್ರಿಯ ಪ್ರಕರಣಗಳು ಹೆಚ್ಚಿರುವ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ಉಡುಪಿಯನ್ನು ಪ್ರವೇಶಿಸಲು ಕೋವಿಡ್ ನೆಗೆಟಿವ್ ವರದಿಯನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದ್ದು ರೈಲ್ವೇ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ.
ನಿತ್ಯ ನೂರಾರು ಸಂಖ್ಯೆಯ ಪ್ರಯಾಣಿಕರು ದಿಲ್ಲಿ, ಕೇರಳ, ಮುಂಬಯಿನಿಂದ ಉಡುಪಿಗೆ ಆಗಮಿಸುತ್ತಿದ್ದು, ಅವರಿಗೆ 72 ಗಂಟೆಯೊಳಗಿನ ಕೋವಿಡ್ ನೆಗೆಟಿವ್ ಆರ್‌ಟಿಪಿಸಿಆರ್ ವರದಿಯನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ಆದಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಕೆಲವರು ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯಗಳು ಅಲ್ಲಲ್ಲಿ ಕೊಂಕಣ್ ರೈಲ್ವೇ ನಿಲ್ದಾಣಗಳಲ್ಲಿ ಕಂಡುಬರುತ್ತಿದೆ.
ಪ್ರಯಾಣಿಕರ ಗಲಾಟೆ
ಪ್ರಸ್ತುತ ಕೋವಿಡ್ ಪ್ರಕರಣ ಹೆಚ್ಚಿರುವ ರಾಜ್ಯದಿಂದ ಬಂದಿರುವ ಪ್ರಯಾಣಿಕರು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಲು ಹಿಂದೇಟು ಹಾಕುತ್ತಿದ್ದಾರೆ. ಕೊವ್ಯಾಕ್ಸಿನ್/ ಕೊವಿಶೀಲ್ಡ್ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದೇವೆ. ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದಾಗಿ ರೈಲ್ವೇ ಸಿಬಂದಿ ಹಾಗೂ ಅಧಿಕಾರಿಗಳೊಂದಿಗೆ ಗಲಾಟೆ ಮಾಡುತ್ತಿದ್ದಾರೆ.
ಕಾಯುವಿಕೆಗೆ ಬೇಸರ!
ಪ್ರಸ್ತುತ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಇಬ್ಬರು ಸಿಬಂದಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡುತ್ತಾರೆ. ಅವರಲ್ಲಿ ಒಬ್ಬರು ಮಾಹಿತಿಯನ್ನು ಕಲೆ ಹಾಕುತ್ತಾರೆ. ಇನ್ನೊಬ್ಬರು ವ್ಯಕ್ತಿಯ ಗಂಟಲು ಮಾದರಿಯನ್ನು ಸಂಗ್ರಹಿಸುತ್ತಾರೆ. ಇದರಿಂದಾಗಿ ಏಕಕಾಲಕ್ಕೆ 400 ಪ್ರಯಾಣಿಕರು ಬಂದರೆ, ಗಂಟಲು ಮಾದರಿ ಸಂಗ್ರಹಿಸಲು ಗಂಟೆಗಟ್ಟಲೆ ಕಾಯಬೇಕಾಗುತ್ತಿದೆ. ಇದಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅವರನ್ನು ಸಮಾಧಾನ ಪಡಿಸಲು ಸಿಬಂದಿ ಹರಸಾಹಸ ಪಡುತ್ತಿದ್ದಾರೆ.
ಪರಿಸ್ಥಿತಿ ಅರ್ಥ ಮಾಡಿಕೊಳ್ಳಿಕೋವಿಡ್ ಸಕ್ರಿಯ ಪ್ರಕರಣ ಹೆಚ್ಚಿರುವ ರಾಜ್ಯಗಳಿಂದ ಬರುವವರು ಕಡ್ಡಾಯವಾಗಿ ಆರ್‌ಟಿಪಿಆರ್ ವರದಿಯನ್ನು ಸಲ್ಲಿಸಬೇಕು. ನೆಗೆಟಿವ್ ವರದಿ ಸಲ್ಲಿಕೆಯಾದರೆ ನೇರವಾಗಿ ಜಿಲ್ಲೆಯನ್ನು ಪ್ರವೇಶಿಸ ಬಹುದು. ವರದಿ ಇಲ್ಲದೆ ಮುಂದಿನ ದಿನಗಳಲ್ಲಿ ಪಾಸಿಟಿವಿಟಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ:100 ಕೋಟಿ ಕೋವಿಡ್ ವ್ಯಾಕ್ಸಿನ್ ದಾಖಲೆ ಬರೆಯುತ್ತಿದ್ದೇವೆ : ಜೆ.ಪಿ.ನಡ್ಡಾ
ಕಾಯೋದು ಬಹಳ ಕಷ್ಟ
ಮುಂಬಯಿನಿಂದ ಉಡುಪಿಗೆ ಬರುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ವರದಿಯನ್ನು ನೀಡಬೇಕಾಗಿದೆ. ವರದಿ ಇಲ್ಲದ ಪ್ರಯಾಣಿಕರು ರೈಲ್ವೇ ನಿಲ್ದಾಣದಲ್ಲಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಪರೀಕ್ಷೆಗೆ ಒಳಗಾಗಬೇಕಿದೆ. ಮೊದಲೇ ಪ್ರಯಾಣ ಮಾಡಿ ಸುಸ್ತಾಗಿ ಇರುತ್ತೇವೆ. ಅದರ ನಡುವೆ ನಿಲ್ದಾಣದಲ್ಲಿ ಕಾಯೋದು ಬಹಳ ಕಷ್ಟ ಎಂದು ಮುಂಬಯಿ ಪ್ರಯಾಣಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಉಚಿತ ಪರೀಕ್ಷೆ
ಮುಂಬಯಿ, ದಿಲ್ಲಿ, ಕೇರಳ ರೈಲು ಕೆಲವೊಮ್ಮೆ ಏಕಕಾಲಕ್ಕೆ ಉಡುಪಿ ಇಂದ್ರಾಳಿ ರೈಲ್ವೇ ನಿಲ್ದಾಣ ತಲುಪುತ್ತವೆ. ಈ ವೇಳೆ ಸುಮಾರು 500 ಪ್ರಯಾಣಿಕರು ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಇಳಿದುಕೊಳ್ಳುತ್ತಾರೆ. ಅವರಲ್ಲಿ ನೆಗೆಟಿವ್ ವರದಿ ಇರುವವರನ್ನು ಮನೆಗೆ ಹೋಗಲು ಅನುಮತಿ ನೀಡಲಾಗುತ್ತದೆ. ವರದಿ ಇರದ ಪ್ರಯಾಣಿಕರಿಗೆ ರೈಲ್ವೇ ನಿಲ್ದಾಣದಲ್ಲಿ ಸ್ಥಾಪಿಸಲಾದ ಕೇಂದ್ರದಲ್ಲಿ ಉಚಿತವಾಗಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು.
ನೆಗೆಟಿವ್ ವರದಿ ಕಡ್ಡಾಯ
ಕೋವಿಡ್ ಸಕ್ರಿಯ ಪ್ರಕರಣ ಹೆಚ್ಚಿರುವ ರಾಜ್ಯದಿಂದ ಆಗಮಿಸುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ರೈಲ್ವೇ ನಿಲ್ದಾಣದಲ್ಲಿ ಉಚಿತವಾಗಿ ಪರೀಕ್ಷೆ ಮಾಡಲಾಗುತ್ತದೆ. ಪಾಸಿಟಿವ್ ಕಂಡು ಬಂದವರಿಗೆ ಚಿಕಿತ್ಸೆಗೆ ಕಳುಹಿಸಲಾಗುತ್ತದೆ. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ಪಡೆದವರು ಸಹ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ.
-ಡಾ| ನಾಗಭೂಷಣ್ ಉಡುಪ,
ಡಿಎಚ್‌ಒ, ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.